ADVERTISEMENT

ಸವಣೂರು ಸಿರಿಧಾನ್ಯ

ಕೋಡಕಣಿ ಜೈವಂತ ಪಟಗಾರ
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST
ಸವಣೂರು ಸಿರಿಧಾನ್ಯ
ಸವಣೂರು ಸಿರಿಧಾನ್ಯ   

‘ಅನ್ನದಿಂದ ಅರವತ್ತು ಬೇನೆ. ಸಿರಿಧಾನ್ಯ ಹಾಗಲ್ಲ. ಅದು ಆರೋಗ್ಯವರ್ಧಕ. ಊಟದ ತಟ್ಟೆಯಲ್ಲಿ ನಿತ್ಯ ನಮಗೆ ಸಿರಿಧಾನ್ಯದ ತಿನಿಸು ಇರಲೇಬೇಕು. ಇಪ್ಪತ್ತು ವರ್ಷಗಳಿಂದ ಈ ಧಾನ್ಯಗಳನ್ನು ಬೆಳೆಯುತ್ತಿದ್ದೇನೆ’ ಎನ್ನುತ್ತಾ ಸಿರಿಧಾನ್ಯಗಳ ಸಿರಿ ತಮ್ಮ ಬದುಕಿನ ಭಾಗವಾದ ಪರಿಯನ್ನು ವಿವರಿಸತೊಡಗಿದರು ಓಂಕಾರಗೌಡ ಪಾಟೀಲ.

ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಜಲ್ಲಾಪುರ ಗ್ರಾಮದವರಾದ ಪಾಟೀಲರು ಸಂಪೂರ್ಣ ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ. ಕೊಟ್ಟಿಗೆ ಗೊಬ್ಬರ, ಎರೆಗೊಬ್ಬರವನ್ನು ಯಥೇಚ್ಛವಾಗಿ ಬಳಸುವ ಅವರು, ರಾಸಾಯನಿಕ ಗೊಬ್ಬರದ ಬಳಕೆಯನ್ನು ಸಂಪೂರ್ಣವಾಗಿ ಬಿಟ್ಟಿದ್ದಾರೆ.

ಸಾವಯವಕ್ಕೆ ಹೊರಳಿದ ಪರಿ: ಓಂಕಾರ ಗೌಡರದು ನಲವತ್ತು ಎಕರೆ ಜಮೀನು. ಇಪ್ಪತ್ತು ಎಕರೆ ಶೇಂಗಾ, ಎಂಟು ಎಕರೆ ಬ್ಯಾಡಗಿ ಮೆಣಸಿನಕಾಯಿ ಹಾಗೂ ಎಂಟು ಎಕರೆಯಲ್ಲಿ ಜೋಳ ಬೆಳೆದರೆ, ಮೂರು ಎಕರೆಯಲ್ಲಿ ಸಿರಿಧಾನ್ಯಗಳಾದ ಊದಲು, ಕೊರಲೆ, ಹಾರಕ ಹಾಕುತ್ತಾರೆ. ಹಿಂದೆ ರಸಗೊಬ್ಬರ ಬಳಕೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಮಳೆ ಕೊರತೆ ಕಾಡಿದಾಗ ಬೆಳೆಗೆ ಬಿಸಿಲನ್ನು ಸಹಿಸಿಕೊಳ್ಳುವ ತಾಕತ್ತು ಇರಲಿಲ್ಲ. ಬೆಳೆಯೆಲ್ಲ ನೆಲ ಕಚ್ಚಿ, ನಷ್ಟ ಆಗುತ್ತಿತ್ತು.

ADVERTISEMENT

‘ಸಣ್ಣ ಹವಾಮಾನ ವೈಪರೀತ್ಯವನ್ನೂ ತಡೆದುಕೊಳ್ಳದಂತಹ ಬೆಳೆ ಏಕೆ ಬೇಕು’ ಎಂದುಕೊಂಡು ಪರ್ಯಾಯ ಆಲೋಚನೆಗೆ ತೊಡಗಿದರು. ಧಾರವಾಡದ ಕೃಷಿ ಮೇಳದಲ್ಲಿ ತಜ್ಞರಿಂದ ಸಾವಯವ ಕೃಷಿ ಕುರಿತು ಸಿಕ್ಕ ಮಾಹಿತಿ ಇವರ ಗಮನ ಸೆಳೆಯಿತು. ಸೂಕ್ಷ್ಮವಾಗಿ ಅವಲೋಕಿಸಿಕೊಂಡು, ಅರಿತುಕೊಂಡು ಬಂದು ತಮ್ಮ ಜಮೀನಿನಲ್ಲಿ ಪ್ರಯೋಗಕ್ಕಿಳಿದರು.

ರಾಸಾಯನಿಕ ಗೊಬ್ಬರ ತ್ಯಜಿಸಿ ಎರೆಗೊಬ್ಬರ ಉತ್ಪಾದನೆಗೆ ತೊಡಗಿದರು. ತಿಪ್ಪೆಗೊಬ್ಬರ ಉತ್ಪಾದಿಸುವ ಪ್ರಮಾಣವನ್ನೂ ಇಮ್ಮಡಿಗೊಳಿಸಿದರು. ಕಳೆದ ಏಳು ವರ್ಷಗಳಿಂದ ಇವರ ಕೃಷಿ ಭೂಮಿಯಲ್ಲಿ ಸಂಪೂರ್ಣ ಸಾವಯವದ ಕಂಪು ತುಂಬಿಕೊಂಡಿದೆ. ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಂಡು ಬೆಳೆಗಳು ದೃಢವಾಗಿ ನಿಲ್ಲುತ್ತಿವೆ. ಸಾವಯವ ಕೃಷಿಗೆ ದಾಖಲೆಯಾಗಿ ದೃಢೀಕರಣ ಪತ್ರವನ್ನೂ ಹೊಂದಿದ್ದಾರೆ.

ಸಿರಿಧಾನ್ಯ ವೈಭವ: ಸಿರಿಧಾನ್ಯ ಕೃಷಿಯಲ್ಲಿ ಇವರಿಗೆ ದಶಕಗಳ ಅನುಭವವಿದೆ. ನವಣೆ ಕೃಷಿ ಇವರ ಹೊಲದಲ್ಲಿ ಕಾಯಂ ಆಗಿ ಇರಲೇಬೇಕು. ದಿನನಿತ್ಯದ ಊಟದಲ್ಲಿ ಬಗೆ ಬಗೆಯ ಸಿರಿಧಾನ್ಯದ ಅಡುಗೆ ಇವರ ಮನೆಯ ಮೆನುವಿನಲ್ಲಿರುವ ವೈಶಿಷ್ಟ್ಯ. ಒಂದೊಂದು ದಿನ ಒಂದೊಂದು ರೀತಿಯ ಅಡುಗೆ. ಬೆಳಗಿನ ಉಪಾಹಾರಕ್ಕೆ ಸಿರಿಧಾನ್ಯದ ಇಡ್ಲಿ, ದೋಸೆ, ಉಪ್ಪಿಟ್ಟು. ಮಧ್ಯಾಹ್ನದ ಊಟಕ್ಕೆ ನವಣಕ್ಕಿ ಅನ್ನ, ಊದಲು ಪಾಯಸ. ಸಾಯಂಕಾಲ ಸಹ ಸ್ವಲ್ಪ ತೃಣಧಾನ್ಯದ ಖಾದ್ಯ ಇರಲೇಬೇಕು. ದಿನನಿತ್ಯ ವೈವಿಧ್ಯ ಖಾದ್ಯಗಳ ಬಳಕೆಯನ್ನು ರೂಢಿಸಿಕೊಂಡಿದ್ದಾರೆ. ಹಾರಕ, ಕೊರಲೆ, ನವಣೆ, ಊದಲು ಹೀಗೆ ದಿನಕ್ಕೊಂದು ಬಗೆಯ ಸಿರಿಧಾನ್ಯವನ್ನು ಬಳಕೆ ಮಾಡುತ್ತಾರೆ.

ತಲಾ ಒಂದೂಕಾಲು ಎಕರೆಯಂತೆ ಊದಲು, ಕೊರಲೆ, ಹಾರಕ ಕೃಷಿ ಮಾಡಿದ್ದಾರೆ. ಬಿತ್ತನೆಗೆ ಹಿಂದಿನ ವರ್ಷ ಉಳಿಸಿಕೊಂಡ ಬೀಜವನ್ನೇ ಬಳಕೆ ಮಾಡಿಕೊಳ್ಳುತ್ತಾರೆ. ಎರೆ ಮಣ್ಣಿನ ಭೂಮಿ ಇವರದು. ಟ್ರ್ಯಾಕ್ಟರ್ ಸಹಾಯದಿಂದ ಆಳವಾದ ಉಳುಮೆ. ರೆಂಟೆಯ ಸಹಾಯದಿಂದ ಮಣ್ಣು ಮಟ್ಟಗೊಳಿಸಿ ಕೂರಿಗೆಯಿಂದ ಬೀಜ ಬಿತ್ತಿದ್ದಾರೆ. ಸಾಲಿನಿಂದ ಸಾಲು ಹದಿನಾಲ್ಕು ಇಂಚು ಅಂತರ ಕಾಯ್ದುಕೊಂಡಿದ್ದಾರೆ. ಬಿತ್ತಿದ ಎಂಟು ದಿನಕ್ಕೆ ಸಸಿಗಳು ಮೊಳಕೆಯೊಡೆಯಲು ಶುರುವಾಗಿದ್ದವು. ಇಪ್ಪತ್ತನೆಯ ದಿನಕ್ಕೆ ಎಡೆಕುಂಟೆ ಹೊಡೆದು ಕಳೆ ನಿಯಂತ್ರಿಸಿದ್ದಾರೆ. ‘ಗಿಡಗಳ ಬುಡಕ್ಕೆ ಒಂದು ಇಂಚಿನಷ್ಟಾದರೂ ಮಣ್ಣು ಬೀಳಬೇಕು. ಹೀಗೆ ಕುಂಟೆ ಹೊಡೆಯುವುದರಿಂದ ಗಿಡಗಳು ಹುಲುಸಾಗಿ ಬೆಳೆಯಲು ಸಹಕಾರಿ’ ಎನ್ನುತ್ತಾರೆ ಗೌಡರು.

ಇತರೆ ಬೆಳೆಗಳಿಗೆ ಹೋಲಿಸಿದರೆ ಸಿರಿಧಾನ್ಯ ಕೃಷಿಯಲ್ಲಿ ಕಳೆ ಬೆಳೆಯುವ ಪ್ರಮಾಣ ವಿರಳ. ‘ಸಿರಿಧಾನ್ಯಗಳ ಬೇರುಗಳು ಚೆನ್ನಾಗಿ ಹರಡಿರುತ್ತವೆ. ಇವು ಕಳೆಗೆ ನೆಲೆ ಕಲ್ಪಿಸುವುದಿಲ್ಲ. ಹಾಗಾಗಿ ಒಂದೆರಡು ಬಾರಿಯ ಎಡೆಕುಂಟೆ ಹೊಡೆತ ಸಾಕು, ಕಳೆ ನೆಲ ಕಚ್ಚುತ್ತದೆ’ ಎನ್ನುತ್ತಾರೆ.

ಸಿರಿಧಾನ್ಯ ಬೆಳೆ ಕಟಾವಿನ ನಂತರ ಒಕ್ಕಣೆ ಮಾಡಿ ಕಾಳುಗಳನ್ನು ಪ್ರತ್ಯೇಕಿಸಿ ಸಂಗ್ರಹಿಸಿಡುತ್ತಾರೆ. ಮನೆ ಬಳಕೆಗೆ ಮಾತ್ರವಲ್ಲದೆ ಬೀಜವಾಗಿಯೂ ಮಾರುವುದಿದೆ. ಮನೆ ಬಾಗಿಲಿಗೆ ಬಂದು ಒಯ್ಯುವ ಗ್ರಾಹಕರಿಗೆ ಮಾತ್ರ ವಿಕ್ರಯ.

ಬೇಡಿಕೆ ಜಾಸ್ತಿ ಇರುವುದರಿಂದ ಪೂರೈಕೆ ಕಷ್ಟ ಎನ್ನುತ್ತಾರೆ ಗೌಡರು. ಹಿಂಗಾರಿನಲ್ಲಿ ಮೂರು ಎಕರೆ ಗೋಧಿ, ಐದು ಎಕರೆ ಕಡಲೆ, ಒಂದು ಎಕರೆ ಹೆಸರು, ಕಡಲೆ ಬೆಳೆಯ ಮಧ್ಯೆ ಅಕ್ಕಡಿಯಾಗಿ ಕುಸುಬಿ ಬಿತ್ತಿದ್ದಾರೆ.

ನಲವತ್ತು ಎಕರೆ ಜಮೀನನ್ನು ಗೊಬ್ಬರ ಉಣಿಸಲು ಸಹಕಾರಿ ಆಗುವಂತೆ ತಲಾ ಹದಿಮೂರು ಎಕರೆಗೊಂದರಂತೆ ಮೂರು ಭಾಗಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಪ್ರತಿವರ್ಷ ಒಂದೊಂದು ಭಾಗಕ್ಕೆ 25-30 ಟ್ರ್ಯಾಕ್ಟರ್ ಸಾವಯವ ಗೊಬ್ಬರ ಹಾಗೂ ಎಕರೆಗೆ ಎರಡು ಟ್ರ್ಯಾಕ್ಟರ್‌ನಂತೆ ಎರೆ ಗೊಬ್ಬರ ಬಳಸುತ್ತಾರೆ.

ಪ್ರತೀ ಭಾಗಕ್ಕೆ ಮೂರು ವರ್ಷಗಳಿಗೊಮ್ಮೆ ಎರೆಗೊಬ್ಬರ, ತಿಪ್ಪೆ ಗೊಬ್ಬರ ಉಣಿಕೆ. ವರ್ಷ ವರ್ಷವೂ ಗೊಬ್ಬರ ಹೇರುವ ಕೆಲಸದಿಂದ ವಿಮುಕ್ತರಾಗಿದ್ದಾರೆ. ಮೂರು ಆಕಳು, ಎರಡು ಎತ್ತು ಹೊಂದಿದ್ದು, ಸಾವಯವ ಗೊಬ್ಬರವನ್ನು ತಾವೇ ಉತ್ಪಾದನೆ ಮಾಡಿಕೊಳ್ಳುತ್ತಾರೆ. ಅಗತ್ಯವಿದ್ದಲ್ಲಿ ಎರೆಗೊಬ್ಬರವನ್ನು ಖರೀದಿಸುವುದೂ ಇದೆ.

ಸಾವಯವಕ್ಕೆ ಹೊಂದಿಕೊಂಡ ಭೂಮಿ ಸರಾಸರಿ ನಿರೀಕ್ಷಿತ ಇಳುವರಿಯನ್ನು ಹುಸಿಗೊಳಿಸುವುದಿಲ್ಲ. ಶೇಂಗಾ ಫಸಲು ಎಕರೆಗೆ ಇಪ್ಪತ್ತು ಚೀಲ ಸಿಕ್ಕರೆ, ಅಷ್ಟೇ ಭೂಮಿಯಲ್ಲಿ ಸರಾಸರಿ ಎರಡೂವರೆ ಕ್ವಿಂಟಲ್ ಮೆಣಸಿನಕಾಯಿ, ಆರು ಕ್ವಿಂಟಲ್ ಜೋಳದ ಇಳುವರಿ ಪಡೆಯುತ್ತಿದ್ದಾರೆ. ಆದಾಯ ಹಾಗೂ ಆರೋಗ್ಯದ ಸಮತೋಲನ ಸಾಧಿಸಿ ನೆಮ್ಮದಿಯಿಂದಿದ್ದಾರೆ.

ಸಂಪರ್ಕಿಸಲು: 9902749518

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.