ADVERTISEMENT

ಹೆಚ್ಚು ಲಾಭಕ್ಕೆ ಸುವರ್ಣಗಡ್ಡೆ

ಗೀತಸದಾ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST

ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯಗಳಿಸುವ ಬೆಳೆಗಳಲ್ಲಿ ಔಷಧೀಯ ಗುಣವುಳ್ಳ ಸುವರ್ಣಗಡ್ಡೆಯೂ ಒಂದು. ಇಳಿಜಾರು ಪ್ರದೇಶ ಈ ಬೆಳೆಗೆ ಸೂಕ್ತ. ಜಮೀನಿನ ಇತರ ಕಡೆಯಲ್ಲೂ ಸೂಕ್ತ.

ಬೀಜದ ಆಯ್ಕೆಗಾಗಿ ಡಿಸೆಂಬರ್ ತಿಂಗಳಲ್ಲಿ ಕೊಯ್ಲು ಮಾಡಿದ ಗಡ್ಡೆಗಳು ಸೂಕ್ತ. ಗಡ್ಡೆಗಳು ಕನಿಷ್ಠ 500 ಗ್ರಾಂ ಇರಬೇಕು. ಬೀಜಕ್ಕಾಗಿ ಆಯ್ಕೆ ಮಾಡಿದ ಗಡ್ಡೆಗಳನ್ನು ನಾಟಿಮಾಡುವ 15 ದಿವಸದ ಮೊದಲು ದಪ್ಪನೆಯ ಸೆಗಣಿ ದ್ರಾವಣದಲ್ಲಿ ಮುಳುಗಿಸಿ ತಲೆಕೆಳಗಾಗಿರುವಂತೆ ಒಂದರ ಮೇಲೆ ಒಂದರಂತೆ ಜೋಪಾನವಾಗಿಡಬೇಕು.

ಗಡ್ಡೆಗಳನ್ನು ನಾಟಿಮಾಡುವ ಮೊದಲು ಮಣ್ಣನ್ನು ಎರಡು ಮೂರು ಸಾರಿ ಉಳುಮೆ ಮಾಡಿ ಒಗು ಮಾಡಿಕೊಳ್ಳಬೇಕು. ಮಣ್ಣನ್ನು ಒಂದು ಅಡಿ ಆಳ, ಎರಡು ಅಡಿ ಅಗಲದಲ್ಲಿ `ಯು' ಆಕಾರದಲ್ಲಿ ಗುಣಿ ತೆಗೆದು ಮಣ್ಣಿನ ಒಗುವಿಗಾಗಿ ಪುನಃ ಅಗೆಯುವುದು.

ಗುಣಿಗಳಿಗೆ ಸುಡುಮಣ್ಣು, ಹಟ್ಟಿಗೊಬ್ಬರ ಮತ್ತು ತರಗೆಲೆಗಳನ್ನು ತುಂಬಿ ಇದರ ಮೇಲೆ ಗಡ್ಡೆ ಇಟ್ಟು ಅದರ ಮೇಲೆ ಅಡಿಕೆ ಸಿಪ್ಪೆ, ತೋಟದ ಇತರ ಕಸಗಳನ್ನು ಹಾಕಿ ಮೇಲಿನಿಂದ ಸ್ವಲ್ಪ ಮಣ್ಣನ್ನು ಹರಡಬೇಕು.

ಗಡ್ಡೆಯಿಂದ ಗಡ್ಡೆಗೆ ಐದು ಅಡಿ ಅಂತರ ಬೇಕು. ಗಡ್ಡೆಯ ಬುಡದ ಭಾಗ ಗಟ್ಟಿಯಾಗಬಾರದು. ಮಳೆಬಿದ್ದ ಕೂಡಲೇ ಗಿಡಗಳಿಗೆ ಗೊಬ್ಬರ ನೀಡಬೇಕು. ಒಂದೂವರೆ ತಿಂಗಳಿಗೊಮ್ಮೆ ಎರಡು ಸಲ ಗೊಬ್ಬರ ನೀಡಿದರೆ ಉತ್ತಮ.
ಮಾರ್ಚ್ ತಿಂಗಳಲ್ಲಿ ನಾಟಿ ಮಾಡಿದ ಗಿಡಗಳು ಅಕ್ಟೋಬರ್ ತಿಂಗಳ ನಂತರ  ಮುದುಡಲು ಪ್ರಾರಂಭವಾದ ಕೂಡಲೇ ಕೊಯ್ಲಿಗೆ ರೆಡಿ.

ADVERTISEMENT

ಮಣ್ಣಿನಿಂದ ಗಡ್ಡೆ ತೆಗೆದು ಇಡುವುದರಿಂದ ಗಡ್ಡೆ ಒಣಗಿ ತೂಕ ಕಡಿಮೆ ಆಗುವುದು. ಆದ್ದರಿಂದ ಮಾರುಕಟ್ಟೆಯ ಧಾರಣೆಯನ್ವಯ ಗಡ್ಡೆಯನ್ನು ಮಣ್ಣಿನಿಂದ ತೆಗೆಯಬೇಕು. ಅರ್ಧ ಕೆ.ಜಿ. ತೂಕದ ಗಡ್ಡೆಯನ್ನು ನಾಟಿ ಮಾಡಿದರೆ ಸಾಮಾನ್ಯವಾಗಿ ಆರು ಕೆ.ಜಿ. ತೂಕದ ಗಡ್ಡೆ ಪಡೆಯಬಹುದು.

ಒಂದು ಕೆ.ಜಿ. ಗಡ್ಡೆಗೆ ಒಂಬತ್ತರಿಂದ ಹತ್ತು ಕೆ.ಜಿ. ಗಡ್ಡೆಯನ್ನು ಹೊಂದಬಹುದು. ಸುವರ್ಣಗಡ್ಡೆಗೆ ಕೆ.ಜಿ.ಗೆ ರೂಪಾಯಿ 20 ರಿಂದ 30 ಇರುತ್ತದೆ. ರೋಗ ಕೀಟಗಳ ಬಾಧೆಗಳಿಲ್ಲ ಈ ಬೇಸಾಯಕ್ಕೆ ಯಾವುದೇ ರಾಸಾಯನಿಕ ಔಷಧಿಗಳ ಸಿಂಪಡಣೆಯ ಖರ್ಚಿಲ್ಲ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ರಾಮಕುಂಜ ಗ್ರಾಮದ ರವಿ ಕೆದಿಲಾಯರು. ಮಾಹಿತಿಗಾಗಿ :- 08251 258280.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.