ADVERTISEMENT

ಶಿಕ್ಷಣದಲ್ಲಿ ಫೇಲ್‌; ಕೃಷಿಯಲ್ಲಿ ಪಾಸ್

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮುದೇನೂರು ರೈತ ಶಿವನಗೌಡ ಕುಟುಂಬದ ಸಾಧನೆ

ಇ.ಎಸ್.ಸುಧೀಂದ್ರ ಪ್ರಸಾದ್
Published 17 ಸೆಪ್ಟೆಂಬರ್ 2022, 19:31 IST
Last Updated 17 ಸೆಪ್ಟೆಂಬರ್ 2022, 19:31 IST
ಧಾರವಾಡ ಕೃಷಿ ಮೇಳದಲ್ಲಿ ತಮ್ಮ ಯಶಸ್ಸಿ ತಂತ್ರವನ್ನು ರೈತರೊಂದಿಗೆ ಹಂಚಿಕೊಳ್ಳುತ್ತಿರುವ ಶಿವನಗೌಡ ಗಂಗನಗೌಡ (ಬಲಭಾಗದಲ್ಲಿರುವವರು)
ಧಾರವಾಡ ಕೃಷಿ ಮೇಳದಲ್ಲಿ ತಮ್ಮ ಯಶಸ್ಸಿ ತಂತ್ರವನ್ನು ರೈತರೊಂದಿಗೆ ಹಂಚಿಕೊಳ್ಳುತ್ತಿರುವ ಶಿವನಗೌಡ ಗಂಗನಗೌಡ (ಬಲಭಾಗದಲ್ಲಿರುವವರು)   

ಧಾರವಾಡ: ಪ್ರತಿ ಎಕರೆಗೆ ₹10 ಲಕ್ಷದಷ್ಟು ಆದಾಯ ತೆಗೆಯುತ್ತಿರುವಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮುದೇನೂರು ಗ್ರಾಮದ ರೈತ ಶಿವನಗೌಡ ಕುಟುಂಬದಲ್ಲಿ ನಾಲ್ವರೂ ಶಿಕ್ಷಣದಲ್ಲಿ ಫೇಲ್‌ ಆದವರು. ಆದರೆ ಯೋಜನಾ ಬದ್ಧ ಹಾಗೂ ಮೌಲ್ಯಾಧಾರಿತ ಕೃಷಿ ಮೂಲಕ ಯಶಸ್ಸು ಕಂಡವರು.

ಧಾರವಾಡ ಕೃಷಿ ಮೇಳದ ಯಶಸ್ವಿ ರೈತರ ಮಳಿಗೆಗಳಲ್ಲಿ ಹೆಚ್ಚು ಜನರನ್ನು ಆಕರ್ಷಿಸುತ್ತಿರುವುದು ಶಿವನಗೌಡ ಗಂಗನಗೌಡ ಅವರ ಮಳಿಗೆ. 16 ಎಕರೆಯ ತಮ್ಮ ಜಮೀನಿನಲ್ಲಿ ಸುಮಾರು 200ಕ್ಕೂ ಹೆಚ್ಚು ಬಗೆಯ ಕೃಷಿ ಹಾಗೂ ತೋಟಗಾರಿಕೆ ಸಂಬಂಧಿಸಿದ ಬೆಳೆಗಳನ್ನು ಹೊಂದಿದ್ದಾರೆ. ಅವುಗಳ ಮೂಲಕ ಉತ್ಪಾದಿಸಲಾದ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶನ ಹಾಗೂ ಮಾರಾಟ ಮಾಡುತ್ತಿದ್ದಾರೆ.

ನಾಲ್ಕು ಎಕರೆಯಲ್ಲಿ ಸಮೃದ್ಧಿ, ಸಂತೃಪ್ತಿ ಎಂಬ ಎರಡು ತಳಿಯ ಅಡಿಕೆ ಬೆಳೆದು ₹40 ಲಕ್ಷ ಗಳಿಸಿದ್ದಾರೆ. ಜತೆಗೆ ಕಾಳು ಮೆಣಸು ಮೂಲಕ ಪ್ರತಿ ಎಕರೆಗೆ ₹3ಲಕ್ಷ, ಅರಿಸಿನ, ಶುಂಠಿ, ಲಿಂಬೆ, ಲವಂಗದಂತಹ ಅಂತರ ಬೆಳೆಗಳ ಮೂಲಕ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ.

ADVERTISEMENT

‘ಇವರಲ್ಲಿ 30 ಬಗೆಯ ಹಲಸು ಇದೆ. ಸಾಮಾನ್ಯವಾಗಿ ಒಂದು ಹಲಸಿನ ಹಣ್ಣು ₹50ರಿಂದ ₹100ರಂತೆ ಮಾರಾಟವಾಗುತ್ತದೆ. ಆದರೆ ನಾವು ಹಲಸನ್ನು ಸುಲಿದು, ತೊಳೆಯನ್ನು ಮಾರಾಟ ಮಾಡುತ್ತಿದ್ದೇವೆ. ಇದರಿಂದ ಪ್ರತಿಯೊಂದು ಹಣ್ಣು ₹500ಕ್ಕಿಂತ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ’ ಎನ್ನುತ್ತಾರೆ ಶಿವನಗೌಡ.

‘ತೆಂಗಿನಕಾಯಿ ಮೂಲಕ ಕೊಬ್ಬರಿ ಎಣ್ಣೆ ತೆಗೆದು, ಹಲವು ರೀತಿಯ ಗಿಡಮೂಲಿಕೆ ಬಳಸಿ ನವರತ್ನ ತೈಲವನ್ನು ಸಿದ್ಧಪಡಿಸಿದ್ದೇವೆ. ನೈಸರ್ಗಿಕ ವಸ್ತುಗಳನ್ನು ಬಳಸಿದ ಹಲ್ಲಿನ ಪುಡಿಗೆ ಬಾರೀ ಬೇಡಿಕೆ ಇದೆ. ಬಾಳೆಯನ್ನೂ ಬೆಳೆದು ಮಾರಾಟ ಮಾಡುತ್ತಿದ್ದೇವೆ. ಇದರೊಂದಿಗೆ ಅಲಸಂದೆ, ಕುಂಬಳ, ಹೀರೆ, ಅವರೆ, ಸೋರೆಕಾಯಿಯಂತ ಹಲವು ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದೇವೆ. ಇದರಿಂದಲೂ ಸಾಕಷ್ಟು ಲಾಭವಿದೆ. ವಿವಿಧ ಬಗೆಯ ತೋಟಗಾರಿಕಾ ಸಸಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತಿದೆ’ ಎಂದು ತಮ್ಮ ಕೃಷಿಯನ್ನು ವಿವರಿಸಿದರು.

‘ನಾವು ಕೃಷಿಯಲ್ಲಿ ಕೂಲಿ ಆಳುಗಳನ್ನು ಅವಲಂಬಿಸಿಲ್ಲ.ಪತ್ನಿ ಸುನಂದಾ, ಪುತ್ರರಾದ ಸಚ್ಚಿದಾನಂದ ಹಾಗೂ ಸದಾನಂದ ಕೃಷಿಯಲ್ಲಿ ಜತೆಯಾಗಿದ್ದಾರೆ. ನನ್ನನ್ನೂ ಸೇರಿದಂತೆ ಎಲ್ಲರೂ ಶಿಕ್ಷಣದಲ್ಲಿ ಫೇಲ್ ಆದವರು. ಆದರೆ ನಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಕಾರಣ ಸಫಲತೆಯ ಹಾದಿಯಲ್ಲಿದ್ದೇವೆ. ಪ್ರತಿ ಎಕರೆಗೆ ಸದ್ಯ ₹10ಲಕ್ಷ ಆದಾಯ ಸಿಗುತ್ತಿದೆ. ಇದನ್ನು ₹20ಲಕ್ಷಕ್ಕೆ ಕೊಂಡೊಯ್ಯಬೇಕು ಎಂಬುದು ನಮ್ಮ ಗುರಿ’ ಎಂದರು ಶಿವನಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.