ADVERTISEMENT

ಮಟ್ಟು ಗುಳ್ಳ ಉತ್ಪಾದನೆ ಕುಸಿತ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 18:30 IST
Last Updated 9 ಫೆಬ್ರುವರಿ 2011, 18:30 IST

ಉಡುಪಿ ತಾಲ್ಲೂಕಿನ ಮಟ್ಟು ಗ್ರಾಮದ ಸುತ್ತಮುತ್ತ  ಬೆಳೆಯುವ ವಿಶಿಷ್ಟ ರುಚಿಯ ಬದನೆ ಮಟ್ಟು ಗುಳ್ಳ’ ಎಂದೇ ಹೆಸರುವಾಸಿ. ಈಗ ಕಟಪಾಡಿ ಬಳಿ ಚತುಷ್ಪತ ರಸ್ತೆ ಹಾಗೂ ಸುವರ್ಣ ಹೊಳೆಗೆ’ ಹೊಸ ಸೇತುವೆ ನಿರ್ಮಾಣ ಕಾಮಗಾರಿ  ನಡೆಯುತ್ತಿವೆ ಹಾಗೂ ಕಿಂಡಿ ಅಣೆಕಟ್ಟುಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಹೊಳೆಯ ನೀರಿನ ಮಟ್ಟ ಹೆಚ್ಚಾಗಿ ಗುಳ್ಳ ಬದನೆ ಬೆಳೆಯುತ್ತಿದ್ದ ಗದ್ದೆಗಳು ನೀರು ಪಾಲಾಗಿವೆ.

ಈ ವರ್ಷ  ಗುಳ್ಳದ ಉತ್ಪಾದನೆ ಕಡಿಮೆಯಾಗಿದೆ.  ಈಗ ಮಾರುಕಟ್ಟೆಯಲ್ಲಿ ಕಿಲೋಗೆ 80 ರೂ ಬೆಲೆ ಇದೆ. ಕೆಲಸ ದಿನಗಳ ಹಿಂದೆ ಕಿಲೋಗೆ 120 ರೂ ಬೆಲೆ ಇತ್ತು. ಭತ್ತದ ಕಟಾವಿನ ನಂತರ  ಗುಳ್ಳ ಬೆಳೆದು ಹಣ ಗಳಿಸುತ್ತಿದ್ದ ರೈತರಿಗೆ ಈ ವರ್ಷ ಹಣ ಸಿಗುವುದಿಲ್ಲ. ಗ್ರಾಹಕರಿಗೆ ಬೇಕಿದ್ದಷ್ಟು ಗುಳ್ಳ ಸಿಗುತ್ತಿಲ್ಲ.

   ಕಟಪಾಡಿ ಬಳಿಯ ಮಟ್ಟು ಪ್ರದೇಶದಲ್ಲಿ ಬೆಳೆಯುವ ಗುಳ್ಳ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಬೇರೆಡೆಯೂ ಬೆಳೆದರೂ ಮಟ್ಟು ಗುಳ್ಳದ ರುಚಿ ಅವಕ್ಕಿಲ್ಲ. ಮಾರುಕಟ್ಟೆಯಲ್ಲಿ ಮಟ್ಟು ಗುಳ್ಳಕ್ಕೆ ಬೇಡಿಕೆ ಹೆಚ್ಚು. ಮಳೆಗಾಲದಲ್ಲಿ ನೆರೆಯೊಂದಿಗೆ ಕೊಚ್ಚಿಕೊಂಡು ಬರುವ ಫಲವತ್ತಾದ ಮಣ್ಣಿನ ಮಣ್ಣು ಗದ್ದೆಗಳಲ್ಲಿ ನಿಲ್ಲುವುದರಿಂದ ಇಲ್ಲಿ ಗುಳ್ಳ ಸಮೃದ್ಧವಾಗಿ ಬೆಳೆಯುತ್ತದೆ. ಹಿಂದಿನ ವರ್ಷಗಳಲ್ಲಿ ಗುಳ್ಳಕ್ಕೆ ರೋಗ, ಕೀಟಗಳ ಹಾವಳಿ ಇರುತ್ತಿತ್ತು. ಈ ವರ್ಷ ಹಲವಾರು ರೈತರಿಗೆ ಗುಳ್ಳ ಬೆಳೆಯುವ ಅವಕಾಶ ಇಲ್ಲ.

ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನೂರಾರು ಎಕರೆಗಳಲ್ಲಿ ಇದೇ ತಳಿಯ ಬದನೆ ಬೆಳೆದು ಅವನ್ನೇ ಮಟ್ಟು ಗುಳ್ಳ ಎಂದು ಹೇಳಿ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡುವವರೂ ಇದ್ದಾರೆ.

ಮಟ್ಟು ಗುಳ್ಳಕ್ಕೆ ನಾಲ್ಕೈದು ಶತಮಾನಗಳ ಹಿನ್ನೆಲೆ ಇದೆ. ಶ್ರೀ ವಾದಿರಾಜ ಸ್ವಾಮಿಗಳು  ಗುಳ್ಳದ ಬೀಜಗಳನ್ನು ರೈತರಿಗೆ ಪ್ರಸಾದ ರೂಪದಲ್ಲಿ ವಿತರಿಸಿದರು ಎನ್ನುವ ಪ್ರತೀತಿ ಇದೆ.

ಮಟ್ಟು ಗುಳ್ಳದ ಗಿಡವೊಂದು 15ರಿಂದ 20 ಕಾಯಿಗಳನ್ನು ಬಿಡುತ್ತದೆ. ಒಂದು ಎಕರೆಯಲ್ಲಿ 5 ಸಾವಿರ ಗಿಡಗಳನ್ನು ನಾಟಿ ಮಾಡಬಹುದು. ಎಕರೆಗೆ 10 ರಿಂದ 12 ಕ್ವಿಂಟಲ್ ಇಳುವರಿ ಬರುತ್ತದೆ. ಬೇರೆ ಪ್ರದೇಶದಲ್ಲಿ ಬೆಳೆಯುವ ಗುಳ್ಳಗಳಿಗೆ ಹೋಲಿಸಿದರೆ ಮಟ್ಟು ಪ್ರದೇಶದ ರೈತರು ಐದಾರು ಪಟ್ಟು ಹೆಚ್ಚು ಆದಾಯ ಪಡೆಯುತ್ತಾರೆ.

ಇದು ಮೂರು ತಿಂಗಳ ಬೆಳೆ. ಮುಂಗಾರು ಭತ್ತ ಕಟಾವು ಮಾಡಿ ನಂತರ ಬಿತ್ತನೆ ಮಾಡಿದರೆ ಜನವರಿ ಮೊದಲ ವಾರದಲ್ಲಿ ಗುಳ್ಳ ಕೊಯ್ಲಿಗೆ ಬರುತ್ತದೆ. ಬೇಡಿಕೆಗೆ ಅನುಗುಣವಾಗಿ ವಾರಕ್ಕೆ ಮೂರು-ನಾಲ್ಕು ಸಲ ಕಾಯಿಗಳನ್ನು ಕೀಳುತ್ತಾರೆ. ನಾಲ್ಕು ತಿಂಗಳವರೆಗೆ ಕಾಯಿಗಳು ಸಿಗುತ್ತವೆ. ರಾಜ್ಯದ ಬೇರೆ ಊರುಗಳಲ್ಲಿ ನೆಲೆಸಿರುವ ಕರಾವಳಿ ಭಾಗದ ಜನರೂ ಉಡುಪಿ ಮಾರುಕಟ್ಟೆಯಿಂದ ಮಟ್ಟು ಗುಳ್ಳ ತರಿಸಿಕೊಂಡು ಬಳಸುತ್ತಾರೆ.

ಮಟ್ಟು ಗ್ರಾಮದಲ್ಲಿ ಸುಮಾರು 300 ಎಕರೆ ಪ್ರದೇಶದಲ್ಲಿ ಗುಳ್ಳ ಬೆಳೆಯಲಾಗುತ್ತಿತ್ತು. ಇದೀಗ ಸಮುದ್ರ ಕೊರೆತ, ಉಕ್ಕುವ ಉಪ್ಪು ನೀರು, ಭೂ ಸವೆತ ಹಾಗೂ ಮಾಯವಾಗುತ್ತಿರುವ ಕೃಷಿ ಭೂಮಿಯಿಂದಾಗಿ ಗುಳ್ಳ  ಬೆಳೆಯುವ ಪ್ರದೇಶ ಅರ್ಧದಷ್ಟು ಕಡಿಮೆಯಾಗಿದೆ.

  ಈ ನಡುವೆ (ಅಧಿಕಾರಿಗಳ ಸಮಯೋಚಿತ ನಿರ್ಧಾರದಿಂದ) ಈ ಬದನೆಗೆ ಪೇಟೆಂಟ್ ದಕ್ಕಿದೆ. ಗುಳ್ಳ ಬದನೆಯ  ಶುದ್ಧ ತಳಿಯನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ಗುಳ್ಳ ಬೆಳೆಯುವ ರೈತರಿಗೆ ಹೆಚ್ಚಿನ ಉತ್ತೇಜನ, ಮಾರುಕಟ್ಟೆ ಸೌಲಭ್ಯ ಸಿಗಬೇಕು ಎನ್ನುವುದು ರೈತರ ಬೇಡಿಕೆ. ಬೆಳೆಗಾರರೇ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಇಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.