ADVERTISEMENT

ತ್ಯಾಜ್ಯ ನೀರಿನಲ್ಲಿ ಹಿಪ್ಪುನೇರಳೆ

ಎಂ.ರಾಮಕೃಷ್ಣಪ್ಪ
Published 19 ಆಗಸ್ಟ್ 2019, 19:30 IST
Last Updated 19 ಆಗಸ್ಟ್ 2019, 19:30 IST
ಹಿಪ್ಪುನೇರಳೆ ಕೃಷಿಯೊಂದಿಗೆ ಚಂದ್ರು
ಹಿಪ್ಪುನೇರಳೆ ಕೃಷಿಯೊಂದಿಗೆ ಚಂದ್ರು   

ಕೊಳವೆಬಾವಿಗಳೆಲ್ಲ ಬರಿದಾದವು. ಮಳೆಯೂ ಬೀಳಲಿಲ್ಲ. ಜಮೀನಿನಲ್ಲಿದ್ದ ಬೆಳೆಗಳನ್ನು ಉಳಿಸಿಕೊಳ್ಳಲು ನೀರು ಬೇಕಾಗಿತ್ತು. ಆಗ ನನಗೆ ನೆರವಾಗಿದ್ದೇ ಊರಿನ ಚರಂಡಿ ನೀರು. ಈಗ ರೇಷ್ಮೆ ಬೆಳೆ ಕಾಪಾಡುತ್ತಿರುವುದು ಇದೇ ಚರಂಡಿ ನೀರೇ...

ಕೃಷಿಕ ಪ್ರಮೋದ್ ಗೌಡ, ಸ್ವಲ್ಪವೂ ಬೇಸರಿಸಿಕೊಳ್ಳದೇ ಚರಂಡಿ ನೀರಿನ ಕೃಷಿ ಬಗ್ಗೆ ವಿವರಿಸುತ್ತಾ ಹೊರಟರು. ಅಷ್ಟೇ ಅಲ್ಲ, ತ್ಯಾಜ್ಯ ನೀರು ಬಳಸಿದ ನಂತರ ಹಿಪ್ಪುನೇರಳೆ ಸೊಪ್ಪಿನ ಇಳುವರಿ ಹೆಚ್ಚಿಗೆಯಾಗಿದ್ದನ್ನು ಒತ್ತಿ ಹೇಳಿದರು. ಈ ವಿಧಾನವನ್ನು ನೋಡಿದವರು, ತಮ್ಮ ಜಮೀನಿನಲ್ಲೂ ಇದೇ ಮಾದರಿ ಅಳವಡಿಸಿಕೊಳ್ಳುತ್ತಿರುವ ಉದಾಹರಣೆಯನ್ನೂ ಉಲ್ಲೇಖಿಸಿದರು.

***

ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕುರುಬೂರಿನ ಪ್ರಮೋದ್‌ ಗೌಡ ಅವರದ್ದು ಐದು ಎಕರೆ ಜಮೀನಿದೆ. ಮೂರು ಎಕರೆಯಲ್ಲಿ ಶ್ರೀಗಂಧ, ರೋಸ್‌ವುಡ್‌, ರಕ್ತಚಂದನ, ಹೆಬ್ಬೇವು ಮರಗಳ ಜತೆಗೆ ಎರಡು ಸಾವಿರ ಪಪ್ಪಾಯ ಗಿಡಗಳನ್ನು ಬೆಳೆಸಿದ್ದಾರೆ. ಉಳಿದ ಎರಡು ಎಕರೆಯಲ್ಲಿ ಹಿಪ್ಪುನೇರಳೆ ಕೃಷಿ ಮಾಡುತ್ತಾರೆ. ಬೆಳೆಗೆ ನೀರು ಪೂರೈಸುವುದಕ್ಕಾಗಿ ನಾಲ್ಕು ಕೊಳವೆಬಾವಿಗಳನ್ನು ಕೊರೆಸಿದ್ದರು. ಮಳೆ ಕೊರತೆಯ ಕಾರಣ ಕೊಳವೆಬಾವಿಗಳು ಹಂತ ಹಂತವಾಗಿ ಬರಿದಾದವು. ಎರಡು ವರ್ಷಗಳ ಹಿಂದೆ ಎಲ್ಲ ಕೊಳವೆಬಾವಿಗಳೂ ಬತ್ತಿ ಹೋದವು.

‘ನೀರಿಲ್ಲದಿದ್ದರೆ ಬೆಳೆ ಉಳಿಸಿಕೊಳ್ಳುವುದು ಹೇಗೆ’ ಎಂಬ ಚಿಂತೆ ಶುರುವಾಯಿತು ಪ್ರಮೋದ್‌ಗೆ. ಈ ವೇಳೆ ಇವರ ಕಣ್ಣಿಗೆ ಬಿದ್ದಿದ್ದೇ ಜಮೀನಿಗೆ ಹೋಗುವ ಹಾದಿಯಲ್ಲಿದ್ದ ಊರಿನ ಬಚ್ಚಲು ನೀರು ಸಂಗ್ರಹವಾಗುವ ಗುಂಡಿ. ಇಲ್ಲಿಂದ ಸುಮಾರು ಮುಕ್ಕಾಲು ಕಿಲೋಮೀಟರ್ ದೂರದಲ್ಲಿ ಅವರ ಜಮೀನಿತ್ತು. ‘ಒಂದು ಪೈಪ್‌ ಹಾಕಿಸಿದರೆ, ಈ ತ್ಯಾಜ್ಯ ನೀರನ್ನು ಜಮೀನಿನಲ್ಲಿರುವ ಬೆಳೆಗಳಿಗೆ ಬಳಸಬಹುದಲ್ಲ’ – ಎಂದು ಯೋಚಿಸಿದರು ಪ್ರಮೋದ್‌. ಯೋಚನೆಯನ್ನು ತಕ್ಷಣ ಕಾರ್ಯರೂಪಕ್ಕೂ ತಂದರು. ಗುಂಡಿಯ ಸುತ್ತಲಿನ ಗಿಡಗಂಟೆಗಳನ್ನು ತೆಗೆಸಿ, ನೀರು ಸಂಗ್ರಹಕ್ಕಿದ್ದ ಅಡಚಣೆ ನಿವಾರಿಸಿದರು. ಗುಂಡಿಯ ಬಳಿ ಮೂರು ಎಚ್‌ಪಿ ಮೋಟಾರ್‌ ಪಂಪ್‌ ಇಟ್ಟು ನೀರು ಎತ್ತಿ, 800 ಮೀಟರ್ ಉದ್ದದ ಡ್ರಿಪ್‌ ಪೈಪ್‌ಗಳಲ್ಲಿ ಹಿಪ್ಪುನೇರಳೆ ಗಿಡಕ್ಕೆ ನೀರು ಪೂರೈಸಲು ಶುರು ಮಾಡಿದರು.

ತ್ಯಾಜ್ಯ ನೀರು; ಇಳುವರಿ ಹೆಚ್ಚಿಸಿತು

ಪ್ರತಿ ನಿತ್ಯ ತ್ಯಾಜ್ಯ ನೀರನ್ನು ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಸಂಗ್ರಹಿಸಿಕೊಂಡು, ಅಲ್ಲಿಂದ ಡ್ರಿಪ್ ಮೂಲಕ ಹಿಪ್ಪುನೇರಳೆ ಗಿಡಗಳಿಗೆ ಪೂರೈಸುತ್ತಾರೆ. ಹೊಂಡಕ್ಕೆ ಪ್ಲಾಸ್ಟಿಕ್‌ ಶೀಟ್ ಹಾಕಿಸಿಲ್ಲ. ಹೀಗಾಗಿ ತ್ಯಾಜ್ಯ ನೀರು ಹೊಂಡದಲ್ಲಿ ಇಂಗಿ ಹೂಳಿನ ರೂಪದಲ್ಲಿ ಗೊಬ್ಬರವಾಗಿ ಲಭ್ಯವಾಗುತ್ತದೆ. ಅದನ್ನು ಜಮೀನಿಗೆ ಬಳಸುತ್ತಾರೆ.

‘ತ್ಯಾಜ್ಯ ನೀರಿನಿಂದ ಬೆಳೆ ಮೇಲೆ ಏನೂ ದುಷ್ಪರಿಣಾಮ ಬೀರಲಿಲ್ಲವೇ’ ಎಂದು ಪ್ರಮೋದ್ ಅವರನ್ನು ಪ್ರಶ್ನಿಸಿದರೆ, ‘ಏನೂ ತೊಂದರೆಯಾಗಿಲ್ಲ. ಆದರೆ, ಗುಣಮಟ್ಟದ ಸೊಪ್ಪು ಸಿಗುತ್ತಿದೆ. ಇಳುವರಿ ಕೂಡ ಹೆಚ್ಚಾಗಿದೆ’ ಎಂದು ಅಚ್ಚರಿಯ ಉತ್ತರ ನೀಡುತ್ತಾರೆ. ‘ಚರಂಡಿ ನೀರು, ದುರ್ವಾಸನೆ ಬೀರುತ್ತಿಲ್ಲವೇ’ ಎಂದರೆ, ‘ಇದು ಶೌಚ ಗುಂಡಿಯ ನೀರಲ್ಲ. ಬಚ್ಚಲು ಮನೆಯ ನೀರು. ಇದನ್ನು ಡ್ರಿಪ್ ಮೂಲಕ ಪೂರೈಕೆ ಮಾಡುವುದರಿಂದ ಅಂಥ ಕೆಟ್ಟ ವಾಸನೆ ಬರುತ್ತಿಲ್ಲ. ಒಂದು ಪಕ್ಷ ದುರ್ವಾಸನೆ ಬಂದರೂ, ಅಷ್ಟು ತೊಂದರೆಯಂತೂ ಆಗಿಲ್ಲ. ನೀರಿನ ಮೂಲಗಳೇ ಇಲ್ಲದಾಗ, ಇಂಥ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಸಹಿಸಿಕೊಳ್ಳಬಹುದಲ್ಲವಾ’ ಎನ್ನುತ್ತಾ ನೀರಿನ ಸಮಸ್ಯೆಯ ಅಗಾಧವನ್ನು ತೆರೆದಿಡುತ್ತಾರೆ ಅವರು.

ಮಾದರಿಯಾದ ವಿಧಾನ

ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರದ ಕೆಲವು ಅಧಿಕಾರಿಗಳು, ಚಿಂತಾಮಣಿಯ ರೇಷ್ಮೆ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಪ್ರಮೋದ್ ಅವರ ಜಮೀನಿಗೆ ಭೇಟಿ ನೀಡಿ, ತ್ಯಾಜ್ಯ ನೀರಿನಿಂದ ಬೆಳೆಯುತ್ತಿರುವ ಹಿಪ್ಪುನೇರಳೆ ಕೃಷಿಯನ್ನು ವೀಕ್ಷಿಸಿದ್ದಾರೆ. ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಇದರಿಂದ ಉತ್ತೇಜಿತರಾದ ಕಾಲೇಜಿನವರು, ಆರು ತಿಂಗಳಿನಿಂದ ತಮ್ಮ ಕ್ಯಾಂಪಸ್‌ನಲ್ಲಿ ಇದೇ ರೀತಿ ತ್ಯಾಜ್ಯ ನೀರು ಬಳಸಿ, ಹಿಪ್ಪುನೇರಳೆ ಬೆಳೆಯುವ ಪ್ರಯತ್ನ ಮಾಡಿದ್ದಾರಂತೆ.

ಪ್ರಮೋದ್ ಅವರ ಪರಿಚಯಸ್ಥರು, ಊರಿನ ಇನ್ನೊಂದು ಭಾಗದ ಚರಂಡಿ ನೀರು ಬಳಸಿಕೊಂಡು ಕೃಷಿ ಮಾಡಲು ಮುಂದಾಗಿದ್ದಾರೆ. ಹೀಗೆ ತ್ಯಾಜ್ಯ ನೀರನ್ನು ಕೃಷಿಗೆ ಬಳಸುವ ವಿಧಾನ, ಒಬ್ಬರಿಂದ ಮತ್ತೊಬ್ಬರಿಗೆ ವರ್ಗವಾಗುತ್ತಿದೆ. ‘ಸದ್ಯಕ್ಕೆ ಎರಡು ಎಕರೆ ಬೆಳೆಗೆ ಮಾತ್ರ ಚರಂಡಿ ನೀರು ಸಾಕಾಗುತ್ತಿದೆ. ಹಾಗಾಗಿ ಹಿಪ್ಪುನೇರಳೆ ಬಿಟ್ಟು ಬೇರೆಯದ್ದಕ್ಕೆ ಬಳಸಲಾಗುತ್ತಿಲ್ಲ’ ಎನ್ನುತ್ತಾರೆ ಪ್ರಮೋದ್‌.

ಬಹುವಿಧದ ಮೇವಿನ ಬೆಳೆ

ತ್ಯಾಜ್ಯ ನೀರು ಬಳಕೆಯಿಂದ ಯಶಸ್ಸು ಸಿಕ್ಕ ಮೇಲೆ, ಈಗ ಮೂರ್ನಾಲ್ಕು ವೆರೈಟಿ ಮೇವಿನ ಬೆಳೆ ಬೆಳೆಯುತ್ತಿದ್ದಾರೆ. ಮೊದಲು ಹಿಪ್ಪುನೇರಳೆ ಸೊಪ್ಪಿನ ಜತೆಗೆ, ಮೇವಿನ ಬೆಳೆಯನ್ನು ಬೆಳೆದು ಮಾರಾಟ ಮಾಡುತ್ತಿದ್ದರು. ಈಗ ತಾವೇ ಮೇಕೆ ಸಾಕಣೆ ಆರಂಭಿಸಿದ್ದಾರೆ.

ಹೈನುಗಾರಿಕೆ ಜತೆಗೆ, ಜೇನು ಸಾಕಾಣಿಕೆ ಮಾಡುತ್ತಿದ್ದಾರೆ. 30 ಜೇನು ಪೆಟ್ಟಿಗೆಗಳಿವೆ. ಒಂದು ಪೆಟ್ಟಿಗೆಗೆ ₹1500ಗೆ ಬೆಲೆಯಂತೆ ಮಾರಾಟ ಮಾಡುತ್ತಾರೆ. ಜತೆಗೆ ಜೇನುತುಪ್ಪ ಮಾರುತ್ತಾರೆ.

ಎಂಜಿನಿಯರಿಂಗ್ ಪದವಿ ಮಾಡುತ್ತಾ, ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಕೃಷಿ ಕ್ಷೇತ್ರಕ್ಕೆ ಮರಳಿದ ಪ್ರಮೋದ್, ಸಾಧ್ಯವಾದಷ್ಟು ಸ್ವಾವಲಂಬಿ ಕೃಷಿ ಮಾಡಬೇಕೆಂಬುದು ಗುರಿ ಇಟ್ಟುಕೊಂಡಿದ್ದಾರೆ. ಅದಕ್ಕಾಗಿ ಮರ ಆಧಾರಿತ ಕೃಷಿ, ಮೇವು ಬೆಳೆ, ಹಿಪ್ಪುನೇರಳೆ, ಹೈನುಗಾರಿಕೆ ಸೇರಿದಂತೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಸಣ್ಣ ಪುಟ್ಟ ಯಂತ್ರೋಪಕರಣಗಳ ತಾವೇ ತಯಾರಿಸಿಕೊಳ್ಳುತ್ತಾರೆ.‘ಸಾಧ್ಯವಾದಷ್ಟು ರಸಗೊಬ್ಬರ, ಕೀಟನಾಶಕ ಬಳಸುವುದಿಲ್ಲ. ಅವುಗಳಿಗೆ ಪರ್ಯಾಯವಾಗಿ ಜೀವಾಮೃತ, ತಿಪ್ಪೆಗೊಬ್ಬರ ಬಳಸುತ್ತಿದ್ದೇನೆ. ಹೆಚ್ಚುವರಿ ಗೊಬ್ಬರಕ್ಕಾಗಿ ಎರೆಹುಳು ಘಟಕಗಳಿವೆ’ ಎನ್ನುತ್ತಾರೆ ಪ್ರಮೋದ್‌. ಇಡೀ ಕೃಷಿ ಚಟುವಟಿಕೆಯ ಹಿಂದೆ ತಮ್ಮ ತಂದೆ ಚಂದ್ರಶೇಖರ ಗೌಡ ಅವರ ಪ್ರೇರಣೆ, ಪ್ರೋತ್ಸಾಹವಿರುವುದನ್ನು ಅವರು ನೆನೆಯುತ್ತಾರೆ. ಪ್ರಮೋದ್ ಅವರ ಕೃಷಿ ಚಟುವಟಿಕೆಯನ್ನು ಗುರುತಿಸಿರುವ ಸರ್ಕಾರ ‘ಆತ್ಮ’ ಯೋಜನೆಯಡಿ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

ತ್ಯಾಜ್ಯ ನೀರು ಪರೀಕ್ಷಿಸಿಯೇ ಬಳಸಿ

‘ತ್ಯಾಜ್ಯ ನೀರು ಬಳಸಿ ಹಿಪ್ಪುನೇರಳೆ ಬೆಳೆಯುತ್ತಿರುವ ಪ್ರಮೋದ್ ಅವರ ಪ್ರಯತ್ನ ಉತ್ತಮವಾಗಿದೆ. ಸೊಪ್ಪು ಚೆನ್ನಾಗಿ ಬರುತ್ತಿದೆ. ತುಂಬಾ ಡಿಮ್ಯಾಂಡ್ ಕೂಡ ಇದೆ. ನಾನು ಅವರ ಜಮೀನಿಗೆ ಭೇಟಿ ನೀಡಿದ್ದೇನೆ. ಈ ಎಲೆಯನ್ನು ತಿಂದ ಹುಳುಗಳು ಆರೋಗ್ಯವಾಗಿರುವ ಬಗ್ಗೆ ಕೇಳಿದ್ದೇನೆ. ತುಂಬಾ ಸೂಕ್ಷ್ಮವಾಗಿರುವ ರೇಷ್ಮೆ ಹುಳುಗಳೇ ಸೊಪ್ಪು ತಿಂದು ಆರೋಗ್ಯವಾಗಿದೆ ಎಂದಾದರೆ, ತ್ಯಾಜ್ಯನೀರಿನಿಂದ ಬೆಳೆದ ಸೊಪ್ಪು ಏನೂ ತೊಂದರೆಯಿಲ್ಲ ಎಂದು ಅಂದಾಜಿಸಬಹುದು. ಆದರೆ, ಯಾವುದೇ ತ್ಯಾಜ್ಯ ನೀರನ್ನು ಬೆಳೆಗೆ ಬಳಸುವ ಮೊದಲು ಪರೀಕ್ಷೆ ಮಾಡಿಸಿ, ತಜ್ಞರ ಸಲಹೆ ಪಡೆದು ಬಳಸುವುದು ಉತ್ತಮ ವಿಧಾನ’ ಎನ್ನುತ್ತಾರೆ ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ‌ಡಾ.ಆರ್. ಮಂಜುನಾಥ್.

‘ಹಳ್ಳಿಗಳ ಚರಂಡಿ ನೀರಿನಲ್ಲಿ ಅಪಾಯ ತಂದೊಡ್ಡುವಂತಹ ರಾಸಾಯನಿಕಗಳಿರುವ ಪ್ರಮಾಣ ತೀರಾ ಕಡಿಮೆ. ಸ್ನಾನ ಮತ್ತು ಬಟ್ಟೆ ತೊಳೆಯಲು ಬಳಸಿರುವ ಸೋಪಿನ ನೀರು, ದನಗಳನ್ನು ತೊಳೆದ ನೀರು, ಗಂಜಲ, ಸಗಣಿ ತಿಳಿ.. ಚರಂಡಿಯಲ್ಲಿ ಹರಿಯುತ್ತದೆ. ಇಂಥ ನೀರು ಬೆಳೆಗಳಿಗೆ ದ್ರವರೂಪಿ ಗೊಬ್ಬರದಂತೆಯೂ ನೆರವಾಗುತ್ತದೆ. ಬಹುಶಃ ಇದೇ ಕಾರಣಕ್ಕೆ ಪ್ರಮೋದ್ ಅವರ ಹಿಪ್ಪುನೇರಳೆಯೂ ಚೆನ್ನಾಗಿ ಬಂದಿರಬಹುದು. ಆದರೂ, ಯಾರೇ ಆಗಲಿ ತ್ಯಾಜ್ಯ ನೀರನ್ನು ಪರೀಕ್ಷಿಸಿ, ಬಳಸುವುದೇ ಒಳ್ಳೆಯದು ಎಂಬುದು ಮಂಜುನಾಥ್ ಸಲಹೆ. ಪ್ರಸ್ತುತ ನೀರಿನ ಸಮಸ್ಯೆ ಎದುರಿಸುತ್ತಿರುವ ಕೋಲಾರ, ಚಿಕ್ಕಬಳ್ಳಾಪುರದಂತಹ ಪ್ರದೇಶಗಳಲ್ಲಿ ತ್ಯಾಜ್ಯ ನೀರು ಸಂಸ್ಕರಿಸಿ, ಕೃಷಿಗೆ ಬಳಸುವುದು ಹೆಚ್ಚಾಗಬೇಕು’ ಎನ್ನುವುದು ಅವರ ಅಭಿಪ್ರಾಯ.

ಹೆಚ್ಚಿನ ಮಾಹಿತಿಗೆ ಪ್ರಮೋದ್ ಸಂಪರ್ಕ ಸಂಖ್ಯೆ: 8861038799

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.