ADVERTISEMENT

ಕೃಷಿ ಅರಣ್ಯ: ಲಕ್ಷ ಸಸಿ ನೆಡುವ ಗುರಿ

ಅರಣ್ಯ ಇಲಾಖೆ ನರ್ಸರಿಗಳಲ್ಲಿ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಗಿಡಗಳ ವಿತರಣೆ

ನಾ.ಮಂಜುನಾಥ ಸ್ವಾಮಿ
Published 10 ಜುಲೈ 2019, 19:45 IST
Last Updated 10 ಜುಲೈ 2019, 19:45 IST
ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮದ ಸಾಮಾಜಿಕ ಅರಣ್ಯ ವಲಯದಲ್ಲಿ ರೈತರಿಗೆ ವಿತರಿಸಲು ಸಸಿಗಳನ್ನು ಬೆಳೆಸಲಾಗಿದೆ
ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮದ ಸಾಮಾಜಿಕ ಅರಣ್ಯ ವಲಯದಲ್ಲಿ ರೈತರಿಗೆ ವಿತರಿಸಲು ಸಸಿಗಳನ್ನು ಬೆಳೆಸಲಾಗಿದೆ   

ಯಳಂದೂರು:ಕೃಷಿ ಅರಣ್ಯ ಯೋಜನೆಯ ಅಡಿಯಲ್ಲಿ ಗಿಡವನ್ನು ನೆಡುವಂತೆ ರೈತರನ್ನು ಪ್ರೇರೇಪಿಸಲು ಮುಂದಾಗಿರುವ ಸಾಮಾಜಿಕ ಅರಣ್ಯ ಇಲಾಖೆ,ಈ ವರ್ಷ ತಾಲ್ಲೂಕಿನಲ್ಲಿ ಒಂದು ಲಕ್ಷ ಗಿಡಗಳನ್ನು ನೆಡುವ ಗುರಿಯನ್ನು ಸಾಮಾಜಿಕ ಅರಣ್ಯ ಇಲಾಖೆ ಹಾಕಿಕೊಂಡಿದೆ.

ಕಳೆದ ವರ್ಷ ಬರ ಇದ್ದರೂ ಇಲಾಖೆ ವಿವಿಧೆಡೆ ಬೆಳೆಸಿದ ಗಿಡಗಳನ್ನು ನೀರು ಉಣಿಸಿ ಉಳಿಸುವ ಮೂಲಕ ಗುರಿ ಸಾಧನೆಗೆ ಮುಂದಾಗಿದೆ. ಈಗ ಮಳೆಯಾಗುವ ಲಕ್ಷಣಗಳು ಕಾಣಿಸಿಕೊಂಡ ಬೆನ್ನಲ್ಲೇ ರೈತರಿಗೆ ಸಸಿ ವಿತರಿಸುವ ಕಾರ್ಯ ಆರಂಭಿಸಿದೆ.

ತಾಲ್ಲೂಕಿನಲ್ಲಿ ಜುಲೈ ತಿಂಗಳಲ್ಲಿ ವಾಡಿಕೆ ಮಳೆ ಬೀಳುತ್ತದೆ. ಹೀಗಾಗಿ ಸಸಿಗಳನ್ನು ನೆಡಲು ಸಕಾಲ. ಆಗಸ್ಟ್ ಅಂತ್ಯದ ತನಕ ಕೃಷಿಕರು, ಸಾರ್ವಜಿನಿಕರು, ಸಂಘ–ಸಂಸ್ಥೆಗಳ ಪದಾಧಿಕಾರಿಗಳಿಗೆ, ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಲಾಖೆ ವತಿಯಿಂದ ರಿಯಾಯಿತಿ ದರದಲ್ಲಿ ಸಸಿ ವಿತರಿಸಲಿದೆ.

ADVERTISEMENT

ತಾಲ್ಲೂಕು ವ್ಯಾಪ್ತಿಯಲ್ಲಿ 2018–19ನೇ ವರ್ಷದಲ್ಲಿ ಗುಂಬಳ್ಳಿಯಲ್ಲಿ 1 ಲಕ್ಷ ಸಸಿಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡುತ್ತಿದೆ. ಸಾಮಾಜಿಕ ಅರಣ್ಯ ಇಲಾಖೆ 12 ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಬೇಸಾಯಗಾರರಿಗೆ ಲಕ್ಷ ಸಸಿ ನೀಡಿ ಹಸಿರೀಕರಣ ಮಾಡಲು ಮುಂದಾಗಿದೆ.

‘ನಮ್ಮ ನರ್ಸರಿಗಳಲ್ಲಿ ಲಕ್ಷ ಸಸಿಗಳನ್ನು ಬೆಳೆಸುವ ಗುರಿಯಿಂದ ಕಾರ್ಯ ಪ್ರವೃತರಾಗಿದ್ದೇವೆ. ಈಗಾಗಲೇ ವಿತರಣೆ ಮಾಡಿದ್ದೇವೆ. ಬೇಡಿಕೆ ಬಂದರೆ ಪೂರೈಸಲು ಸಿದ್ಧರಿದ್ದೇವೆ. ಈಗ ಮುಂಗಾರು ಮಳೆ ಕಾಣಿಸಿಕೊಂಡಿದೆ. ಬೇಸಾಯಗಾರರು ಕೃಷಿ ಅರಣ್ಯ ಯೋಜನೆ ಆರಂಭಿಸಲು ಸಕಾಲ’ ಎಂದು ಸಾಮಾಜಿಕ ಅರಣ್ಯ ಇಲಾಖೆ ಆರ್‌ಎಫ್‌ಒ ರಾಜೇಂದ್ರಸ್ವಾಮಿ ಹೇಳಿದರು.

‘ರೈತರಿಗೆ ತಮ್ಮ ಜಮೀನಿನಲ್ಲಿ ಸಸಿ ನೆಟ್ಟು ಬೆಳೆಸಲು, ರಿಯಾಯಿತಿ ದರದಲ್ಲಿ ಇಲಾಖೆಯ ನರ್ಸರಿಗಳಲ್ಲಿ ನೇರವಾಗಿ ಸಸಿ ಮಾರಾಟವನ್ನು ಆರಂಭಿಸಲಾಗಿದೆ. 9 ಇಂಚು ಉದ್ದ, 6 ಇಂಚು ಅಗಲದ ಚೀಲದಲ್ಲಿ ಬೆಳೆಸಿದ ಸಸಿಗೆ 1ಕ್ಕೆ ₹ 3ರಂತೆ ವಿತರಿಸಲಾಗುವುದು. ಆಸಕ್ತ ಕೃಷಿಕರು ‘ಕರ್ನಾಟಕ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ಗಾಗಿ ಪಟ್ಟಣದ ವಲಯ ಅರಣ್ಯಾಧಿಕಾರಿ ಕಚೇರಿಗೆ ಹೋಗಿ ₹ 10 ಶುಲ್ಕ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ನೋಂದಣಿ ಸಮಯದಲ್ಲಿ ಪಹಣಿಪತ್ರ (ಆರ್‌ಟಿಸಿ), ಬ್ಯಾಂಕ್‌ ಪಾಸ್‌ಬುಕ್, ಭಾವಚಿತ್ರ, ಮೊಬೈಲ್ ನಂಬರ್ ನೀಡಬೇಕು’ ಎಂದು ಅವರು ಹೇಳಿದರು.

₹ 100 ಪ್ರೋತ್ಸಾಹ ಧನ:ಸಸಿ ನೆಡುವ ರೈತರಿಗೆ ಯೋಜನೆಯ ಪಾಸ್‌ಬುಕ್ ವಿತರಿಸಲಾಗುತ್ತದೆ. ಮುಂದಿನ ವರ್ಷದ ಜೂನ್‌ನಲ್ಲಿ ರೈತರು ಪಡೆದ ಸಸಿಗಳ ಸಮೀಕ್ಷೆ ನಡೆಸಲಾಗುತ್ತದೆ. 1 ಹೆಕ್ಟೇರ್‌ಗೆ 240 ಗಿಡಗಳನ್ನು ಹಾಕಬಹುದು. ಚೆನ್ನಾಗಿ ಬೆಳೆಸಿದ ಸಸಿಗಳ ಸಂಖ್ಯೆಗೆ ಅನುಗುಣವಾಗಿ ರೈತರಿಗೆ ಇಲಾಖೆ ವತಿಯಿಂದ 1 ಗಿಡಕ್ಕೆ ಮೊದಲ ವರ್ಷ ತಲಾ ₹ 30, 2ನೇ ವರ್ಷಕ್ಕೆ ₹ 30 ಮತ್ತು 3ನೇ ವರ್ಷ ₹ 40ರಂತೆ ಒಟ್ಟು ₹ 100 ಪ್ರೋತ್ಸಾಹಧನ ನೀಡಲಾಗುತ್ತದೆ. ಪ್ರೋತ್ಸಾಹಧನವನ್ನು ನೇರವಾಗಿ ರೈತರ ಖಾತೆಗೆ, ಆಯಾ ವಲಯದ ಅಧಿಕಾರಿಗಳು ನೀಡುವ ಗಿಡದ ಸ್ಥಿತಿಗತಿಯ ವರದಿ ಆಧರಿಸಿ ಜಮೆ ಮಾಡಲಾಗುತ್ತದೆ.

ರಸ್ತೆಹಾದಿ ಹಸಿರು: ‘ನರೇಗಾ ಯೋಜನೆಯಲ್ಲಿ ರಸ್ತೆಬದಿ, ಗೋಮಾಳ, ಸರ್ಕಾರಿ ಭೂಮಿ, ಗುಂಡುತೋಪುಗಳ ಬಳಿ ಸಸಿ ನೆಡಲು ಈಗಾಗಲೇ ಆಸ್ಥೆ ವಹಿಸಲಾಗಿದೆ. ಪರಿಸರ ದಿನ ಆಯೋಜನೆಯಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕೆರೆ, ಕಟ್ಟೆ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಹೆಚ್ಚು ಸಸಿ ನೆಡಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್.ರಾಜು ‘ಪ್ರಜಾವಾಣಿ’ಗೆ ಹೇಳಿದರು.

ನರ್ಸರಿಗಳಲ್ಲಿ ಸಿಗುವ ಸಸಿಗಳು

ಸಾಮಾಜಿಕ ಅರಣ್ಯ ವಲಯದ ನರ್ಸರಿಗಳಲ್ಲಿ 10 ತಿಂಗಳಿಂದ 12 ತಿಂಗಳ ಅವಧಿಯಲ್ಲಿ ಬೆಳಸಿದ ಸಿಲ್ವರ್‌ ಓಕ್, ಹೆಬ್ಬೇವು, ತೇಗ, ಬಿದಿರು ಹಾಗೂ ಹತ್ತಾರು ತಳಿಯ ಸಸಿಗಳು ದೊರೆಯುತ್ತವೆ.

‘ಈಗಾಗಲೇ ₹ 34 ಸಾವಿರ ಪ್ರೋತ್ಸಾಹಧನವನ್ನು ರೈತರಿಗೆ ವಿತರಿಸಲಾಗಿದೆ’ ಎಂದು ಇಲಾಖೆಯ ನಾಗರಾಜು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.