ADVERTISEMENT

ಕೃಷಿಯಲ್ಲಿ ‘ಆಶಾ’ವಾದಿ ಮಹಿಳೆ! ವಾರ್ಷಿಕ ಆದಾಯ ₹2 ಲಕ್ಷ !

1 ಎಕರೆ 24 ಗುಂಟೆಯಲ್ಲಿ ತರಹೇವಾರಿ ಬೆಳೆ

ಸದಾಶಿವ ಎಂ.ಎಸ್‌.
Published 23 ಡಿಸೆಂಬರ್ 2018, 20:28 IST
Last Updated 23 ಡಿಸೆಂಬರ್ 2018, 20:28 IST
ಆಶಾ ನಾಯಕ ಶೇಂಗಾ ಬೆಳೆಯನ್ನು ಆರೈಕೆ ಮಾಡುತ್ತಿರುವುದು.
ಆಶಾ ನಾಯಕ ಶೇಂಗಾ ಬೆಳೆಯನ್ನು ಆರೈಕೆ ಮಾಡುತ್ತಿರುವುದು.   

ಕಾರವಾರ: ಅವರ ಬಳಿ ಇರುವುದು ಕೇವಲ ಒಂದು ಎಕರೆ ಇಪ್ಪತ್ನಾಲ್ಕು ಗುಂಟೆ ಕೃಷಿ ಭೂಮಿ. ಆದರೆ, ಅವರು ಅಲ್ಲಿ ಅಡಿಕೆ, ತೆಂಗು, ಬಾಳೆ, ಕಾಳು ಮೆಣಸು, ಶೇಂಗಾ, ಮಾವು, ಮೇವಿನ ಹುಲ್ಲು ಬೆಳೆಯುತ್ತಾರೆ. ಜತೆಗೆ ಹೈನುಗಾರಿಕೆ, ಕೋಳಿ ಸಾಕಣೆ ಮಾಡುತ್ತಾರೆ. ಎರೆಹುಳು ಗೊಬ್ಬರ ತಯಾರಿಸುತ್ತಾರೆ. ಸಮೀಪದಲ್ಲೇ ಜೈವಿಕ ಅನಿಲ ಘಟಕವನ್ನೂ ಸ್ಥಾಪಿಸಿದ್ದಾರೆ!

ಇದು ಅಂಕೋಲಾ ತಾಲ್ಲೂಕಿನ ಬೋಳೆ ಹೊಸಗದ್ದೆಯ ರೈತ ಮಹಿಳೆ ಆಶಾ ನಾಯಕ ಅವರ ಮನೆಯ ಸುತ್ತಮುತ್ತಲಿನ ಚಿತ್ರಣ. ಮನೆಯ ಜಾಗದಸುತ್ತ ಒಂದಿಷ್ಟೂ ಜಾಗವನ್ನು ಖಾಲಿ ಬಿಡದೇ ಕೃಷಿ ಮಾಡುತ್ತಿದ್ದಾರೆ. ಒಂದೇ ಬೆಳೆಯನ್ನು ಅವಲಂಬಿಸದೇ ಋತುಮಾನಕ್ಕೆ ಅನುಗುಣವಾಗಿ ತರಹೇವಾರಿ ಕೃಷಿ ಮಾಡುತ್ತಾರೆಂಬುದು ಗಮನಾರ್ಹ.

ಸಂಪೂರ್ಣ ಸಾವಯವ ಕೃಷಿಯನ್ನೇ ನೆಚ್ಚಿಕೊಂಡಿರುವ ಅವರು, ತಮ್ಮ ಜಮೀನನ್ನು ವಿಂಗಡಿಸಿಕೊಂಡು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅಡಿಕೆಗೆ 30 ಗುಂಟೆ ಮೀಸಲಿಟ್ಟಿದ್ದು, ಅದರಲ್ಲಿ ಮಿಶ್ರ ಬೆಳೆಯಾಗಿ 55 ತೆಂಗಿನಮರಗಳಿವೆ. ಅವುಗಳ ಮಧ್ಯೆ ಬಾಳೆಗಿಡಗಳನ್ನೂ ನಾಟಿ ಮಾಡಿದ್ದಾರೆ. ಅಡಿಕೆ, ತೆಂಗಿನ ಮರಗಳಿಗೆ ಕಾಳುಮೆಣಸಿನ ಬಳ್ಳಿಗಳನ್ನು ಹಬ್ಬಿಸಿದ್ದಾರೆ.

ADVERTISEMENT

35 ಗುಂಟೆ ಗದ್ದೆಯಲ್ಲಿ ಮಳೆಗಾಲ ಭತ್ತದ ನಾಟಿ ಮಾಡಿದರೆ, ಬೇಸಿಗೆಯಲ್ಲಿ ಶೇಂಗಾ ಬೆಳೆಯುತ್ತಾರೆ. ಎಮ್ಮೆ ಮತ್ತು ದನಗಳಿಗೆ ಹಸಿ ಮೇವಿನ ಸಲುವಾಗಿ ನಾಲ್ಕೈದು ಗುಂಟೆ ಹುಲ್ಲು ಬೆಳೆಸಿದ್ದಾರೆ. ಎರಡು ಗುಂಟೆ ಕನಕಾಂಬರ ಹೂವಿನ ಕೃಷಿಯನ್ನೂ ಮಾಡಿದ್ದಾರೆ. ಜಮೀನಿನ ಮಧ್ಯೆ ಸುಮಾರು ಒಂದೂವರೆ ಗುಂಟೆ ವಿಸ್ತೀರ್ಣದಲ್ಲಿರುವ ತೆರೆದ ಬಾವಿಯಿಂದ ಮನೆ ಬಳಕೆಗೆ ಮತ್ತು ಕೃಷಿಗೆ ನೀರು ಪೂರೈಕೆಯಾಗುತ್ತಿದೆ.

ಆಶಾ ನಾಯಕ ಅವರ ಆರೈಕೆಯಲ್ಲಿ ನಳನಳಿಸುತ್ತಿರುವ ಅಡಿಕೆ, ತೆಂಗು ಮತ್ತು ಕಾಳುಮೆಣಸು

ಸ್ವಂತ ದುಡಿಮೆ:‘ತೀರಾ ಅಗತ್ಯವಿದ್ದರೆ ಮಾತ್ರ ಕೂಲಿಯಾಳುಗಳನ್ನು ಕರೆಯುತ್ತೇವೆ. ಬಹುತೇಕ ಸಂದರ್ಭಗಳಲ್ಲಿ ನಾವೇ ಸ್ವಂತ ದುಡಿಮೆ ಮಾಡುತ್ತೇವೆ’ ಎಂದು 55ರ ಹರೆಯದ ಆಶಾ ಮುಗುಳ್ನಗುತ್ತಾರೆ. ಅವರ ಪತಿ ದೇವರಾಯ ನಾಯಕ ತಮ್ಮ 60ನೇ ವಯಸ್ಸಿನಲ್ಲೂ ತೋಟದ ತುಂಬ ಓಡಾಡಿ ಕೃಷಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ.

‘ಕೂಲಿ ಕಾರ್ಮಿಕರನ್ನು ಜಾಸ್ತಿ ನೆಚ್ಚಿಕೊಂಡರೆ ಖರ್ಚು ಅನಗತ್ಯವಾಗಿ ಹೆಚ್ಚುತ್ತದೆ. ಇದರಿಂದ ನಮ್ಮಂಥ ಅತಿಸಣ್ಣ ಹಿಡುವಳಿದಾರರು ಕೈಸುಟ್ಟುಕೊಳ್ಳುವ ಪ್ರಮೇಯವೇ ಅಧಿಕ. ಬೇರೆಲ್ಲ ಖರ್ಚನ್ನು ಸರಿದೂಗಿಸಲು ಹೈನುಗಾರಿಕೆಯನ್ನು ಹೆಚ್ಚಿಸಬೇಕು. ಇದರಿಂದ ಶುದ್ಧ ಹಾಲು ಮನೆ ಬಳಕೆಗೂ ಮತ್ತು ಮಾರಾಟಕ್ಕೂ ಸಿಗುತ್ತದೆ. ಜತೆಗೇ ಅತ್ಯುತ್ತಮ ಗುಣಮಟ್ಟದ ಗೊಬ್ಬರವೂ ತಯಾರಾಗುತ್ತದೆ. ಇದು ಸಾವಯವ ಕೃಷಿಗೆ ಬಲು ಸಹಕಾರಿ’ ಎನ್ನುವ ಸಲಹೆ ಅವರದ್ದು.

‘ಈಗ ಎಲ್ಲ ಬೆಳೆಗಳಿಂದ ವರ್ಷಕ್ಕೆ ಸುಮಾರು ₹ 2 ಲಕ್ಷದವರೆಗೆ ಆದಾಯ ಸಿಗುತ್ತಿದೆ. ಈ ಸಣ್ಣ ಜಮೀನಿನಲ್ಲಿ ಇಷ್ಟಾದರೂ ಪಡೆಯುತ್ತಿದ್ದೇನಲ್ಲ ಎಂಬ ತೃಪ್ತಿ ನನಗಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಆಶಾ.

ಸಾಧನೆಗೆ ಪ್ರಶಸ್ತಿಯ ಗರಿ

ಆಶಾ ನಾಯಕ ಅವರ ಕೃಷಿ ಸಾಧನೆಯನ್ನು ಗುರುತಿಸಿದ ಧಾರವಾಡದ ಕೃಷಿ ವಿಶ್ವವಿದ್ಯಾಲಯವು, 2009ರಲ್ಲಿ ‘ಶ್ರೇಷ್ಠ ಕೃಷಿಕ ಮಹಿಳೆ’ ಪ್ರಶಸ್ತಿ ಪ್ರದಾನ ಮಾಡಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2010ರಲ್ಲಿ ‘ಕೃಷಿ ಸಾಧಕ ಪ್ರಶಸ್ತಿ’, ಅಂಕೋಲಾ ಕೃಷಿ ಉತ್ಸವ ಸಮಿತಿಯಿಂದ ಸನ್ಮಾನ ಹೀಗೆ ಹತ್ತು ಹಲವು ಗೌರವಗಳು ಅವರಿಗೆ ಸಂದಿವೆ.

ತೋಟಕ್ಕೆ ಹರಡಲು ಸಿದ್ಧವಾಗಿರುವ ಎರೆಹುಳು ಗೊಬ್ಬರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.