ADVERTISEMENT

ಹೊಲದ ತುಂಬ ಬೂದುಗುಂಬಳ!

ಕೌಸ್ತುಭ
Published 29 ಅಕ್ಟೋಬರ್ 2018, 19:30 IST
Last Updated 29 ಅಕ್ಟೋಬರ್ 2018, 19:30 IST
ಹೊಲದ ತುಂಬಾ ಬೆಳೆದ ಬೂದಗುಂಬಳ
ಹೊಲದ ತುಂಬಾ ಬೆಳೆದ ಬೂದಗುಂಬಳ   

‘ಮಾರ್ಕೆಟ್‌ ನೋಡಿ ಬೆಳೆ ಬೆಳೆಯಬೇಕು’ – ಇದು ಕೃಷಿಯಲ್ಲಿರುವ ಸರಳ ಸೂತ್ರ. ಇತ್ತೀಚೆಗೆ ಅದು ಚಾಲ್ತಿಯಲ್ಲಿದೆ. ವಿಶೇಷವಾಗಿ ಸಣ್ಣ ಹಿಡುವಳಿ ರೈತರು, ತರಕಾರಿ ಬೆಳೆಗಾರರು ಈ ವಿಧಾನವನ್ನು ಅನುಸರಿಸಿ ತಕ್ಕಮಟ್ಟಿಗೆ ಆದಾಯ ಪಡೆಯುತ್ತಿದ್ದಾರೆ.

ಅಂಥದ್ದೇ ರೈತರ ಸಾಲಿಗೆ ಸೇರುವ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಸರ್ವಜ್ಞ ಮಾಸೂರು ಗ್ರಾಮದ ರೈತ ಕುಮಾರ ಬಿ. ಹಡಪದ ನೋಡಿಕೊಂಡು ಬೂದುಗುಂಬಳ ಬೆಳೆಯುತ್ತಿದ್ದಾರೆ

ಶಿವಮೊಗ್ಗ – ಶಿಕಾರಿಪುರ ಪ್ರಮುಖ ರಸ್ತೆಯ ಪಕ್ಕದಲ್ಲೇ ಕುಮಾರ್ ಅವರದ್ದು ಒಂದೂವರೆ ಎಕರೆ ಜಮೀನಿದೆ. ಇದೇ ಜಮೀನಿನಲ್ಲಿ ಮೂರು ವರ್ಷಗಳಿಂದ ವರ್ಷ ಪೂರ್ತಿ ಬೂದುಗುಂಬಳ ಬೆಳೆಯುತ್ತಿದ್ದಾರೆ. ಇದು 80 ದಿನಗಳ ಬೆಳೆ. ಹಾಗಾಗಿ ವರ್ಷಕ್ಕೆ ಮೂರು ಬೆಳೆ ತೆಗೆಯುತ್ತಾರೆ. ಈ ವರ್ಷ ಎರಡು ಹಂತದ ಬೆಳೆ ಬಂದಿದೆ. ಮೂರನೇ ಬೆಳೆಗೆ ಸಿದ್ಧತೆ ನಡೆಸಿದ್ದಾರೆ.

ADVERTISEMENT

ಬೂದುಗುಂಬಳ ಸಸಿ ನಾಟಿ ಮಾಡುವ ಮೊದಲು ಚೌತಿ, ಆಯುಧಪೂಜೆ, ದಸರಾ, ದೀಪಾವಳಿ, ಯುಗಾದಿಯಂತಹ ಹಬ್ಬಗಳನ್ನು ಗಮನಿಸುತ್ತಾರೆ. ಜತೆಗೆ ಗ್ರಾಮದ ಸುತ್ತ ನಡೆಯುವ ರಥೋತ್ಸವ, ದೇವರ ಉತ್ಸವಗಳು, ಗೃಹಪ್ರವೇಶ, ದೇವಸ್ಥಾನಗಳಲ್ಲಿ ನಡೆಯುವ ಹೋಮ–ಹವನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ಇದರ ಜತೆಗೆ ಹೊರ ಜಿಲ್ಲೆಗಳಲ್ಲಿ ಯಾವ್ಯಾವ ತಿಂಗಳಲ್ಲಿ ಬೂದುಗುಂಬಳ ಬಳಸಬಹುದೆಂಬ ಲೆಕ್ಕಾಚಾರವೂ ಇವರಲ್ಲಿರುತ್ತದೆ. ಹೀಗೆ ಬೂದುಗುಂಬಳದ ಸಸಿ ನಾಟಿ ಮಾಡುವಾಗ ಕ್ರಿಯಾ ಯೋಜನೆ ತಯಾರಿಸಿಕೊಳ್ಳುತ್ತಾರೆ.

ಬೂದುಗುಂಬಳ ಕೃಷಿ ಹೇಗೆ?
ಒಂದೂವರೆ ಎಕರೆಗೆ 300 ಬೂದುಗುಂಬಳ ಸಸಿ ನಾಟಿ ಮಾಡುತ್ತಾರೆ. ಪಕ್ಕದ ರಟ್ಟಿಹಳ್ಳಿ ನರ್ಸರಿಯಿಂದ ಸಸಿಗೆ 30 ಪೈಸೆಯಂತೆ ಖರೀದಿಸುತ್ತಾರೆ. ಬಳ್ಳಿಯಿಂದ ಬಳ್ಳಿಗೆ, ಸಾಲಿನಿಂದ ಸಾಲಿಗೆ 15 ಅಡಿ ಅಂತರಬಿಟ್ಟು ಸಸಿ ನಾಟಿ ಮಾಡುತ್ತಾರೆ. ಪ್ರತಿ ಸಸಿ ಬುಡಕ್ಕೆ ಕಾಲುಬುಟ್ಟಿಯಷ್ಟು ಸಗಣಿಗೊಬ್ಬರ, ಜತೆಗೆ, ಗಿಡ ಚಿಗುರಿ ಬಳ್ಳಿಯಾಗಿ ಹಬ್ಬುತ್ತಿದ್ದಾಗ ಇಡೀ ಹೊಲಕ್ಕೆ 20:20 ಕಾಂಪ್ಲೆಕ್ಸ್‌ ಗೊಬ್ಬರ ಹಾಕುತ್ತಾರೆ. 40 ದಿನಗಳ ನಂತರ ಸಸಿಗಳಲ್ಲಿ ಹೂವು ಬಿಟ್ಟು, ಮಿಡಿಯಾಗುತ್ತವೆ. 80ನೇ ದಿನದ ಹೊತ್ತಿಗೆ ಕಾಯಿ ಫಸಲಿಗೆ ಬರುತ್ತದೆ. ‘ಈ ಬಾರಿ ಆಗಸ್ಟ್‌ ಮೊದಲ ವಾರ ಹೊಲ ಹದ ಮಾಡಿ, ಗಿಡ ಹಾಕಿಸಿದ್ದೆವು. ಅಕ್ಟೋಬರ್ ತಿಂಗಳಲ್ಲಿ ಫಸಲು ಕಟಾವಿಗೆ ಬಂತು. ಒಂದೊಂದು ಕಾಯಿ 8 ಕೆ.ಜಿ.ವರೆಗೂ ತೂಗುತ್ತಿತ್ತು. ಹಬ್ಬದ ಆಸುಪಾಸಾದ್ದರಿಂದ ಚೆನ್ನಾಗಿ ವ್ಯಾಪಾರವಾಯಿತು’ ಎನ್ನುತ್ತಾರೆ ಕುಮಾರ್.

ನೀರಿನ ಆಸರೆಗಾಗಿ ಕೊಳವೆಬಾವಿ ಕೊರೆಸಿದ್ದಾರೆ. ಎರಡೂವರೆ ಇಂಚು ನೀರಿದೆ. ಹತ್ತು ದಿನಕ್ಕೊಮ್ಮೆ ನೀರು ಕೊಡುತ್ತಾರೆ. ಸಸಿ ನಾಟಿ ಮಾಡುವಾಗ, ಗೊಬ್ಬರ ಕೊಡುವಾಗ ಕೂಲಿ ಕಾರ್ಮಿಕರು ಬೇಕಾಗುತ್ತಾರೆ. ‘ಕುಂಬಳ ಬಳ್ಳಿಗೆ ಕೀಟಬಾಧೆ ಇದೆ. ಅದಕ್ಕಾಗಿ ಬಳ್ಳಿಗಳ ನಡುವೆ ಕೀಟ ಆಕರ್ಷಕ ಬಲೆ(ಟ್ರಾಪ್) ಇಡುತ್ತೇವೆ. ಇಷ್ಟು ಹೊರತುಪಡಿಸಿದರೆ, ಬೂದುಗುಂಬಳ ಬೆಳೆಗೆ ನಿರ್ವಹಣೆ ತುಸು ಕಡಿಮೆಯೇ’ ಎಂದು ಅವರು ವಿವರಿಸುತ್ತಾರೆ.

ರಸ್ತೆ ಬದಿಯೇ ಹೊಲವಿರುವುದರಿಂದ ಕೊಯ್ಲಾದ ಫಸಲನ್ನು ಮಾರುಕಟ್ಟೆ ಸಾಗಿಸಲು ಸಮಸ್ಯೆ ಇಲ್ಲ. ಕುಂಬಳ ಕಾಯಿ ಕಟಾವು ಮಾಡಿ ಎತ್ತಿನಗಾಡಿಯಲ್ಲಿ ತುಂಬಿ ಮುಖ್ಯರಸ್ತೆಯ ಪಕ್ಕ ರಾಶಿ ಹಾಕುತ್ತಾರೆ.

ಮಾರುಕಟ್ಟೆ – ಲೆಕ್ಕಾಚಾರ
ಒಂದೂವರೆ ಎಕರೆಯಲ್ಲಿ ಮೊದಲ ವರ್ಷ 45 ಟನ್ ಇಳುವರಿ ಬಂದಿತ್ತಂತೆ. ಸರಾಸರಿ 25 ಟನ್‌ನಿಂತ 30 ಟನ್‌ಗೆ ಮೋಸವಿಲ್ಲ ಎಂದು ಹೊಲದಲ್ಲಿ ಕೆಲಸ ಮಾಡುವ ಜಯಪ್ಪ ಇಳುವರಿ ಬಗ್ಗೆ ಮಾಹಿತಿ ನೀಡುತ್ತಾರೆ. ಒಂದು ಕೆ.ಜಿ. ಕಾಯಿಗೆ ಸರಾಸರಿ ₹5 ಸಿಗುತ್ತದೆ. ಈ ವರ್ಷ ₹7.50ದರಕ್ಕೆ ಮಾರಿದ್ದಾರೆ. ಒಂದು ಎಕರೆಗೆ ₹15 ಸಾವಿರದಿಂದ ₹20 ಸಾವಿರದವರೆಗೆ ಖರ್ಚು. ಇದನ್ನು ಕಳೆದರೆ ಮಾರುಕಟ್ಟೆ ಹಾಗೂ ಬೆಲೆ ಏರಿಳಿತದ ನಡುವೆಯೂ ಸರಾಸರಿ ಒಂದು ಬೀಡಿಗೆ ₹1 ಲಕ್ಷದವರೆಗೂ ಆದಾಯ ನಿರೀಕ್ಷಿಸಬಹುದು ಎನ್ನುವುದು ಕುಮಾರ್ ಲೆಕ್ಕಾಚಾರ .

ಮೂರು ವರ್ಷಗಳಿಂದ ಬೂದುಗುಂಬಳ ಬೆಳೆಯುತ್ತಿರುವುದರಿಂದ ವ್ಯಾಪಾರಸ್ಥರೇ ಇವರ ಜಮೀನಿಗೆ ಬಂದು ಖರೀದಿಸುತ್ತಾರೆ. ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ, ಶಿವಮೊಗ್ಗ, ಉತ್ತರ ಕನ್ನಡ, ದಾವಣಗೆರೆ, ಹುಬ್ಬಳ್ಳಿ, ಹಾವೇರಿ ಜಿಲ್ಲೆಗಳಲ್ಲಿ ಹೋಟೆಲ್‌ನವರು ಇದನ್ನು ಖಾದ್ಯಕ್ಕಾಗಿ ಬಳಸುತ್ತಿದ್ದಾರೆ. ಹೀಗಾಗಿ ಆ ಭಾಗದಿಂದ ವ್ಯಾಪಾರಸ್ಥರು ಬಂದು ಖರೀದಿಸುತ್ತಾರೆ.

ಬೂದುಗುಂಬಳ ಕೃಷಿಗೆ ಕುಟುಂಬದ ಸದಸ್ಯರು ಸಹಕರಿಸುತ್ತಾರೆ. ಮಗ ಕೂಡ ಅಪ್ಪನ ಕೃಷಿಗೆ ಸಾಥ್ ನೀಡುತ್ತಿದ್ದಾರೆ.

ಈ ಕೃಷಿ ಕುರಿತ ಮಾಹಿತಿಗಾಗಿ ಕುಮಾರ್ ಅವರ ಮೊಬೈಲ್ ಸಂಖ್ಯೆ 7259618610 ಸಂಪರ್ಕಿಸಬಹುದು.

ಫಸಲು ಕೊಯ್ದು ಮಾರುಕಟ್ಟೆಗೆ ಕೊಂಡೊಯ್ಯಲು ಸಿದ್ಧ ಮಾಡುತ್ತಿರುವ ರೈತ ಕುಮಾರ್ (ಬಲದಿಂದ ಮೊದಲನೆಯವರು) ಮತ್ತು ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.