ADVERTISEMENT

ಬಾಳೆಯಿಂದ ಬಂಗಾರವಾದ ರವಿ ಬದುಕು

ಸಿ.ಶಿವಾನಂದ
Published 29 ಏಪ್ರಿಲ್ 2019, 19:45 IST
Last Updated 29 ಏಪ್ರಿಲ್ 2019, 19:45 IST
ಬಾಳೆ ಗೊನೆಯೊಂದಿಗೆ ರೈತ ಕೊಳ್ಳಿ ರವಿರೆಡ್ಡಿ 
ಬಾಳೆ ಗೊನೆಯೊಂದಿಗೆ ರೈತ ಕೊಳ್ಳಿ ರವಿರೆಡ್ಡಿ    

ಹಗರಿಬೊಮ್ಮನಹಳ್ಳಿ: ಕಲ್ಲಂಗಡಿ, ಮೆಣಸಿನಕಾಯಿ ಬೆಳೆದು ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಂಡಿದ್ದ ರೈತನೀಗ ಬಾಳೆ ಬೆಳೆದು ಚೇತರಿಕೆ ಕಂಡುಕೊಂಡಿದ್ದಾನೆ.

ತಾಲ್ಲೂಕಿನ ಶೀಗೇನಹಳ್ಳಿ-2 ಗ್ರಾಮದ ರೈತ ಕೊಳ್ಳಿ ರವಿರೆಡ್ಡಿ ನಾಲ್ಕು ಎಕರೆ ಜಮೀನಿನಲ್ಲಿ ಬಾಳೆ ಬೆಳೆದು ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ನಾಲ್ಕು ಎಕರೆ ಜಮೀನಿನಲ್ಲಿ ಹನಿ ನೀರಾವರಿಯಲ್ಲಿ ಬೆಳೆದ ಹತ್ತು ತಿಂಗಳ ಬಾಳೆ ಗೊನೆಗಳು ಸಪೂರವಾಗಿ ಬೆಳೆದಿವೆ. ಒಟ್ಟು4,600 ಗಿಡಗಳನ್ನು ಬೆಳೆಯಲಾಗಿದೆ. ಗಿಡದಿಂದ ಗಿಡಕ್ಕೆ 6X5 ಅಡಿ ಅಂತರವಿದೆ. ಬೆಂಗಳೂರಿನ ಜಿ-9 ಸಸಿಗಳನ್ನು ನಾಟಿ ಮಾಡಿದ್ದಾರೆ.

ADVERTISEMENT

‘ಸಸಿಗಳಿಗೆ ಆರಂಭದಿಂದಲೇ ಕೆರನ್ ಹೆಲ್ತಿಕೊ ಕಂಪೆನಿಯ ಉತ್ಪನ್ನಗಳಾದ ‘ಶೀಲ್ಡ್ ಪೌಡರ್’ ಮತ್ತು ‘ಬಾಸ್’ ದ್ರಾವಣವನ್ನು ಪ್ರತಿ ಗಿಡಗಳಿಗೆ ನೀಡುವ ಮೂಲಕ ಫಂಗಸ್ ಮತ್ತು ಬೇರುಕೊಳೆ ರೋಗಗಳನ್ನು ತಡೆಯಲು ಯಶಸ್ವಿಯಾಗಿದ್ದಾರೆ. ಬಾಸ್ ದ್ರಾವಣ ಮಿಶ್ರಣ ಮಾಡುವುದರಿಂದ ಗೊಬ್ಬರ ಬೇಗ ಕರಗಿ ಬೆಳೆಗಳಿಗೆ ಪೋಷಕಾಂಶಗಳು ಒದಗಲು ಸಾಧ್ಯವಾಗುತ್ತದೆ. ಜತೆಗೆ ಅದರಲ್ಲಿ ಅತ್ಯಂತ ಸೂಕ್ಷ್ಮ ಪೋಷಕಾಂಶಗಳ ಸಂಖ್ಯೆ ಹೆಚ್ಚಿರುತ್ತವೆ’ ಎನ್ನುತ್ತಾರೆ ಕೃಷಿ ವಿಸ್ತಾರಕ ಎಸ್.ಹನುಮಂತಪ್ಪ ಕೊಟ್ಟೂರು.

‘ಬೆಳೆಯ ಆರಂಭದಲ್ಲಿ ನಾಲ್ಕು ತಿಂಗಳು ಕಡ್ಡಾಯವಾಗಿ ಔಷಧಿ ನೀಡಬೇಕು. ಹಾಗೆ ಮಾಡಿದರೆ ಬೆಳೆಗಳಿಗೆ ಯಾವುದೇ ರೋಗ ತಗಲುವುದಿಲ್ಲ. ಬೆಳೆ ಕಟಾವು ಮಾಡುವವರೆಗೂ ಔಷಧಿ ಶಕ್ತಿ ಅದರಲ್ಲಿರುತ್ತದೆ. ಗೊಬ್ಬರದ ಜತೆ ಅಲ್ಪ ಪ್ರಮಾಣದಲ್ಲಿ ಬೇವಿನ ಹಿಂಡಿಯನ್ನೂ ಹಾಕಲಾಗಿದೆ. ಬೆಳೆಗೆ ಹಲವು ಅಪಾಯ ತಂದೊಡ್ಡುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಬಾಳೆ ಹಣ್ಣಿಗೆ ಅತ್ಯುತ್ತಮ ರುಚಿ ನೀಡುವ ಶಕ್ತಿ ಹೊಂದಿರುತ್ತದೆ’ ಎಂದು ಹನುಮಂತಪ್ಪ ತಿಳಿಸಿದರು.

‘ಇದುವರೆಗೂ ನಾಲ್ಕು ಎಕರೆ ಪ್ರದೇಶದಲ್ಲಿ ಹತ್ತು ತಿಂಗಳ ಬೆಳೆಗೆ ಅಂದಾಜು ₹2 ಲಕ್ಷ ವೆಚ್ಚ ಮಾಡಿದ್ದಾರೆ. ಒಂದು ಬಾಳೆಗೊನೆಯಲ್ಲಿ 12ರಿಂದ 15 ಚಿಪ್‍ಗಳಿವೆ. ಒಂದೊಂದು ಗೊನೆ 35 ಕಿಲೋ ಗ್ರಾಂ ತೂಕ ಹೊಂದಿದೆ. ಕೆ.ಜಿ. ಬಾಳೆಗೆ ಆರು ರೂಪಾಯಿ ಕನಿಷ್ಠ ಬೆಲೆ ದೊರಕಿದರೂ ₹10 ರಿಂದ ₹12 ಲಕ್ಷ ರೂಪಾಯಿ ಲಾಭ ಸಿಗುತ್ತದೆ’ ಎನ್ನುತ್ತಾರೆ ರೈತ ಕೊಳ್ಳಿ ರವಿರೆಡ್ಡಿ.

ರವಿರೆಡ್ಡಿ ಅವರಿಗೆ ಬಾಳೆ ಮಾರುಕಟ್ಟೆಗೆ ಸಾಗಿಸುವ ಚಿಂತೆಯಿಲ್ಲ. ಖರೀದಿದಾರರು ಖುದ್ದಾಗಿ ಅವರ ಬಳಿ ಬಂದು ಕೊಂಡೊಯ್ಯುತ್ತಾರೆ. ಸಾರಿಗೆ ವೆಚ್ಚ ಉಳಿತಾಯವಾಗುತ್ತದೆ.ಈಗಿರುವ ಬಾಳೆ ಗಿಡದ ದಿಂಡಿಗೆ ಅಂಟಿಕೊಂಡಂತೆ ಬಾಳೆ ಚಿಗುರು, ಗುನ್ನೆ ಸಸಿಗಳನ್ನು ಮೊಳಕೆ ಒಡೆಸಲಾಗಿದೆ. ಎರಡನೇ ಬೆಳೆಯನ್ನು ಇದೇ ಸಸಿಗಳಿಂದ ಬೆಳೆಸಬಹುದು. ಸಸಿಗಳನ್ನು ಖರೀದಿಸಲು ಹಣ ವ್ಯಯಿಸಬೇಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.