ADVERTISEMENT

ಮಟ್ಟೂರಿನ ಪ್ರಯೋಗಶೀಲ ಪಂಡಿತ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಬಿರು ಬಿಸಿಲಿನ ನಾಡು ಎಂದೇ ಖ್ಯಾತವಾದ ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲ್ಲೂಕಿನ ಮಟ್ಟೂರು ಗ್ರಾಮದ ಮಲ್ಲೇಶಗೌಡ ಅಮರೇಗೌಡ ಮಟ್ಟೂರು ಅವರ ಮುಖ್ಯ ಉದ್ಯೋಗ ವ್ಯವಸಾಯ. ಹಾಗೆಂದು ಅವರು ಇತರ ಸಾಮಾನ್ಯ ರೈತರಂತಲ್ಲ.
 
ಸದಾ ಪ್ರಯೋಗಶೀಲ. ಆ ಪರಿಶ್ರಮವೇ ಅವರಿಗೆ ರಾಜ್ಯ ಸರ್ಕಾರದ 2010-11ನೇ ಸಾಲಿನ `ಕೃಷಿ ಪಂಡಿತ~ ಪ್ರಶಸ್ತಿ ತಂದು ಕೊಟ್ಟಿದೆ. ಸಮಗ್ರ ಕೃಷಿ ಪದ್ಧತಿ ಮತ್ತು ಬೆಳೆ ವೈವಿಧ್ಯೀಕರಣ ವಿಭಾಗದಲ್ಲಿ 25 ಸಾವಿರ ರೂಪಾಯಿ ಮೊತ್ತದ ತೃತೀಯ ಬಹುಮಾನ ದೊರೆತಿದೆ.

ಎಸ್‌ಎಸ್‌ಎಲ್‌ಸಿ ವರೆಗೆ ಓದಿಕೊಂಡಿರುವ ಮಲ್ಲೇಶಗೌಡರು, ಕೃಷಿ ಋಷಿ ಘನಮಠದಾರ್ಯರ `ಕೃಷಿ ಜ್ಞಾನ ಪ್ರದೀಪಿಕೆ~ ಓದಿಕೊಂಡು ಕಡಿಮೆ ನೀರಿನಲ್ಲಿ ಉತ್ತಮ ಫಸಲು ಬೆಳೆಯಲು ಮುಂದಾದರು. 1974-75ರ ಸಾಲಿನಲ್ಲಿ ದಡೆಸೂಗೂರಿನ ರೈತ ಮಕ್ಕಳ ತರಬೇತಿ ಶಾಲೆಯಲ್ಲಿ ಕೃಷಿ  ತರಬೇತಿ ಪಡೆದು ಮೊದಲ ಬಾರಿಗೆ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡು ಮಟ್ಟೂರನ್ನು ರಾಜ್ಯ ರೇಷ್ಮೆ ಭೂಪಟದಲ್ಲಿ ಗುರ್ತಿಸುವಂತೆ ಮಾಡಿದರು.

ಅಲ್ಲಿಂದೀಚೆಗೆ ಅವರ ಜ್ಞಾನ, ಕಾರ್ಯದ ಹರವು ವಿಸ್ತಾರವಾಗಿದೆ. ತಮ್ಮ ಜಮೀನಿನಲ್ಲಿ ಅಂತರ್ಜಲ ಮಟ್ಟ ಅಷ್ಟೊಂದು ಸಮೃದ್ಧಿಯಾಗಿರದಿದ್ದರೂ ನಾಲ್ಕಾರು ಕೊಳವೆ ಬಾವಿ ಕೊರೆದು ಒಂದೆಡೆ ನೀರು ಸಂಗ್ರಹಿಸಿ ವ್ಯರ್ಥ ಪೋಲಾಗದಂತೆ ಎಚ್ಚರಿಕೆ ವಹಿಸಿದ್ದಾರೆ.

ಪೈಪ್‌ಲೈನ್, ಕೃಷಿ ಹೊಂಡ, ನೀರು ಸಂಗ್ರಹಣಾ ತೊಟ್ಟಿ, ವಿಶಾಲವಾದ ತೆರೆದ ಬಾವಿಗಳನ್ನು ಮಾಡಿಕೊಂಡಿದ್ದಾರೆ. ವರ್ಷ ಪೂರ್ತಿ ನೀರಾವರಿಗೆ ಅನುಕೂಲವಾಗುವ ದೃಷ್ಟಿಯಿಂದ ಹಂತ ಹಂತವಾಗಿ ನೀರು ಬಳಸಿಕೊಳ್ಳುವ ಪದ್ಧತಿಯಲ್ಲಿ ಬೆಳೆ ನಾಟಿ ಕರಗತ ಮಾಡಿಕೊಂಡಿದ್ದಾರೆ.

ರಾಸಾಯನಿಕ ಕೃಷಿಗಿಂತ ಸಾವಯವ ಕೃಷಿಗೆ ಮಹತ್ವ ನೀಡಿದ್ದಾರೆ. ಗೋಬರ್ ಗ್ಯಾಸ್ ಮಾಡಿಕೊಂಡು ಅದರಿಂದ ಹೊರ ಬರುವ ಸ್ಲರಿ ಹಾಗೂ ಸಗಣಿ, ಗಂಜಲ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ ಹಾಕಿ ಮಣ್ಣಿನ ಫಲವತ್ತತೆ ಕಾಪಾಡಿಕೊಂಡಿದ್ದಾರೆ. ಈ ವಿಧಾನದಲ್ಲಿ ಸ್ವಲ್ಪ ನೀರಿನ ಕೊರತೆ ಕಾಣಿಸಿಕೊಂಡರೂ ಇಳುವರಿ, ಭೂಮಿಯ ಫಲವತ್ತತೆ ಕಡಿಮೆ ಆಗುವುದಿಲ್ಲ ಎಂದು ಕಂಡುಕೊಂಡಿದ್ದಾರೆ. ಹೀಗಾಗಿಯೇ ಇವರ ಸಾವಯವ ಕೃಷಿ ಪದ್ಧತಿ ವೀಕ್ಷಿಸಲು ಸುತ್ತಮುತ್ತಲಿನ ರೈತರು ಬರುತ್ತಲೇ ಇರುತ್ತಾರೆ.

ವರ್ಷದಲ್ಲಿ 7-8 ಬಾರಿ ರೇಷ್ಮೆ ಉತ್ಪಾದನೆ ಮಾಡುವ ಇವರು ಗುಣಮಟ್ಟದ ರೇಷ್ಮೆಯಿಂದ ಹೆಚ್ಚುವರಿ ಆದಾಯ ಪಡೆದು ರೇಷ್ಮೆ ಮಂಡಳಿಯಿಂದ ಪ್ರಶಸ್ತಿ ಗಳಿಸಿದ್ದಾರೆ. ರೇಷ್ಮೆ ಹುಳು ಸಾಕಣೆಗೆ ಸುಸಜ್ಜಿತ ಮನೆಗಳ ನಿರ್ಮಾಣ, ಪ್ಲಾಸ್ಟಿಕ್ ಚಂದ್ರಿಕೆಗಳ ಬಳಕೆ, ಚಾಕಿ ಸಾಕಾಣಿಕೆ ಕೇಂದ್ರ, ಹಿಪ್ಪುನೇರಳೆ ಬೆಳೆಗೆ ಹನಿ ನೀರಾವರಿ ಹೀಗೆ ಇವರ ವಿಧಾನಗಳನ್ನು ಬೇರೆ ರೈತರು ಅನುಸರಿಸಿದ್ದಾರೆ. ಕೃಷಿ ತರಬೇತಿಗೆ ಬಂದವರಿಗೆ ಮಲ್ಲೇಶಗೌಡ್ರ ತೋಟದ ಭೇಟಿ ಕಡ್ಡಾಯ. ಇದು ಅವರ ಕೌಶಲಕ್ಕೆ ನಿದರ್ಶನ.

ಮುರ‌್ರಾ ಎಮ್ಮೆ, ಎಚ್‌ಎಫ್ ಹಸು ಸಾಕಿ ಹಾಲಿನ ಡೈರಿ ಮಾಡಿಕೊಂಡಿದ್ದಾರೆ. ಪಾಕೆಟ್‌ನಲ್ಲಿ ಹಾಲು ಹಾಕಿ ವಿತರಿಸುವ ಮೂಲಕ ಈ ಭಾಗದಲ್ಲಿ ಮೊಟ್ಟ ಮೊದಲ ಹಾಲು ಉತ್ಪಾದಕರ ಸಹಕಾರಿ ಸಂಘ ಹುಟ್ಟು ಹಾಕಿದರು. ಹಿಪ್ಪು ನೇರಳೆ ಸೊಪ್ಪನ್ನು ಹಸುಗಳಿಗೆ ಮೇವಾಗಿ ಬಳಸುತ್ತಾರೆ. ವೈವಿಧ್ಯಮಯ ಉತ್ಕೃಷ್ಟ ಮೇವಿನ ಬೆಳೆಗಳನ್ನು ಬೆಳೆದಿದ್ದಾರೆ. ಎಲೆ ಬಳ್ಳಿ, ಹತ್ತಿ, ಬಾಜ್ರಾ, ದಾಳಿಂಬೆ, ಪಪ್ಪಾಯಿ, ಲಿಂಬು, ಸಪೋಟಾ, ಪೇರಲ, ತೆಂಗು, ನುಗ್ಗೆ ಹೀಗೆ ಬಗೆಬಗೆ ಬೆಳೆಗಳು ಇವರ ಹೊಲದಲ್ಲಿವೆ.

ಹಸಿರೆಲೆ ಗೊಬ್ಬರಕ್ಕಾಗಿ ಗ್ಲಿರಿಸಿಡಿಯಾ, ಹೊಂಗೆ ಬೆಳೆಸಿದ್ದಾರೆ. ಕೃಷಿ ಹೊಂಡ ನಿರ್ಮಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಜೊತೆಗೆ ಮೀನುಗಳನ್ನೂ ಸಾಕಿದ್ದಾರೆ. ಇಂತಹ ಹತ್ತು ಹಲವು ಪ್ರಯೋಗಗಳ ಮೂಲಕ ಹೆಚ್ಚು ಆದಾಯದ ಮೂಲ ಕಂಡುಕೊಂಡ ಕೀರ್ತಿ ಅವರಿಗೆ ಸಲ್ಲುತ್ತದೆ.

ಇವರ ಸಾಧನೆ ಗುರ್ತಿಸಿದ ರಾಯಚೂರು, ಧಾರವಾಡ ಕೃಷಿ ವಿಶ್ವ ವಿದ್ಯಾಲಯಗಳು, ಸಂಘ ಸಂಸ್ಥೆಗಳು ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿವೆ. ಜಿಲ್ಲಾ ಆಡಳಿತ ಕೂಡ ಉತ್ತಮ ಕೃಷಿಕ ಪ್ರಶಸ್ತಿ ನೀಡಿದೆ. ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ, ಚರ್ಚಾಗೋಷ್ಠಿಗಳಲ್ಲಿ ಭಾಗವಹಿಸುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.