ADVERTISEMENT

ಮಾವು ಸ್ಪೆಷಲ್

ಈರಪ್ಪ ಹಳಕಟ್ಟಿ
Published 19 ಜನವರಿ 2011, 19:30 IST
Last Updated 19 ಜನವರಿ 2011, 19:30 IST

ಪೋಷಕಾಂಶಗಳ ಕೊರತೆಯಿಂದ ಇತ್ತೀಚಿನ ವರ್ಷಗಳಲ್ಲಿ ಮಾವಿನ ಫಸಲಿನ ಉತ್ಪಾದನೆ ಕಡಿಮೆಯಾಗುತ್ತಿದೆ. ಹಣ್ಣುಗಳ ಗುಣಮಟ್ಟವೂ ಕುಸಿದಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ.

ಬೋರಾನ್ ಹಾಗೂ ಸತುವಿನ ಕೊರತೆ  ಮಾವು ಬೆಳೆಯಲ್ಲಿ ಮುಖ್ಯವಾಗಿ ಕಂಡು ಬರುತ್ತದೆ. ಇತರೆ ಲಘು  ಪೋಷಣಾಂಶಗಳಾದ ಮ್ಯಾಂಗನೀಸ್, ಕಬ್ಬಿಣ, ತಾಮ್ರಗಳ ಕೊರತೆಯೂ ಅನೇಕ ಪ್ರದೇಶಗಳಲ್ಲಿ ಕಂಡು  ಬಂದಿದೆ. ಇವುಗಳ ಕೊರತೆಯಿಂದ ಮಾವಿನ ಗುಣಮಟ್ಟ ಕುಸಿಯುತ್ತಿದೆ.

ಈ ಕುರಿತು ಸುಮಾರು 20 ವರ್ಷಗಳಿಂದ ಸಂಶೋಧನೆ ನಡೆಸುತ್ತಿರುವ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಮಾವಿನ ಎಲೆಗಳ ವಿಶ್ಲೇಷಣೆಯಿಂದ ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಗುರುತಿಸಿ ಕೊರತೆಯಿಂದ ಉಂಟಾಗುವ ನೂನ್ಯತೆಗಳನ್ನು ಸರಿಪಡಿಸಲು ‘ಮಾವು ಸ್ಪೆಷಲ್’ ಎಂಬ ಸೂಕ್ಷ್ಮ ಪೋಷಕಾಂಶಗಳ ಮಿಶ್ರಣವನ್ನು ಸಿದ್ಧಪಡಿಸಿ ಬೆಳೆಗಾರರ ಉಪಯೋಗಕ್ಕಾಗಿ ಬಿಡುಗಡೆ ಮಾಡಿದೆ.

ಮಾವು ಬೆಳೆಯುವ ವಿವಿಧ ಪ್ರದೇಶಗಳ ಮಣ್ಣು ಹಾಗೂ ಮಾವಿನ ಎಲೆಗಳನ್ನು ವಿಶ್ಲೇಷಣೆ ಮಾಡಿ ಮಣ್ಣಿಗೆ ಬೇಕಾಗುವ ಮುಖ್ಯ ಪೋಷಕಾಂಶಗಳಾದ ಸಾರಜನಕ, ರಂಜಕ ಹಾಗೂ ಪೊಟ್ಯಾಶ್‌ಗಳ ಮಿಶ್ರಣ ದ್ರಾವಣವನ್ನು  ಮಾವಿನ ಎಲೆಗಳ ಮೇಲೆ ಸಿಂಪರಣೆ ಮಾಡುವುದರಿಂದ ಮರದ ಸುಪ್ತ ಹಸಿವನ್ನು ನೀಗಿಸಿ ಗುಣಮಟ್ಟದ ಫಸಲು ಹಾಗೂ ಅಧಿಕ ಇಳುವರಿಯನ್ನು ಪಡೆಯಬಹುದು ಎಂಬುದನ್ನು ಪತ್ತೆ ಹಚ್ಚಿದೆ.

ಮಾವು ಮಳೆ ಆಧಾರಿತ ಬೆಳೆ. ಉತ್ಪಾದಕತೆ ಕ್ಷೀಣಿಸಲು ಎರಡು ವರ್ಷಕ್ಕೊಮ್ಮೆ  ಫಲ ನೀಡುವ ಮಾವಿನ ತಳಿಗಳ ಅನುವಂಶಿಕ ಗುಣ, ಕೀಟ ಹಾಗೂ ರೋಗಗಳು ಹಾಗೂ ಪೋಷಕಾಂಶಗಳ ಕೊರತೆ ಕಾರಣ. ಪೋಷಕಾಂಶಗಳ ಸಮಗ್ರ ನಿರ್ವಹಣೆಯಿಂದ ಉತ್ತಮ ಗುಣಮಟ್ಟದ ಹೆಚ್ಚಿನ ಇಳುವರಿ ಪಡೆಯಬಹುದು ಎಂಬುದನ್ನು ಸಂಸ್ಥೆಯಲ್ಲಿ ನಡೆದ ಸಂಶೋಧನೆಗಳಿಂದ ಧೃಡಪಟ್ಟಿದೆ. 

ಸಿಂಪರಣೆ ವಿಧಾನ: ಪೋಷಕಾಂಶಗಳ ಮಿಶ್ರಣವನ್ನು ಸಿಂಪರಣೆ ಮಾಡುವುದು ಮಾಡುವುದು ಸರಳ ಹಾಗೂ ಲಾಭದಾಯಕ. 25 ಲೀಟರ್ ನೀರಿಗೆ 125 ಗ್ರಾಂ ಮಾವು ಸ್ಪೆಷಲ್ ದ್ರಾವಣ ಮಿಶ್ರಣವನ್ನು ಕರಗಿಸಿ ಇದಕ್ಕೆ ಒಂದು ಲಿಂಬೆಹಣ್ಣಿನ ರಸ ಹಾಗೂ ಒಂದು ಸ್ಯಾಶೆ ಶಾಂಪೂ ದ್ರಾವಣ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಜುಲೈ, ನವಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ  ಬೆಳಗಿನ  ವೇಳೆ ಸೂರ್ಯ ಪ್ರಖರವಾಗುವ ಮೊದಲು ಮಾವಿನ ಎಲೆಗಳ ಕೆಳಭಾಗಕ್ಕೆ ತಗುಲುವ ಹಾಗೆ ಸಿಂಪರಣೆ ಮಾಡಬೇಕು. 

ಒಂದು ಹೆಕ್ಟೇರ್ ಪ್ರದೇಶದ ಮಾವಿನ ಮರಗಳಿಗೆ ಸುಮಾರು 20 ಕೆ.ಜಿ  ಮಾವು ಸ್ಪೆಷಲ್ ದ್ರಾವಣ ಬೇಕಾಗುತ್ತದೆ.    ಮಾವಿನ ಮರಗಳಿಗೆ ಭೂಮಿ ಮೂಲಕ ನೀಡುವ ಪೋಷಕಾಂಶಗಳು ಎಲೆಗಳನ್ನು ತಲುಪಿ, ಮರಕ್ಕೆ ಪೋಷಣೆ ನೀಡಲು 40 ದಿನಗಳು ಬೇಕು. ಆದರೆ ಪೋಷಕಾಂಶಗಳ ಮಿಶ್ರಣ ಸಿಂಪರಣೆ ಮಾಡುವುದರಿಂದ  30ರಿಂದ 35 ಗಂಟೆಗಳಲ್ಲಿ ಪರಿಣಾಮ ಆಗುತ್ತದೆ. ಇದರಿಂದ ಹಣ್ಣಿನ ಗಾತ್ರ ವೃದ್ಧಿಯಾಗುತ್ತದೆ. ಹಣ್ಣುಗಳಿಗೆ  ಆಕರ್ಷಕ ಬಣ್ಣ ಬರುತ್ತದೆ. ಸಂಪರ್ಕಿಸಬೇಕಾದ  ದೂರವಾಣಿ ನಂಬರ್: 928446815/ 28466420/ 21/22/23 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.