ADVERTISEMENT

ಡ್ರ್ಯಾಗನ್‌ ಫ್ರೂಟ್‌; ಮೊದಲ ಸಲದ ಫಸಲು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 5 ಆಗಸ್ಟ್ 2019, 19:30 IST
Last Updated 5 ಆಗಸ್ಟ್ 2019, 19:30 IST
ಡ್ರ್ಯಾಗನ್‌ ಹಣ್ಣಿನ ತೋಟದಲ್ಲಿ ರಾಜಶೇಖರ್‌ ದ್ರೋಣವಲ್ಲಿ
ಡ್ರ್ಯಾಗನ್‌ ಹಣ್ಣಿನ ತೋಟದಲ್ಲಿ ರಾಜಶೇಖರ್‌ ದ್ರೋಣವಲ್ಲಿ   

‘ನನ್ನದು ಪೌಲ್ಟ್ರಿ ಫಾರಂಗಳಿವೆ. ಜತೆಗೆ ಸಾಕಷ್ಟು ಕೃಷಿ ಭೂಮಿ ಇದೆ. ಏನಾದರೂ ಕೃಷಿ ಮಾಡೋಣ ಎಂದರೆ ನೀರಿನ ಸಮಸ್ಯೆ. ಅದಕ್ಕೆ ಯಾವುದಾದರೂ ಹೊಸ ಬೆಳೆ ಬೆಳೆದು ನೋಡೋಣ ಎಂದು ಈ ಡ್ರ್ಯಾಗನ್ ಫ್ರೂಟ್ ಬೆಳೆಯುವ ಪ್ರಯತ್ನ ಮಾಡಿದೆ. ಸದ್ಯಕ್ಕಂತೂ ಫಲ ಸಿಕ್ಕಿದೆ. ಮಾರ್ಕೆಟ್‌ ಕೂಡ ಮಾಡುತ್ತಿದ್ದೇನೆ...’

ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಗುಲಾಬಿ ಬಣ್ಣದ ಡ್ರ್ಯಾಗನ್‌ ಫ್ರೂಟ್‌ಗಳನ್ನು ಬೊಗಸೆಯಲ್ಲಿ ಹಿಡಿದುಕೊಂಡು, ಹಣ್ಣು ಬೆಳೆದ ಕಥೆ ಹೇಳಲು ಶುರು ಮಾಡಿದರು ರಾಜಶೇಖರ ದ್ರೋಣವಲ್ಲಿ. ಅವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಜಂಬುನಾಥನಹಳ್ಳಿಯಲ್ಲಿರುವ ತಮ್ಮ ಕೋಳಿಫಾರಂಗಳ ಪಕ್ಕದ ಜಮೀನಿನಲ್ಲಿ ಒಂದೂವರೆ ವರ್ಷದಿಂದ ಡ್ರ್ಯಾಗನ್‌ ಫ್ರೂಟ್‌ ಕೃಷಿ ಮಾಡುತ್ತಿದ್ದಾರೆ.

ಅವರ ಕೈಯಲ್ಲಿದ್ದದು ಮೊದಲ ಫಸಲು. ಪ್ರತಿ ಹಣ್ಣು 250 ಗ್ರಾಂ ನಿಂದ 500 ಗ್ರಾಂಗಳವರೆಗೂ ತೂಗುತ್ತದೆ ಎಂದು ಹೇಳುತ್ತಿದ್ದರು. ಈಗಾಗಲೇ 800 ಕೆ.ಜಿಯಷ್ಟು ಹಣ್ಣನ್ನು ಪ್ಯಾಕ್‌ ಮಾಡಿ ಬೆಂಗಳೂರು, ಹೈದರಾಬಾದ್‌ ಮಾರುಕಟ್ಟೆಗೂ ಕಳುಹಿಸಿದ್ದಾರೆ.

ADVERTISEMENT

ಹೊಸಪೇಟೆ ಸುತ್ತ ಭತ್ತ, ಕಬ್ಬು, ಬಾಳೆ ಬೆಳೆಯುವವರೇ ಹೆಚ್ಚು. ಆದರೆ, ರಾಜಶೇಖರ್ ಅವರು ಸ್ವಲ್ಪ ವಿಭಿನ್ನವಾಗಿ ಯೋಚಿಸಿ, ಈ ಭಾಗಕ್ಕೆ ಹೊಸ ಬೆಳೆ ಎನಿಸಿರುವ ಡ್ರ್ಯಾಗನ್ ಫ್ರೂಟ್‌ ಬೆಳೆಸಲು ಮುಂದಾಗಿದ್ದಾರೆ. ಒಂದೂವರೆ ವರ್ಷದಿಂದ ಕೃಷಿ ಮಾಡುತ್ತಿದ್ದು, ಈ ಹಣ್ಣಿನ ಬೆಳೆ ಬೇಸಿಗೆಯಲ್ಲಿ 40 ಡಿಗ್ರಿಯಷ್ಟು ಬಿಸಿಲನ್ನು ತಡೆದುಕೊಂಡಿದೆ. ಜತೆಗೆ ಚಳಿಗಾಲ, ಮಳೆಗಾಲವನ್ನೂ ಕಂಡಿದೆ. ಇವನ್ನೆಲ್ಲ ದಾಟಿ ಫಸಲೂ ಕೈಗೆ ಸಿಕ್ಕಿದೆ. ಇಷ್ಟಾದರೂ ಅವರು, ಇದನ್ನು ಒಂದು ಪ್ರಯೋಗವೆಂದೇ ಹೇಳುತ್ತಾರೆ.

ಏಕೆ ಈ ಹಣ್ಣನ್ನೇ ಬೆಳೆದರು?
ರಾಜಶೇಖರ್ ಒಮ್ಮೆ ಗದಗ ಮುಂಡರಗಿಯ ಗೆಳೆಯನ ಮನೆಗೆ ಹೋಗಿದ್ದಾಗ, ಅವರ ತೋಟದಲ್ಲಿ ಬೆಳೆದಿದ್ದ ಡ್ರ್ಯಾಗನ್‌ ಫ್ರೂಟ್‌ ಬೆಳೆ ನೋಡಿದರು. ಹೆಚ್ಚು ಬಿಸಿಲು ಮತ್ತು ನೀರಿನ ಕೊರತೆ ಇರುವ ಪ್ರದೇಶದಲ್ಲಿ ಈ ಹಣ್ಣಿನ ಬೆಳೆ ಬೆಳೆಯುತ್ತದೆ ಎಂಬುದನ್ನು ಗಮನಿಸಿದರು. ‘ಈ ಹಣ್ಣಿನ ಬೆಳೆಯನ್ನೂ ನಮ್ಮಲ್ಲೂ ಬೆಳೆಯಬಹುದಲ್ಲ’ ಎಂದು ಯೋಚಿಸಿದರು.

ಹೇಗೂ ಗೊಬ್ಬರಕ್ಕಾಗಿ ದೊಡ್ಡ ಕೋಳಿಫಾರಂಗಳಿವೆ. ಕಡಿಮೆ ನೀರು ಕೇಳುವ ಬೆಳೆ ಎಂದು ಗೆಳೆಯರೇ ಹೇಳಿದ್ದಾರೆ. ಈಗಿರುವ ಕೊಳವೆಬಾವಿಗಳ ನೀರು ಸಾಕಾಗುತ್ತದೆ. ಬೆಳೆ ನಾಟಿ ಮಾಡಿಸೋಣ ಎಂದು ತೀರ್ಮಾನಿಸಿ, ಕೋಳಿಫಾರಂ ಪಕ್ಕದಲ್ಲಿರುವ 2 ಎಕರೆ ಜಮೀನಿನಲ್ಲಿ ಡ್ರ್ಯಾಗನ್‌ ಫ್ರೂಟ್ ಬೆಳೆ ಬೆಳೆಯಲು ಭೂಮಿ ಸಿದ್ಧತೆ ಮಾಡಿಸಿದರು. ಮುಂಡರಗಿಯ ಗೆಳೆಯನ ಜಮೀನಿನಿಂದಲೇ ಈ ಹಣ್ಣಿನ ಸಸಿಗಳನ್ನು ತರಿಸಿದರು.

ಭೂಮಿ ಹದ ಮಾಡಿಸಿ, ಕೋಳಿ ಫಾರಂನಲ್ಲಿ ಸಂಗ್ರಹಿಸಲಾದ ಕೋಳಿಗೊಬ್ಬರವನ್ನು ಮಣ್ಣಿಗೆ ಹರಗಿಸಿದರು. ಎರಡು ಎಕರೆಗೆ ಆರಂಭಿಕವಾಗಿ 35 ಟನ್‌ನಷ್ಟು ಗೊಬ್ಬರವನ್ನು ಸೇರಿಸಿದರು. ಹದಗೊಂಡ ಜಮೀನಿನಲ್ಲಿ 14 ಅಡಿಗೆ ಒಂದರಂತೆ 900 ಸಿಮೆಂಟಿನ ಕಂಬಗಳನ್ನು ನಿಲ್ಲಿಸಿದರು. ಪ್ರತಿ ಕಂಬಕ್ಕೆ ನಾಲ್ಕು ಗಿಡಗಳನ್ನು ನಾಟಿ ಮಾಡಿಸಿ, ಪ್ರತಿ ಗಿಡಕ್ಕೆ ಹನಿ ನೀರಾವರಿ ಪೈಪ್‌ ಹಾಕಿಸಿದರು. ಕೊಳವೆಬಾವಿಗಳ ನೀರನ್ನು ಸಂಗ್ರಹಿಸಲು ತೊಟ್ಟಿ ಮಾಡಿಸಿ, ಅಲ್ಲಿಂದಲೇ ಡ್ರಿಪ್ ಮೂಲಕ ಎಲ್ಲ ಗಿಡಗಳಿಗೆ ಪೂರೈಸಿದರು.

‘ನಾಟಿ ಮಾಡಿದ ಮೇಲೆ, ಅಗತ್ಯ ಬಿದ್ದಾಗಲೆಲ್ಲ ನೀರು ಪೂರೈಸಿದ್ದೇನೆ. ನಂತರ ಮೇಲುಗೊಬ್ಬರವಾಗಿ ಕೋಳಿಗೊಬ್ಬರ ಕೊಟ್ಟಿದ್ದು ಬಿಟ್ಟರೆ, ಬೇರೆ ಏನೂ ಆರೈಕೆ ಮಾಡಲಿಲ್ಲ. ಬೇಸಿಗೆಯಲ್ಲಿ ಉಷ್ಣಾಂಶ 40 ಡಿಗ್ರಿ ತಲುಪಿದಾಗ, ಗಿಡಗಳ ಎಲೆ ಹಳದಿ ಬಣ್ಣಕ್ಕೆ ತಿರುಗಿದವು. ನೀರು ಪೂರೈಕೆ ಮಾಡಿದ ನಂತರ, ಮಳೆಯೂ ಬಂದಿದ್ದರಿಂದ, ಹಳದಿ ಎಲೆಗಳೆಲ್ಲ ಪುನಃ ಎಲ್ಲ ಹಸಿರು ಬಣ್ಣಕ್ಕೆ ತಿರುಗಿದವು. ಹೀಗಾಗಿ, ಡ್ರ್ಯಾಗನ್‌ ಫ್ರೂಟ್ ಈ ಭಾಗದ ಬಿಸಿಲು ತಡೆಯುತ್ತದೆ ಎಂದು ಖಾತರಿಯಾಯಿತು’ ಎಂದು ಹಣ್ಣಿನ ಗಿಡಗಳು ಬೆಳೆದ ರೀತಿಯನ್ನು ವಿವರಿಸುತ್ತಾರೆ ರಾಜಶೇಖರ್. ಈ ಹಣ್ಣಿನ ಬೆಳೆ ನಿರ್ವಹಣೆಗಾಗಿ ನಾಲ್ಕೈದು ಮಂದಿ ಕಾರ್ಮಿಕರನ್ನು ನಿಯೋಜಿಸಿಕೊಂಡಿದ್ದಾರೆ.

ಎಂಟು ತಿಂಗಳಿಂದ ಫಸಲು ಆರಂಭ
ಈ ಹಣ್ಣಿನ ಗಿಡಗಳನ್ನು ನಾಟಿ ಮಾಡಿದ ಒಂದೂವರೆ ವರ್ಷದ ಹೊತ್ತಿಗೆ ಫಸಲು ಬಿಡಲು ಆರಂಭವಾಗುತ್ತದೆ. ರಾಜಶೇಖರ್ ಅವರ ತೋಟದಲ್ಲೂ ಈಗಾಗಲೇ ಹಣ್ಣು ಕೊಯ್ಲು ಶುರುವಾಗಿದೆ. ಮೊದಲ ಪ್ರಯತ್ನದಲ್ಲೇ ಗಾತ್ರದಲ್ಲಿ ಉತ್ತಮ ಎನ್ನಿಸುವಂತಹ ಹಣ್ಣುಗಳನ್ನು ಪಡೆದಿದ್ದಾರೆ. ಎರಡು–ಮೂರು ಹಣ್ಣುಗಳು ಸೇರಿದರೆ ಒಂದು ಕೆ.ಜಿ ತೂಕ ಬರುತ್ತದೆಯಂತೆ.

ಹಣ್ಣು ಬೆಳೆದಿದ್ದಾಯಿತು. ಅದನ್ನು ಮಾರಾಟ ಮಾಡುವುದಕ್ಕೆ ಸ್ಥಳೀಯವಾಗಿ ಮಾರುಕಟ್ಟೆಯೇ ಇಲ್ಲ. ಹೀಗಾದಾಗ ಸಾಮಾನ್ಯವಾಗಿ ಬೆಳೆಗಾರರು ಕಂಗಾಲಾಗುತ್ತಾರೆ. ಆದರೆ, ರಾಜಶೇಖರ್ ಅವರು ಕೃಷಿಕರಾಗುವುದಕ್ಕೆ ಮುನ್ನ ಉದ್ಯಮಿಯಾಗಿದ್ದವರು. ಹಾಗಾಗಿ ಬೆಳೆದಂತಹ ಹಣ್ಣುಗಳನ್ನು ಮಾರಾಟ ಮಾಡಲು ಬೆಂಗಳೂರು, ಹೈದರಾಬಾದ್‌ ಮಾರುಕಟ್ಟೆಗೆ ಸುತ್ತಾಡಿ ಬಂದರು. ಅಲ್ಲಿನ ವ್ಯಾಪಾರಿಗಳನ್ನು ಸಂಪರ್ಕಿಸಿ, ಮಾರುಕಟ್ಟೆ ಕುದುರಿಸಿಕೊಂಡರು. ಈಗ ಹಣ್ಣುಗಳನ್ನು ಕೊಯ್ಲು ಮಾಡಿ, ತೋಟದಲ್ಲೇ ವ್ಯವಸ್ಥಿತವಾಗಿ ಪ್ಯಾಕ್‌ ಮಾಡಿ, ವಾಹನದ ಮೂಲಕ ನೇರವಾಗಿ ಮಾರುಕಟ್ಟೆಗೆ ಕಳುಹಿಸಿಕೊಡುತ್ತಿದ್ದಾರೆ.

ಒಟ್ಟು ₹10 ಲಕ್ಷ ಬಂಡವಾಳ ಹಾಕಿ, ಹಣ್ಣಿನ ಕೃಷಿ ಆರಂಭಿಸಿದ್ದಾರೆ. ಇದರಲ್ಲಿ ತೋಟಗಾರಿಕೆ ಇಲಾಖೆಯ ಆರ್ಥಿಕ ನೆರವೂ ಸೇರಿಕೊಂಡಿದೆ. ‘ಆರಂಭದಲ್ಲಿ ಹೆಚ್ಚಿನ ಬಂಡವಾಳ ಹಾಕಬೇಕಾಯಿತು. ಈಗ ಫಸಲು ಬರುತ್ತಿರುವುದು ನೋಡಿದರೆ ಬಂಡವಾಳ ಶೀಘ್ರ ಮರಳುವ ವಿಶ್ವಾಸವಿದೆ’ ಎಂದರು ರಾಜಶೇಖರ್‌.

‘ನನ್ನ ಗಮನಕ್ಕೆ ಬಂದಂತೆ ಬಳ್ಳಾರಿ ವ್ಯಾಪ್ತಿಯಲ್ಲಿ ಡ್ರ್ಯಾಗನ್ ಫ್ರೂಟ್‌ ಬೆಳೆದವರಲ್ಲಿ ರಾಜಶೇಖರ್‌ ಅವರದ್ದು ಮೊದಲ ಪ್ರಯತ್ನ. ಅವರಿಗೆ ತಕ್ಕಮಕ್ಕಟ್ಟಿಗೆ ಯಶಸ್ಸು ಸಿಕ್ಕಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ಜಿ.ಚಿದಾನಂದಪ್ಪ.

ಡ್ರ್ಯಾಗನ್‌ ಹಣ್ಣು ಮಾರುಕಟ್ಟೆಗೆ ಕೊಂಡೊಯ್ಯಲು ಸಿದ್ಧವಾಗುತ್ತಿರುವುದು

ಫಾರಂ ಜತೆಗೆ ಹಣ್ಣಿನ ಬೆಳೆ
ಆಂಧ್ರಪ್ರದೇಶದ ರಾಜಮುಂಡ್ರಿ ಮೂಲದ ರಾಜಶೇಖರ್ 30 ವರ್ಷಗಳ ಹಿಂದೆ ಮುನಿರಾಬಾದ್‌ಗೆ ಬಂದರು. ಹೈದರಾಬಾದ್‌ನಲ್ಲಿ ಕೆಲಕಾಲ ಮೆಕ್ಯಾನಿಕಲ್ ಎಂಜಿನಿಯರ್‌ ಆಗಿದ್ದರು. ಆ ಉದ್ಯೋಗ ಬಿಟ್ಟು ಕೋಳಿಫಾರಂ ಶುರು ಮಾಡಿದರು. ಎರಡು ದಶಕಗಳಿಂದ ಕೋಳಿಫಾರಂ ಮಾಡುತ್ತಿದ್ದಾರೆ. ಫಾರಂ ಪಕ್ಕದಲ್ಲೇ ಮನೆ ಮಾಡಿಕೊಂಡಿದ್ದಾರೆ. ತಾವೇ ಫಾರಂ ಮತ್ತು ಹಣ್ಣಿನ ಬೆಳೆ ಉಸ್ತುವಾರಿ ನೋಡಿಕೊಳ್ಳುತ್ತಾರೆ.

ಡ್ರ್ಯಾಗನ್ ಫ್ರೂಟ್ ಕೃಷಿ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ರಾಜಶೇಖರ್ 9448131806

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.