ADVERTISEMENT

ಹಳೆ ಬೀಜ ಹೊಸ ತಂತ್ರ ಕೂಡಿರಲು ಕೃಷಿ ಸೊಗಸು

ಅಮೃತೇಶ್ವರಿ ಬಿ.
Published 17 ಡಿಸೆಂಬರ್ 2024, 23:55 IST
Last Updated 17 ಡಿಸೆಂಬರ್ 2024, 23:55 IST
<div class="paragraphs"><p>ಕೃಷಿ ಸೊಗಸು</p></div>

ಕೃಷಿ ಸೊಗಸು

   

ಸಸ್ಯಗಳಲ್ಲಿನ ಜೈವಿಕ ಹಾಗೂ ಆನುವಂಶಿಕ ವೈವಿಧ್ಯವನ್ನು ಕಾಪಾಡಿಕೊಳ್ಳಲು ಅವುಗಳ ಬೀಜಗಳನ್ನು ಭವಿಷ್ಯಕ್ಕೆಂದು ಸಂರಕ್ಷಿಸುವುದು ಹಳೆಯ ಉಪಾಯ. ಇದನ್ನೇ ‘ಸೀಡ್‌ ಬ್ಯಾಂಕ್‌’ ಎನ್ನುತ್ತೇವೆ. ಬೀಜಗಳನ್ನು ಹೀಗೆ ಸಂರಕ್ಷಿಸಿಕೊಳ್ಳುವುದರಿಂದ ಬಹಳ ಕಾಲದವರೆಗೆ ಯಾವುದೇ ಜಾತಿಯ ಸಸ್ಯವು ನಶಿಸಿ ಹೋಗದಂತೆ ಉಳಿಸಿಕೊಳ್ಳಬಹುದು. ಜೊತೆಗೆ ನಮಗೆ ಬೇಕಾದ ಸಸ್ಯದ ತಳಿಗಳನ್ನು ಕಸಿ ಮಾಡಿ ಹೊಸದಾದ ಸಸ್ಯಜಾತಿಗಳನ್ನು ಸೃಷ್ಟಿಸಿಕೊಳ್ಳಬಹುದು.

ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆಲ್ಲಾ ಇನ್ನೂ ಬೇರೆಬೇರೆ ರೀತಿಯಲ್ಲಿ ಸಂರಕ್ಷಿತ ತಳಿಯ ಬೀಜಗಳನ್ನು ಬಳಸಿಕೊಳ್ಳಬಹುದು. ಆದರೆ ಇಲ್ಲೊಂದು ಸಮಸ್ಯೆಯಿದೆ. ಈ ವಿಧಾನದಿಂದ ಎಷ್ಟೋ ವರ್ಷಗಳ ಹಳೆಯ ಬೀಜಗಳನ್ನೇನೊ ಉಳಿಸಿಕೊಂಡುಬಿಡುತ್ತೇವೆ. ಆದರೆ ಬೀಜಗಳು ಹಳೆಯದಾದಷ್ಟೂ ಇವುಗಳು ಮೊಳಕೆಯೊಡೆಯುವ ವೇಗವೂ ಕಡಿಮೆಯಾಗುತ್ತದಂತೆ. ಬೀಜಗಳಲ್ಲಿನ ಚೈತ್ಯನ್ಯವೂ ಕುಸಿಯುತ್ತದಂತೆ. ಇದರಿಂದ ಕೃಷಿವಲಯದಲ್ಲಿನ ಉತ್ಪಾದಕತೆಯ ಮೇಲೆ ಪರಿಣಾಮವಾಗುತ್ತದೆ. ಇದು ಆರ್ಥಿಕ ನಷ್ವ ಮಾತ್ರವಲ್ಲದೆ,  ಆನುವಂಶಿಕ ವೈವಿಧ್ಯವನ್ನು ಕಾಪಾಡಬೇಕೆನ್ನುವ ಬೀಜಬ್ಯಾಂಕುಗಳ ಪರಿಶ್ರಮವನ್ನೂ ವ್ಯರ್ಥವಾಗಿಸಿಬಿಡುತ್ತದೆ. ಇವರ ಪ್ರಯತ್ನವನ್ನು ಸಫಲವಾಗಿಸಲೆಂದೆ ಅರ್ಕನ್ಸಾಸ್‌ ವಿಶ್ವವಿದ್ಯಾಲಯದ ಸಂಶೋಧಕರಾದ ಡಾ. ಜುನ್‌ ಝೂ ಮತ್ತು ಸಂಗಡಿಗರು, ಸುಸ್ಥಿರವಾದ ಮತ್ತು ಅಗ್ಗದ ಪರಿಹಾರವೊಂದನ್ನು ಪತ್ತೆಮಾಡಿದ್ದಾರಂತೆ. ಅದುವೇ ‘ಕೊರೊನಾ ‌ಡೈಎಲೆಕ್ಟ್ರಿಕ್ ಬ್ಯಾರಿಯರ್‌ ಡಿಸ್ಚಾರ್ಜ್‌ ಮೈಕ್ರೊರಿಯಾಕ್ಟರ್‌’ ಎನ್ನುವ ಸಾಧನ (Solar Powered Corona Dielectric Barrier Discharge Microreactor). ಇದು ಹಳೆಯ ಬೀಜಗಳನ್ನು ಪುನಃಶ್ಚೇತನಗೊಳಿಸಿ ಆರೋಗ್ಯಕರವಾಗಿ ಮೊಳಕೆಯೊಡೆಯುವುದನ್ನು ಉತ್ತೇಜಿಸುತ್ತದೆ. ಈ ವರದಿಯನ್ನು ಸಂಶೋಧನೆಯನ್ನು ಮೊನ್ನೆ ‘ಫ್ರಂಟಿಯರ್ಸ್ ಆಫ್ ಅಗ್ರಿಕಲ್ಚರಲ್‌ ಸೈನ್ಸ್‌ ಅ್ಯಂಡ್‌ ಎಂಜಿನಿಯರಿಂಗ್‌’ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

ADVERTISEMENT

ಡಾ. ಜುನ್‌ ಮತ್ತು ಸಂಗಡಿಗರು ವಿನ್ಯಾಸ ಮಾಡಿರುವ ಹೊಸ ಸಾಧನದಲ್ಲಿ, ಎರಡು ಎಲೆಕ್ಟ್ರೋಡುಗಳಿರುತ್ತವೆ. ಇವುಗಳ ನಡುವೆ ಹೆಚ್ಚಿನ ವೋಲ್ಟೇಜಿನ ಎ.ಸಿ ವಿದ್ಯುತ್ತನ್ನು‌ ಹರಿಸಲಾಗುತ್ತದೆ. ಆಗ ದಟ್ಟವಾದ ಪ್ಲಾಸ್ಮಾ ಉತ್ಪಾದನೆಯಾಗುತ್ತದೆ. ‘ಪ್ಲಾಸ್ಮಾ’ ಎನ್ನುವುದು ಘನ, ದ್ರವ, ಅನಿಲ ಇವುಗಳ ನಂತರದ ನಾಲ್ಕನೇ ಸ್ಥಿತಿ. ಹೆಚ್ಚಿದ ವೋಲ್ಟೇಜಿನ ವಿದ್ಯುತ್‌ ಹರಿಯುತ್ತಿದ್ದಂತೆ ಈ ಪ್ಲಾಸ್ಮಾವು ಸೌರಶಕ್ತಿಯನ್ನು ಬಳಸಿಕೊಂಡು ನೀರನ್ನು ಸಕ್ರಿಯಗೊಳಿಸುತ್ತದೆ. ಈ ನವೀನ ವ್ಯವಸ್ಥೆಯು ಬೀಜಕ್ಕೆ ಮೊಳಕೆಯೊಡೆಯಲು ಸೂಕ್ತವಾದ ರಾಸಾಯನಿಕ ಹಾಗೂ ಜೈವಿಕ ವಾತಾವರಣವನ್ನು ಒದಗಿಸುತ್ತದೆಯಂತೆ. ಈ ಪಾರಿಸರಿಕ ಅಂಶಗಳನ್ನು ಖಚಿತಪಡಿಸಿಕೊಂಡ ನಂತರ ಈ ಸಾಧನವನ್ನು ಪರೀಕ್ಷೆಗೊಳಪಡಿಸಿದ್ದಾರೆ. 23 ವರ್ಷಗಳಷ್ಟು ಹಳೆಯದಾದ ಸ್ಪಿನಾಚ್‌ (ಪಾಲಾಕ್)‌ ಬೀಜಗಳನ್ನು ಈ ಸಾಧನವನ್ನು ಬಳಸಿಕೊಂಡು ಮೊಳಕೆಯೊಡೆಸಿ ನೋಡಿದ್ದಾರೆ. ಜೊತೆಯಲ್ಲೇ, ಸಾಮಾನ್ಯವಾಗಿ ಬೀಜವನ್ನು ಮೊಳೆಸುವ ವಿಧಾನದೊಂದಿಗೂ ಹೋಲಿಸಿ ನೋಡಿದ್ದಾರಂತೆ. ಅದೃಷ್ಟವಶಾತ್ ಪ್ಲಾಸ್ಮಾದಿಂದ ಸಕ್ರಿಯಗೊಂಡ ನೀರನ್ನು ಬಳಸಿ ಮೊಳೆಸಿದ ಬೀಜಗಳಲ್ಲಿ ಮೊಳಕೆಯೊಡೆಯುವ ಪ್ರಮಾಣ ಪ್ರತಶತ 135ರಷ್ಟಿದ್ದು, ಬೆಳವಣಿಗೆಯ ಪ್ರಮಾಣವೂ ಉತ್ತಮವಾಗಿತ್ತಂತೆ.‌
ಈ ಯಶಸ್ಸಿಗೆ ಕಾರಣ ಪ್ಲಾಸ್ಮಾದಿಂದ ಸಕ್ರಿಯಗೊಂಡ ನೀರಿನಿಂದಾಗುವ ಜೀವರಾಸಾಯನಿಕ ಮಾರ್ಪಾಡು ಎನ್ನುತ್ತಾರೆ, ಸಂಶೋಧಕರು.

ಒಂದು ಬೀಜವು ಮೊಳೆಯಬೇಕಾದರೆ ನೀರು-ಮಣ್ಣಿನಲ್ಲಿನ ಕ್ಷಾರೀಯ ಗುಣ, ನೈಟ್ರೇಟು ಮಟ್ಟ, ನೀರಿನ‌ ಎಲೆಕ್ಟ್ರಾನುಗಳನ್ನು ಕೊಡುಕೊಳ್ಳುವ ಸಾಮರ್ಥ್ಯ, (ಆಕ್ಸಿಡೇಷನ್‌ ರಿಡಕ್ಷನ್‌ ಪೊಟೆನ್ಷಿಯಲ್) ಮೊದಲಾದ ಅಂಶಗಳು ಅವಶ್ಯವಾಗಿರುತ್ತವೆ. ಯಾವುದೇ ಬೀಜವು ಹೊಸದಾಗಿದ್ದರೆ ಮಣ್ಣಿನಲ್ಲಿ ಹಾಕಿದಾಗ, ಮಣ್ಣಿನ ಪಾರಿಸರಿಕ ಅಂಶವು ಅದಕ್ಕೆ ಬೇರೆಯಾಗಿರುವುದಿಲ್ಲವುದರಿಂದ ತಾನಾಗಿಯೇ ಸುಲಭವಾಗಿ ಮೊಳೆತು ಗಿಡವಾಗುತ್ತದೆ. ಆದರೆ ಹಳೆಯ ಬೀಜಗಳಿಗೆ ಹಾಗಾಗುವುದಿಲ್ಲ. ಕಾಲ ಕಳೆದಂತೆ ಮಣ್ಣಿನ ಗುಣದಲ್ಲಿಯೂ ವ್ಯತ್ಯಾಸವಾಗಿರುತ್ತದೆ. ಬೀಜದ ಆನುವಂಶಿಕ ಗುಣಗಳೂ ಸುಪ್ತಸ್ಥಿತಿಗೆ ತಲುಪಿರುತ್ತವೆ. ಅಂತಹ ದೀರ್ಘಾವಧಿಯ ನಂತರ ಬೀಜ ಮೊಳೆಯಬೇಕಾದರೆ ಅದಕ್ಕೆ ಸೂಕ್ತವಾದ ವಾತಾವರಣವನ್ನು ನಾವು ಒದಗಿಸಬೇಕಾಗುತ್ತದೆ. ಈ ಪ್ಲಾಸ್ಮಾದೊಂದಿಗೆ ಉಪಚರಿಸಿದ ನೀರು ಮಾಡುವುದು ಅದನ್ನೇ. ಡಾ. ಜುನ್‌ ಮತ್ತು ಸಂಗಡಿಗರು ರೂಪಿಸಿರುವ ಮೈಕ್ರೊರಿಯಾಕ್ಟರ್‌, ನೀರಿನ ‘ಪಿಎಚ್‌’ ಮಟ್ಟವನ್ನು‌ ಕಡಿಮೆ ಮಾಡುತ್ತದೆ; ಆಕ್ಷಿಡೇಷನ್-ರಿಡಕ್ಷನ್‌ ಪೊಟೆನ್ಶಿಯಲ್‌ ಮತ್ತು ನೈಟ್ರೇಟ್‌ ಮಟ್ಟವನ್ನು ಹೆಚ್ಚಾಗಿಸಿ ಬೀಜ ಮೊಳೆಯಲು ಸೂಕ್ತ ಪರಿಸರವನ್ನು ಸೃಷ್ಟಿ ಮಾಡಿಕೊಡುತ್ತದೆ. ಮತ್ತು ಬೀಜಗಳನ್ನು ಸುಪ್ತಸ್ಥಿತಿಯಿಂದ ಹೊರತಂದು ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಸಸ್ಯಹಾರ್ಮೋನುಗಳಾದ ‘ಗಿಬ್ಬರ್ಲಿನ್ಸ್‌’ ಹಾಗೂ ‘ಅಬ್ಸಿಸಿಕ್‌ ಆಮ್ಲ’ಗಳನ್ನು ಸಕ್ರಿಯಗೊಳಿಸುತ್ತದೆ. ಹೀಗೆ ಈ ಸೌರಶಕ್ತಿಯಾಧಾರಿತ ಪ್ಲಾಸ್ಮಾ ಉತ್ಪಾದಕ ಸಾಧನವು ಬೀಜಗಳ ಚೈತನ್ಯವನ್ನು ಮರುಸ್ಥಾಪಿಸುವುದಲ್ಲದೇ, ಬೀಜಗಳು ಪುನಃಶ್ಶೇತನಗೊಳ್ಳುವ ಆಣ್ವಿಕ ಮಟ್ಟದ ಪರಿವರ್ತನೆಯ ಬಗ್ಗೆ ಒಂದಿಷ್ಟು ಒಳನೋಟಗಳನ್ನೂ ತಿಳಿಸುತ್ತದೆ. ಈ ಮೂಲಕ ಈ ಸೌರಚಾಲಿತ ತಂತ್ರಜ್ಞಾನವು ಸುಸ್ಥಿರವಾದ ಕೃಷಿಗೆ ಒಂದು ಮಹತ್ವದ ಹೆಜ್ಜೆಯಾಗಲಿದೆ ಎನ್ನುತ್ತಾರೆ, ಸಂಶೋಧಕರು.

ಈ ಆವಿಷ್ಕಾರವು ನವೀಕರಿಸಬಹುದಾದ ಶಕ್ತಿಮೂಲವನ್ನು ಉಪಯೋಗಿಸಿಕೊಂಡು, ಆಹಾರೋತ್ಪಾದನೆಯಲ್ಲಿರುವ ಸವಾಲುಗಳನ್ನು ನಿರ್ವಹಿಸುವುದಲ್ಲದೆ, ತ್ಯಾಜ್ಯವನ್ನೂ ನಿಯಂತ್ರಿಸುತ್ತದೆ. ಹಳೆಯ ಬೀಜಗಳ ಜೀವಶಕ್ತಿಯನ್ನು ವಿಸ್ತರಿಸುತ್ತಾ, ಹೆಚ್ಚುತ್ತಿರುವ ಜಾಗತಿಕ ಸವಾಲುಗಳ ನಡುವೆ ಆಹಾರ ಭದ್ರತೆ ಮತು ಸುಸ್ಥಿರತೆಯನ್ನು ಕಾಯ್ದುಕೊಳ್ಳಲು ಪ್ರಸ್ತುತ ಪ್ಲಾಸ್ಮಾಧಾರಿತ ತಂತ್ರಜ್ಞಾನವು ತನ್ನ ಕೊಡುಗೆಯನ್ನು ನೀಡಲಿದೆ.

‌ಈ ಅಧ್ಯಯನಕ್ಕೆ ಬಳಸಿಕೊಂಡಿರುವ ‘ಸ್ಪಿನ್ಯಾಚ್’ ಬೀಜಗಳಿಗೆ ಈ ವಿಧಾನವು ನೇರವಾಗಿ ಅನ್ವಯವಾಗುತ್ತದಾದರೂ, ಬಹಳಷ್ಟು ಬೆಳೆಗಳಿಗೆ ಇದನ್ನು ವಿಸ್ತರಿಸುವುದು ಸುಲಭವಾಗಿದ್ದು, ತನ್ಮೂಲಕ ಇಡೀ ಜಾಗತಿಕ ಕೃಷಿವಲಯಕ್ಕೇ ಒಂದು ಬೆಲೆಕಟ್ಟಲಾಗದ ಸಾಧನವಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.