ADVERTISEMENT

ಇದು ‘ತರಕಾರಿ ಬ್ಯಾಂಕು’!

ಶ್ರೀ ಪಡ್ರೆ
Published 25 ಫೆಬ್ರುವರಿ 2019, 19:45 IST
Last Updated 25 ಫೆಬ್ರುವರಿ 2019, 19:45 IST
ಗ್ರೋ ಬ್ಯಾಗ್‌ಗಳಲ್ಲಿ ತರಕಾರಿ ಬೆಳೆ
ಗ್ರೋ ಬ್ಯಾಗ್‌ಗಳಲ್ಲಿ ತರಕಾರಿ ಬೆಳೆ   

ಕೇರಳದ ಕಾಸರಗೋಡು ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿದೆ ಪರಪ್ಪ. ಇಲ್ಲಿನ ಭಾರೀ ಹಳೆಯ ಸಹಕಾರಿ ಬ್ಯಾಂಕೊಂದು ತರಕಾರಿ ಬೆಳೆಸುತ್ತಿದೆ. ವಾರಕ್ಕೆರಡು ದಿನ ಅದನ್ನು ಹರಾಜು ಮಾಡುತ್ತಿದೆ!

ಪೂರ್ವ ಎಲೆರಿ ಸಹಕಾರಿ ಬ್ಯಾಂಕ್ ಇರುವುದು ಕೇರಳ – ಕರ್ನಾಟಕದ ಗಡಿಯಲ್ಲಿ. ಇಲ್ಲಿಂದ ಕೊಡಗಿನ ಭಾಗಮಂಡಲಕ್ಕೆ ಕೇವಲ 18 ಕಿಲೋಮೀಟರ್ ದೂರ.

ಬ್ಯಾಂಕು ತನ್ನ ತಾರಸಿಯಲ್ಲಿ ತರಕಾರಿ ಬೆಳೆಯತೊಡಗಿದ್ದು ಮೂರು ವರ್ಷಗಳ ಹಿಂದೆ. ಈಗ ನೂರ ಇಪ್ಪತ್ತು ಗ್ರೋ ಬ್ಯಾಗುಗಳಲ್ಲಿ ಕೃಷಿ ಮಾಡುತ್ತಿದ್ದಾರೆ. ಮಳೆ ನಿಂತ ಮೇಲೆ ಇವರ ಕೃಷಿ ಆರಂಭ. ಏಪ್ರಿಲ್ ಹೊತ್ತಿಗೆ ಮುಗಿಯುತ್ತದೆ. ಅಷ್ಟರೊಳಗೆ ಎರಡು ಬೆಳೆ ತೆಗೆದುಬಿಡುತ್ತಾರೆ. ಬೆಂಡೆ, ಬದನೆ, ಅಲಸಂಡೆ ಮುಂತಾದ ಸ್ಥಳೀಯ ತರಕಾರಿಗಳು ಅಲ್ಲದೆ ಹೂಕೋಸು, ಎಲೆಕೋಸು ಮತ್ತು ಟೊಮೆಟೊಗಳನ್ನು ಇವರು ಬೆಳೆಸುತ್ತಾರೆ. ಇವರದು ಸಂಪೂರ್ಣ ಸಾವಯವ ಕೃಷಿ.

ADVERTISEMENT

’ರಾಸಾಯನಿಕರಹಿತ ತರಕಾರಿಯ ರುಚಿಯೇ ಬೇರೆ. ಇದನ್ನು ಬೆಳೆಯುವುದು ಜನ ಚಿಂತಿಸುವಷ್ಟು ಕಷ್ಟವೇನೂ ಅಲ್ಲ’ ಎಂಬುದನ್ನು ಸುತ್ತಲಿನ ಸಮಾಜಕ್ಕೆ ತೋರಿಸಿ ಅವರನ್ನೂ ಈ ಕೆಲಸಕ್ಕೆ ಪ್ರೇರೇಪಿಸುವುದು ನಮ್ಮ ಗುರಿ’ ಎನ್ನುತ್ತಾರೆ ಬ್ಯಾಂಕ್ ಅಧ್ಯಕ್ಷ ಜೋಯ್ ಕುರಿಯಾಲಪ್ಪುಳ.

ಬ್ಯಾಂಕಿಗೆ ಸ್ವಂತ ಕೊಳವೆಬಾವಿ ಇದೆ. ಅದರ ನೀರು ಟಾಂಕಿಗೆ ತುಂಬಿಡುತ್ತಾರೆ. ಆ ನೀರನ್ನು ತಾರಸಿ ಕೃಷಿಗೆ ಬಳಸುತ್ತಾರೆ. ದಿನಕ್ಕೆ ಕನಿಷ್ಠ ಇಪ್ಪತ್ತು ನಿಮಿಷ ಕೃಷಿಗೆ ಮೀಸಲು. ಬ್ಯಾಂಕ್ ಅಟೆಂಡರ್ ಶ್ರೀರಾಮನ್ ಅವರಿಗೆ ಇದರ ಹೆಚ್ಚಿನ ಜವಾಬ್ದಾರಿ. ಆದರೆ ಉಳಿದೆಲ್ಲಾ ಸಿಬಂದಿಯೂ ಒಂದಲ್ಲ ಒಂದು ಕೆಲಸದಲ್ಲಿ ಕೈಜೋಡಿಸುತ್ತಾರೆ.

ನೀರುಣಿಸುವ ಕೆಲಸ ಇತರರೂ ಮಾಡುತ್ತಾರೆ. ’ನಮ್ಮ ಮನೆಯಿಂದ ಸಗಣಿ ಹುಡಿಯಂತಹ ಒಳಸುರಿ ಒಯ್ಯುತ್ತೇವೆ. ಗೊಬ್ಬರ ಕೊಡುವಂತಹ ಮುಖ್ಯ ಸಂದರ್ಭಗಳಲ್ಲಿ ನಾನು ಅಥವಾ ಕಾರ್ಯದರ್ಶಿ ಜತೆಯಲ್ಲೇ ಇರುತ್ತೇವೆ’ ಎನ್ನುತ್ತಾರೆ ಜೋಯ್.

ಹರಾಜಿನಿಂದ ಮಾರಾಟ
ಈ ತರಕಾರಿಯ ಮಾರುಕಟ್ಟೆ ಹೇಗೆ ಗೊತ್ತೇ? ಹರಾಜು ಮೂಲಕ ಮಾತ್ರ. ತಾರಸಿಯಲ್ಲಿ ಬೆಳೆದ ತರಕಾರಿ, ಕೆಳಗಿನ ಅಂಗಳದಲ್ಲಿ ಜೋಡಿಸಿಟ್ಟು ಒಂದು ಗಂಟೆ ಕಳೆಯುವುದರೊಳಗೆ ಬಿಕರಿ! ‘ನಮಗೆ ಸಿಗುವ ಬೆಲೆ ಉಳಿದ ಯಾರಿಗಾದರೂ ಸಿಗುವುದು ಸಂಶಯವೇ. ಅರ್ಧ ಕೆ.ಜಿ ಟೊಮೆಟೊದ ಪ್ಯಾಕೆಟ್ ಕೆಲವೊಮ್ಮೆ 70 ರೂಪಾಯಿಗೆ ಮಾರಾಟವಾಗುತ್ತದೆ ಎಂದರೆ ಊಹಿಸಿಕೊಳ್ಳಿ’ಎನ್ನುತ್ತಾರೆ ಕಾರ್ಯದರ್ಶಿ ಜೋಸ್ ಪ್ರಕಾಶ್. ಈ ವರ್ಷ ಈಗಾಗಲೇ ₹6 ಸಾವಿರ ಇವರ ಖಾತೆ ಸೇರಿದೆ. ‘ಒಟ್ಟು ಹತ್ತು ಸಾವಿರ ರೂಪಾಯಿ ಆದರೂ ಬರಬಹುದು’ ಎನ್ನುತ್ತಾರೆ.

ಬೇರೆಲ್ಲೂ ಇಲ್ಲದ ಈ ಥರದ ಮಾರಾಟ ಪ್ರಕ್ರಿಯೆ ಏಕೆ? ‘ಸುಮ್ಮನೆ ಎದುರಿಟ್ಟು ಮಾರಿದರೆ ಅದು ನಾಲ್ಕಾರು ಮಂದಿಗೆ ಮಾತ್ರ ಅರಿವಾಗುತ್ತದೆ. ಹರಾಜು ಎಂದ ಕೂಡಲೇ ಪೈಪೋಟಿ ಉಂಟಾಗುತ್ತದೆ. ಹೀಗೆ ಹೆಚ್ಚು ಆದಾಯ ಮಾಡಬೇಕು ಎಂದಲ್ಲ. ತಾವುತಾವೇ ಬೆಳೆಸಿದ ನಿರ್ವಿಷ ತರಕಾರಿಯ ರುಚಿ ಹೆಚ್ಚಿನ ಜನಕ್ಕೆ ಗೊತ್ತಾಗಬೇಕು. ಅವರೂ ಬೆಳೆಯಬೇಕು. ಇದು ನಮ್ಮ ಉದ್ದೇಶ’, ಜಾಯ್ ವಿವರಿಸುತ್ತಾರೆ.

ಚಿತ್ತಾರಿಕಲ್, ಪಾಲಾವಯಲ್ – ಹೀಗೆ ಈ ಬ್ಯಾಂಕಿನ ವ್ಯಾಪ್ತಿಯಲ್ಲಿ ಎರಡು ಗ್ರಾಮಗಳು ಬರುತ್ತವೆ. ಬ್ಯಾಂಕಿಗೆ ಒಟ್ಟು 20 ಸಾವಿರ ಸದಸ್ಯರಿದ್ದಾರೆ. ಮುಖ್ಯ ಕಚೇರಿಯಲ್ಲಿ ಒಟ್ಟು ಹದಿನೈದು ಸಿಬಂದಿ ಇದ್ದಾರೆ. ಆರು ಶಾಖೆಗಳೂ ಇವೆ. ಸದ್ಯಕ್ಕೆ ಮುಖ್ಯ ಕಚೇರಿಯಲ್ಲಿ ಮಾತ್ರ ತರಕಾರಿ ಕೃಷಿ ಇದೆ. ಉಳಿದೆಡೆ ತಾರಸಿ ಮತ್ತು ನೀರಿನ ಸೌಕರ್ಯ ಇದೆ. ಅಲ್ಲೂ ಈ ಚಟುವಟಿಕೆ ಮಾಡಬೇಕೆಂದಿದೆಯಂತೆ.

ಬ್ಯಾಂಕು ತರಕಾರಿ ಕೃಷಿಯ ಜ್ಞಾನ ಹಂಚಲು ಸೆಮಿನಾರುಗಳನ್ನು ಏರ್ಪಡಿಸುತ್ತದೆ. ಕಳೆದೆರಡು ವರ್ಷಗಳಿಂದ ರಾಜ್ಯದ ಪ್ರಸಿದ್ಧ ದಿನಪತ್ರಿಕೆಗಳ ಸಹಯೋಗದಲ್ಲಿ ಇವರು ಏರ್ಪಡಿಸಿದ ಏಕದಿನದ ಕೃಷಿ ಕಾರ್ಯಕ್ರಮ ಬಹಳ ಯಶಸ್ವಿಯಾಗಿದೆ. ‘ಬಾಕಿ ದಿನಗಳಲ್ಲೂ ಬಂದ ಗ್ರಾಹಕರು ತರಕಾರಿ ಕೃಷಿಯಲ್ಲಿ ಅವರಿಗೆ ಎದುರಾಗುವ ಸಮಸ್ಯೆಗಳನ್ನು ನಮ್ಮೆದುರು ಹೇಳುತ್ತಾರೆ. ಪರಿಹಾರ ಕೇಳಿ ಹೋಗಿ ಪ್ರಯೋಗಿಸುತ್ತಾರೆ’ ಎನ್ನುತ್ತಾರೆ ಬ್ಯಾಂಕ್ ಅಧ್ಯಕ್ಷ ಜೋಯ್.

ಈ ಬ್ಯಾಂಕು ತರಕಾರಿ ಕೃಷಿಗೆ ಸಗಣಿ ಹುಡಿ, ನೆಲಗಡಲೆ ಮತ್ತು ಹರಳು ಹಿಂಡಿ ಮೊದಲಾದ ಒಳಸುರಿಗಳನ್ನು ಬಳಸುತ್ತದೆ. ಸತತ ಗಮನ ಕೊಟ್ಟು ಕೀಟಗಳನ್ನು ಕೈಯಿಂದಲೇ ನಿಯಂತ್ರಣ ಮಾಡುವುದೇ ಹೆಚ್ಚು. ಹೀಗಾಗಿ ಕೀಟನಾಶಕದ ಬಳಕೆ ತೀರಾ ಕಡಿಮೆ.

ಕಳೆದ ವರ್ಷ ನವೆಂಬರಿನಿಂದ ಕೇರಳದ ಸಹಕಾರಿ ಇಲಾಖೆ ‘ಸುವರ್ಣ ಕೇರಳಂ’ ಯೋಜನೆಯನ್ವಯ ಎಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ಮಾದರಿ ತರಕಾರಿ ಕೃಷಿ, ರೈತರಿಗೆ ಬೀಜ ವಿತರಣೆ ಮೊದಲಾದ ಚಟುವಟಿಕೆಗಳು ನಡೆಯುತ್ತಿವೆ. ಕೆಲವು ಸಹಕಾರಿ ಬ್ಯಾಂಕ್‌ಗಳಲ್ಲಿ ಕಾಟಾಚಾರಕ್ಕಾಗಿ ಒಂದಷ್ಟು ತರಕಾರಿ ಗಿಡ ನೆಟ್ಟಿರುವುದೂ ಇದೆ.

ತರಕಾರಿ ಬೆಳೆ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ

‘ನಾವು ಇಲಾಖೆ ಕರೆ ಕೊಡುವ ಮುನ್ನವೇ ನಮ್ಮದೇ ಆಸಕ್ತಿಯಲ್ಲಿ ತೋಟ ಮಾಡಿದ್ದೆವು. ಈಗ ಮುಂದುವರಿಸುತ್ತಿದ್ದೇವೆ’ ಎನ್ನುತ್ತಾರೆ ಜೋಸ್ ಪ್ರಕಾಶ್. ಆರಂಭದ ಒಂದೆರಡು ವರ್ಷ ಇವರು ಆಸಕ್ತರಿಗೆ ತರಕಾರಿ ಬೀಜ ಒದಗಿಸಿದ್ದರು. ‘ಅನಂತರ ಪಂಚಾಯತಿಂದ ಸಿಗುವ ಕಾರಣ ನಾವದನ್ನು ಮುಂದುವರಿಸಲಿಲ್ಲ’ ಎನ್ನುತ್ತಾರೆ ಪ್ರಕಾಶ್. ಈ ಊರಿನಲ್ಲಿ ಹಿಂದೆ ‘ಗ್ರೋ ಬ್ಯಾಗ್‌’ಗಳಲ್ಲಿ ಕೃಷಿ ಮಾಡುವುದರ ಬಗ್ಗೆ ಅಷ್ಟಾಗಿ ಪರಿಚಯವಿರಲಿಲ್ಲ. ಈಗ ಆ ವಿಚಾರ ಹಲವೆಡೆ ಹಬ್ಬಿದೆ. ಬ್ಯಾಂಕ್, 80 ರೂಪಾಯಿಗೆ ಗ್ರೋ ಬ್ಯಾಗುಗಳನ್ನು ತರಕಾರಿ ಬೆಳೆಸಲು ಅನುಕೂಲವಾಗುವಂತೆ ತಯಾರು ಮಾಡಿಕೊಡುತ್ತದೆ. ಅಂದರೆ, ಆ ಬ್ಯಾಗಿಗೆ ತೆಂಗಿನ ಸಿಪ್ಪೆ ಹುಡಿ, ಮರಳು, ಮಣ್ಣು ಮತ್ತು ಸಾವಯವ ಗೊಬ್ಬರ ತುಂಬಿಸಿಯೇ ಕೊಡುತ್ತದೆ. ಮೂರು ದಿನ ಮೊದಲು ಆರ್ಡರ್ ಕೊಟ್ಟರೆ ಸಾಕು. ಬ್ಯಾಗ್‌ ಸಿದ್ಧವಾಗುತ್ತದೆ.

‘ಈ ವರ್ಷ ಈ ವ್ಯವಸ್ಥೆ ಆರಂಭಿಸಿದ್ದೇವೆ. ಈಗಾಗಲೇ ಹೆಚ್ಚುಹೆಚ್ಚು ಮಂದಿ ಇದನ್ನು ಕೇಳಿ ಬರುತ್ತಿದ್ದಾರೆ. ಮುಂದಿನ ವರ್ಷ ದೊಡ್ಡ ರೀತಿಯಲ್ಲಿ ಮಾಡುವವರಿದ್ದೇವೆ’ ಎನ್ನುತ್ತಾರೆ ಬ್ಯಾಂಕ್‌ನವರು. ಮಣ್ಣು, ಗೊಬ್ಬರ ತುಂಬಿಸಿ ಸಿದ್ಧವಾಗಿಸಿದ ಗ್ರೋ ಬ್ಯಾಗುಗಳನ್ನು ಗ್ರಾಹಕರು ಮನೆಗೆ ಒಯ್ದು ತಮಗೆ ಬೇಕಾದ ಬೀಜ ಹಾಕಿ, ಪ್ರತಿದಿನ ನೀರು, ನಡುನಡುವೆ ಗೊಬ್ಬರ ಉಣಿಸುತ್ತಿದ್ದರೆ ಸಾಕು.

‘ಹಿಂದೆ ತರಕಾರಿ ಕೃಷಿ ಇರಲೇ ಎಂದಲ್ಲ. ಅಲ್ಪಸ್ವಲ್ಪ ಎಲ್ಲರೂ ಬೆಳೆಸುತ್ತಿದ್ದರು.ಆದರೆ ಅಂಗಡಿಗೆ ಹೋಗಿ ತರುವುದೇ ಹೆಚ್ಚಾಗಿತ್ತು. ಈಗ ನೂರಾರು ಕುಟುಂಬಗಳು ಕನಿಷ್ಠ ನಾಲ್ಕೈದು ತಿಂಗಳ ಕಾಲ ಅವರದೇ ತರಕಾರಿ ಬೆಳೆದುಕೊಳ್ಳುತ್ತಿವೆ’, ಜೋಸ್ ಬೊಟ್ಟು ಮಾಡುತ್ತಾರೆ. ‘ನಮಗೂ ಈಗ ಖಾಲಿ ಬಿಡುವ ತಿಂಗಳುಗಳಲ್ಲಿ ಏನಾದರೂ ಬೆಳೆ ತೆಗೆಯಬೇಕೆಂಬ ಆಸೆಯಿದೆ. ಬಲ್ಲವರಿಂದ ಮಾಹಿತಿ ಕೋರುತ್ತೇವೆ’ ಎನ್ನುತ್ತಾರೆ ಅವರು.

ಬ್ಯಾಂಕ್‌ನಲ್ಲಿ ತರಕಾರಿ ಬೆಳೆಯುತ್ತಿರುವ ಕುರಿತ ಮಾಹಿತಿಗಾಗಿ ಜೋಸ್ ಪ್ರಕಾಶ್ (ಮಲೆಯಾಳಮ್, ಇಂಗ್ಲಿಷ್ ಮಾತ್ರ) ಸಂಪರ್ಕ ಸಂಖ್ಯೆ +91–9495325481.

ತರಕಾರಿ ವಿತರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.