ADVERTISEMENT

ಸಗ್ಗದ ಸಿರಿ ತಂದ ಕುರಂಜಿ

ಕೆ.ವಾಸುದೇವ
Published 8 ಸೆಪ್ಟೆಂಬರ್ 2014, 19:30 IST
Last Updated 8 ಸೆಪ್ಟೆಂಬರ್ 2014, 19:30 IST

ಗಗನೆವೇ ಬಾಗಿ ಭುವಿಯನ್ನು ಚುಂಬಿಸುವಂತೆ, ಹಸಿರುಡುಗೆಯುಟ್ಟು ಮುಗಿಲೆತ್ತರಕ್ಕೆ ಹಬ್ಬಿರುವ ಗಿರಿಶ್ರೇಣಿಗಳು, ಗಿರಿಶ್ರೇಣಿಗಳ ಮುಡಿಯಿಂದ ಧುಮ್ಮುಕ್ಕಿ ಬಳುಕಿ ಸಾಗುವ ಜಲತಾರೆಯರ ಜೊತೆಗೂಡುವಂತೆ, ಗಿಳಿ, ಕಾಜಾಣ, ಜೀರುಂಡೆಗಳ ಕಲರವದ ನಡುವೆ, ಬಿಸಿಲು ಮೋಡಗಳ ಕಣ್ಣಾಮುಚ್ಚಾಲೆಯಾಟ.

ಇಂತಹ ಪ್ರಕೃತಿಯ ಸೊಬಗಿಗೆ ಸಾಕ್ಷಿಯಾಗಿರುವುದು ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮಘಟ್ಟ ತಪ್ಪಲು ಪ್ರದೇಶ. ಜಿಲ್ಲೆಯಲ್ಲಿ ಇನಾಂ ದತ್ತಾತ್ರೇಯ ಪೀಠ, ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖ, ದೇವರಮನೆ, ಶಿಶಿಲಾ, ಚಾರ್ಮಾಡಿ ಅರಣ್ಯದಂತಹ ಪ್ರದೇಶಗಳನ್ನು ಮಡಿನಲ್ಲಿಟ್ಟುಕೊಂಡಿರುವ ಪಶ್ಚಿಮಘಟ್ಟ ಪ್ರದೇಶವು, ಪ್ರತಿ ವರ್ಷ ಹಲವಾರು ಪ್ರಾಕೃತಿಕ ವಿಸ್ಮಯಗಳಿಗೆ ಸಾಕ್ಷಿಯಾಗಿ ಪ್ರಕೃತಿ ಪ್ರಿಯರಿಗೆ ತನ್ನ ಸೊಬಗನ್ನು ಉಣಬಡಿಸುತ್ತಿದೆ.

ಅಂತಹ ಪಾಕೃತಿಕ ವಿಸ್ಮಯಗಳಲ್ಲಿ ಒಂದಾದ ‘ಕುರಂಜಿ’ ಹೂವು ಈ ಬಾರಿ ಅರಳಿ ತಪ್ಪಲಿನ ನಭಮಂಡಲವನ್ನೇ ನೀಲಿಯಾಗಿಸಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇಡೀ ಪರ್ವತ ಶ್ರೇಣಿಗಳಲ್ಲಿ ಹಬ್ಬಿರುವ ಕುರಂಜಿ ಸಸ್ಯವು ಕಳೆದ ಎಂಟ್ಹತ್ತು ದಿನಗಳಿಂದ ಹೂವು ಬಿಡಲು ಪ್ರಾರಂಭಿಸಿದ್ದು, ಕುರಂಜಿಯ ನೀಲಿ ಹೂವುಗಳು ಆಕಾಶವೇ ನಾಚುವಂತೆ ಮಾಡಿವೆ.

ಕುರಂಜಿ ಸಸ್ಯವನ್ನು ಸ್ಥಳೀಯರು ‘ಹಾರ್ಲಾ’ ಎಂದು ಕರೆಯುತ್ತಿದ್ದು, ಈ ಕುರಂಜಿ ಸಸ್ಯದಲ್ಲಿ ಹೂವು ಅರಳುವ ಆಧಾರದಲ್ಲಿ ಪ್ರಮುಖವಾಗಿ ನಾಲ್ಕು ಪ್ರಕಾರಗಳನ್ನಾಗಿ ಮಾರ್ಪಡಿಸಿಕೊಳ್ಳಲಾಗಿದೆ. ಮೊದಲ ಪ್ರಕಾರವು ಐದು ವರ್ಷಕೊಮ್ಮೆ ಹೂವನ್ನು ಅರಳಿಸಿ ಸೊಬಗನ್ನು ನೀಡಿದರೆ, ಉಳಿದ ಪ್ರಕಾರದವು ಏಳು ವರ್ಷಕ್ಕೆ, ಹನ್ನೆರಡು ವರ್ಷಕ್ಕೆ ಮತ್ತು ಹದಿನಾರು ವರ್ಷಕ್ಕೊಮ್ಮೆ ಹೂವರಳಿಸುವ ಪ್ರಭೇದವಿದೆ ಎನ್ನಲಾಗಿದೆ.

ಆದರೆ ಕುರಂಜಿ ಸಸ್ಯವು ಏಕಪ್ರಕಾರದ್ದಾಗಿದ್ದು, ವಾತಾವರಣಕ್ಕೆ ಅನುಗುಣವಾಗಿ ವಿವಿಧ ವರ್ಷಗಳ ಅಂತರದ ನಡುವೆ ಕಾಣಿಸಿಕೊಳ್ಳುತ್ತದೆ ಎಂಬುದು ಸ್ಥಳೀಯ ಪ್ರಕೃತಿಪ್ರಿಯರ ಅಭಿಪ್ರಾಯವಾಗಿದ್ದು, ಏಳು ವರ್ಷಗಳ ಹಿಂದೆ ಪಶ್ಚಿಮಘಟ್ಟ ತಪ್ಪಲು ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಕುರಂಜಿ ಹೂವು ಈಗ ಮತ್ತೊಮ್ಮೆ ಕಂಗೊಳಿಸುತ್ತಿವೆ.

ನೀಲಿ ಬಣ್ಣದಲ್ಲಿ ಗೊಂಚಲು ಗೊಂಚಲಾಗಿ ಹೂವು ಬಿಡುವ ಈ ಕುರಂಜಿಯು, ದತ್ತಾತ್ರೇಯಪೀಠ, ಕುದುರೆಮುಖ, ಕೆಮ್ಮಣ್ಣುಗುಂಡಿಯಲ್ಲಿ ಚದುರಿದಂತೆ ಕಾಣಿಸಿಕೊಂಡಿದ್ದರೂ, ಮೂಡಿಗೆರೆಯ ಶಿಶಿಲಾ, ದೇವರಮನೆ ಅರಣ್ಯಗಳಲ್ಲಿ ದಟ್ಟವಾಗಿ ಹರಡಿ ನಭಕ್ಕೆ ಮುತ್ತಿಕ್ಕುವಂತಹ ನಯನ ಮನೋಹರ ದೃಶ್ಯ ಸೃಷ್ಟಿಸಿವೆ.

ಈ ಪ್ರದೇಶಗಳಲ್ಲಿ ಮಂಜಿನಂತೆ ಸೋನೆ ಮಳೆ ಸುರಿಯುತ್ತಿರುವುದು ಕುರಂಜಿಯ ಹೂವಿನ ಸೊಬಗು ಇಮ್ಮಡಿಯಾಗಿದ್ದು, ಮುಂದಿನ ಕೆಲ ದಿನಗಳವರೆಗೆ ಪ್ರಕೃತಿಯ ಈ ಸೊಬಗು ಕಾಣಸಿಗುತ್ತದೆ ಎಂದು ನಿರೀಕ್ಷಿಸಲಾಗಿದ್ದು, ಈಗಾಗಲೇ ಹೂವರಳಿರುವ ಮಾಹಿತಿ ತಿಳಿದು ಈ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ದಂಡು ಕುರಂಜಿಯ ಸೊಬಗನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.