ADVERTISEMENT

ವರ್ಷಕ್ಕೆ ಕನಿಷ್ಠ ₹ 60 ಲಕ್ಷ ವರಮಾನ; ಸುಗಲಾಬಾಯಿಯ ಕೃಷಿ ಯಶೋಗಾಥೆ..!

60 ಎಕರೆಯಲ್ಲಿ ತರಹೇವಾರಿ ಬೆಳೆ

ರಮೇಶ ಎಸ್.ಕತ್ತಿ
Published 25 ಮಾರ್ಚ್ 2019, 20:00 IST
Last Updated 25 ಮಾರ್ಚ್ 2019, 20:00 IST
ಟ್ರಾಕ್ಟರ್ ಮೂಲಕ ದ್ರಾಕ್ಷಿ ಬೆಳೆಗೆ ಔಷಧಿ ಸಿಂಪಡಿಸಿದ ಸುಗಲಾಬಾಯಿ
ಟ್ರಾಕ್ಟರ್ ಮೂಲಕ ದ್ರಾಕ್ಷಿ ಬೆಳೆಗೆ ಔಷಧಿ ಸಿಂಪಡಿಸಿದ ಸುಗಲಾಬಾಯಿ   

ಆಲಮೇಲ:60 ಎಕರೆ ಜಮೀನಿನ ಒಡತಿ. ಮಾಲೀಕಳು ಎಂಬ ಹಮ್ಮು–ಬಿಮ್ಮಿಲ್ಲ. ಹೊಲದಲ್ಲಿ ಮಾಡದ ಕೆಲಸವಿಲ್ಲ. ನಿತ್ಯ ಕನಿಷ್ಠ 10 ತಾಸಿನ ದುಡಿಮೆ ಇವರದ್ದು...

ಗುಂದಗಿ ಗ್ರಾಮದ ಸುಗಲಾಬಾಯಿ ಹೊಲಕ್ಕಿಳಿದರೆ ಯಾವುದಕ್ಕೂ ಹಿಂಜರಿಯಲ್ಲ. ಎಲ್ಲ ಕೆಲಸವೂ ಕರಗತ. ಟ್ರಾಕ್ಟರ್‌ ಚಲಾಯಿಸಿ ದ್ರಾಕ್ಷಿ ಗಿಡಕ್ಕೆ ಔಷಧಿ ಸಿಂಪಡಿಸುವಲ್ಲೂ ನಿಷ್ಣಾತರಿವರು.

ಮಲ್ಲಿಕಾರ್ಜುನ ನಂದೂರ ತನ್ನ ಪತ್ನಿಗೆ ಎಲ್ಲವನ್ನೂ ಕಲಿಸಿಕೊಟ್ಟಿದ್ದಾರೆ. ಬೈಕ್‌ ಸಹ ಓಡಿಸಬಲ್ಲರು. ಕಚ್ಚಾ ರಸ್ತೆಯಲ್ಲೂ ಬೊಲೆರೋ ಚಲಾಯಿಸುವ ಚಾಲಾಕಿಯಿಕೆ. ಕೃಷಿ ಎಂದರೇ ಇವರಿಗೆ ಬಲು ಪ್ರೀತಿ.

ADVERTISEMENT

ಕೃಷಿ ಕಾಯಕ ನಡೆಸುತ್ತಿರುವ ಸುಗಲಾಬಾಯಿ–ಮಲ್ಲಿಕಾರ್ಜುನ ನಂದೂರ ದಂಪತಿಗೆ ಮಕ್ಕಳಿಬ್ಬರು. ಧಾರವಾಡದಲ್ಲಿ ಓದುತ್ತಿದ್ದಾರೆ. ದಿನವಿಡಿ ಈ ದಂಪತಿಗೆ ಕೃಷಿಯದ್ದೇ ಧ್ಯಾನ. 35 ಎಕರೆ ಕಬ್ಬು, 15 ಎಕರೆಯಲ್ಲಿ ಮನೆಗೆ ಬೇಕಾಗುವಷ್ಟು ಆಹಾರಧಾನ್ಯಗಳನ್ನು ಬೆಳೆದಿದ್ದಾರೆ. ತರಕಾರಿ ಸೇರಿದಂತೆ ಸಕಲ ಉತ್ಪನ್ನವನ್ನು ತಮ್ಮ ಭೂಮಿಯಲ್ಲೇ ಸಮೃದ್ಧ ಫಲ ಪಡೆಯುವಲ್ಲಿ ಸಿದ್ಧಹಸ್ತರು.

10 ಎಕರೆಯಲ್ಲಿ ದ್ರಾಕ್ಷಿ:

ಐದಾರು ಎಕರೆಯಲ್ಲಿ ದ್ರಾಕ್ಷಿಯಿದ್ದರೆ ದೊಡ್ಡದು. ಆದರೆ ಸುಗಲಾಬಾಯಿ ಮೂರು ವರ್ಷದ ಹಿಂದೆ 10 ಎಕರೆಯಲ್ಲಿ ಥಾಮ್ಸನ್‌ ತಳಿಯ ದ್ರಾಕ್ಷಿ ಬೆಳೆಯಿಟ್ಟರು. ಸಾಲಿನಿಂದ ಸಾಲಿಗೆ 11 ಅಡಿ, ಗಿಡದಿಂದ ಗಿಡಕ್ಕೆ ಐದು ಅಡಿಯಂತೆ ನಾಟಿ ಮಾಡಿದ್ದಾರೆ. ಆರಂಭದ ವರ್ಷ ವಿಪರೀತ ಖರ್ಚು. ಎರಡನೇ ವರ್ಷ ಫಸಲು ಕೈಗೆ ಸಿಕ್ಕಾಗ ಸಂತಸಪಟ್ಟರು ಈ ದಂಪತಿ.

ಆರಂಭದಲ್ಲಿ ಎಕರೆಗೆ ಕನಿಷ್ಠ ₹ 4 ಲಕ್ಷ ಖರ್ಚು ಮಾಡಿದ್ದಾರೆ. ₹ 13 ಲಕ್ಷ ವೆಚ್ಚದಲ್ಲಿ ಮಣೂಕ ಮಾಡಲು ಶೆಡ್‌ ನಿರ್ಮಿಸಿದ್ದಾರೆ. ಮೊದಲ ವರ್ಷ ಖರ್ಚು ₹ 40 ಲಕ್ಷ ದಾಟಿತ್ತು. ಹಿಂದಿನ ವರ್ಷ, ಈ ವರ್ಷ ಎಕರೆಗೆ ₹ 50,000 ಖರ್ಚಾಗಿದೆ ಎಂದು ಮಲ್ಲಿಕಾರ್ಜುನ ನಂದೂರ ತಮ್ಮ ಪತ್ನಿಯ ಕೃಷಿ ಯಶೋಗಾಥೆಯನ್ನು ‘ಪ್ರಜಾವಾಣಿ’ ಬಳಿ ಬಿಚ್ಚಿಟ್ಟರು.

ಮೊದಲ ವರ್ಷ ಆದಾಯ ಸಿಗಲಿಲ್ಲ. ಹಿಂದಿನ ವರ್ಷ ತಾಸ್ಕಗಾಂವ್‌ ಮಾರುಕಟ್ಟೆಯಲ್ಲಿ ಮಣೂಕ ಮಾರಾಟ ಮಾಡಿದ್ದಕ್ಕೆ ₹ 18 ಲಕ್ಷ ಕೈಗೆ ಸಿಕ್ಕಿತ್ತು. ಇದೀಗ ಖರ್ಚು ಕಡಿಮೆಯಾಗಿದೆ. ಆದಾಯ ಹೆಚ್ಚಾಗಲಿದೆ. ಈ ವರ್ಷ ಕನಿಷ್ಠ ಎಂದರೂ ಎಕರೆಗೆ ₹ 4 ಲಕ್ಷ ವರಮಾನ ಸಿಗಬಹುದು ಎಂದು ಹೇಳಿದರು.

ಜಲ ಮೂಲ

ಎಂಟು ಕೊಳವೆಬಾವಿಗಳಿವೆ. ವಿದ್ಯುತ್‌ ಅಭಾವ ಬಾಧಿಸಬಾರದು ಎಂದು ₹ 4 ಲಕ್ಷ ವೆಚ್ಚದಲ್ಲಿ ಸೋಲಾರ್‌ ಘಟಕ ಅಳವಡಿಸಿದ್ದಾರೆ. ಇದರ ಮೂಲಕ 7.5 ಎಚ್‌.ಪಿ. ಮೋಟರ್‌ನಿಂದ ಸತತವಾಗಿ ನೀರೆತ್ತಬಹುದು. ಹನಿ ನೀರಾವರಿ ಪದ್ಧತಿ ಇವರದ್ದು.

ನಸುಕಿನ 4ರಿಂದ ಬೆಳಿಗ್ಗೆ 9ರವರೆಗೂ ಸುಗಲಾಬಾಯಿ ಅವರೇ ದಿನ ಬಿಟ್ಟು ದಿನ ಬೆಳೆಗಳಿಗೆ ನೀರುಣಿಸಲಿದ್ದಾರೆ. ಬೆಳೆಗೆ ರೋಗ ಗೋಚರಿಸುತ್ತಿದ್ದಂತೆ ತಾವೇ ಔಷಧಿ ಸಿಂಪಡಿಸಿ ನಿಯಂತ್ರಿಸುವುದು ವಿಶೇಷ.

ನಿತ್ಯವೂ ಕನಿಷ್ಠ ಏಳೆಂಟು ಕೂಲಿ ಕಾರ್ಮಿಕರು ಇವರ ಜಮೀನಿನಲ್ಲಿ ಕೆಲಸ ಮಾಡುವುದು ಸಹಜ. ಕೂಲಿಯವರೊಟ್ಟಿಗೆ ಒಬ್ಬರಾಗಿ ಸುಗಲಾಬಾಯಿ ದುಡಿಯುತ್ತಾರೆ. ಮೂರು ಟ್ರಾಕ್ಟರ್‌ ಇವೆ. ಇವುಗಳ ಮೂಲಕವೇ ಔಷಧಿ ಸಿಂಪಡಣೆ, ಕಳೆ ತೆಗೆಯುವಿಕೆ, ಉಳುಮೆ ಇನ್ನಿತರೆ ಕೆಲಸ ಮಾಡುವಲ್ಲಿ ಸುಗಲಾ ಪ್ರವೀಣರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.