ADVERTISEMENT

ಸೀರೆ ತೋರಿಸಿ, ಪ್ರಾಣಿ ಓಡಿಸಿ...

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ಇಲ್ಲಿರುವ ಚಿತ್ರ ನೋಡಿ, ಅರೆ, ಸೀರೆಯನ್ನು ಇಲ್ಲೇನು ಒಣ ಹಾಕಿದ್ದಾರೆ ಎಂಬ ಪ್ರಶ್ನೆ ಕಾಡಿತಾ ಅಥವಾ ಎಲ್ಲಿಂದಲೋ ಹಾರಿ ಬಂದು ಗಿಡಗಂಟಿಗಳ ನಡುವೆ ಸಿಕ್ಕಿ ಹಾಕಿಕೊಂಡಿರಬಹುದು ಎಂದು ಊಹಿಸಿರುವಿರಾ...?

ನಿಮ್ಮ ಊಹೆ ತಪ್ಪು. ಇಲ್ಲಿ ಸೀರೆ ಕಟ್ಟಿರುವುದು ಪ್ರಾಣಿಗಳಿಗಾಗಿ. ಹಾಗಂತ ಅವುಗಳಿಗೆ ಉಡಿಸಲು ಅಲ್ಲ, ಅವುಗಳನ್ನು ಓಡಿಸಲು!

ಮಲೆನಾಡಿನ ಕಬ್ಬಿನ ಗದ್ದೆಗಳಲ್ಲಿ ಹಂದಿ ಹಾಗೂ ಕಾಡೆಮ್ಮೆಗಳ ಕಾಟ ಜಾಸ್ತಿ. ಆದುದರಿಂದ ಇಳಿಜಾರಿನಲ್ಲಿ ಈಗ ಸೀರೆ ಕಟ್ಟುವುದು ಇಲ್ಲಿ ಮಾಮೂಲು. ಇನ್ನೇನು ಬೆಳೆದ ಬೆಳೆ ಕೈಸೇರಬೇಕೆನ್ನುವಾಗ ರೈತನಿಗೆ ಎದುರಾಗುತ್ತದೆ ಈ ಪ್ರಾಣಿಗಳ ಕಾಟ. ಸೀರೆ ಏಕೆ? ಅಷ್ಟಕ್ಕೂ ಸೀರೆ ಏನು ಮಾಡುತ್ತದೆ ಎಂಬ ಪ್ರಶ್ನೆ ಕಾಡುವುದು ಸಹಜ.

ಮತ್ತೇನೂ ಇಲ್ಲ. ಕಾಡು ಪ್ರಾಣಿಗಳು ಬರುವಾಗ ಅವುಗಳ ಮಾರ್ಗಕ್ಕೆ ಅಡ್ಡಲಾಗಿ ಸೀರೆ ಕಟ್ಟಲಾಗುವುದು. ಅವುಗಳು ಬರುವಾಗ ಸೀರೆಯಿಂದ ತಡೆಯಾಗುತ್ತದೆ. ಪ್ರಾಣಿಗಳು ಮರಳಿ ಹೋಗುತ್ತವೆ. ನಿತ್ಯವೂ ಇದೇ ರೀತಿ ಅಡೆತಡೆ ಎದುರಾದರೆ, ಪ್ರಾಣಿಗಳು ಮತ್ತೆ ಬರುವ ಸಾಹಸ ಮಾಡಲಾರವು ಎನ್ನುವುದೇ ಇದರ ಗುಟ್ಟು.

ಫಲಕೊಟ್ಟ ಪ್ರಯೋಗ: ಸಾಮಾನ್ಯವಾಗಿ ಕೃಷಿ ಭೂಮಿಗೆ ಹೊಂದಿಕೊಂಡಂತೇ ಇರುವ ಬೆಟ್ಟಗಳಿಂದ ಪ್ರಾಣಿಗಳು ಬರುತ್ತವೆ. ಹಂದಿ, ಕಾಡೆಮ್ಮೆ ಬೆಳೆ ತಿಂದು ಹಾಳು ಮಾಡುವುದು ಹೆಚ್ಚು. ಎಷ್ಟೇ ಏರು-ತಗ್ಗು ಇದ್ದರೂ, ಸಲೀಸಾಗಿ ಬರುವ ಪ್ರಾಣಿಗಳು ಎಲ್ಲವೂ ಹಾಳು ಮಾಡಿ ಹೋಗಿ ಬಿಡುತ್ತವೆ.
 
ಇದರ ತಡೆಗೆ ಬಂದ ಹೊಸ ಪ್ರಯೋಗ ಇದು. ಕಳೆದೆರಡು ವರ್ಷದಿಂದ ಈ ಒಂದು ಪ್ರಯೋಗ ಫಲ ಕೊಟ್ಟಿದೆಯಂತೆ.ಇನ್ನೇನು ಮುಂದಿನ ತಿಂಗಳಿನಿಂದ ಫೆಬ್ರವರಿವರೆಗೂ ಕಬ್ಬು ಬೆಳೆ ಕಟಾವು ನಡೆಯುತ್ತಿರುತ್ತದೆ. ಇದೇ ಅವಧಿಯಲ್ಲಿಯೇ ಬತ್ತದ ಬೆಳೆಯೂ ಕೈಸೇರುತ್ತದೆ.

ಈ ಸಂದರ್ಭದಲ್ಲಿ ಯಾವುದಾದರೂ ಪ್ರಾಣಿ ತೋಟಕ್ಕೆ ನುಗ್ಗಿ ಬಿಟ್ಟರೆ ಕತೆ ಮುಗಿಯಿತು. ಬೆಳೆದ ಬೆಳೆ ಕೈಸೇರುವುದೇ ಇಲ್ಲ. ಅದಕ್ಕಾಗಿಯೇ ಇವೆಲ್ಲಾ ಕಸರತ್ತು. ವಿಜ್ಞಾನ, ತಂತ್ರಜ್ಞಾನದ ಬಳಕೆ ಕಡಿಮೆ ಇದ್ದರೂ, ಸಾಮಾನ್ಯಜ್ಞಾನದ ಲಾಭದಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ರೈತರು.

ನಾಯಿ ಬಿಟ್ಟು ಓಡಿಸುವುದು, ಬೆರ್ಚುಗಳನ್ನು ನಿಲ್ಲಿಸುವುದು, ಪಟಾಕಿ ಹೊಡೆಯುವುದು, ತಮಟೆ, ಜಾಗಟೆ ಬಾರಿಸಿ ಓಡಿಸುವುದು ಎಲ್ಲವೂ ಹಳತಾದವು. ಸರ್ಕಾರದ ಕಾನೂನಿನಂತೆ ಕಾಡುಪ್ರಾಣಿ ಸಾಯಿಸುವಂತಿಲ್ಲ. ಓಡಿಸದೇ ಮಾರ್ಗವಿಲ್ಲ. ಅದಕ್ಕೇ ಈ ಹೊಸ ಟ್ರಿಕ್ ಎನ್ನುತ್ತಾರೆ ಅವರು.

ನಿತ್ಯ ಕಾಡಿಂದ ಗದ್ದೆಗೆ ಬರುವ ಮಾರ್ಗದಲ್ಲಿ ತಡೆ ಇರುವುದನ್ನು ಗಮನಿಸಿದ ಹಂದಿಗಳು ಗೊಂದಲಕ್ಕೀಡಾಗಿ ಹಿಂತಿರುಗುತ್ತವೆ. ಇನ್ನು ಕಾಡೆಮ್ಮೆಗಳ ಕಾಟ ವಿಪರೀತ ಇರುವಲ್ಲಿಯೂ ಈ ರೀತಿ ಸೀರೆ ಕಟ್ಟುವ ಸಂಪ್ರದಾಯ ಇದೆ. ಆದರೆ ಇದು ಕಡಿಮೆ. ಒಟ್ಟಾರೆ ಕಾಡು ಪ್ರಾಣಿಗಳಿಂದ ರಕ್ಷಣೆಗೆ ಆಗಾಗ ಹೊಸದೊಂದು ಸಾಹಸ ಹಳ್ಳಿಗರಿಗೆ ಅನಿವಾರ್ಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.