ADVERTISEMENT

ದಂಪತಿಯ ಕೃಷಿ, ತೋಟ, ಹೈನುಗಾರಿಕೆ: ಸ್ವಾವಲಂಬನೆ ನೀಡಿದ ‘ಎರೆಹುಳು ಗೊಬ್ಬರ ತೊಟ್ಟಿ’

ಯೋಗಿಕೊಪ್ಪದ ಪ್ರೇಮಕ್ಕ–ಚಂದ್ರಪ್ಪ ಆರಿಕಟ್ಟಿ ದಂಪತಿ ಕಾಯಕ

ರಾಜೇಂದ್ರ ನಾಯಕ
Published 20 ಮೇ 2019, 19:37 IST
Last Updated 20 ಮೇ 2019, 19:37 IST
ಯೋಗಿಕೊಪ್ಪದ ಪ್ರೇಮಕ್ಕ ಮತ್ತು ಚಂದ್ರಪ್ಪ ಆರೀಕಟ್ಟಿ ದಂಪತಿ, ತಮಗೆ ಬದುಕು ನೀಡಿದ ಎರೆಹುಳು ತೊಟ್ಟಿ ಹಾಗೂ ಕೃಷಿ ಜೊತೆ
ಯೋಗಿಕೊಪ್ಪದ ಪ್ರೇಮಕ್ಕ ಮತ್ತು ಚಂದ್ರಪ್ಪ ಆರೀಕಟ್ಟಿ ದಂಪತಿ, ತಮಗೆ ಬದುಕು ನೀಡಿದ ಎರೆಹುಳು ತೊಟ್ಟಿ ಹಾಗೂ ಕೃಷಿ ಜೊತೆ   

ಹಂಸಭಾವಿ: ಇಲ್ಲಿಗೆ ಸಮೀಪದ ಯೋಗಿಕೊಪ್ಪ ಗ್ರಾಮದ ಪ್ರೇಮಕ್ಕ ಮತ್ತು ಚಂದ್ರಪ್ಪ ಆರೀಕಟ್ಟಿ ದಂಪತಿ ‘ಎರೆಹುಳು ಗೊಬ್ಬರ ತೊಟ್ಟಿ’ ಮತ್ತು ಹೈನುಗಾರಿಕೆಯ ಮೂಲಕ ಕೃಷಿಯಲ್ಲಿಯಶಸ್ಸು ಕಂಡಿದ್ದಾರೆ.

2013ರಲ್ಲಿ ತೋಟಗಾರಿಕೆ ಇಲಾಖೆಯ ಸಹಕಾರದ ಮೂಲಕ ‘ಎರೆಹುಳು ಗೊಬ್ಬರ ತೊಟ್ಟಿ’ಯನ್ನು ನಿರ್ಮಿಸಿದ್ದರು. ಆ ಮೂಲಕ ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಆರಂಭಿಸಿದ್ದರು. ಜೊತೆಗೆ ನಾಲ್ಕು ಮಿಶ್ರತಳಿ ಹಸುಗಳನ್ನೂ ಸಾಕಿ, ಹೈನುಗಾರಿಕೆ ಆರಂಭಿಸಿದ್ದರು.

ಇದಕ್ಕಾಗಿ ಜಮೀನಿನಲ್ಲಿದ್ದ ಕೊಳವೆಬಾವಿಯನ್ನು ಬಳಸಿಕೊಂಡರು. ಆರಂಭದಲ್ಲಿ ಎರೆಹುಳು ಗೊಬ್ಬರವನ್ನು ಮಾರಾಟ ಮಾಡುತ್ತಿದ್ದರು. ಅದರೆ, ಕೃಷಿ ಜೊತೆ ತರಕಾರಿ ಮತ್ತಿತರ ತೋಟಗಾರಿಕೆಯನ್ನೂ ಮಾಡಲು ಆರಂಭಿಸಿದ ಬಳಿಕ, ಗೊಬ್ಬರವನ್ನು ತಮ್ಮ ತೋಟಕ್ಕೆ ಬಳಸಿದರು. ಕಡಿಮೆ ಜಾಗದಲ್ಲೇ ಹೆಚ್ಚು ಫಸಲು ಬಂದು, ಬದುಕಿನ ನೆಮ್ಮದಿ ಕಂಡುಕೊಂಡರು.

ADVERTISEMENT

‘ಇತ್ತ ಹೈನುಗಾರಿಕೆಯ ಆದಾಯದಿಂದಲೇ ನಮ್ಮ ಇಬ್ಬರು ಮಕ್ಕಳನ್ನು ಎಂಜಿನಿಯರಿಂಗ್ ಓದಿಸಿದ್ದೇವೆ. ಈಗ ಇಬ್ಬರೂ ಉದ್ಯೋಗದಲ್ಲಿದ್ದಾರೆ’ ಎಂದು ಪ್ರೇಮಕ್ಕ ಆರೀಕಟ್ಟಿ ಹೆಮ್ಮೆ ವ್ಯಕ್ತಪಡಿಸಿದರು.

‘ಕೃಷಿಯಲ್ಲಿ ನಷ್ಟ ಅನುಭವಿಸುತ್ತಿದ್ದ ನನಗೆ ಪತ್ನಿಯೇ (ಪ್ರೇಮಕ್ಕ) ಸ್ಫೂರ್ತಿ ತುಂಬಿದಳು. ಈಗ ಸಾವಯವ ಕೃಷಿಯೊಂದಿಗೆ ಜೀವನ ಬೆಸೆದುಕೊಂಡಿದೆ. ನಾವು ಸಾವಯವ ಪದ್ಧತಿಯಲ್ಲೇ ಹೂಕೋಸು, ಗೋವಿನಜೋಳ, ಟೊಮೆಟೊ, ಎಲೆಕೋಸು, ಸೂರ್ಯಕಾಂತಿ ಬೆಳೆಯುತ್ತಿದ್ದೇವೆ. ಜೊತೆಗೆ ಅಡಿಕೆ, ವೀಳ್ಯದೆಲೆ, ಬದನೆಕಾಯಿ, ಚವಳಿಕಾಯಿ, ಕರಿಬೇವು, ಮೆಂತೆ, ಕೊತಂಬರಿ ಇತ್ಯಾದಿಗಳಿವೆ. ಅಡಿಕೆ–ತೆಂಗಿನಕಾಯಿಯೂ ಇದೆ. ಮನೆಯ ಕೈತೋಟದಲ್ಲಿ ಬೆಳೆದ ಕನಕಾಂಬರ ಗಿಡಗಳಿಂದ ಪ್ರತಿದಿನ ಅರ್ಧ ಕೆ.ಜಿ. ಹೂವನ್ನು ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಚಂದ್ರಪ್ಪ ಆರೀಕಟ್ಟಿ.

2018ರ ಏಪ್ರೀಲ್ 24ರಂದು ತಿಪ್ಪಾಯಿಕೊಪ್ಪದ ವಿರೂಪಾಕ್ಷ ಸ್ವಾಮೀಜಿ ಅವರಿಂದ, ‘ಯಶಸ್ವಿ ರೈತ ಮಹಿಳೆ’, 2018ರ ಫೆಬ್ರುವರಿ 24ರಂದು ಹಾವೇರಿಯಲ್ಲಿ ನಡೆದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕೃಷಿ ಸಾಧಕ ಮಹಿಳೆ’ ಪ್ರಶಸ್ತಿಗಳು ಬಂದಿವೆ. ಅಲ್ಲದೇ, ಇನ್ನಷ್ಟು ಸಂಘ–ಸಂಸ್ಥೆಗಳು ಪ್ರೇಮಕ್ಕ ಅವರನ್ನು ಸನ್ಮಾನಿಸಿವೆ ಎನ್ನುತ್ತಾರೆ ಗ್ರಾಮದ ಗಿರೀಶ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.