ಕೊಳವೆ ಬಾವಿ ಕೊರೆಸುವ ಮೊದಲು ರೈತರು ತಮ್ಮ ಜಮೀನಿನಲ್ಲಿ ಎಲ್ಲೆಲ್ಲಿ ನೀರಿದೆ ಎಂದು ತಿಳಿಯಲು ಬಯಸುತ್ತಾರೆ. ಈ ವಿಷಯದಲ್ಲಿ ರೈತರು ಭೂ ವಿಜ್ಞಾನಿಗಳಿಗಿಂತ ಸ್ಥಳೀಯ ಜಲ ಶೋಧಕರನ್ನು ನಂಬುತ್ತಾರೆ. ವೈಜ್ಞಾನಿಕ ಉಪಕರಣ ಬಳಸಿ ಅಂತರ್ಜಲ ಗುರುತಿಸುವ ಬದಲು ತೆಂಗಿನಕಾಯಿ, ಬೇವಿನಕಡ್ಡಿ ಇತ್ಯಾದಿ ಹಿಡಿದು ಜಲ ಶೋಧ ಮಾಡುವವರನ್ನು ಹೆಚ್ಚಾಗಿ ನಂಬುತ್ತಾರೆ.
ಬೇಲೂರು ತಾಲ್ಲೂಕಿನ ಜಾಗೋಡು ಗ್ರಾಮದ ಹಿರಿಯರಾದ ಶಾಂತಯ್ಯ ಅವರು ನೂರಾರು ಜಲ ಮೂಲಗಳನ್ನು ಪತ್ತೆ ಮಾಡಿರುವ ಅನುಭವಿ. ಅವರಿಗೀಗ 105 ವರ್ಷ. (ಜನನ 1906 ಜನವರಿ) ಅವರ ಶೋಧನೆಗಳು ಒಂದೂ ವಿಫಲವಾಗಿಲ್ಲ ಎನ್ನುವುದು ಅವರ ಹೆಗ್ಗಳಿಕೆ. ಅನುಭವದ ಆಧಾರದ ಮೇಲೆ ಇಂತಿಷ್ಟೇ ನೀರಿದೆ ಎಂದು ನಿಖರವಾಗಿ ಹೇಳುತ್ತಾರೆ. ಅದಕ್ಕೆ ಅವರು ಇಂತಿಷ್ಟು ಹಣ ಕೊಡಿ ಎಂದು ಕೇಳುವುದಿಲ್ಲ. ಬೇಲೂರು ಸುತ್ತ ಮುತ್ತಲಿನ ರೈತರು ಈಗಲೂ ಅವರ ಸಲಹೆ ಕೇಳಿಯೇ ಭಾವಿ ಕೊರೆಸುತ್ತಾರೆ.
ಶೋಧನೆ ವಿಧಾನ: ಶಾಂತಯ್ಯ ಅವರು ಮೂರು ರೀತಿಯಲ್ಲಿ ಜಲ ಮೂಲ ಪತ್ತೆ ಹಚ್ಚುತ್ತಾರೆ. ಮೊದಲನೆಯದು ಬೇವಿನ ಕಡ್ಡಿ ಅಥವಾ ತೆಂಗಿನಕಡ್ಡಿ ಅಥವಾ ಲಕ್ಕೆ ಸೊಪ್ಪಿನ ಹಸಿ ಕಡ್ಡಿಯ ಕವಲು (‘ವಿ’ ಆಕಾರದ) ಕತ್ತರಿಸಿ ಅದನ್ನು ಹಿಡಿದು ಜಮೀನಿನಲ್ಲಿ ಓಡಾಡಿ ನೀರಿನ ಮೂಲ ಗುರುತಿಸುತ್ತಾರೆ. ನೀರು ಇರುವ ಕಡೆ ಕಡ್ಡಿ ಭೂಮಿಯತ್ತ ಆಕರ್ಷಿತಗೊಂಡು ಬಾಗುತ್ತದೆ. ಆ ಸ್ಥಳದಲ್ಲಿ ನೀರಿದೆ ಎಂದರ್ಥ.
ಎರಡನೆ ವಿಧಾನ: ಬಲ ಅಂಗೈಯಲ್ಲಿ ನೀರಿರುವ ಸಿಪ್ಪೆ ಸುಲಿದ ತೆಂಗಿನ ಕಾಯಿಯನ್ನು ಮಲಗಿಸಿ ಹಿಡಿದುಕೊಂಡು ಹೊಲದಲ್ಲಿ ತಿರುಗಾಡುತ್ತಾರೆ. ನೀರು ಹೆಚ್ಚಾಗಿರುವ ಕಡೆ ತೆಂಗಿನಕಾಯಿ ತಾನೇ ತಾಗಿ ನೇರವಾಗಿ ನಿಲ್ಲುತ್ತದೆ. ಅಂತಹ ಸ್ಥಳದಲ್ಲಿ ನೀರಿದೆ ಎಂದು ಸೂಚಿಸುತ್ತಾರೆ.
ಮೂರನೆ ವಿಧಾನ: ಚಿನ್ನದ ಉಂಗುರಕ್ಕೆ ದಾರ ಕಟ್ಟಿ ಹೊಲದಲ್ಲಿ ತೂಗಾಡಿಸುತ್ತ ತಿರುಗಾಡುತ್ತಾರೆ. ಅಂತರ್ಜಲ ಹೆಚ್ಚಾಗಿರುವ ಕಡೆ ಉಂಗುರ ಗಿರಗಿರನೆ ಸುತ್ತಲು ಆರಂಭಿಸುತ್ತದೆ. ಈ ವಿಧಾನಗಳನ್ನು ಬಳಸಿ ಎಲ್ಲರೂ ನೀರಿನ ಮೂಲ ಕಂಡುಹಿಡಿಯಲು ಸಾಧ್ಯವಿಲ್ಲ. ವಿಶೇಷ ಪರಿಣತಿ ಇರುವವರಿಗೆ ಮಾತ್ರ ಸಾಧ್ಯ.
ಶಾಂತಯ್ಯ ಅವರು ಹೊಲದ ಮಣ್ಣಿನ ಗುಣ ಲಕ್ಷಣಗಳ ಆಧಾರದ ಮೇಲೆ ಇಂತಿಷ್ಟು ನೀರು ಸಿಗುತ್ತದೆ ಎಂದೂ ಹೇಳುತ್ತಾರೆ.ಕಲ್ಲು ಗುಂಡುಗಳು ಹೆಚ್ಚಾಗಿರುವ ಭೂಮಿ, ಹುತ್ತಗಳ ಸಮೀಪ ಹಾಗೂ ಆಲದ ಮರದ ಬಿಳಿಲುಗಳು ಇರುವ ಕಡೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ಅವರು ಹೇಳುತ್ತಾರೆ.
ಜಾಗೋಡಿನ ಮಾಸ್ತಮ್ಮನ ಗುಡಿ ಅರ್ಚಕರೂ ಆಗಿರುವ ಶಾಂತಯ್ಯ ರೈತರು. ಅವರು ತಮ್ಮ 90ನೇ ವಯಸ್ಸಿನವರೆಗೂ ಹೊಲದಲ್ಲಿ ಮಗನೊಂದಿಗೆ ದುಡಿಯುತ್ತಿದ್ದರು. ಹಿರಿಯರಿಂದ ಬಂದ ಎರಡೂವರೆ ಎಕರೆ ಜಮೀನಿನಲ್ಲಿ ಕಷ್ಟಪಟ್ಟು ದುಡಿದು ಬಂದ ಆದಾಯದಿಂದ ಆರು ಎಕರೆ ಭೂಮಿ ಖರೀದಿಸಿ ಬೇಸಾಯ ವಿಸ್ತರಿಸಿದರು. ಅವರು ತಮ್ಮ ಭೂಮಿಯಲ್ಲಿ ಭತ್ತ, ಏಲಕ್ಕಿ, ಕಾಫಿ, ರಾಗಿ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾರೆ. ಮೂವತ್ತು ದನಕರುಗಳನ್ನು ಸಾಕಿದ್ದಾರೆ. ಕೊಟ್ಟಿಗೆ ಗೊಬ್ಬರ ಬಳಸಿ ಬೇಸಾಯ ಮಾಡುತ್ತಾರೆ.
105 ವರ್ಷಗಳ ಶಾಂತಯ್ಯನವರು ಕನ್ನಡಕ ಬಳಸದೆ ಓದುತ್ತಾರೆ. ಶ್ರಮ ಜೀವನ ಹಾಗೂ ಸುದೀರ್ಘ ನಡಿಗೆ ತಮ್ಮ ದೀರ್ಘಾಯುಷ್ಯದ ಗುಟ್ಟು ಎನ್ನುತ್ತಾರೆ. ಈಗಲೂ ಅವರು ಕೈ ತೋಟದ ನಿರ್ವಹಣೆ, ಕಾಫಿ ಬೀಜ ಒಣಗಿಸುವ ರಾಶಿ ಮಾಡುವ ಕೆಲಸ ಮಾಡುತ್ತಾರೆ. ಶಾಂತಯ್ಯ ಅವರ ಮೊಬೈಲ್ ನಂಬರ್-99450-49778.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.