ADVERTISEMENT

ಭೂಮಿ ಒಂದು; ಬೆಳೆ ನಾಲ್ಕು!

ಗಣಂಗೂರು ನಂಜೇಗೌಡ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST
ಭೂಮಿ ಒಂದು; ಬೆಳೆ ನಾಲ್ಕು!
ಭೂಮಿ ಒಂದು; ಬೆಳೆ ನಾಲ್ಕು!   

ಒಂದು ಜಮೀನಿನಲ್ಲಿ ಒಂದು ಬಗೆಯ ಬೆಳೆ ಬೆಳೆಯುವುದು ಸಾಮಾನ್ಯ. ಹೆಚ್ಚೆಂದರೆ ಅಂತರ ಬೆಳೆಯಾಗಿ ಎರಡು ಬೆಳೆ ಬೆಳೆಯಬಹುದು. ಇಲ್ಲೊಬ್ಬ ರೈತ ತಮಗಿರುವ ಒಂದೂವರೆ ಎಕರೆ ಜಮೀನಿನಲ್ಲಿ ಅಂತರ ಬೆಳೆಯಾಗಿ ನಾಲ್ಕು ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಗ್ರಾಮದ ನಾಗಣ್ಣ ಎಂಬ ಯುವ ರೈತ ಕಬ್ಬಿನ ಬೆಳೆಯ ಜತೆಗೆ ಚೆಂಡು ಹೂ, ಬೀನ್ಸ್ (ಹುರುಳಿ) ಮತ್ತು ಅಲಸಂದೆ (ತಗಣಿ) ಬೆಳೆಯುತ್ತಿದ್ದಾರೆ. ಚೆಂಡು ಹೂ ಈಗಾಗಲೇ ಕೊಯ್ಲಿಗೆ ಬಂದಿದ್ದು, ಕಿತ್ತು ಮಾರಾಟ ಮಾಡುತ್ತಿದ್ದಾರೆ. ಬೀನ್ಸ್ ಕುಡಿಯೊಡೆಯುತ್ತಿದ್ದು, ಅಲಸಂದೆ ಹೂ ಬಿಡುವ ಹಂತಕ್ಕೆ ಬಂದಿದೆ.

  ಮೂರು ತಿಂಗಳ ಹಿಂದೆ ನೆಟ್ಟಿರುವ ಕಬ್ಬು ಸೊಂಟದ ಮಟ್ಟಕ್ಕೆ ಬೆಳೆದಿದೆ. ಕಬ್ಬಿನ ನಡುವೆ, ಸಾಲು ಬಿಟ್ಟು ಸಾಲಿನಲ್ಲಿ ಚೆಂಡು ಹೂವಿನ ಗಿಡ ಹಾಕಿದ್ದಾರೆ. ಈಗಾಗಲೇ ನಾಲ್ಕು ಬಾರಿ ಹೂ ಕೊಯ್ದು ಮಾರಾಟ ಮಾಡಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಚೆಂಡು ಹೂವಿಗೆ ಉತ್ತಮ ಬೆಲೆ ಇರುವುದರಿಂದ ಕಬ್ಬು ಬೇಸಾಯಕ್ಕೆ ಖರ್ಚು ಮಾಡಿದ ರೂ.15 ಸಾವಿರ ಹಣ ಅವರ ಕೈ ಸೇರಿದೆ. ವಾರದಲ್ಲಿ ಎರಡು ಬಾರಿ ಹೂ ಕೀಳುತ್ತಿದ್ದಾರೆ.

ಒಂದು ಕೆಜಿಗೆ 30ರಿಂದ 35 ರೂಪಾಯಿ ವರೆಗೆ ಧಾರಣೆ ಇದ್ದು, ವ್ಯಾಪಾರಿಗಳು ಮನೆ ಬಾಗಿಲಿಗೆ ಬಂದು ಹೂ ಕೊಳ್ಳುತ್ತಿದ್ದಾರೆ. ಇದೇ ಬೆಲೆ ಇದ್ದರೆ ಹೂವಿನಿಂದ ಇನ್ನೂ 20 ಸಾವಿರ ಹಣ ಸಿಗುತ್ತದೆ ಎನ್ನುವುದು ರೈತ ನಾಗಣ್ಣ ಅವರ ಮಾತು.

  ಬೀನ್ಸ್ ಬೆಳೆಯಿಂದ 15 ಸಾವಿರ ಆದಾಯ ನಿರೀಕ್ಷಿಸಿದ್ದಾರೆ. ಜತೆಗೆ ಎರಡು ಕ್ವಿಂಟಲ್ ಅಲಸಂದೆ ಸಿಗಬಹುದು ಎನ್ನುವ ನಂಬಿಕೆ ಇರಿಸಿಕೊಂಡಿದ್ದಾರೆ. ಬೀನ್ಸ್ ಮತ್ತು ಅಲಸಂದೆ ಕಾಯಿ ಕಿತ್ತ ನಂತರ ಅದರ ಗಿಡಗಳನ್ನು ಮಣ್ಣಿನಲ್ಲಿ ಮುಚ್ಚುವುದರಿಂದ ಕಬ್ಬು ಬೆಳೆಗೆ ಅದು ಉತ್ತಮ ಗೊಬ್ಬರವಾಗುತ್ತದೆ.

ಹಾಗಾಗಿ ಕಬ್ಬು ಬೆಳೆಗೆ ದೊಡ್ಡ ಮುರಿ ಮಾಡುವ ಸಮಯದಲ್ಲಿ ಹೆಚ್ಚು ಕೊಟ್ಟಿಗೆ ಗೊಬ್ಬರದ ಅಗತ್ಯ ಇರುವುದಿಲ್ಲ. ಚೆಂಡು ಹೂ ಗಿಡಕ್ಕೆ ಕೀಟಗಳನ್ನು ಆಕರ್ಷಿಸುವ ಶಕ್ತಿಯಿದ್ದು ಬೆಳೆಗೆ ರೋಗ ರುಜಿನ ಹರಡುವುದನ್ನು ತಡೆಗಟ್ಟುವುದರಿಂದ ಕೀಟನಾಶಕದ ಖರ್ಚು ಕೂಡ ಉಳಿಯುತ್ತದೆ.

  ವೃತ್ತಿಯಲ್ಲಿ ಅಡುಗೆ ಗುತ್ತಿಗೆ ಕೆಲಸ ಮಡುವ ನಾಗಣ್ಣ ಅಷ್ಟೇ ಆಸಕ್ತಿಯಿಂದ ಬೇಸಾಯವನ್ನೂ ಮಾಡುತ್ತಿದ್ದಾರೆ. ಕಬ್ಬು ಬೆಳೆಯಿಂದ ರೂ.80 ಸಾವಿರ ಆದಾಯ ಸಿಗಲಿದ್ದು, ಅಂತರ ಬೆಳೆಯಾದ ಚೆಂಡು ಹೂ, ಬೀನ್ಸ್ ಮತ್ತು ಅಲಸಂದೆ ಬೆಳೆಯಿಂದ ಸುಮಾರು 50 ಸಾವಿರ ಆದಾಯ ಸಿಗಬಹುದು ಎಂಬ ನಂಬಿಕೆ ಅವರದ್ದು. ನಾಗಣ್ಣ ಅವರ ಮೊಬೈಲ್ ನಂಬರ್ 9945651979.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.