ಇಂದು ಅಲ್ಲಲ್ಲಿ, ಆಗಾಗ ಕೇಳಿ ಬರುವ ಕೃಷಿ ಸಲಹೆಗಳನ್ನು ಗಮನಿಸಿದಾಗ ನನಗೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ತೆಂಗಿನ ನುಸಿ ರೋಗಕ್ಕೇನು ಔಷಧಿ? ಅಡಿಕೆಯ ಕೊಳೆರೋಗಕ್ಕೆ, ಬಾಳೆಯ ಹಳದಿ ರೋಗಕ್ಕೆ ಕಬ್ಬಿನ ಬಿಳಿ ಹೇನಿಗೆ, ಭತ್ತದ ಜಿಗಿ ಹುಳಕ್ಕೆ ಏನು ಔಷಧಿ? ಅಥವಾ ದಾಸವಾಳ ಮುರುಟಿದೆ. ಏನು ಮಾಡಬೇಕು? ಕನಕಾಂಬರ ಬಿಳುಚಿದೆ. ಏನು ಸುರಿಯಬೇಕು? ಗೆಣಸು ಸೊರಗಿದೆ.
ಏನು ಹಾಕಬೇಕು? ಹೀಗೆ ರೈತರದು ನೂರೆಂಟು ಪ್ರಶ್ನೆಗಳು. ಅದಕ್ಕೆ ತಜ್ಞರ ಉತ್ತರಗಳನ್ನು ನೋಡುವಾಗ ನನಗೆ `ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?~ ಎಂಬ ಗಾದೆ ಮಾತು ನೆನಪಾಗುತ್ತದೆ.
`ಕನ್ನಡಿ~ ವೈಜ್ಞಾನಿಕ ಜಗತ್ತು ನೀಡಿದ ಅಪೂರ್ವವಾದ ಕೊಡುಗೆ.ಇದರಲ್ಲಿ ವಾದವಿಲ್ಲ. ಕನ್ನಡಿ ಇಲ್ಲದಿದ್ದರೆ ನಮ್ಮ ಮುಖವನ್ನು ನಾವು ನೋಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಉಳಿದವರು ಎಷ್ಟು ವಿವರಿಸಿದರೂ ನಮ್ಮ ಮುಖ ಹೇಗಿದೆ ಎಂಬುದು ನಮಗೆ ಗೊತ್ತಾಗುತ್ತಿರಲಿಲ್ಲ. ಆದರೆ ಗಮನಿಸಬೇಕಾದ ಅಂಶವೆಂದರೆ ನಾವು ಸದಾ ಕನ್ನಡಿಯನ್ನು ನೋಡುತ್ತಲೇ ಇರಬೇಕಾಗಿಲ್ಲ. ಕನ್ನಡಿಯ ಅಂದಕ್ಕೆ ಸೋತು, ರೂಪ ತಿದ್ದುವ ಸಿಂಗಾರ ಪ್ರಿಯರಿಂದ ಎಷ್ಟೊಂದು ಸಮಯ ಸಾಯುತ್ತದೆ.
ಪ್ರಸಾದನ ಸಾಮಗ್ರಿಗಳು ನಷ್ಟವಾಗುತ್ತವೆಯೇ ಹೊರತು ಸಾರ್ಥಕವಾಗದು. ಇದಕ್ಕಿಂತಲೂ ವಿಶೇಷ ವಿಚಾರವೇನೆಂದರೆ, ಮೂರಡಿ ಆರಡಿ ಗಾತ್ರದ ಈ ನಮ್ಮ ದೇಹದಲ್ಲಿ ನಮಗೆ ಕಾಣದ ನಮ್ಮ ಮುಖದ ಗಾತ್ರಕ್ಕಿಂತ ನಮ್ಮ ಕಣ್ಣು ಕಾಣಿಸುವ ದೇಹದ ಗಾತ್ರ ಬಲು ಹಿರಿದು. ಅದನ್ನು ಕಾಣಲು ಕನ್ನಡಿ ಬೇಕಾಗಿಲ್ಲ.
ಇನ್ನು ಕಣ್ಣಿಗೆ ಕಾಣದ ದೇಹದೊಳಗಿನ ಪಾತ್ರವನ್ನೋ, ಅಂತರಂಗದ ಮಹತ್ವವನ್ನೋ ಅರಿಯಲು ಕಣ್ಣು ಕೂಡ ಪ್ರಯೋಜನ ಇಲ್ಲ. ಕನ್ನಡಿಯಂತೂ ಮೊದಲೇ ಇಲ್ಲ. ಇದಕ್ಕೆ ಒಳಗಣ್ಣು ಬೇಕು. ವಿದ್ಯೆ, ವಿವೇಕಗಳ ಸಮನ್ವಯ ಬೇಕು.
ಪ್ರಕೃತಿಯ ಸೂಕ್ಷ್ಮ ರೂಪವಾದ ದೇಹದ ನಿಯಮವೇ ಮೂಲ ಪ್ರಕೃತಿಗೆ ಕೂಡ (ಅಥವಾ ವಿಲೋಮವಾಗಿ ಕೂಡ) ನೋಡಲು ಕನ್ನಡಿ ಬೇಡ. ಇನ್ನೊಬ್ಬರ ಕಣ್ಣು ಬೇಡ. ಪ್ರಾರಂಭದಲ್ಲಿ ಉಲ್ಲೇಖಿಸಿದಂತಹ ಪ್ರಶ್ನೆಗಳಿಗೆ ಉತ್ತರಿಸಲು ತಜ್ಞರು ಕನ್ನಡಿಯಾಗುವುದು ಬೇಡ. ಯಾಕೆಂದರೆ ಉತ್ತರ ಪ್ರಕೃತಿಯಲ್ಲಿ ಇದೆ. ಸ್ಪಷ್ಟವಾಗಿ ಇದೆ.
ಹಾಗೆ ಪ್ರಕೃತಿಯನ್ನು ನೋಡಿ ಆ ತಜ್ಞತೆಯ ಕನ್ನಡಿಯನ್ನು ಎಸೆದು ನೋಡಿ (ಕನ್ನಡಿ ಕೊಳೆಯಾದರೆ, ಒಡೆದು ಹೋಗಿದ್ದರೆ, ಕನ್ನಡಿಯ ಮಟ್ಟ ಸರಿ ಇಲ್ಲದಿದ್ದರೆ, ಆಗ ಕಾಣುವ ರೂಪ ಮತ್ತಷ್ಟು ವಿರೂಪ ಎಂಬುದನ್ನೂ ಮರೆಯಬೇಡಿ) ತೋಟದೊಳಗಿನ ಕಳೆಗಳನ್ನು ನೋಡಿ, ರಸ್ತೆ ಬದಿಯ ಗಿಡಗಳನ್ನೊಮ್ಮೆ ನೋಡಿ, ಅಳಿದುಳಿದ ಕಾಡಿನ ಮೋಡಿಯ ನೋಡಿ. ಉಳುಮೆ, ಬಿತ್ತನೆ, ಗೊಬ್ಬರ, ನೀರಾವರಿ, ರೋಗ ಕೀಟನಾಶಕಗಳಿಲ್ಲದೆ, ಯಾವುದೇ ತಜ್ಞ ಸಲಹೆ ಇಲ್ಲದೆ ಎಷ್ಟೊಂದು ಬಗೆಯ ಸಸ್ಯ ಸಾಮ್ರಾಜ್ಯ ಮೆರೆಯುತ್ತಿರುವುದನ್ನೊಮ್ಮೆ ನೋಡಿ.
ಈ ಇದೇ ರೀತಿಯಲ್ಲಿ ನಮ್ಮ ಹಣ್ಣಿನ ಬೆಳೆಗಳಾಗಲೀ, ತರಕಾರಿ, ಧಾನ್ಯಗಳಿರಲಿ, ಆರ್ಥಿಕ ಬೆಳೆಗಳೇ ಆಗಿರಲಿ, ಬೆಳೆಯುವುದು ಸಾಧ್ಯ. ಸ್ವಯಂಚಾಲಿತವಾಗಿ ಬೆಳೆಯುವುದು ಸಾಧ್ಯ. ಹೀಗೆ ಬೆಳೆದ, ಒಳಗಣ್ಣು ಸೃಷ್ಟಿಸಿದ ನೂರಾರು ತೋಟಗಳು ಇಂದು ನಮ್ಮ ಮಧ್ಯೆ ದೃಷ್ಟಾಂತವಾಗಿ ಇವೆ. ಕಳೆದ ಇಪ್ಪತ್ತೆಂಟು ವರ್ಷಗಳಿಂದ ಹೀಗೆ ಬೆಳೆದ ನಮ್ಮ ತೋಟದ ಸಂಪನ್ನತೆಯ ಬಲದಿಂದ ಮೇಲಿನ ಅಭಿಪ್ರಾಯ ಬರೆದಿರುವೆ.
ಕಾಡಿನ ತತ್ವವನ್ನು ಆಧರಿಸದ, ಏಕ ಬೆಳೆ ಪದ್ಧತಿಯೇ ಯಾವತ್ತೂ ಸಸ್ಯ ರೋಗ (ಕೀಟ)ಗಳಿಗೆ ಕಾರಣ. ಈ ಕಾರಣವನ್ನು ನಿವಾರಿಸದೆ, ಯಾರ‌್ಯಾರದೋ ಸಲಹೆ ಪಡೆದರೆ, ಅದು,ಇದು ಸಿಂಪಡಿಸಿದರೆ, ಏನೇನೋ ತಂದು ಸುರಿದರೆ, ಅದು ಅವರಿವರಿಗೆ ಮಾಡುವ ದಾನವಾದೀತು. ಇದರಿಂದ ವ್ಯರ್ಥ ಕಾಲಹರಣ. ನಿಸರ್ಗ ನಿರ್ಮಾತೃ ಜೀವಿಗಳ ಮಾರಣ ಬುದ್ಧಿಯ ಬಡತನವೇ ರೈತನ ಬಡತನಕ್ಕೆ ಕಾರಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.