ADVERTISEMENT

ಸರ್ವಋತು ತರಕಾರಿ ಮರತೊಂಡೆ

ಸಹನಾ ಕಾಂತಬೈಲು
Published 19 ಜನವರಿ 2011, 19:30 IST
Last Updated 19 ಜನವರಿ 2011, 19:30 IST

ತೊಂಡೆಕಾಯಿ ಬಹು ಬೇಡಿಕೆಯ ತರಕಾರಿ. ಇದು ಬೇಸಿಗೆಯ ತರಕಾರಿ. ಮಳೆಗಾಲದಲ್ಲೂ ಸಮೃದ್ಧವಾಗಿ ಫಸಲು ನೀಡುವ ತೊಂಡೆ ತಳಿಯೊಂದಿದೆ. ಇದು ನಾಟಿ ತಳಿ. ಇದರ ಹೆಸರು ಮರತೊಂಡೆ. ಇದು ಬಳ್ಳಿ ತೊಂಡೆಯಾದರೂ ಮರ ತೊಂಡೆ ಎಂಬ ಹೆಸರಿನಿಂದ ಕರೆಯುತ್ತಾರೆ. ಅನೇಕರಿಗೆ ಈ ತಳಿಯ ಬಗ್ಗೆ ಗೊತ್ತಿಲ್ಲ. ಇದನ್ನು ಸಾಮಾನ್ಯ ತೊಂಡೆಯಂತೆ ಪ್ರತಿ ವರ್ಷ ಹೊಸದಾಗಿ ನಾಟಿ ಮಾಡಿ ಬೆಳಸಬೇಕಿಲ್ಲ. ಒಮ್ಮೆ ನಾಟಿ ಮಾಡಿದರೆ ಹಲವಾರು ವರ್ಷ ಫಸಲು ಕೊಡುತ್ತದೆ. ಈ ತೊಂಡೆಯ ಬಳ್ಳಿಯನ್ನು ಮರಗಳ ಮೇಲೂ ಹಬ್ಬಿಸಬಹುದು. ಇಡೀ ವರ್ಷ ಕಾಯಿ ಕೊಡುತ್ತದೆ.

ಮರತೊಂಡೆ ಗಾತ್ರದಲ್ಲಿ ಸಾಮಾನ್ಯ ತೊಂಡೆಗಿಂತ ಚಿಕ್ಕದು. ಕಾಯಿಗಳು ಎರಡು ಇಂಚಿಗಿಂತ ಹೆಚ್ಚು ಉದ್ದ ಬೆಳೆಯುವುದಿಲ್ಲ. ದುಂಡಗೆ ಹಸಿರು ಬಣ್ಣದ ಕಾಯಿಗಳು ಆಮಟೆ ಕಾಯಿ ಹೋಲುತ್ತವೆ. ಎಳೆಯ ತೊಂಡೆ ರುಚಿ ಜಾಸ್ತಿ. ಸಿಪ್ಪೆ ದಪ್ಪ ಇರುವುದರಿಂದ ಕಾಯಿಕೊರಕ  ಕೀಟಗಳ ಹಾವಳಿ ಇರುವುದಿಲ್ಲ.

ಸುಳ್ಯ ತಾಲೂಕಿನ ಕಲ್ಲುಗುಂಡಿಯ ಅಂಗಡಿ ಮಾಲೀಕರಾದ ಶಶಿಕಲಾ ಪೂವಯ್ಯ ಅವರು ಮರತೊಂಡೆ  ಬೆಳೆದಿದ್ದಾರೆ. ಅಂಗಡಿಯ ಮುಂದೆ ಇರುವ ಸ್ವಲ್ಪ ಜಾಗದಲ್ಲಿ ಒಂದು ಬಳ್ಳಿಯನ್ನು ನೆಟ್ಟಿದ್ದಾರೆ. ವಾರಕ್ಕೆ ಸುಮಾರು ನಾಲ್ಕು ಕೆ.ಜಿ.ಯಷ್ಟು ತೊಂಡೆಕಾಯಿಗಳನ್ನು ಪಡೆಯುತ್ತಿದ್ದಾರೆ. ಅವರು ತಮ್ಮ ಮನೆಯಲ್ಲಿ ಬಳಸಿ ಹೆಚ್ಚಾದ ಕಾಯಿಗಳನ್ನು ಅಂಗಡಿಯಲ್ಲಿಟ್ಟು ಕೆ.ಜಿ.ಗೆ 20ರೂನಂತೆ  ಮಾರಾಟ ಮಾಡುತ್ತಾರೆ. ಎಳೆಯ ತೊಂಡೆಕಾಯಿಗಳಲ್ಲಿ  ಮಾಡಿದ  ಪಲ್ಯ, ಸಾಂಬಾರ್ ಬಲು ರುಚಿ ಎನ್ನುತ್ತಾರೆ ಶಶಿಕಲಾ.

ADVERTISEMENT

ಅಂಗಡಿ ಮುಂದೆ ಬೆಳೆದಿರುವ ತೊಂಡೆ ಬಳ್ಳಿಗೆ ಶಶಿಕಲಾ ಹೆಚ್ಚಿನ ಉಪಚಾರ ಮಾಡುವುದಿಲ್ಲ. ಬೀದಿಯಲ್ಲಿ ಬಿದ್ದ ಸೆಗಣಿಯನ್ನು ಹೆಕ್ಕಿ ತಂದು ಬಳ್ಳಿಯ ಬುಡಕ್ಕೆ ಹಾಕುತ್ತಾರೆ. ಊಟದ ತಟ್ಟೆ, ಬಟ್ಟಲುಗಳನ್ನು ಬಳ್ಳಿ ಬುಡದಲ್ಲಿ ತೊಳೆಯುತ್ತಾರೆ. ಇಷ್ಟು ಬಿಟ್ಟರೆ ಹೆಚ್ಚಿನ ಉಪಚಾರ ಮಾಡಿಲ್ಲ. ಅಷ್ಟರಿಂದಲೇ ಬಳ್ಳಿ ಸಮೃದ್ಧವಾಗಿ  ಬೆಳೆದು ಚಪ್ಪರದ ಮೇಲೆ ಹರಡಿ ಸುತ್ತಮುತ್ತಲಿನ ಗಿಡ ಮರಗಳ ಮೇಲೂ ಹಬ್ಬಿದೆ. ಪ್ರತಿ ಚಿಗುರಲ್ಲೂ ಮಿಡಿಗಳನ್ನು ಹೊತ್ತು ನಿಂತಿದೆ.

ಕಡಿಮೆ ಖರ್ಚಿನಲ್ಲಿ ಬೆಳೆಯುವ ಈ ತೊಂಡೆಯ ಬಲಿತ ಬಳ್ಳಿಯ ನಿಮ್ಮ ಮನೆಯ ಅಂಗಳ, ಹಿತ್ತಲಲ್ಲೂ ಬೆಳೆಸಬಹುದು. ಹೆಚ್ಚಿನ ಮಾಹಿತಿಗೆ  ಸಂಪರ್ಕಿಸಬೇಕಾದ ದೂರವಾಣಿ ನಂಬರ್: 08257-266041.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.