ADVERTISEMENT

ಪುದಿನಾದಲ್ಲೂ ಇದೆ ಆದಾಯದ ‘ಘಮ’!

ಬಸವನಾಳಗಡ್ಡೆಯ ಪ್ರಕಾಶ ಮಾಳಿ ಮಾದರಿ

ಸುಧಾಕರ ಎಸ್.ತಳವಾರ, ಬೆಂಗಳೂರು
Published 22 ಏಪ್ರಿಲ್ 2019, 19:30 IST
Last Updated 22 ಏಪ್ರಿಲ್ 2019, 19:30 IST
ಪುದಿನಾ ಸೊಪ್ಪು ಮಾರುಕಟ್ಟೆಗೆ ಒಯ್ಯಲು ಸಿದ್ಧಪಡಿಸುತ್ತಿದ್ದ ದೃಶ್ಯ– ಪ್ರಜಾವಾಣಿ ಚಿತ್ರ
ಪುದಿನಾ ಸೊಪ್ಪು ಮಾರುಕಟ್ಟೆಗೆ ಒಯ್ಯಲು ಸಿದ್ಧಪಡಿಸುತ್ತಿದ್ದ ದೃಶ್ಯ– ಪ್ರಜಾವಾಣಿ ಚಿತ್ರ   

ಚಿಕ್ಕೋಡಿ: ಪಂಚನದಿಗಳು ಹರಿಯುವ ತಾಲ್ಲೂಕಿನಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಬ್ಬು ಬೆಳೆಗೆ ನ್ಯಾಯಯುತ ಬೆಲೆ ದೊರೆಯದ ಹಿನ್ನೆಲೆಯಲ್ಲಿ ರೈತರು ಪರ್ಯಾಯ ಬೆಳೆಗಳತ್ತ ವಾಲುತ್ತಿದ್ದಾರೆ. ಕಡಿಮೆ ನೀರು ಬಳಸಿ ಅಲ್ಪ ಅವಧಿಯಲ್ಲಿ ಅಧಿಕ ಆದಾಯ ನೀಡುವ ಪುಷ್ಪ ಕೃಷಿ, ತರಕಾರಿ ಬೆಳೆಗಳನ್ನು ಬೆಳೆದು ಆದಾಯ ಕಾಣುತ್ತಿದ್ದಾರೆ. ಅಂತಹ ಪ್ರಗತಿಪರ ಹಾಗೂ ಮಾದರಿ ಕೃಷಿಕರಲ್ಲಿ ಬಸವನಾಳಗಡ್ಡೆಯ ಪ್ರಕಾಶ ಸದಾಶಿವ ಮಾಳಿ ಒಬ್ಬರಾಗಿದ್ದಾರೆ.

ಗೋವಿನ ಜೋಳ, ಕಬ್ಬು, ಜೋಳ, ಶೇಂಗಾ, ಸೋಯಾಬಿನ್ ಮೊದಲಾದ ಬೆಳೆ ಬೆಳೆಯುತ್ತಿದ್ದ ಅವರು ಪಾಮಲದಿನ್ನಿ ಗ್ರಾಮದ ರೈತರೊಬ್ಬರಿಂದ ಪ್ರೇರಣೆ ಪಡೆದು ಪುದಿನಾ ಬೆಳೆಯುತ್ತಿದ್ದಾರೆ. ಈ ಬೆಳೆಯಿಂದ ಉತ್ತಮ ಆದಾಯ ಬರತೊಡಗಿತು. ಈಗ 20 ಗುಂಟೆ ಬೆಳೆಯುತ್ತಿದ್ದು, ತಿಂಗಳಿಗೆ ₹ 25ರಿಂದ 30 ಸಾವಿರ ಗಳಿಸುತ್ತಿದ್ದಾರೆ. ಇತರ ರೈತರಿಗೆ ಮಾದರಿಯಾಗಿದ್ದಾರೆ.

ಎರಡು ದಿನಕ್ಕೊಮ್ಮೆ ನೀರು

ADVERTISEMENT

‘ಬೇಸಿಗೆಯಲ್ಲಿ ಪುದಿನಾ ಬೆಳೆಗೆ ಎರಡು ದಿನಕ್ಕೊಮ್ಮೆ ನೀರು ನೀಡಬೇಕು. ಮಳೆಗಾಲದಲ್ಲಿ ಮಳೆಯ ನಡುವೆಯೂ ಎರಡು ದಿನಕ್ಕೊಮ್ಮೆ ನೀರು ನೀಡಿದರೆ ಪುದಿನಾ ಹುಲುಸಾಗಿ ಬೆಳೆಯುತ್ತದೆ. ನಾಟಿಗೂ ಮುಂಚೆ ಸಾಲು ಮಾಡಿಕೊಂಡು ಅಗತ್ಯ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಹಾಕುತ್ತೇವೆ. ಸಾಲುಗಳ ಮೇಲೆ ಗೋಮೂತ್ರ ಸಿಂಪರಣೆ ಮಾಡುತ್ತೇವೆ. ಪುದಿನಾ ಬೆಳೆಯ ಆರಂಭದಲ್ಲಿ ಎರಡು ಬಾರಿ ಕಸ ಕಳೆ ಸ್ವಚ್ಛಗೊಳಿಸಿ, ನೀರಿನ ಮೂಲಕ ಕೊಟ್ಟಿಗೆ ಗೊಬ್ಬರ ಮತ್ತು ಗೋಮೂತ್ರ ನೀಡುತ್ತೇವೆ. ಪುದಿನಾ ವೇಗವಾಗಿ ಬೆಳೆಯಲು ಪೂರಕವಾಗಿ ರಸಗೊಬ್ಬರವನ್ನೂ ಹಾಕುತ್ತೇವೆ’ ಎನ್ನುತ್ತಾರೆ ಪ್ರಕಾಶ.

ಪುದಿನಾ ಮಾರುಕಟ್ಟೆ

ಪಿತ್ತ ನಿವಾರಕ ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆ ಶಮನ ಗುಣಹೊಂದಿರುವ ಪುದಿನಾ ಸೊಪ್ಪನ್ನು ಹೊಟೇಲ್‌ ಉದ್ಯಮದವರು ಹೆಚ್ಚಾಗಿ ಖರೀದಿಸುತ್ತಾರೆ. ಜನಸಾಮಾನ್ಯರೂ ಅಡುಗೆಯಲ್ಲಿ ಪುದಿನಾ ಬಳಸುವುದರಿಂದ ಬೇಡಿಕೆ ಇದೆ.

ಅವರು ಚಿಕ್ಕೋಡಿ, ನಿಪ್ಪಾಣಿ, ಕೊಲ್ಹಾಪುರ, ಮೀರಜ್ ಮೊದಲಾದ ಮಾರುಕಟ್ಟೆಗಳಲ್ಲಿ ಪುದಿನಾ ಮಾರಾಟ ಮಾಡುತ್ತಾರೆ. ಕೆಲವು ಹೋಟೆಲ್‌ಗಳವರು ಹೊಲಕ್ಕೇ ಬಂದು ತಾಜಾ ಪುದಿನಾ ತಗೆದುಕೊಂಡು ಹೋಗುತ್ತಾರೆ.

‘ಪುದಿನಾ ಕೀಳುವುದು, ಕಟ್ಟು ಕಟ್ಟುವುದು, ಮಾರಾಟ ಮೊದಲಾದ ಕೆಲಸಗಳನ್ನು ಕುಟುಂಬದ ಸದಸ್ಯರೇ ಮಾಡುತ್ತಾರೆ. ಇದರಿಂದ ಕೂಲಿ ಉಳಿಯುತ್ತದೆ. ಭಾನುವಾರ ಮತ್ತು ಗುರುವಾರ ಪುದಿನಾ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಪ್ರತಿ ವಾರ ₹ 7ರಿಂದ ₹ 8ಸಾವಿರ ಆದಾಯ ಬರುತ್ತದೆ. ಪ್ರತಿ ಕಟ್ಟು ಪುದಿನಾ ₹ 2.50ಕ್ಕೆ ಮಾರಾಟವಾದರೂ ನಷ್ಟವೇನಿಲ್ಲ. ಪುದಿನಾ ಬೆಳೆಗಾರರು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಮಾರುಕಟ್ಟೆ ಸಮಸ್ಯೆ ಉಂಟಾಗಿಲ್ಲ’ಎಂದು ಅವರು ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.