ADVERTISEMENT

ವಿಜಯಪುರ: ಬರದ ನಾಡಿಗೆ ವರವಾದ ‘ಸೀತಾಫಲ’

ಅಥರ್ಗಾದಲ್ಲಿ 30 ಎಕರೆಯಲ್ಲಿ ಸೀತಾಫಲ ಬೆಳೆದ ರೈತ ಮಲಕಪ್ಪ ಬೋಳೆಗಾಂವ್‌ ಯಶೋಗಾಥೆ

ಬಸವರಾಜ ಸಂಪಳ್ಳಿ
Published 24 ನವೆಂಬರ್ 2022, 19:30 IST
Last Updated 24 ನವೆಂಬರ್ 2022, 19:30 IST
ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದ ರೈತ ಮಲಕಪ್ಪ ಬೊಳೆಗಾಂವ್‌ ಅವರ  ‘ಸೀತಾಫಲ’ ತೋಟಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು
ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದ ರೈತ ಮಲಕಪ್ಪ ಬೊಳೆಗಾಂವ್‌ ಅವರ  ‘ಸೀತಾಫಲ’ ತೋಟಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು   

ವಿಜಯಪುರ: ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದ ’ಅನ್ನದಾತ’ ಮಲಕಪ್ಪ ಬೊಳೆಗಾಂವ್‌ ತಮ್ಮ 30 ಎಕರೆ ಭೂಮಿಯಲ್ಲಿ ‘ಸೀತಾಫಲ’ವನ್ನು ಬೆಳೆದು, ಕೈತುಂಬ ಆದಾಯ ಗಳಿಸುವ ಮೂಲಕ ಬರದ ನಾಡಿಗೆ ಲಿಂಬೆ, ದ್ರಾಕ್ಷಿಗಿಂತ ಸೀತಾಫಲ ಕೃಷಿ ಸೂಕ್ತ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಹೌದು, ಮಲಕಪ್ಪ ಅವರ ತಾತಾ, ಮುತ್ತಾತ ತಮ್ಮ ಹೊಲದಲ್ಲಿ ಲಿಂಬೆ ಬೆಳೆಯುವ ಮೂಲಕಸಂಪ್ರದಾಯಿಕ ಕೃಷಿ ಮಾಡಿ ಬದುಕು ಸಾಗಿಸುತ್ತಿದ್ದರು. ಆದರೆ, ಕಳೆದ ಐದು ವರ್ಷದ ಈಚೆಗೆ ಅವರ ಮೊಮ್ಮಗ ಲಿಂಬೆ ಬದಲು ಸೀತಾಫಲವನ್ನು ಬೆಳೆಯುವ ಮೂಲಕ ಜಿಲ್ಲೆಯಲ್ಲಿಮಾದರಿ ರೈತರಾಗಿ ಗುರುತಿಸಿಕೊಂಡಿದ್ದಾರೆ.

‘ನಮ್ಮ 28 ಎಕರೆಹೊಲದಲ್ಲಿ ಮಹಾರಾಷ್ಟ್ರ ರಾಜ್ಯದ ಬಾರ್ಸಿಯ ‘ಎನ್‌ಎಂಕೆ ಗೋಲ್ಡ್‌’ ಹಾಗೂ ಎರಡು ಎಕರೆಯಲ್ಲಿ ತಿಡಗುಂದಿಯ ‘ಬಾಲ್‌ನಗರ’ ತಳಿಯ ಸೀತಾಫಲ ಬೆಳೆಯುತ್ತಿದ್ದೇನೆ. ಎಕರೆಗೆಅಂದಾಜು ₹ 1.5 ಲಕ್ಷ ಆದಾಯ ಗಳಿಸುತ್ತಿದ್ದೇನೆ. ಎಕರೆಗೆ ಖರ್ಚು ಸುಮಾರು ₹40 ಸಾವಿರ ಬರುತ್ತಿದೆ’ ಎನ್ನುತ್ತಾರೆ ರೈತ ಬೊಳೆಗಾಂವ್‌.

ADVERTISEMENT

‘ಬೆಂಗಳೂರು ಹಾಪ್‌ಕಾಮ್ಸ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಬಹುತೇಕ ಹಣ್ಣುಗಳನ್ನು ಅಲ್ಲಿಗೆ ಕಳುಹಿಸುತ್ತಿದ್ದೇನೆ. ಇನ್ನುಳಿದಂತೆ ಬೆಂಗಳೂರಿನ ಹೊಸೂರು ಮಾರುಕಟ್ಟೆಗೂ ಪೂರೈಕೆ ಮಾಡುತ್ತಿದ್ದೇನೆ. ಹಾಪ್‌ಕಾಮ್ಸ್‌ನಲ್ಲಿ ಒಂದು ಕೆ.ಜಿ.ಗೆ ₹135 ದರ ಸಿಗುತ್ತಿದೆ. ಇತರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ₹ 85 ದರ ಸಿಗುತ್ತದೆ’ ಎನ್ನುತ್ತಾರೆ ಅವರು.

‘ಒಂದೊಂದು ಹಣ್ಣು 300 ಗ್ರಾಂ, 500 ಗ್ರಾಂ ತೂಗುತ್ತವೆ. ದೊಡ್ಡ ಗಾತ್ರದ ಹಣ್ಣಿಗೆ ಉತ್ತಮ ಬೆಲೆ ಲಭಿಸುತ್ತಿದೆ. ಚಿಕ್ಕ ಗಾತ್ರದ ಹಣ್ಣಿಗೆ ಬೇಡಿಕೆ ಕಡಿಮೆ’ ಎನ್ನುತ್ತಾರೆ ಬೊಳೆಗಾಂವ್‌.

‘ಲಿಂಬೆ, ದಾಳಿಂಬೆಗೆ ಆಗುವಷ್ಟು ಖರ್ಚು, ವೆಚ್ಚ ಸೀತಾಫಲಕ್ಕೆ ಇಲ್ಲ.ಕುಟುಂಬದ ನಾಲ್ಕೈದು ಜನ ಸದಸ್ಯರ ಜೊತೆ ಎಂಟತ್ತು ಜನ ಕೂಲಿಕಾರ್ಮಿಕರು ನಮ್ಮ ಹೊಲದಲ್ಲಿ ಕೃಷಿಯಲ್ಲಿ ತೊಡಗಿದ್ದೇವೆ‘ ಎಂದು ಮಲಕಪ್ಪ ತಿಳಿಸಿದರು.

‘ತೋಟದಲ್ಲಿ ಒಂದೂವರೆ ಎಕರೆ ವಿಸ್ತಾರದಲ್ಲಿ ಕೃಷಿ ಹೊಂಡವನ್ನು ನಿರ್ಮಿಸಿದ್ದೇನೆ. ಸಾಕಷ್ಟು ನೀರು ಇದೆ. ಹನಿ ನೀರಾವರಿ ಪದ್ಧತಿ ಅಳವಡಿಸಿದ್ದೇನೆ. ಈ ಬೆಳೆಗೆ ಬೇಸಿಗೆಯಲ್ಲಿ ನೀರಿನ ಅಗತ್ಯ ಇಲ್ಲದೇ ಇರುವುದರಿಂದ ಸಮಸ್ಯೆಯಾಗುವುದೇ ಇಲ್ಲ’ ಎನ್ನುತ್ತಾರೆ ಅವರು.

‘ಸೀತಾಫಲಕ್ಕೆ ಇತರೆ ಬೆಳೆಗಳಿಗೆ ಮಾಡುವಂತೆ ವರ್ಷ ಪೂರ್ತಿ ಕೆಲಸ ಮಾಡುವ ಅಗತ್ಯವಿಲ್ಲ, ವರ್ಷದಲ್ಲಿ ಕೇವಲ ಆರು ತಿಂಗಳು ಮಾತ್ರ ಕೃಷಿ ಕಾರ್ಯ. ಜನವರಿಯಿಂದ ಮೇ ವರೆಗೆ ಸೀತಾಫಲ ಗಿಡಗಳಿಗೆ ನೀರಿನ ಅಗತ್ಯವೇ ಇರುವುದಿಲ್ಲ. ಈ ವೇಳೆ ನೀರನ್ನು ಗಿಡಕ್ಕೆ ಪೂರೈಕೆ ಮಾಡಿದರೆ, ಮುಂದಿನ ದಿನಗಳಲ್ಲಿ ಇಳವರಿ ಸರಿಯಾಗಿ ಬರುವುದಿಲ್ಲ. ಜೂನ್‌ನಿಂದ ಡಿಸೆಂಬರ್‌ ವರೆಗೆ ಗಿಡಗಳಿಗೆ ಔಷಧೋಪಚಾರ, ಕೃಷಿ, ನೀರು ನೀಡಬೇಕು.ನವೆಂಬರ್‌ನಿಂದ ಡಿಸೆಂಬರ್‌ ವರೆಗೆ ಗಿಡಗಳು ಹಣ್ಣು ಬಿಡುತ್ತವೆ’ ಎನ್ನುತ್ತಾರೆ ಅವರು.

‘ನೆಮ್ಮದಿಯ ಕೃಷಿ ಜೀವನ ನಡೆಸುವವರಿಗೆ ಸೀತಾಫಲ ಉತ್ತಮ ಬೆಳೆ. ಎಕರೆಗೆ ಮೂರು ಲಕ್ಷ ನಾಲ್ಕು ಲಕ್ಷ ಆದಾಯ ಗಳಿಸಬೇಕು ಎಂಬ ಹಪಾಹಪಿ ಇರುವವವರು ಸೀತಾಫಲ ಬೆಳೆದರೆ ಪ್ರಯೋಜನವಿಲ್ಲ’ ಎಂಬುದು ಮಲಕಪ್ಪ ಅವರ ಕೃಷಿ ಅನುಭವ.

‘ಐಸ್‌ಕ್ರೀಮ್‌ ತಯಾರಿಕೆಯಲ್ಲಿಸೀತಾಫಲವನ್ನು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಬಳಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹಾಗೂ ದರ ಸಿಗುತ್ತಿದೆ’ ಎನ್ನುತ್ತಾರೆ ವಿಜಯಪುರ ತೋಟಗಾರಿಕೆ ಇಲಾಖೆಉಪ ನಿರ್ದೇಶಕಎಸ್‌.ಎಂ. ಬರಗಿಮಠ.

****

ಸೀತಾಫಲ ಬೆಳೆಯಲು ವಿಜಯಪುರ ಜಿಲ್ಲೆಯಲ್ಲಿ ಸೂಕ್ತ ವಾತಾವರಣ ಇದೆ. ರೈತರು ಕೇವಲ ದ್ರಾಕ್ಷಿ, ಲಿಂಬೆ, ಕಬ್ಬಿಗೆ ಸೀಮಿತವಾಗದೇ ಸೀತಾಫಲ, ಪೇರು ಮತ್ತಿತರರ ಹಣ್ಣು ಬೆಳೆಯಲು ಆದ್ಯತೆ ನೀಡಬೇಕು
–ಎಸ್‌.ಎಂ. ಬರಗಿಮಠ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.