ಇತ್ತೀಚಿನ ವರ್ಷಗಳಲ್ಲಿ ಟೊಮೆಟೋ ಮೇಲೆ ಜನರ ಅವಲಂಬನೆ ಹೆಚ್ಚಾಗಿದೆ. ಟೊಮೆಟೋ ಒಂದು ಹುಳಿ ತರಕಾರಿ ಅಷ್ಟೇ. ನಿಸ್ಸಂಶಯವಾಗಿ ಅದು ನಮಗೆ ಬೇಕು. ಆದರೆ ಎಲ್ಲಾ ಕಾಲದಲ್ಲೂ, ಎಲ್ಲಾ ಬಗೆಯ ಮೇಲೋಗರಗಳಲ್ಲಿ ಟೊಮೆಟೋ ಒಂದನ್ನೇ ಉಪಯೋಗಿಸುವ ಪರಿಪಾಠ ಇತ್ತೀಚಿನದು.
ಲಕ್ಷಾಂತರ ಎಕರೆಗಳಲ್ಲಿ ಟೊಮೆಟೋ ಬೆಳೆದು ಅದನ್ನು ನಿತ್ಯ ಸಾವಿರಾರು ಲಾರಿಗಳಲ್ಲಿ ತುಂಬಿಕೊಂಡು ಊರಿಂದೂರಿಗೆ ಸಾಗಿಸಿ ಮಾರಾಟ ಮಾಡುವ ಪ್ರಕ್ರಿಯೆ ಬಿರುಸಾಗಿ ನಡೆಯುತ್ತಿದೆ.
ಟೊಮೆಟೋ ಚಳಿಗಾಲದ ಬೆಳೆ. ಅದು ಅತಿಯಾದ ಮಳೆಯನ್ನು ಸಹಿಸದು. ಬಿಸಿಲಿನ ಬೇಗೆಯನ್ನೂ ಸ್ವೀಕರಿಸದು. ಚಳಿಗಾಲದ ಇಬ್ಬನಿ ನೀರನಲ್ಲಿ ಟೊಮೆಟೋ ಬೆಳೆಯುತ್ತದೆ. ಇಂತಹ ಟೊಮೆಟೋವನ್ನು ವರ್ಷ ಪೂರ್ತಿ ಬೆಳೆಯಲು, ತಿನ್ನಲು ಹೊರಟರೆ ಏನಾದೀತು ಯೋಚಿಸಿ.
ಎಲ್ಲ ಕಾಲದಲ್ಲೂ ಟೊಮೆಟೋ ಬೆಳೆಯಲು ನೀರು ಬೇಕಾಗುತ್ತದೆ. ನೀರು ಈಗ ದುಬಾರಿ. ನೂರಾರು ಅಡಿ ಆಳಕ್ಕೆ ಹೋದರೂ ನೀರಿಲ್ಲ. ಇನ್ನು ಹಲವಾರು ಸಲ ಟೊಮೆಟೋ ಗಿಡಗಳಿಗೆ ರಾಸಾಯನಿಕ ಗೊಬ್ಬರ ಹಾಕಬೇಕು. ಕೀಟನಾಶಕ ಬಳಸಿ ರೋಗ ಹರಡುವ ಕೀಟಗಳು ಹಾಗೂ ಶಿಲೀಂದ್ರಗಳನ್ನು ನಿಯಂತ್ರಣ ಮಾಡಬೇಕಾಗುತ್ತದೆ. ಇವೆರಡೂ ಖರ್ಚಿನ ಬಾಬತ್ತು. ಪ್ರಕೃತಿಗೂ ಹೊರೆ.
ಪ್ರಕೃತಿಯ ಸ್ಥಿತಿ ಹೀಗಾದರೆ, ನಿತ್ಯ ಟೊಮೆಟೋ ತಿನ್ನುವವರ ಪಾಡೇನು ಎಂಬುದನ್ನು ಗಮನಿಸಿ. ಟೊಮೆಟೋದ ಅತಿ ಬಳಕೆಯಿಂದ ಮೂತ್ರ ಪಿಂಡದ ನಾಳಗಳಲ್ಲಿ `ಕಲ್ಲು~ ನಿರ್ಮಾಣವಾಗುತ್ತದೆ. ನೀರಿಗಾಗಿ ಅಂತರ್ಜಲವನ್ನು ಅವಲಂಬಿಸಬೇಕು. ಕೊಳವೆ ಬಾವಿ ಅವಲಂಬನೆ ಹೆಚ್ಚಾದಷ್ಟೂ ಅಂತರ್ಜಲ ಮಟ್ಟ ಕುಸಿಯುತ್ತ ಹೋಗುತ್ತದೆ. ಆಳದಲ್ಲಿ ಸಿಗುವ ನೀರು ಗಡಸು. ಆಳದ ನೀರಿನಲ್ಲಿನ ಕ್ಲೋರಿನ್ ಮತ್ತಿತರ ಖನಿಜಾಂಶಗಳು ಹೆಚ್ಚಾಗಿಡುತ್ತವೆ.
ಇಂತಹ ನೀರು ಬಳಸುವುದರಿಂದ ಫ್ಲೋರೋಸಿಸ್ ಎಂಬ ರೋಗ ಬರುತ್ತದೆ. ಈ ರೋಗಕ್ಕೆ ತುತ್ತಾದವರು ಅಕಾಲ ವೃದ್ಧಾಪ್ಯದಿಂದ ಬಳಲುತ್ತಾರೆ. ಇಪ್ಪತ್ತನೆ ವಯಸ್ಸಿಗೆ ಹಲ್ಲುಗಳು ಹಳದಿಯಾಗಿ, ದುರ್ಬಲಗೊಂಡು, ಬೆನ್ನು ಬಾಗಿ, ಕೈಕಾಲುಗಳು ಡೊಂಕಾಗಿ, ಹಸಿವೆ ಆಗದೆ ನರಳಿ ಕೊನೆಗೆ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ.
ಟೊಮೆಟೋಗೆ ಪರ್ಯಾಯವಾಗಿ ಹತ್ತಾರು ಹುಳಿಗಳಿವೆ. ಆದರೆ ಟೊಮೇಟೋ ಒಂದನ್ನೇ ಬೆಳೆಯುವ ಪ್ರಯತ್ನ ಆರಂಭವಾದನಂತರ ಸ್ವತಂತ್ರವಾಗಿ ಬೆಳೆಯುತ್ತಿದ್ದ ನೂರಾರು ಹುಳಿ ಹಣ್ಣುಗಳು ನಾಶವಾಗಿ ಬಿಟ್ಟವು. ಅದರ ಜೊತೆಗೆ ನಾವು ಸಾವಿರಾರು ವರ್ಷಗಳಿಂದ ರೂಢಿಸಿಕೊಂಡು ಬಂದ ಸ್ವಾವಲಂಬಿ, ಸ್ವಾಭಿಮಾನಿ, ಸಾವಯವ ಆಹಾರ ಪದ್ಧತಿ ನಾಶವಾಯಿತು. ಬೇಸಾಯ (ಕೃಷಿ) ಕೈಗಾರಿಕೆಯ ವಶಾನುವರ್ತಿಯಾಯಿತು. `ಅಬ್ಬರ~ದ ಗೊಬ್ಬರ ಮನೆ ಮನೆ ಸೇರಿತು.
ಅಡುಗೆಗೆ ಷಡ್ರಸಗಳು ಬೇಕು (ಮಧುರ, ಆಮ್ಲ, ಲವಣ,ತಿಕ್ತ, ಕಟು, ಕಷಾಯ) ಈ ಪೈಕಿ ಆಮ್ಲ ಎಂದರೆ ಹುಳಿ. ಅಡುಗೆ ರುಚಿಯಾಗಬೇಕಾದರೆ ಯಾವುದಾದರೊಂದು ಹುಳಿ ಬೇಕೇ ಹೊರತು ಅದು ಟೊಮೆಟೋವೇ ಆಗಬೇಕೆಂದೇನೂ (ಆಗ ಬಾರದು ಕೂಡ) ಇಲ್ಲ.
ವೈವಿಧ್ಯದಲ್ಲಿ ನಮಗೆ ಆಸಕ್ತಿ ಇಲ್ಲವೆಂದೇನೂ ಇಲ್ಲ. ದಿನಕ್ಕೊಂದು ಅಂಗಿ, ಪ್ಯಾಂಟು ಹಾಕಿದರೂ ನಮಗೆ ತೃಪ್ತಿ ಸಿಕ್ಕುವುದಿಲ್ಲ. ಹಾಗಿರುವಾಗ ದಿನಕ್ಕೊಂದು ಹುಳಿ ರುಚಿಯನ್ನು ಬಳಸುವ ಆಸಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕು.
ಹುಳಿಗೆ ಪರ್ಯಾಯವಾದ ಹುಣಸೆಯಲ್ಲಿ ಎಷ್ಟೊಂದು ಜಾತಿಗಳಿವೆ. ಹಳದಿ ಹುಣಸೆ, ಕೆಂಪು ಹುಣಸೆ, ಬಿಳಿ ಹುಣಸೆ, ಆರಿಂಚು ಹುಣಸೆ, ಒಂದಡಿ ಹುಣಸೆ, ಎರಡಡಿ ಹುಣಸೆ, ಆನೆ ಹುಣಸೆ (ಇದು ನಾಲ್ಕು ಕಿಲೋ ತೂಗಬಲ್ಲದು),ಸಿಹಿ ಹುಣಸೆ. ಹುಣಸೆ ಎಲೆಗಳನ್ನು ಬಳಸಿದರೂ ಆದೀತು.
ಇನ್ನು ನಿಂಬೆ ಮೊದಲಾದ ಜಂಭೀತ ಫಲಗಳಲ್ಲಿ ಮೂವತ್ತಕ್ಕೂ ಮಿಕ್ಕಿ ಪ್ರಭೇದಗಳಿವೆ. ಪುನರ್ಪುಳಿ, ಉಪ್ಪಾಗೆ, ಉಂಡೆ ಹುಳಿ, ಕಮ್ರಾಕ್ಷಿ, ಬಿಂಬ್ಲಿ, ಅಂಬಟೆ, ಮಾವು, ಕರಂಡೆ, ಬೇಲ,ಸಂಪಿಗೆ ಮತ್ತಿತರ ಹುಳಿ ಹಣ್ಣು (ಕಾಯಿ)ಗಳಿವೆ. ಈ ಎಲ್ಲ ಹುಳಿಗಳನ್ನು ನಮ್ಮ ದೈನಂದಿನ ಅಡುಗೆಯ ಪದಾರ್ಥಗಳಲ್ಲಿ ಬಳಸಬಹುದು. ಹಾಗೆ ಮಾಡುವುದರಿಂದ ಟೊಮೆಟೋ ಒಂದರ ಮೇಲೆ ಅವಲಂಬನೆ ತಪ್ಪುತ್ತದೆ. ಇನ್ನುಳಿದ ಹುಳಿಗಳ ಮೌಲ್ಯ ವರ್ಧನೆ ಆಗುತ್ತದೆ. ನಿತ್ಯದ ಊಟದಲ್ಲಿ ಹೊಸತನವೂ ಇರುತ್ತದೆ.
ಪ್ರಕೃತಿ ನಮಗೆ ಕೊಡಮಾಡಿರುವ ಇಂತಹ ಜೀವಂತ ಜ್ಞಾನವನ್ನು ನಾವೆಲ್ಲ ಪಡೆಯುವುದು ಯಾವಾಗ? ಎಲ್ಲದಕ್ಕೂ ಟೊಮೆಟೋ ಬೇಕು ಎಂಬ ಮನಸ್ಥಿತಿ ಬದಲಾಗುವುದು ಯಾವಾಗ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.