ಸಾಂಪ್ರದಾಯಿಕ ಬೆಳೆಗಳ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. ಬೇಸಾಯದ ಉತ್ಪನ್ನಗಳ ಬೆಲೆಗಳ ಏರಿಳಿತ ಮತ್ತು ಕಾರ್ಮಿಕರ ಕೊರತೆ ಇತ್ಯಾದಿ ಸಮಸ್ಯೆಗಳು ರೈತರನ್ನು ಕಂಗೆಡಿಸಿವೆ. ಕೆಲವು ರೈತರು ಬೇಸಾಯದ ವೆಚ್ಚ ಕಡಿಮೆ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇನ್ನು ಕೆಲವರು ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ತರುವ ಬೆಳೆಗಳನ್ನು ಬೆಳೆಯುವ ಬಗ್ಗೆ ಗಮನ ಹರಿಸುತ್ತಿದ್ದಾರೆ.
ಈ ದಿಸೆಯಲ್ಲಿ ಅಡಿಕೆ, ತೆಂಗು, ಕಾಫಿ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಅಥವಾ ತೋಟದ ಅಂಚಿನಲ್ಲಿ ಬೆಳೆಯಬಹುದಾದ `ಅಗರ್‌ವುಡ್~ ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ. ಹೆಚ್ಚು ಬಂಡವಾಳ ಹಾಕದೇ ತೋಟದ ಅಂಚಿನಲ್ಲಿ ಮತ್ತು ಅಡಿಕೆ, ಕಾಫಿ ತೋಟಗಳ್ಲಲಿ ಮಿಶ್ರ ಬೆಳೆಯಾಗಿ ಅಗರ್ ಮರಗಳನ್ನು ಬೆಳೆಸಲು ಹಲವು ರೈತರು ಮುಂದೆ ಬಂದಿದ್ದಾರೆ.
ಏನಿದು ಅಗರ್‌ವುಡ್?
ಅಸ್ಸಾಂ ಜನರು ದೇವರ ವೃಕ್ಷ ಎಂದು ಕರೆಯುವ ಅಗರ್‌ವುಡ್‌ಅನ್ನು ಅಗರು, ಗಹರು, ಊದ್, ಈಗಲ್‌ವುಡ್, ಗರಾ, ಮಾಯ್ ಎಂದೂ ಬೇರೆ-ಬೇರೆ ಭಾಷೆಗಳಲ್ಲಿ ಕರೆಯುತ್ತಾರೆ. ಇದನ್ನು ಸುಗಂಧ ದ್ರವ್ಯ ತಯಾರಿಕೆಗೆ ಹೆಚ್ಚಾಗಿ ಬಳಸುತ್ತಾರೆ. ಧೂಪ, ಅಲೋಪತಿ ಹಾಗೂ ಆಯುರ್ವೇದ ಔಷಧಿ ತಯಾರಿಕೆಯಲ್ಲಿಯೂ ಇದನ್ನು ಬಳಸುತ್ತಾರೆ. ಅರಬ್ ದೇಶಗಳಲ್ಲಿ ಇದರ ಬಳಕೆ ಹೆಚ್ಚು. ಮುಸ್ಲಿಮರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಪ್ರಕೃತಿದತ್ತವಾಗಿ ಬೆಳೆದ ಅಗರ್‌ವುಡ್ ಸುಗಂಧವನ್ನು ಇತರ ರಾಸಾಯನಿಕ ಬಳಸಿ ಕೃತಕವಾಗಿ ತಯಾರಿಸಲು ಆಗದೇ ಇರುವುದರಿಂದ ಇದಕ್ಕೆ ಬೇಡಿಕೆ ಕಡಿಮೆಯಾಗದು. ಇದರ ಎಲೆ, ತೊಗಟೆ ಇತ್ಯಾದಿಗಳು ಅಗರಬತ್ತಿ ಹಾಗೂ ಕಾಗದ ತಯಾರಿಕೆಯಲ್ಲಿ ಬಳಕೆಯಾಗುತ್ತವೆ.
ಕಪ್ಪು ಬಂಗಾರ ಎಂದೇ ಖ್ಯಾತಿ ಪಡೆದಿರುವ ಅಗರ್‌ವುಡ್ ರಾಜ್ಯಕ್ಕೆ ಕಾಲಿಟ್ಟು ಕೆಲವೇ ವರ್ಷಗಳು ಕಳೆದಿದೆ. ವನದುರ್ಗಿ ಅಗರ್‌ವುಡ್ ಇಂಡಿಯಾ ಲಿಮಿಟೆಡ್ ಕರ್ನಾಟಕದಲ್ಲಿ `ಒಪ್ಪಂದ ಕೃಷಿ~ಯ ಮೂಲಕ ರೈತರಿಗೆ ಗಿಡಗಳನ್ನೂ ಪೂರೈಸುತ್ತಿದೆ. ಉತ್ಪನ್ನಕ್ಕೆ ಮಾರುಕಟ್ಟೆಯನ್ನೂ ಒದಗಿಸುತ್ತದೆ. ರಾಜ್ಯದ ಮಲೆನಾಡು ಹಾಗೂ ಅರೆ ಮಲೆನಾಡು ಪ್ರದೇಶ ಈ ಬೆಳೆಗೆ ಹೆಚ್ಚು ಸೂಕ್ತವಾಗಿದೆ. ಇಲ್ಲಿ ಮಾತ್ರ ಕಂಪೆನಿ ಗಿಡಗಳ ವಿತರಣೆಯಲ್ಲಿ ತೊಡಗಿದೆ. ಪ್ರತಿ ಗಿಡಕ್ಕೆ 50 ರೂಪಾಯಿಯಂತೆ ಗಿಡಗಳನ್ನು ಪೂರೈಸುತ್ತಿದೆ. ಇದರಲ್ಲಿ ಗಿಡಕ್ಕೆ 40 ಹಾಗೂ 10 ರೂಗಳನ್ನು ಷೇರು ಪತ್ರಗಳ ಮೂಲಕ ಸಂಗ್ರಹಿಸುತ್ತಿದೆ.
ಹಲವು ವರ್ಷಗಳ ಹಿಂದೆ ಕರ್ನಾಟಕದ ಅರಣ್ಯಗಳಲ್ಲಿ ಶ್ರೀಗಂಧ ಹೇಗೆ ಸಹಜವಾಗಿ ಬೆಳೆಯುತ್ತಿತ್ತೋ ಹಾಗೇ ಈಶಾನ್ಯ ರಾಜ್ಯಗಳಲ್ಲಿ ಅಗರ್‌ವುಡ್ ಸಹಜವಾಗಿ ಬೆಳೆಯುತ್ತಿತ್ತು. ಇಲ್ಲಿ ಶ್ರಿಗಂಧವಿದ್ದಂತೆ ಅಲ್ಲಿ ಅಗರ್‌ವುಡ್ ಆ ರಾಜ್ಯ ಸರ್ಕಾರದ ಆಸ್ತಿಯಾಗಿದೆ. ಹಾಗಾಗಿ ಸರ್ಕಾರವೇ ಅದಕ್ಕೆ ದರ ನಿಗದಿ ಮಾಡುತ್ತದೆ. ಆದರೆ ಮುಂಬೈನ ಮುಕ್ತ ಮಾರುಕಟ್ಟೆಯಲ್ಲಿ ಅದಕ್ಕಿಂತಲೂ ಹೆಚ್ಚು ದರವಿದೆ. ಮೊದಲ ದರ್ಜೆ `ಬ್ಲಾಕ್ ಅಗರ್~ಗೆ ಪ್ರತಿ ಕಿಲೋಗೆ 30 ರಿಂದ 50 ಸಾವಿರ ರೂ,ಎರಡನೇ ದರ್ಜೆ `ಬಂಟಾಂಗ್~ಗೆ 20ರಿಂದ 30 ಸಾವಿರ ರೂ, ಮೂರನೇ ದರ್ಜೆಯ `ಪೂಥಾಸ್ ಕಾಲಾಗುಚ್ಚಿ~ಗೆ 7 ರಿಂದ 10 ಸಾವಿರ ಹಾಗೂ ನಾಲ್ಕನೇ ದರ್ಜೆಯ `ದಮ್~ಗೆ 300ರಿಂದ 450 ರೂ ಧಾರಣೆ ಇದೆ ಎಂದು ಕಂಪೆನಿ ಹೇಳುತ್ತಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಗಳಿಸಲು ಶ್ರೇಷ್ಠ ದರ್ಜೆಯ ಅಗರ್‌ವುಡ್ ಉತ್ಪಾದನೆ ಅಗತ್ಯವಾಗಿದೆ. ಇದಕ್ಕೆ ಉತ್ತಮ ತಳಿಯ ಆಯ್ಕೆ ಬಹು ಮುಖ್ಯ. ಅಗರ್‌ವುಡ್ `ಅಕ್ವೇಲೇರಿಯಾ~ ವರ್ಗಕ್ಕೆ ಸೇರಿದೆ. ಇದರಲ್ಲೂ ಹಲವು ತಳಿಗಳಿವೆ. ಆದರೆ `ಅಕ್ವೇಲೇರಿಯಾ ಅಗಾಲೊಚ್ಛಾ~ ಶ್ರೇಷ್ಠ ತಳಿಯಾಗಿದೆ. ನಮ್ಮ ರಾಜ್ಯದಲ್ಲಿ ಇದನ್ನೇ ಬೆಳೆಯಲಾಗುತ್ತಿದೆ. ಈಗಾಗಲೇ ಮಲೆನಾಡು, ಅರೆ ಮಲೆನಾಡು ಪ್ರದೇಶದ ಐದು ಜಿಲ್ಲೆಗಳಲ್ಲಿ ಸುಮಾರು 2000 ರೈತರು ಅಗರ್‌ವುಡ್ ಬೇಸಾಯ ಆರಂಭಿಸಿದ್ದಾರೆ. ಪ್ರತಿ ತಾಲ್ಲೂಕಿಗೂ ಕಂಪೆನಿ ಪ್ರವರ್ತಕರನ್ನು ನೇಮಿಸಿದೆ. ಅವರ ಮೂಲಕ ಗಿಡಗಳ ಪೂರೈಸುತ್ತಿದೆ.
ಕೃತಕ ಸೋಂಕು: ಗಿಡ ನಾಟಿ ಮಾಡಿದ ಮೊದಲ ವರ್ಷ ಇದಕ್ಕೆ ನೀರಾವರಿ ಅಗತ್ಯವಿದೆ. ಆ ಬಳಿಕ ವರ್ಷಕ್ಕೆ ಎರಡು ಸಲ ಗೊಬ್ಬರ ಕೊಟ್ಟರೆ ಸಾಕು. ವೇಗವಾಗಿ ಬೆಳೆಯುವ ಇದು ಸುಮಾರು 8 ರಿಂದ 10 ವರ್ಷಗಳಲ್ಲಿ ಕಟಾವಿಗೆ ಬರುತ್ತದೆ. 15 ಅಡಿ ಎತ್ತರ ಮತ್ತು ಕಾಂಡ 40 ಸೆ.ಮೀ. ಸುತ್ತಳತೆಗೆ ಬಂದಲ್ಲಿ ಮಾತ್ರ ಇದರಲ್ಲಿ ಹೆಚ್ಚು ತಿರುಳು (ಕೊರಡು) ಇರುತ್ತದೆ.
ಅಗರ್‌ವುಡ್‌ನಲ್ಲಿ ಸುಗಂಧ ದ್ರವ್ಯ ಸಿಗಬೇಕಾದರೆ ಮರಕ್ಕೆ ಗಾಯವಾಗಿ ಅದರಲ್ಲಿ ರಾಸಾಯಿಕ ಕ್ರಿಯೆ ಏರ್ಪಟ್ಟು ಸೋಂಕಿನ ಮೂಲಕ ಮರ ಸಾಯಬೇಕು. ಸ್ವಾಭಾವಿಕವಾಗಿ ಅದಕ್ಕೆ ಗಾಯವಾಗದೇ ಇದ್ದರೆ ಅದರ ಕೊಂಬೆಗಳಿಗೆ ಕೃತಕವಾಗಿ ಗಾಯ ಮಾಡಿ ಶಿಲೀಂದ್ರವನ್ನು ಸವರಬೇಕು. ಹೀಗೇ ಸೋಂಕು ತಗಲಿದ ಮರವು ತುದಿಯಿಂದ ಒಣಗಿಕೊಂಡು ಬರುತ್ತದೆ. ಸುಮಾರು 9 ತಿಂಗಳಲ್ಲಿ ಮರದ ಅಡಿ ಭಾಗದವರೆಗೆ ಒಣಗಿ ಮರ ಸಾಯುತ್ತದೆ. ನೆಲಮಟ್ಟದಿಂದ ಸ್ವಲ್ಪ ಮೇಲೆ ಹಸಿರಾಗಿರುವಾಗ ಅಲ್ಲಿಂದಲೇ ಮರವನ್ನು ಕತ್ತರಿಸಬೇಕು. ಹೀಗೆ ಮಾಡಿದರೆ ಬುಡದಿಂದ ಮತ್ತೆ ಚಿಗುರುಗಳು ಬಂದು ಹೊಸ ಮರ ಬೆಳೆಯುತ್ತದೆ. ಸೋಂಕು ತಗುಲಿ ಮರ ಒಣಗಿದ ಮೇಲಷ್ಟೇ ಅದರಲ್ಲಿ ಸುಗಂಧ ಉತ್ಪತ್ತಿಯಾಗುವುದರಿಂದ ಶ್ರೀಗಂಧದಂತೆ ಇದನ್ನು ಕಳವು ಮಾಡುವುದು ಕಷ್ಟ. ಕಟಾವಿನ ಕೊನೆಯ 9 ತಿಂಗಳು ಮಾತ್ರ ಇದಕ್ಕೆ ಕಳ್ಳರಿಂದ ರಕ್ಷಣೆ ನೀಡಿದರೆ ಸಾಕು.
ಅಗರ್‌ವುಡ್ ಬೆಳೆಗೆ ವಿಶೇಷ ಆರೈಕೆ ಬೇಕಾಗಿಲ್ಲ. ಹೆಚ್ಚು ಬಂಡವಾಳವೂ ಬೇಡ. ಇದು ಸುವಾಸನೆಯೊಂದಿಗೆ ಮಾದಕತೆಯನ್ನೂ ಹೊಂದಿದೆ. ಇದರ ಉತ್ಪನ್ನದ ರಾಸಾಯನಿಕ ರಚನೆಯೂ ಸಂಕೀರ್ಣವಾಗಿದೆ. ಅದರ ಸುವಾಸನೆಯ ಮೂಲವಸ್ತುಗಳು ಸಂಯುಕ್ತವಾಗಿ ಪ್ರಭಾವ ಬೀರುವುದರಿಂದ ಕೃತಕ ಮೂಲಗಳಿಂದ ಇದರ ತಯಾರಿಕೆ ಸಾಧ್ಯವಿಲ್ಲ ಎನ್ನುತ್ತಾರೆ ಕಳೆದ ಎರಡು ವರ್ಷಗಳಿಂದ ಅಗರ್‌ವುಡ್ ಬೆಳೆಸುತ್ತಿರುವ ಸುಳ್ಯ ತಾಲ್ಲೂಕು ಆಲೆಟ್ಟಿ ಗ್ರಾಮದ ಎ.ಬಾಲಕೃಷ್ಣ ಬೈಪಡಿತ್ತಾಯ. ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ವನದುರ್ಗಿ ಅಗರ್‌ವುಡ್ ಇಂಡಿಯಾ ಲಿಮಿಟೆಡ್‌ನ ಪ್ರವರ್ತಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಅವರ ಮೊಬೈಲ್ ನಂಬರ್: 8105310870
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.