(ಚಿತ್ರಗಳು: ‘ಇಕ್ರಾ’ ಸಂಗ್ರಹದಿಂದ)
ಮಿಶ್ರ ಬೆಳೆ-ಬೆರಕೆ ಸೊಪ್ಪಿನ ವಿಸ್ಮಯ ಲೋಕದ ಬಗ್ಗೆ ಅಗಾಧ ಮಾಹಿತಿಯುಳ್ಳ ಪುಟ್ಟೀರಮ್ಮ ನೆಲಮೂಲದ ‘ಕೃಷಿ ಪ್ರೊಫೆಸರ್‘. ಕೃಷಿ ಎಂಬುದು ಇವರಿಗೆ ಬದುಕೂ ಹೌದು, ಜನಪದವೂ ಹೌದು. ತಮ್ಮ ಜ್ಞಾನವನ್ನು ಎಳೆ ತಲೆಮಾರುಗಳಿಗೆ ತಲುಪಿಸುತ್ತಿರುವುದು ಇವರ ವಿಶೇಷ. ಬೇಸಾಯಕ್ಕೆ ಇವರು ನೀಡಿರುವ ಅಪಾರ ಕೊಡುಗೆಯನ್ನು ಗುರುತಿಸಿ ಸರ್ಕಾರ ಈ ಸಾಲಿನ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿರುವುದು ಅತ್ಯಂತ ಅರ್ಥಪೂರ್ಣ.
-----
ಬೆಳದಿಂಗಳ ಬೆಳಕಲ್ಲಿ ಅರ್ಜುನ ರಾಯ ಅವರೆ ಬಿತ್ತಾಕೆ ಹೋಗಿ
ಅವರೆಯ ಸಾಲೆಲ್ಲ ಸರಮುತ್ತು ಕಿರುಗೆಜ್ಜೆ ಮೂಡಪ್ಪ ಬೆಳದಿಂಗಳೇ,
ಬೆಳದಿಂಗಳ ಬೆಳಕಲ್ಲಿ ಅರ್ಜುನ ರಾಯ ಕಳ್ಳೆ ಬಿತ್ತಾಕೆ ಹೋಗಿ
ಕಳ್ಳೆಯ ಸಾಲೆಲ್ಲ ಸರಮುತ್ತು ಕಿರುಗೆಜ್ಜೆ ಮೂಡಪ್ಪ ಬೆಳದಿಂಗಳೇ…
ಬೆಳದಿಂಗಳ ಬೆಳಕಲ್ಲಿ ಅರ್ಜುನ ರಾಯ ಹೆಸರು ಬಿತ್ತಾಕೆ ಹೋಗಿ
ಹೆಸರಿನ ಹೊಲವೆಲ್ಲ ಸರಮುತ್ತು ಕಿರುಗೆಜ್ಜೆ ಮೂಡಪ್ಪ ಬೆಳೆದಿಂಗಳೇ
ಬೆಳದಿಂಗಳ ಬೆಳಕಲ್ಲಿ ಅರ್ಜುನರಾಯ..
ಕೃಷಿಯಲ್ಲಿ ‘ಅಕ್ಕಡಿ ಪದ್ಧತಿ’ ಹೇಗೆ ಬಂತು ಎಂದು ಹಾಡಿನೊಂದಿಗೆ ವಿವರಿಸುವ ಪಣ್ಯದಹುಂಡಿ ಪುಟ್ಟೀರಮ್ಮ, ಇದೆಲ್ಲ ಪಾಂಡವರ ಕಾಲದಿಂದಲೇ ಬಂದಿರುವ ಈ ಕೃಷಿ ಪದ್ಧತಿಗಳು ಎಂದು ನಂಬಿದ್ದಾರೆ. ‘ಹಿಂಗೆ ಹಾಡ್ ಹೇಳ್ಕಂಡೇ ಹೊಲಕ್ಕೆಲ್ಲ ಬಿತ್ತನೆ ಮಾಡ್ತಿದ್ದಿವೆ. ಇದೆಲ್ಲ ಹಿರೀಕರು ಹೇಳಿಕೊಟ್ಟ ಹಾಡು, ಜ್ಞಾನ’ ಎನ್ನುತ್ತಾರೆ ಪುಟ್ಟೀರಮ್ಮ !
ಗ್ರಾಮೀಣರು ಕೃಷಿಯನ್ನು ಜನಪದದ ರೂಪದಲ್ಲೂ ನೋಡುವ ಪರಿಪಾಠವಿದೆ. ಈ ಮಾತಿಗೆ ಪುರಾವೆಯಾಗಿರುವ ಪುಟ್ಟೀರಮ್ಮ, ‘ಅಕ್ಕಡಿ, ಮಿಶ್ರಕೃಷಿ, ಸಾಲು ಬೆಳೆ’ಯಂತಹ ಕೃಷಿ ಪದ್ಧತಿಗಳು, ಕೃಷಿ ಆಚರಣೆ ಜತೆ ಇಂಥ ಹತ್ತಾರು ಹಾಡುಗಳನ್ನು ಜೋಡಿಸಿ ಹಾಡುತ್ತಾರೆ. ಪ್ರತಿ ಹಾಡಿನಲ್ಲೂ ಭೂಮಿ, ಮಣ್ಣು, ಕೃಷಿ, ಬೆಳೆ, ಕೊಯ್ಲು, ಧಾನ್ಯ ಒಕ್ಕಣೆಯಂತಹ ಕೃಷಿ ಬದುಕಿನ ಸಾರವಿರುತ್ತದೆ.
ಕೃಷಿಕ ಮಹಿಳೆ ಪುಟ್ಟೀರಮ್ಮ, ಚಾಮರಾಜನಗರ ಜಿಲ್ಲೆಯ ಪಣ್ಯದಹುಂಡಿ ಗ್ರಾಮದವರು. ಸದ್ಯ 90ರ ಆಸುಪಾಸು ಅವರ ವಯಸ್ಸು. ಪತಿ ಲಿಂಗೇಗೌಡ ಶತಾಯುಷಿ. ದಂಪತಿಗೆ ಒಬ್ಬ ಮಗ, ಒಬ್ಬ ಮಗಳು ಇದ್ದಾರೆ. ತಂದೆ ಈರೇಗೌಡ, ತಾಯಿ ಉಚ್ಚಮ್ಮ. ಲಿಂಗೇಗೌಡರನ್ನು ವಿವಾಹವಾಗಿ ಗುಂಡ್ಲುಪೇಟೆ ಆಲತ್ತೂರಿಗೆ ಬಂದ ಪುಟ್ಟೀರಮ್ಮ, ಕುಟುಂಬ ಕಾರಣಾಂತರಗಳಿಂದ 30 ವರ್ಷಗಳ ಹಿಂದೆ ಪಣ್ಯದಹುಂಡಿ ಗ್ರಾಮಕ್ಕೆ ಬಂದು ನೆಲೆಸಿದರು. ಸೋದರ ಮಾವ ಕೊಟ್ಟ ಒಂದು ಎಕರೆ ಹದಿನೈದು ಗುಂಟೆ ಜಮೀನು, ಮುಂದೆ ಇವರ ಕರ್ಮ ಭೂಮಿ, ಪ್ರಯೋಗಶಾಲೆಯಾಯಿತು.
ಪುಟ್ಟೀರಮ್ಮ, ಹನ್ನೆರಡನೇ ವಯಸ್ಸಿನಿಂದಲೇ ಅಪ್ಪನೊಂದಿಗೆ ಹೊಲಕ್ಕೆ ಇಳಿದು, ಜೋಳದ ಬಿತ್ತನೆ ಶುರು ಮಾಡಿದವರು. ಅಪ್ಪನೊಂದಿಗೆ ಕೃಷಿ ಮಾಡುತ್ತಾ ‘ಭೂಮ್ತಾಯಿ ಚಂದಕಿರಬೇಕು ಬೀಜ ಜ್ವಾಪಾನ ಮಾಡಬೇಕು’ ಎಂಬ ಪಾಠವನ್ನು ಕಲಿತವರು. ನಂತರ ಸಮುದಾಯದೊಂದಿಗೆ ಸೇರಿ ಆ ಜ್ಞಾನವನ್ನು ವಿಸ್ತರಿಸಿಕೊಂಡರು. ಮಡಿಲಲ್ಲಿ ‘ಅಕ್ಕಡಿ’ ಬೀಜಗಳನ್ನು ತುಂಬಿಕೊಂಡು, ಸಣ್ಣ ಹಿಡುವಳಿಯಲ್ಲಿ ಮಿಶ್ರಬೆಳೆ, ಬಹುಬೆಳೆ, ಸಾಲು ಬೆಳೆ ಪದ್ಧತಿಗಳಲ್ಲಿ ಬಿತ್ತನೆ ಮಾಡುತ್ತಾ, ಒಂದು ರೀತಿಯ ವಿಶಿಷ್ಟ ಬಹುಬೆಳೆ ಪದ್ಧತಿಯನ್ನೇ ರೂಪಿಸಿದ್ದಾರೆ. ಶಾಲೆ ಕಲಿಯದ, ಈ ನೆಲಮೂಲ ಜ್ಞಾನಿಯದ್ದು ‘ಅಕಾಡೆಮಿಕ್‘ನಿಂದ ಪಡೆದ ಜ್ಞಾನವಲ್ಲ, ಅನುಭವದಿಂದ ಕಲಿತಿದ್ದು.
ಮಳೆಯಾಶ್ರಿತವಾಗಿ ಕೃಷಿ ಮಾಡುತ್ತಿದ್ದ ಪುಟ್ಟೀರಮ್ಮ ಅವರಿಗೆ, ‘ಮಳೆ–ಬೆಳೆ’ ಹೊಂದಾಣಿಕೆ ಜ್ಞಾನವೂ ಕರಗತವಾಗಿತ್ತು. ‘ಇಂಥ ಸಮಯದಲ್ಲಿ ಈ ಬೆಳೆ ಬಿತ್ತಿದರೆ, ಇಂಥದ್ದೇ ಸಮಯಕ್ಕೆ ಮಳೆ ಬರುತ್ತದೆ. ಇದೇ ಕಾಲಕ್ಕೆ ಕೊಯ್ಲಿಗೆ’ ಎಂದು ಅಂದಾಜಿಸುವ ಜ್ಞಾನ ಪುಟ್ಟೀರಮ್ಮರಲ್ಲಿದೆ. ಯಾವ ಬೆಳೆ ಜೊತೆ, ಯಾವ ಬೆಳೆ ಹಾಕಬೇಕು, ಯಾವ ಬೆಳೆಯನ್ನು ಸಾಲಿನಲ್ಲಿ, ಯಾವ ಬೆಳೆಯನ್ನು ಅಂಚಿನಲ್ಲಿ ಹಾಕಬೇಕೆಂಬ ‘ಪಾರಂಪರಿಕ ಜ್ಞಾನ’ವಿದೆ. ಮುಂಗಾರಿಗೊಂದು, ಹಿಂಗಾರಿಗೊಂದು ‘ಸಾಲು ಬೆಳೆಯ ಸೂತ್ರ’ಗಳನ್ನು ಹೇಳುತ್ತಾರೆ.
‘ಮಡಿಲಲ್ಲಿ (ಸೀರೆ ಸೆರಗು) ನಾಲ್ಕೈದು ಭಾಗ ಮಾಡ್ಕೊಂಡು, ಒಂದ್ಕಡೆ ಜೋಳ, ಇನ್ನೊಂದ್ಕಡೆ ತೊಗರಿ, ಮತ್ತೊಂದ್ಕಡೀಗೆ ಅವರೆ, ಉದ್ದು, ಹೆಸರು ಕಾಳುಗಳ ಬೀಜಗಳನ್ನು ತುಂಬಿಕೊಂಡು ಹಾಡ್ತಾ ಹಾಡ್ತಾ ಅಕ್ಕಡಿ ಸಾಲು ಬಿತ್ತನೆ ಮಾಡುತ್ತಿದ್ವಿ. ಹತ್ ಸಾಲು ಜ್ವಾಳ, ಒಂದು ಸಾಲು ತಡಗುಣಿ, ಇನ್ನತ್ತಸಾಲು ಜ್ವಾಳ, ಒಂದು ಸಾಲು ತೊಗರಿ, ಇನ್ನತ್ತಸಾಲ ಜ್ವಾಳು, ಆಮಲೆ ಹಳ್ಳು, ತಡಗುಣಿ. ತಡಗುಣಿಗೆ ಹರಳು ಬೆರೆಸಿದರೆ, ಹರಳು ಮ್ಯಾಕೆ ಬೆಳೀತದೆ, ಅಡಿಯಲ್ಲಿ ತಡಗುಣಿ ಬಳ್ಳೀ ಹರಡ್ಕಾತ್ತಾದೆ’ ಎಂದು ತಾವು ಅನುಸುತ್ತಿದ್ದ ಬಿತ್ತನೆ ಪದ್ಧತಿಯ ಒಂದು ವಿಧಾನವನ್ನು ವಿವರಿಸುತ್ತಾರೆ ಪುಟ್ಟೀರಮ್ಮ.
‘ಇದನ್ನೆಲ್ಲ ಯಾರು ಕಲಿಸಿದ್ದು ನಿಮಗೆ’ ಅಂದರೆ, ಸಣ್ಣ ನಗೆಯೊಂದಿಗೆ ‘ಶಿವಾ’ ದಾರಿ ತೋರಿಸಿದ. ಹೆತ್ತಪ್ಪನ ಕಾಲದಿಂದಲೇ ಕಲಿತ್ತಿದ್ದಪ್ಪ. ಕೆಲಸ ಮಾಡ್ತಾ ಹೋದ್ರೆ ಭೂಮ್ತಾಯಿನೇ ಎಲ್ಲ ಕಲಿಸ್ತಾಳೆ’ ಎನ್ನುತ್ತಾ ತನ್ನ ಕಲಿತ ಜ್ಞಾನದ ಕ್ರೆಡಿಟ್ ಅನ್ನೂ ಪರಿಸರಕ್ಕೆ ನೀಡಿದರು.
‘ನನಗೆ ಜ್ವಾಳ ಬಿಡೋಕೆ ಕೊಡೋರು. ಎಲ್ಲರೂ ನಾಲ್ಕು ಏರಿಗೆ(ಸಾಲಿಗೆ) ಜ್ವಾಳ ಬಿಡ್ತಿದ್ದರು, ನಾನು ಐದು, ಆರು ಏರಿಗೆ ಜ್ವಾಳ ಬಿಡ್ತಿದ್ದೆ. ಈ ಪುಟ್ಟಕ್ಕ ಹೆಂಗೆ ಬಿಡ್ತಾಳೆ ಅಂತ ಎಲ್ಲ ಕೇಳ್ತಿದ್ದರು’ ಎಂದು ಬಿತ್ತನಾ ಕೌಶಲದ ‘ಶಕ್ತಿ‘ಯನ್ನು ಪುಟ್ಟೀರಮ್ಮ ತೆರೆದಿಟ್ಟರು.
‘ಇಷ್ಟೆಲ್ಲ ಬೆಳೆಯನ್ನು ಹೀಗೆ ಬೆಳೆಯಬೇಕು ಅಂತ ಯಾಕೆ ಎನ್ನಿಸಿತು. ಇಷ್ಟೊಂದು ಬೆಳೆಗಳನ್ನು ಏಕೆ ಬೆಳೆಯುತ್ತೀರಿ’ ಅಂತ ಕುತೂಹಲದಿಂದ ಪುಟ್ಟೀರಮ್ಮನಿಗೆ ಕೇಳಿದೆ. ಅದಕ್ಕವರು ‘ನಮ್ಮನೀಗೆ ಊಟಕ್ಕೆ ಏನೇನು ಬೇಕೋ, ನಾವು ಏನೇನು ತಿನ್ನುತ್ತೇವೋ ಅದೆಲ್ಲವನ್ನೂ ಹೊಲದಲ್ಲಿ ಬೆಳ್ಕೊತ್ತಿದ್ದಿವು. ಮುಂದಿನ ವರ್ಷಕ್ಕೆ ಬೀಜ ಇಟ್ಕೊಂಡು ಹೆಚ್ಚಾದ್ದನ್ನು ಮಾರ್ತಿದ್ದವು. ಬೆಳೆ ನಮ್ಗಷ್ಟೇ ಅಲ್ಲ, ನಮ್ ಹಸ, ಕರ, ಕುರಿ ಮೇಕೆಗೂ ಆಗುವಷ್ಟು ಬೆಳೆಯುತ್ತಿದ್ದವು. ಹತ್ ಬೆಳೆ ಬೆಳೆದರೆ, ಒಂದು ಹೋದ್ರೆ, ಒಂದು ಕೈ ಹಿಡಿತಾದಲ್ಲ’ ಎಂದು ವಿವರಿಸಿದರು. ಅವರ ಮಾತಿನಲ್ಲಿ ‘ಬಹು ಬೆಳೆ’ ಪದ್ಧತಿಯ ಮಹತ್ವದ ಜೊತೆಗೆ ಪ್ರಕೃತಿ- ಪರಿಸರದ ಸೂತ್ರಗಳನ್ನು ಅರಿತು ಬಾಳುವ ನಡೆಯೂ ಕಾಣುತ್ತಿತ್ತು.
ಬಿತ್ತನೆಯಷ್ಟೇ ಬೀಜವನ್ನು ಜೋಪಾನವಾಗಿ ಸಂಗ್ರಹಿಸಿಡುವುದು, ಬೇರೆಯವರಿಗೆ ಹಂಚುವುದು ಪುಟ್ಟೀರಮ್ಮರ ಅಭ್ಯಾಸ. ಬೀಜಗಳ ಮಿಡಿತಕ್ಕೆ ತುಡಿಯುವ ಮನಸ್ಸು ಅವರದ್ದು. ಸಮುದಾಯದೊಂದಿಗೆ ಕಲಿತ ಜ್ಞಾನವನ್ನು, ಆ ಸಮುದಾಯಕ್ಕೆ ಹಂಚುವ ವಿಶಾಲ ಮನಸ್ಸು ಕೂಡ.
ಬೆರೆಕೆ ಸೊಪ್ಪಿನ ಅಗಾಧ ಜ್ಞಾನ..
ಪುಟ್ಟೀರಮ್ಮಗೆ ಸೊಪ್ಪುಗಳ ಬಗ್ಗೆ ಅಗಾಧ ಜ್ಞಾನವಿದೆ. ‘ಕಾಡಲ್ಲಿ ಸಿಕ್ಕೋದು ಬೆರೆಕೆಸೊಪ್ಪು. ಬೆರೆಕೆ ಸೊಪ್ಪು ಪ್ರಕೃತಿ ಕೊಟ್ಟ ಆಹಾರ. ನಮ್ಮಲ್ಲಿ ನೂರೊಂದು ಸೊಪ್ಪುಗಳಿವೆ. ನಲ್ವತ್ತು ಸೊಪ್ಪಗಳನ್ನು ಹೊಲದಲ್ಲಿ, ಬೇಲಿಮೇಲೆ ನಾವೇ ಬೆಳೀತಿದ್ದೆವು. ಅರವತ್ತು ಸೊಪ್ಪುಗಳನ್ನು ಕಾಡ್ನಿಂದ ತರ್ತಿದ್ದವು. ಸಂಗಡಗಾತಿಯರೆಲ್ಲ ಕಾಡ್ಗೋಗಿ, ಬೆರೆಕೆ ಸೊಪ್ಪು ತಂದು, ನಿಂಗ್ಯಾವುದು ಸಿಕ್ತು, ನಂಗ್ಯಾವುದು ಸಿಕ್ತು ಅಂತ ಅಂತ ಹಂಚ್ಕೊಳ್ತಿದ್ದಿವಿ’ ಅಂತ ನೆನಪಿಸಿಕೊಳ್ಳುತ್ತಾರೆ ಪುಟ್ಟೀರಮ್ಮ.
ಮಹಾಭಾರತದ ಕಾಲದಿಂದಲೂ ಬೆರೆಕೆ ಸೊಪ್ಪು ಕೊಯ್ಯುವ ಪದ್ಧತಿ ಇತ್ತು ಎಂಬ ನಂಬಿಕೆ ಪುಟ್ಟೀರಮ್ಮ ಅವರದ್ದು. ‘ಬೆರೆಕೆ ಸೊಪ್ಪಿನ ಗಂಜಿ ಮಾಡಿ ಐವರು ಪಾಂಡವರಿಗೆ ಕೊಂತನ ದೇವಿ ಊಟಕ್ಕೆ ಇಕ್ಕುತ್ತಿದ್ದಳಂತೆ’ ಎಂದು ಹೇಳುತ್ತಾ ಈ ನೆಲಮೂಲ ಜ್ಞಾನವನ್ನು ಪುರಾಣದೊಂದಿಗೆ ಬೆರೆಸುತ್ತಾರೆ ಪುಟ್ಟೀರಮ್ಮ.
ನೂರೊಂದು ಸೊಪ್ಪುಗಳು
‘ನೂರೊಂದು ಸೊಪ್ಪು ಗೊತ್ತು ಅಂತೀರಿ, ಹೆಸರು ನೆನಪಿದಾವಾ ? ಅಂತ ಕೇಳಿದರೆ, ‘ಯಾಕೆ ನೆನಪಿಲ್ಲ, ಹೇಳ್ತೀನಿ ಬರ್ಕಳ್ಳಿ’ ಎಂದು ಹುಕುಂ ಮಾಡುತ್ತಾರೆ. ಕೊಟ್ಟನ ಗುರಜೆ ಸೊಪ್ಪು, ಕಾಡು ಗುರಜೆ, ಕರಿಕಡ್ಡಿ, ಹಿಟ್ನಕುಡಿ ಸೊಪ್ಪು, ಕಿಲ್ಕೀರೆ, ಬದ್ಗೀರೆ, ಮಳ್ಳಿ ಸೊಪ್ಪು, ಕಾರ ಚಿಗುರು, ಕನ್ನ ಚಿಗುರು, ಕಲ್ಗುರ್ಜೆ, ಎತ್ತಿನ ಕುರಿ, ಬದ್ಲಗೆರೆ, ಗೊದ್ಲಗೆರೆ, ಹಾಲೆಸೊಪ್ಪು, ಬೆಳೆಕಾಳು ಸೊಪ್ಪು, ಕಾಡ್ಗಳಲೆ ಸೊಪ್ಪು, ಜವಣದ ಸೊಪ್ಪ, ಕನ್ನೆ ಸೊಪ್ಪು, ಕಿರಿ ನಗ್ಗಲಿ, ಬೇಲಿ ಮೇಲೆ ಹುಟ್ಟೋದು ಕರಿಬಗರೋಟೆ, ಕೆಂಪು ಬಗರೋಟೆ, ಗಣಕೆ ಸೊಪ್ಪು, ಕೆಂಪು ಗಣಕ, ವಿಷ್ಣುಕಾಂತಿ ಸೊಪ್ಪು, ಸೊಂಡೆಸೊಪ್ಪು.. ಎನ್ನುತ್ತಾ ಸೊಪ್ಪುಗಳ ಹೆಸರನ್ನು ನೆನಪಿನಿಂದ ಹೆಕ್ಕಿ ಹೆಕ್ಕಿ ತೆರೆದಿಟ್ಟರು. ತೊಂಬತ್ತರ ಇಳಿವಯಸ್ಸಿನಲ್ಲಿ ಅವರಿಗೆ ಕಣ್ಣು ಕಾಣುತ್ತಿಲ್ಲ. ನಡೆದಾಡುವುದಕ್ಕೂ ಆಗುತ್ತಿಲ್ಲ. ಆದರೆ, ಸೊಪ್ಪುಗಳ ಹೆಸರನ್ನೂ ಮಾತ್ರ ಮರೆತಿಲ್ಲ !
‘ಹೋದ ಕಣ್ಣು ಬರಿಸುತ್ತ ಒನೆಗೊನೆ ಸೊಪ್ಪು, ಇದ್ಕಣ್ಣು ಹೋಗಿಸ್ತ ಕೊಟ್ನಗುರ್ಜೆ ಸೊಪ್ಪು...’ ಎಂದು ಸೊಪ್ಪಿನ ಔಷಧ ಗುಣಗಳನ್ನು ಗಾದೆ ಮಾತುಗಳಲ್ಲಿ ಹೇಳುತ್ತಾರೆ ಪುಟ್ಟೀರಮ್ಮ. ‘ಸೊಸೆ, ತಾನು ಹೊನೆಗೊನೆ ಸೊಪ್ಪಿನ ಕುಡಿಯನ್ನು ತಿಂದು, ನನ್ನಂಗೆ ಕಣ್ ಕಾಣ್ದ ಮುದ್ಕಿಗೆ ಕಡ್ಡಿ ಬೇಯ್ಸಿ ಹಾಕ್ತಿದ್ದಳಂತೆ. ಹೊನಗೊನೆ ಸೊಪ್ಪಿನ ಕಡ್ಡಿ ತಿಂದು ತಿಂದು, ಮುದ್ಕಿಗೆ ಕಣ್ ಬಂತಂತೆ’– ಎಂದು ಒನಗೊನೆ ಸೊಪ್ಪಿನ ‘ಆಹಾರಾರೋಗ್ಯ’ ಗುಣವನ್ನು ಅವರು ಎರಡು ಸಾಲಿನ ಕಥೆಯಲ್ಲಿ ತೆರೆದಿಡುತ್ತಾರೆ. ವಿಷ್ಣುಕಾಂತಿ ಸೊಪ್ಪನ್ನು ಒಣಗಿಸಬಿಟ್ಟು ಪುಡಿಮಾಡಿ, ಸೊಪ್ಲನ ಪುಡಿಯನ್ನು ದೋಸೆಗೆ ಹಾಕ್ಕೊಂಡು ತಿನ್ನಬಹುದು. ನಾನು ಈ ಸೊಪ್ಪಿನ ಪುಡಿ ಸಿಕ್ಕರೆ, ದೋಸೆಗೆ ಉದ್ದಿನ ಬೇಳೆನೇ ಹಾಕ್ತಿರಲಿಲ್ಲ‘ ಎಂದು ಸೊಪ್ಪಿನ ‘ಮೌಲ್ಯವರ್ಧಿತ’ ಆಹಾರದ ರೆಸಿಪಿಯನ್ನು ತೆರದಿಡುತ್ತಾರೆ.
‘ಅಮ್ಮಾವ್ರು ಹೊಲದಿಂದ ಸೊಪ್ಪಿನ ಕುಡಿಯಷ್ಟೇ ಕೊಯ್ದುಕೊಂಡು ಬರ್ತಿದ್ದರು. ಮಳೆ ಬಂದ ಮೇಲೆ ಮತ್ತೆ ಸೊಪ್ಪು ಚಿಗುರುತ್ತಿದ್ದವು. ಈಗೀಗ ಕಳೆ ನಾಶ್ಕ ಬಂದು ಸುಮಾರು ಸೊಪ್ಗಳು ನಾಶವಾದವು’ ಅಂತ ಪುಟ್ಟೀರಮ್ಮನ ಸೊಪ್ಪಿನ ಕೊಯ್ಲಿನ ಜ್ಞಾನವನ್ನು ಮಗ ಶಿವಲಿಂಗೇಗೌಡರು ವಿವರಿಸಿದರು. ಗೌಡರು, ತನ್ನ ತಾಯಿ ಅನುಸರಿಸುತ್ತಿದ್ದ ಕೃಷಿ ಪದ್ಧತಿಗಳನ್ನು ಈ ಕಾಲದ ಕೃಷಿಕರಿಗೂ ದಾಟಿಸುವ ಪ್ರಯತ್ನದಲ್ಲಿದ್ದಾರೆ.
ಪುಟ್ಟೀರಮ್ಮಅವರ ಈ ‘ಜ್ಞಾನ‘ ಸಾಧನೆ ಗುರುತಿಸಿ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಅದರಲ್ಲಿ ‘ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವೆಂಕಟರಾಮಯ್ಯ ದತ್ತಿ’ ಪುರಸ್ಕಾರ ಪ್ರಮುಖವಾದದ್ದು. ಈಗ ‘ಕರ್ನಾಟಕ ಸುವರ್ಣ ಮಹೋತ್ಸವ’ದ ಸಂದರ್ಭದಲ್ಲಿ ರಾಜ್ಯ ಸರ್ಕಾರ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ ನೀಡಿ ಗೌರವಿಸಿದೆ. ಇದೊಂದು ಅಭಿನಂದನೀಯ ಕಾರ್ಯ.
ಒಂದೆಡೆ ಹವಾಮಾನ ವೈಪರೀತ್ಯದ ‘ಬಿಸಿ’ಯಲ್ಲಿ ಕೃಷಿ ಕ್ಷೇತ್ರ ನಲುಗುತ್ತಿದೆ. ಮತ್ತೊಂದೆಡೆ ಒಣಭೂಮಿ ಕೃಷಿ, ಅಕ್ಕಡಿ ಬೇಸಾಯ ಹಾಗೂ ಬೆರಕೆ ಸೊಪ್ಪುಗಳು ಒಕ್ಕಲು ವ್ಯವಸ್ಥೆಯಿಂದ ಕಣ್ಮರೆಯಾಗುತ್ತಿವೆ. ಈ ವಿಷಮ ಕಾಲಘಟ್ಟದಲ್ಲಿ ಪುಟ್ಟೀರಮ್ಮನಂತವರ ದೇಸಿ ಕೃಷಿ ಜ್ಞಾನ ಹಾಗೂ ಅದರ ಅಳವಡಿಕೆ ಅತ್ಯವಶ್ಯ.
‘ಪುಟ್ಟೀರಮ್ಮನ ಪುರಾಣ’
ಬೆಂಗಳೂರಿನ ‘ಇಕ್ರಾ’ ಸಂಸ್ಥೆ ಪುಟ್ಟೀರಮ್ಮನವರ ದೇಸಿ ಕೃಷಿ ಪದ್ಧತಿಗಳನ್ನು ‘ಪುಟ್ಟೀರಮ್ಮನ ಪುರಾಣ’ ಕೃತಿಯಲ್ಲಿ ದಾಖಲಿಸಿದೆ. ಸಂಸ್ಥೆಯ ವಿ.ಗಾಯತ್ರಿಯವರು, ಪುಟ್ಟಿರಮ್ಮನವರ ಮಾತುಗಳನ್ನು ಸಂದರ್ಶನದ ರೂಪದಲ್ಲಿ ದಾಖಲಿಸಿದ್ದಾರೆ. ಪುಸ್ತಕದ ಬೆಲೆ: ₹80 ಸಂಪರ್ಕ: 080–41626254.
ಇಂದು ಬೆಂಗಳೂರಿನಲ್ಲಿ ಪುಟ್ಟೀರಮ್ಮ..
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಗೊಟ್ಟಿಗೆರೆಯ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ನಡೆಯಲಿರುವ ‘ರಾಗಿ ಕಣ’ ಸಂತೆಯಲ್ಲಿ ಭಾನುವಾರ(ಡಿ.8), ಬೆಳಿಗ್ಗೆ 11 ಗಂಟೆಗೆ ಪುಟ್ಟೀರಮ್ಮನವರ ‘ನೂರೊಂದು ಸೊಪ್ಪುಗಳ’ ಮಾತುಕತೆ ಆಯೋಜಿಸಲಾಗಿದೆ. ಪುಟ್ಟೀರಮ್ಮನ ಪುರಾಣ ಪುಸ್ತಕದ ಲೇಖಕಿ ವಿ.ಗಾಯತ್ರಿ ಅವರು ಮಾತುಕತೆ ನಡೆಸಿಕೊಡಲಿದ್ದಾರೆ.
ಎರಡೂ ಕೈಗಳಲ್ಲಿ ಸಾಲು ಬಿತ್ತನೆ ಮಾಡುವ ಪುಟ್ಟೀರಮ್ಮನ ಶೈಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.