ADVERTISEMENT

ಪೆನ್ಸಿಲ್ ಪ್ಲಾಂಟ್ಸ್‌...!

ಚಂದ್ರಹಾಸ ಕೋಟೆಕಾರ್
Published 1 ಅಕ್ಟೋಬರ್ 2018, 19:30 IST
Last Updated 1 ಅಕ್ಟೋಬರ್ 2018, 19:30 IST
ನಗರದ ಜೆಕೆ ಪೇಪರ್‌‘ಮರಳಿ ಮಣ್ಣಿಗೆ’ಹಸಿರು ಜಾಗೃತಿ ಅಭಿಯಾನದಲ್ಲಿ ಶಾಲಾ ಮಕ್ಕಳ ಪಾಲು/ಪ್ರಜಾವಾಣಿ ಚಿತ್ರ ಕೋಟೆಕಾರ್‌
ನಗರದ ಜೆಕೆ ಪೇಪರ್‌‘ಮರಳಿ ಮಣ್ಣಿಗೆ’ಹಸಿರು ಜಾಗೃತಿ ಅಭಿಯಾನದಲ್ಲಿ ಶಾಲಾ ಮಕ್ಕಳ ಪಾಲು/ಪ್ರಜಾವಾಣಿ ಚಿತ್ರ ಕೋಟೆಕಾರ್‌   

ಪೆನ್ಸಿಲ್‌ನ ಹಿಂದೆ ರಬ್ಬರ್ ಸಿಕ್ಕಿಸುತ್ತಾರೆ. ಬರೆದದ್ದು ತಪ್ಪಾದರೆ, ತಕ್ಷಣ ಅಳಿಸುವುದಕ್ಕೆ ಅನುಕೂಲವಾಗಲಿ ಎಂದು. ಈಗ ಆ ರಬ್ಬರ್ ಜಾಗದಲ್ಲಿ ಹೂವಿನ ಗಿಡಗಳ ಬೀಜಗಳನ್ನು ಸೇರಿಸಿದ್ದಾರೆ. ಮನುಷ್ಯ ಮಾಡಿರುವ ಪರಿಸರವನ್ನು ಮಾಲಿನ್ಯ ಎಂಬ ತಪ್ಪನ್ನು ಸರಿಪಡಿಸುವುದಕ್ಕಾಗಿ..!

ಒಂದು ರೀತಿ ವಿಚಿತ್ರ ಎನ್ನಿಸುತ್ತದೆ ಅಲ್ಲವಾ ? ವಿಚಿತ್ರ ಎನ್ನಿಸಿದರೂ ಇದು ನಿಜ. ಪೆನ್ಸಿಲ್ ಹಿಂಭಾಗದಲ್ಲಿ ಹೂವು, ತುಳಸಿ ಗಿಡಗಳ ಬೀಜಗಳನ್ನಿಟ್ಟು ಪ್ಯಾಕ್ ಮಾಡಿ ಮಕ್ಕಳಿಗೆ ವಿತರಿಸಲಾಗುತ್ತಿದೆ. ಪೆನ್ಸಿಲ್ ಬರೆದು ಮುಗಿದ ಮೇಲೆ, ಬೀಜಗಳನ್ನು ಕುಂಡಗಳಲ್ಲಿ ಹಾಕಿದರೆ, ಅವು ಮೊಳೆತು, ಬೆಳೆದು ಹೂವು ಬಿಡುತ್ತವೆ. ಅಂದ ಹಾಗೆ, ಈ ಪೆನ್ಸಿಲ್‌ಗಳು ಮಣ್ಣಿನಲ್ಲಿ ಕರಗುತ್ತವೆ(ಬಯೋ ಡಿಗ್ರೇಡಬಲ್). ಹಾಗಾಗಿ ಬೀಜಸಹಿತ ಪೆನ್ಸಿಲ್ ಅನ್ನು ಕುಂಡದಲ್ಲಿ ಊರಿದರೂ, ಬೀಜಗಳು ಮೊಳೆಯುತ್ತವೆ.

ಬೆಂಗಳೂರಿನ ಜೆಕೆ ಪೇಪರ್ ಕಂಪನಿ ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಇಂಥದ್ದೊಂದು ಅಭಿಯಾನ ಆರಂಭಿಸಿದೆ. ಇತ್ತೀಚೆಗೆ ಇಲ್ಲಿನ ಪ್ರೆಸ್‌ ಭವನ್ ಶಾಲೆಯಲ್ಲಿ ಮಕ್ಕಳಿಗೆ ಇಂಥ ಪರಿಸರ ಸ್ನೇಹಿ ಪೆನ್ಸಿಲ್‌ಗಳನ್ನು ಸಂಸ್ಥೆ ವಿತರಿಸಿತು. ಕೆಲವು ಮಕ್ಕಳು ಪೆನ್ಸಿಲ್ ಬಳಸಿ ನಂತರ ಕೊನೆಯಲ್ಲಿ ಬೀಜಗಳಿದ್ದ ಭಾಗವನ್ನು ಕುಂಡಗಳಿಗೆ ಊರಿ, ಸಂಭ್ರಮಿಸಿದರು.

ADVERTISEMENT

ಪೋಸ್ಟ್‌ ಕಾರ್ಡ್‌ನಲ್ಲಿ ಬೀಜಗಳು

ಪೆನ್ಸಿಲ್ ಮಾತ್ರವಲ್ಲ, ಪೋಸ್ಟ್‌ ಕಾರ್ಡ್‌ನಲ್ಲೂ ಇಂಥ ಹೂವಿನ ಗಿಡಗಳ ಬೀಜಗಳನ್ನಿಟ್ಟು, ಅದನ್ನು ಶಾಲಾ ಮಕ್ಕಳಿಗೆ ವಿತರಿಸಿತ್ತು ಈ ಕಂಪನಿ. ಆ ಕಾರ್ಡ್‌ ಅನ್ನು ಶಾಲಾ ಮಕ್ಕಳಿಗಾಗಿಯೇ ತಯಾರಿಸಿದೆ. ಮಕ್ಕಳು ’ಈ ಕಾರ್ಡ್‌ನಲ್ಲಿ ಹೂವಿನ ಗಿಡಗಳ ಬೀಜಗಳಿವೆ. ಇವುಗಳನ್ನು ನಿಮ್ಮ ಮನೆಯಲ್ಲಿ ಬಿತ್ತಿ, ಗಿಡ ಬೆಳೆಸಿ, ಪರಿಸರ ಉಳಿಸಿ’ ಎಂದು ಕಾರ್ಡ್‌ ಮೇಲೆ ಬರೆಯುವ ಮೂಲಕ ’ಪರಿಸರ ಜಾಗೃತಿ’ಯನ್ನು ಬೇರೆಡೆಗೂ ಪಸರಿಸಬೇಕು ಎಂಬುದು ಈ ಅಭಿಯಾನದ ಉದ್ದೇಶವಾಗಿದೆ ಎನ್ನುತ್ತಾರೆ ಸಂಸ್ಥೆಯವರು. ಈ ಕಾರ್ಡ್ ಸ್ವೀಕರಿಸಿದವರು, ಅದನ್ನು ಕುಂಡದಲ್ಲೋ ಅಥವಾ ತೇವಾಂಶವಿರುವ ಮಣ್ಣಿನಲ್ಲೋ ಹಾಕಿದರೆ ಕಾರ್ಡ್‌ನಲ್ಲಿರುವ ಎರಡು, ಮೂರು ದಿನಗಳಲ್ಲಿ ಬೀಜ ಮೊಳಕೆಯೊಡೆಯುತ್ತವೆ.

ಪೆನ್ಸಿಲ್‌ ಮತ್ತು ಪೋಸ್ಟ್‌ ಕಾರ್ಡ್‌ಗಳಲ್ಲಿ ಎರಡೆರಡು ತುಳಸಿ, ಚೆಂಡು ಹೂವಿನ ಬೀಜಗಳಿರುತ್ತವೆ. ಇದರಲ್ಲಿ ಟೊಮೆಟೊ ಗಿಡದ ಬೀಜಗಳಿರುತ್ತವೆ. ಮಕ್ಕಳು ಪೆನ್ಸಿಲ್‌ ಬಳಸಿದ ನಂತರ ಕೊನೆಯಲ್ಲಿರುವ ಬೀಜಗಳನ್ನು ಕುಂಡಗಳಲ್ಲಿ ನಾಟಿ ಮಾಡಬೇಕು ಎಂದು ಆಯೋಜಕರು ಮಕ್ಕಳಿಗೆ ಸಲಹೆ ನೀಡುತ್ತಾರೆ.

’ಇದು ಬೀಜಗಳಿರುವ ಪೆನ್ಸಿಲ್‌ ಅನ್ನು ಕುಂಡದಲ್ಲಿ ಊರಿದ್ದೇನೆ. ಇದು ಹಣ್ಣು ಬಿಡುತ್ತೋ, ಹೂವು ಬಿಡುತ್ತೋ.. ನೋಡಬೇಕು. ನನಗಂತೂ ಕುತೂಹಲವಿದೆ’ ಎನ್ನುತ್ತಾಳೆ ವಿದ್ಯಾರ್ಥಿನಿ ಮಧುಮಿತಾ. ‘ಈ ಪರಿಸರ ಸ್ನೇಹಿ ಪೆನ್ಸಿಲ್‌ನ ತುದಿಯಲ್ಲಿರುವ ಬೀಜವನ್ನು ಮಣ್ಣಿನಲ್ಲಿ ಊರಿ, ನೀರು ಹಾಕಿದ್ದೇನೆ. ಇದು ಮೊಳಕೆಯೊಡೆದು ಗಿಡವಾಗುತ್ತವೆ. ಗಿಡ ಬೆಳೆದು ಹೂವು ಬಿಟ್ಟ ಮೇಲೆ, ಆ ಖುಷಿಯೇ ಬೇರೆ’ ಎಂದು ವಿದ್ಯಾರ್ಥಿ ವಿದ್ಯಾಸಾಗರ ತನ್ನೊಳಗಿನ ಕುತೂಹಲವನ್ನು ಹಂಚಿಕೊಂಡರು.

ಮುಂದುವರಿಯುವ ಅಭಿಯಾನ

ಕಾಗದ ಉತ್ಪಾದನೆ ಮತ್ತು ಪುನರ್ ಬಳಕೆ ಪದ್ಧತಿಗಳ ಕುರಿತು ಜನಜಾಗೃತಿ ಮೂಡಿಸುತ್ತಿರುವ ಸಂಸ್ಥೆ, ’ಮರಳಿ ಮಣ್ಣಿಗೆ’ ಎಂಬ ಅಭಿಯಾನ ಆರಂಭಿಸಿದೆ. ಇದರ ಭಾಗವಾಗಿಯೇ ಈ ಪೆನ್ಸಿಲ್ ಪ್ಲಾಂಟ್ ಯೋಜನೆ. ಇದರ ಮೂಲಕ ಹತ್ತು ಸಾವಿರ ಶಾಲಾ ಮಕ್ಕಳನ್ನು ತಲುಪುವ ಗುರಿ ಇಟ್ಟುಕೊಂಡಿದೆ.

‘ನಗರಗಳಲ್ಲಿರುವ ಶಾಲಾ ಮಕ್ಕಳಿಗೆ ಗಿಡ ಮರಗಳ ಮಹತ್ವವನ್ನು ಮನದಟ್ಟು ಮಾಡಬೇಕು. ಈ ನಿಟ್ಟಿನಲ್ಲಿ ಅಭಿಯಾನ ಆರಂಭಿಸಿದ್ದೇವೆ. ಅದು ಖಂಡಿತಾ ಸಾಕಾರಗೊಳ್ಳಲಿದೆ’ ಎಂದು ಜೆಕೆ ಪೇಪರ್‌ ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕ ದೇವಶೀಶ್‌ ಗಂಗೂಲಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕಂಪನಿ ಮುಂದಿನ ದಿನಗಳಲ್ಲಿ ಬೆಂಗಳೂರಿನ ಬಡಾವಣೆಗಳ ಮನೆಗಳಿಗೆ ತೆರಳಿ 20 ಸಾವಿರ ಬೀಜಗಳನ್ನು ವಿತರಿಸುವ ಯೋಜನೆ ಹಾಕಿಕೊಂಡಿದೆ. ನಗರದ ಪ್ರತಿಷ್ಟಿತ ಶಾಲೆಗಳಿಗೆ ಉಚಿತವಾಗಿ ಗಿಡಗಳನ್ನು ವಿತರಿಸುವ ಜತೆಗೆ, ಶಾಲಾ ಆವರಣದಲ್ಲಿ ಕಡ್ಡಾಯವಾಗಿ ಗಿಡಗಳನ್ನು ಬೆಳೆಸುವುದು ಜಾಗೃತಿ ಅಭಿಯಾನದ ಭಾಗವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.