ADVERTISEMENT

ಬಿಸಿಲಿಗೆ ನಿಲ್ಲದ ಮಾವಿನ ಹೂವು; ರೈತರಲ್ಲಿ ಆತಂಕ, ಪರಿಹಾರಕ್ಕಾಗಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 14:06 IST
Last Updated 29 ಮಾರ್ಚ್ 2019, 14:06 IST
ವಿಜಯಪುರ ಸಮೀಪದ ಗಡ್ಡದನಾಯಕನಹಳ್ಳಿಯ ಬಳಿ ರೈತರು ಬೆಳೆದಿರುವ ಮಾವಿನ ತೋಟದಲ್ಲಿ ಸೊರಗುತ್ತಿರುವ ಮಾವಿನಕಾಯಿಗಳ ಗೊಂಚಲು 
ವಿಜಯಪುರ ಸಮೀಪದ ಗಡ್ಡದನಾಯಕನಹಳ್ಳಿಯ ಬಳಿ ರೈತರು ಬೆಳೆದಿರುವ ಮಾವಿನ ತೋಟದಲ್ಲಿ ಸೊರಗುತ್ತಿರುವ ಮಾವಿನಕಾಯಿಗಳ ಗೊಂಚಲು    

ವಿಜಯಪುರ: ವಿಪರೀತ ಬಿಸಿಲಿಗೆ ಮಾವಿನ ಹೂವು ಹೂ ಉದುರುತ್ತಿದೆ. ಇದರಿಂದ ಆತಂಕವಾಗತೊಡಗಿದೆ ಎಂದು ರೈತ ಸೋಮಶೇಖರ್ ಆತಂಕ ವ್ಯಕ್ತಪಡಿಸಿದರು.

ಕಡಿಮೆ ನೀರಿನಲ್ಲೂ ಬೆಳೆಯಬಹುದಾದ ಮಾವಿನ ಗಿಡವನ್ನು ನಾಟಿ ಮಾಡಿದ್ದೇವು.ಈ ಬಾರಿಯೂ ಮಳೆ ಕೊರತೆ ಉಂಟಾಗಿ ಮಾವಿನ ಹೂವು ಕಡಿಮೆಯಾಗಿತ್ತು. ಬಿಟ್ಟಿರುವ ಹೂವಾದರೂ ಕಾಯಿಯಾದರೆ ಹಾಕಿರುವ ಬಂಡವಾಳವಾದರೂ ಕೈಗೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೇವು. ಆದರೆ, ಬಿಟ್ಟಿದ್ದ ಹೂ ಕಾಯಿಯಾಗಿ ಬೆಳೆಯ ತೊಡಗುತ್ತಿದ್ದಂತೆ, ಈಗ ಬಿಸಿಲಿಗೆ ಕಾಯಿಗಳು ಉದುರುವ ಆತಂಕ ಎದುರಾಗಿದೆ ಎಂದರು.

ರೈತ ಸುರೇಶ್ ಮಾತನಾಡಿ, ರೈತರು ಒಂದರ್ಥದಲ್ಲಿ ಪ್ರಾಕೃತಿಕ ಶಾಪಕ್ಕೆ ಒಳಗಾಗಿದ್ದೇವೆ. ರಾಜಕಾರಣಿಗಳು ನೀರಾವರಿ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳುತ್ತಿರುವ ಮಾತುಗಳು ಆಶ್ವಾಸನೆಗಳಾಗಿಯೇ ಉಳಿಯುತ್ತಿವೆ. ಮತ್ತೊಂದು ಕಡೆಗೆ ಮಳೆಯು ಬಾರದೆ, ನಾವು ಯಾವ ಬೆಳೆಗಳನ್ನು ಇಟ್ಟರೂ ಅವುಗಳಿಗೆ ಸೂಕ್ತವಾದ ಬೆಲೆಗಳು ಸಿಗದೆ ಕಂಗಾಲಾಗುತ್ತಿದ್ದೇವೆ. ಈಗ ಮಾವಿನ ಬೆಳೆಯಲ್ಲಾದರೂ ಒಂದಷ್ಟು ಹಣ ಬಂದರೆ, ಕನಿಷ್ಠ ಸಾಲಗಳನ್ನಾದರೂ ತೀರಿಸಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದೆವು. ಈಗ ಬಿಟ್ಟಿರುವ ಫಸಲು ಉದುರುವ ಹಂತಕ್ಕೆ ಬಂದಿದೆ. ಹೂ ಉಳಿಸಿಕೊಳ್ಳಲಿಕ್ಕೂ ಔಷಧಿಗಳನ್ನು ಸಿಂಪಡಣೆ ಮಾಡಿದ್ದೇವು. ಈಗ ಅಷ್ಟು ಕಷ್ಟಪಟ್ಟಿದ್ದು ವ್ಯರ್ಥವಾಗುತ್ತಿದೆ ಎಂದರು.

ADVERTISEMENT

ರೈತ ರಾಮಾಂಜಿನೇಯ ಮಾತನಾಡಿ, ತೋಟಗಳಲ್ಲಿ ಹೂ ಬಂದಾಗಲೇ ವ್ಯಾಪಾರ ಮಾಡಿ ಒಂದಷ್ಟು ಹಣವನ್ನು ಮುಂಗಡವಾಗಿ ತಗೊಂಡಿದ್ದೇವೆ. ಈಗ ಫಸಲು ಉದುರಲಿಕ್ಕೆ ಆರಂಭವಾಗುತ್ತಿರುವುದರಿಂದ ವ್ಯಾಪಾರಸ್ಥರು ಮುಂಗಡ ಹಣವನ್ನು ವಾಪಸ್ ಕೇಳುತ್ತಿದ್ದಾರೆ. ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಸರ್ಕಾರವೇನಾದರೂ ಪರಿಹಾರ ಕೊಡುತ್ತಾ ಇಲ್ಲವಾ ಎಂದು ನಾವು ಚಿಂತೆ ಮಾಡುತ್ತಾ ಇದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.