ADVERTISEMENT

ಮಧುಬಟ್ಟಲಿನಲ್ಲಿ ಬಿರುಗಾಳಿ: ಕ್ರಮೇಣ ಚರಿತ್ರೆಯ ಭಾಗವಾಗುತ್ತಿರುವ ಜೇನುಕೃಷಿ

ಕೆ.ಎಸ್.ಗಿರೀಶ್
Published 11 ಜೂನ್ 2022, 19:30 IST
Last Updated 11 ಜೂನ್ 2022, 19:30 IST
ಕೊಡಗು ಜಿಲ್ಲೆಯ ವಿರಾಜಪೇಟೆಯ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಸಂಘದ ಮಾರಾಟ ಮಳಿಗೆ
ಕೊಡಗು ಜಿಲ್ಲೆಯ ವಿರಾಜಪೇಟೆಯ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಸಂಘದ ಮಾರಾಟ ಮಳಿಗೆ   

ರಾಜ್ಯದ ಮಧುಬಟ್ಟಲುಗಳಲ್ಲಿ ಕೊಡಗು ಕೂಡ ಒಂದು. ಅದೊಂದು ಕಾಲವಿತ್ತು. ಕೊಡಗಿಗೆ ಬಂದರೆ ಜೇನು ಸವಿಯದೇ ಹೋಗಬಾರದು, ಇಲ್ಲಿನ ಜೇನು ಉಳಿದೆಲ್ಲ ಜೇನಿಗಿಂತಲೂ ಸವಿ ಮತ್ತು ಹಲವು ಕಾಯಿಲೆಗಳಿಗೆ ರಾಮಬಾಣ ಎಂಬ ಮಾತು ಜನಜನಿತವಾಗಿತ್ತು. ಇಂತಹ ನಂಬಿಕೆ, ನಾಣ್ಣುಡಿಗಳು ಈಗ ಹುಸಿಯಾಗುತ್ತಿವೆ. ದಿನ ಕಳೆದಂತೆ ಕೊಡಗಿನ ಜೇನು ಸವಿ ಕಳೆದುಕೊಳ್ಳುತ್ತಿರುವುದು ಮಾತ್ರವಲ್ಲ, ಜೇನು ಹುಳಗಳು ಜೀವವನ್ನೂ ಕಳೆದುಕೊಳ್ಳುತ್ತಿವೆ. ಜೇನುಕೃಷಿ ಕ್ರಮೇಣ ಚರಿತ್ರೆಯ ಭಾಗವಾಗುತ್ತಿದೆ.

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ರಾಸಾಯನಿಕಗಳ ಬಳಕೆಯು ಜೇನ್ನೊಣಗಳ ಮೇಲೆ ಮಾರಕ ಪ್ರಭಾವ ಬೀರುತ್ತಿದೆ. ವರ್ಷದಿಂದ ವರ್ಷಕ್ಕೆ ಜೇನಿನ ಗುಣಮಟ್ಟ ಕುಸಿಯುತ್ತಿದೆ. ಮೊದಲಿದ್ದ ರುಚಿ ಈಗ ಕಡಿಮೆಯಾಗುತ್ತಿದೆ ಎಂಬ ನೋವು ಈ ಭಾಗದ ಜೇನುಪ್ರಿಯರನ್ನು ಕಾಡುತ್ತಿದೆ.

ದಟ್ಟ ಅರಣ್ಯದಿಂದ ಆವೃತವಾಗಿರುವ ಬೆಟ್ಟಗುಡ್ಡಗಳಲ್ಲಿನ ವೈವಿಧ್ಯಮಯ ಹೂಗಳಿಂದ ಜೇನ್ನೊಣಗಳು ಜೇನನ್ನು ಸಂಗ್ರಹಿಸುತ್ತವೆ. ಬೆತ್ತು, ಪುಲಿಯಾಜಿನಿ, ಕರಿಮರ, ನಂದಿ, ಚಾಕೋಟೆ ಮೊದಲಾದ ಕಾಡು ಮರಗಳಲ್ಲಿನ ಹೂಗಳು ಹಲವು ಔಷಧೀಯ ಗುಣಗಳನ್ನು ಹೊಂದಿವೆ. ಈ ಕಾರಣಕ್ಕೆ ಕೊಡಗಿನ ಜೇನು ಉಳಿದ ಜಿಲ್ಲೆಗಳ ಜೇನುತುಪ್ಪಕ್ಕಿಂತ ಅಧಿಕ ಪೋಷಕಾಂಶ, ಔಷಧೀಯ ಗುಣಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಇಲ್ಲಿನ ಜೇನು ತನ್ನದೇ ವಿಶೇಷ ಸ್ಥಾನ ಗಳಿಸಿದೆ.

ADVERTISEMENT

‘ಥ್ಯಾಸಾಕ್ ಬ್ರೂಡ್‌’ ಎಂಬ ಕಾಯಿಲೆಯು 1990ರ ದಶಕದಲ್ಲಿ ಕೊಡಗಿನ ಜೇನ್ನೊಣಗಳನ್ನು ಇನ್ನಿಲ್ಲದಂತೆ ಬಾಧಿಸಿತು. ಕ್ರಮೇಣ ಅವುಗಳು ಚೇತರಿಸಿಕೊಂಡವು ಎನ್ನುವಷ್ಟರಲ್ಲಿ ರಾಸಾಯನಿಕಗಳ ಅಧಿಕ ಬಳಕೆಯಿಂದ ಜೇನು ಸಂತತಿಗಳೇ ನಾಶವಾಗುವ ಹಂತಕ್ಕೆ ತಲುಪಿದೆ. ಕಾಫಿ ಸೇರಿದಂತೆ ಕೊಡಗಿನಲ್ಲಿ ಬೆಳೆಯುವ ಬಹುತೇಕ ಎಲ್ಲ ಬೆಳೆಗಳಿಗೂ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಹೆಚ್ಚಾಗಿಯೇ ಬಳಸಲಾಗುತ್ತಿದೆ. ಇದರಿಂದ ಜೇನ್ನೊಣಗಳ ಸಂಖ್ಯೆ ಕ್ರಮೇಣ ಕ್ಷೀಣಿಸುತ್ತಿದೆ.

ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಂಟಾದ ಪ್ರವಾಹ, ಭೂಕುಸಿತಗಳೂ ಜೇನು ಕೃಷಿಗೆ ಹೊಡೆತ ನೀಡಿವೆ. ವಾತಾವರಣದ ಬದಲಾವಣೆಯಿಂದ ಮಳೆ ಬರಬೇಕಿರುವ ಕಾಲದಲ್ಲಿ ಮಳೆ ಬಾರದೇ, ವಿಪರೀತ ಬಿಸಿಲು ಆವರಿಸುವುದು, ಮಳೆ ಬಂದರೆ ನಿಲ್ಲದೇ ಒಮ್ಮೆಗೆ ಮೇಘಸ್ಫೋಟದಂತೆ ಸುರಿಯುವುದು ಹೆಚ್ಚಾಗುತ್ತಿದೆ. ಹವಾಮಾನ ಬದಲಾವಣೆಯೂ ಜೇನು ಕೃಷಿಗೆ ದೊಡ್ಡ ಪೆಟ್ಟು ನೀಡಿದೆ.

ಕೊಡಗು ಜಿಲ್ಲೆಯಲ್ಲಿ ಎರಡು ಜೇನು ಕೃಷಿಕರ ಸಹಕಾರ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. 1936ರಲ್ಲಿ ರಾಮಕೃಷ್ಣ ಮಠದ ಸ್ವಾಮಿ ಶಾಂಭವಾನಂದ ಅವರು ದೇಶದಲ್ಲೇ ಮೊದಲ ಬಾರಿಗೆ ವಿರಾಜಪೇಟೆಯಲ್ಲಿ ಸ್ಥಾಪಿಸಿದ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಸಂಘ 2,200 ಸಕ್ರಿಯ ಸದಸ್ಯರನ್ನು ಹೊಂದಿದ್ದು, ವಾರ್ಷಿಕ 60 ಸಾವಿರ ಕೆ.ಜಿಯಷ್ಟು ಜೇನುತುಪ್ಪವನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದೆ. ವಿರಾಜಪೇಟೆಯಲ್ಲಿ ಮೂರು, ಗೋಣಿಕೊಪ್ಪದಲ್ಲಿ ಒಂದು ಶಾಖೆಯನ್ನು ತೆರೆದಿದೆ. ನಿತ್ಯ 300 ಕೆ.ಜಿ ಜೇನುತುಪ್ಪವನ್ನು ಸಂಸ್ಕರಿಸುವ ದೊಡ್ಡ ಕಾರ್ಯಾಗಾರವೂ ಇದರಲ್ಲಿದೆ.

‘ಜೇನು ಕೃಷಿಕರು ತರುವ ಜೇನುತುಪ್ಪವನ್ನು ಮೊದಲು ‘ಎಜಿಮಾರ್ಕ್’ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಲಾಗುತ್ತಿದೆ. ಕಲಬೆರಕೆ ಇಲ್ಲ ಎಂದು ಗೊತ್ತಾದ ನಂತರವಷ್ಟೇ ಖರೀದಿಸಿ, ಇದರಲ್ಲಿರುವ ತೇವಾಂಶವನ್ನು ತೆಗೆದು, ಮಾರಾಟಕ್ಕೆ ಸಿದ್ಧಪಡಿಸಲಾಗುತ್ತದೆ. ಕೆಡಬಾರದೆಂದು ಯಾವುದೇ ರಾಸಾಯನಿಕ ಸೇರಿಸುವುದಿಲ್ಲ’ ಎಂದು ಸಂಘದ ಕಾರ್ಯದರ್ಶಿ ತಿಮ್ಮಯ್ಯ ಹೇಳುತ್ತಾರೆ.

ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರಿ ಸಂಘವು 1954ರಲ್ಲಿ ಶುರುವಾಯಿತು. 1,100 ಸಕ್ರಿಯ ಸದಸ್ಯರನ್ನು ಹೊಂದಿರುವ ಸಂಘದಲ್ಲಿ ಹವ್ಯಾಸಿ ಜೇನು ಕೃಷಿಕರು ಸೇರಿದಂತೆ ಸುಮಾರು ಮೂರು ಸಾವಿರ ಮಂದಿ ಜೇನು ಸಂಗ್ರಹ ಮಾಡುತ್ತಾರೆ. ವಾರ್ಷಿಕ ಒಂದೂವರೆ ಲಕ್ಷ ಕೆ.ಜಿಯಷ್ಟು ಸಂಗ್ರಹಿಸಿ ಮಾರಾಟ ಮಾಡುತ್ತಿದೆ.

‘ಡಿಸೆಂಬರ್‌ನಿಂದ ಮೇ ಜೇನು ಕೃಷಿಯ ಉತ್ತುಂಗದ ಕಾಲ. ಈ ಅವಧಿಯಲ್ಲಿ 15ರಿಂದ 25 ದಿನಗಳ ಅವಧಿಗೊಮ್ಮೆ ಜೇನು ಪಡೆಯಬಹುದು. ಸಂಘವೇ ಸ್ಥಾಪಿಸಿರುವ ಪ್ರಯೋಗಾಲಯದಲ್ಲಿ ನಿತ್ಯ ಮೂರು ಮಾದರಿಗಳನ್ನು ಪರೀಕ್ಷಿಸಬಹುದು. ಇದರಲ್ಲಿ ಶುದ್ಧ ಎಂದು ಕಂಡು ಬಂದ ಜೇನನ್ನು ಮಾತ್ರವೇ ಖರೀದಿಸಲಾಗುತ್ತದೆ. ನಿತ್ಯ ಸಾವಿರ ಕೆ.ಜಿಯಷ್ಟು ತುಪ್ಪವನ್ನು ಸಂಸ್ಕರಿಸುವ ಕಾರ್ಯಾಗಾರ ಇಲ್ಲಿದ್ದು, ಇದರಲ್ಲಿ ತೇವಾಂಶ ತೆಗೆದು, ಯಾವುದೇ ರಾಸಾಯನಿಕ ಬಳಸದೇ ಮಾರಾಟಕ್ಕೆ ಅಣಿಗೊಳಿಸಲಾಗುತ್ತದೆ’ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾ ಹೇಳುತ್ತಾರೆ.

ಭಾಗಮಂಡಲದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಘವು ಬೆಂಗಳೂರು, ಸೋಮವಾರಪೇಟೆ, ಕುಶಾಲನಗರ, ಮಡಿಕೇರಿಗಳಲ್ಲಿ ತನ್ನ ಶಾಖೆಗಳನ್ನು ತೆರೆದಿದೆ. ಎರಡೂ ಸಂಘಗಳಲ್ಲಿ ‘ಎಪಿಸೆರೆನ್’ ಎಂಬ ತಳಿಯ ಜೇನು ನೋಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಈಗ ಕೊಡಗಿನ ಜೇನುತುಪ್ಪಕ್ಕೆ ಹೆಚ್ಚಿನ ಬೇಡಿಕೆ ಇದೆ. ಆದರೆ, ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲ. ಪರಿಶುದ್ಧವಾದ ಜೇನು ತುಪ್ಪವನ್ನು ಎರಡೂ ಸಂಘಗಳೂ ಉತ್ಪಾದಿಸುತ್ತಿವೆ ಎಂದು ಆಯಾಯ ಸಂಘಗಳು ಪ್ರತಿಪಾದಿಸುತ್ತವೆ. ಆದರೆ, ಇವುಗಳ ಹೆಸರಿನಲ್ಲಿ ನಕಲಿ ಬ್ರಾಂಡ್‌ಗಳ ಜೇನುತುಪ್ಪಗಳು ಸಾಕಷ್ಟಿವೆ. ಪೂರೈಕೆಯ ಕೊರತೆಯಿಂದ ಕೆಲವೊಂದು ಕಡೆ ಜೇನುತುಪ್ಪಕ್ಕೆ ಕಲಬೆರಕೆ ಮಾಡಿ, ಅದನ್ನು ಹೆಚ್ಚಿಸಿ, ಪರಿಶುದ್ಧವಾದ ಜೇನು ಎಂದೇ ಮಾರಾಟ ಮಾಡಲಾಗುತ್ತಿದೆ. ಇಂತಹ ನಕಲಿ ಬ್ರಾಂಡ್‌ಗಳು ಕೊಡಗಿನ ಜೇನಿನ ವಿಶ್ವಾಸಾರ್ಹತೆಯನ್ನೇ ಕುಂದಿಸುತ್ತಿವೆ.

ಕೊಡಗು ಜಿಲ್ಲೆಯ ವಿರಾಜಪೇಟೆಯ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಸಂಘದ ಜೇನು ಸಂಸ್ಕರಣಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.