ADVERTISEMENT

ಗ್ರಾಮ ಕಲೆ ದರ್ಶನ

ರಮೇಶ ಕಂಚೀಪುರ
Published 3 ಜೂನ್ 2011, 19:30 IST
Last Updated 3 ಜೂನ್ 2011, 19:30 IST

ಮಲೆನಾಡಿನ ವಿಶಿಷ್ಟ ರುಚಿಯ ಬಗೆಬಗೆ ಹಪ್ಪಳ, ಉಪ್ಪಿನಕಾಯಿ, ಚೆನ್ನಪಟ್ಟಣದ ಗೊಂಬೆಗಳು, ಲಾವಂಚ ಬೇರಿನ ಗೃಹಾಲಂಕಾರಿಕ ವಸ್ತುಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಕರಕುಶಲಕರ್ಮಿಗಳು ತಯಾರಿಸಿದ ಕಲಾಕೃತಿಗಳನ್ನು ಒಂದೇ ಸೂರಿನಡಿ ಒದಗಿಸುತ್ತಿದೆ `ಗ್ರಾಮೀಣ ಅಂಗಡಿ~ ಆಯೋಜಿಸಿದ ಕರಕುಶಲ ಮೇಳ.

ಗ್ರಾಮೀಣ ಭಾಗದ ಮಹಿಳೆಯರು ಮಳೆಗಾಲ ಆರಂಭವಾಗುತ್ತಿದ್ದಂತೆ ಊಟದ ಜೊತೆಗೆ ಬೇಕಾಗುವ ಹಪ್ಪಳ, ಉಪ್ಪಿನಕಾಯಿ, ಕುರುಕಲು ತಿಂಡಿಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಆದರೆ ನಗರದ ಮಂದಿ ಶಾಪಿಂಗ್ ಮಾಲ್‌ಗಳಿಗೋ, ಅಂಗಡಿಗಳಿಗೋ ಹೋಗಿ ಹೆಚ್ಚು ಹಣ ಕೊಟ್ಟು ತರುತ್ತಾರೆ. ಈ ತೊಂದರೆ ತಪ್ಪಿಸುವುದೇ `ಗ್ರಾಮೀಣ ಅಂಗಡಿ~ ಉದ್ದೇಶ ಎನ್ನುತ್ತಾರೆ ಇದರ ಸಂಘಟಕ ಬಿ.ರಾಜಶೇಖರಮೂರ್ತಿ.

ಇಲ್ಲಿ ಬಿದಿರಿನ ಬೊಂಬಿನ ಮೇಲೆ ಹಸೆಕಲೆ, ಚಿತ್ತಾರಗಳ ಹೂದಾನಿ, ಫ್ಯಾನ್ಸಿ ಆಭರಣಗಳು,  ಗದಗ, ಉಡುಪಿ, ಇಳಕಲ್ ಹಾಗೂ ಧಾರವಾಡದ ಹತ್ತಿ ಸೀರೆಗಳು , ರಾಜ್ಯದ ನಾನಾ ಜಿಲ್ಲೆಗಳ ಗುಡಿಕೈಗಾರಿಕೆಗಳ ವಿಶೇಷ ಉತ್ಪನ್ನಗಳು  ಕಣ್ಮನ ಸೆಳೆಯುತ್ತಿವೆ.

ADVERTISEMENT

ಸುಟ್ಟಾವೆ ಮಣ್ಣಿನಿಂದ ಸಿದ್ಧಪಡಿಸಿದ ದೇವರ ಮೂರ್ತಿಗಳು, ದೀಪ, ಗೋಡೆಗೆ ನೇತು ಹಾಕುವ ಅಲಂಕಾರಿಕ ವಸ್ತುಗಳು  ಗ್ರಾಮೀಣ ಸೊಗಡನ್ನು ನೆನಪಿಸುತ್ತವೆ. ಕುಶಲಕರ್ಮಿಗಳಿಂದ ನೇರವಾಗಿ ಗ್ರಾಹಕರಿಗೆ ವಸ್ತುಗಳು ದೊರೆಯುವುದರಿಂದ ಬೆಲೆ ಕೂಡ ತೀರಾ ದುಬಾರಿಯಾಗೇನಿಲ್ಲ.

ಶಿಲ್ಪಕಲಾ ಅಕಾಡೆಮಿ ಮತ್ತು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಪ್ರಶಸ್ತಿ ವಿಜೇತ ಖ್ಯಾತ ಕಲಾವಿದರು ಚಿತ್ರಿಸಿರುವ ಬೇಲೂರು, ಹಳೆಬೀಡಿನ ಹೊಯ್ಸಳ ಶಿಲ್ಪಕಲೆ ಹಾಗೂ ಸಮಕಾಲೀನ ಚಿತ್ರಕಲೆಗಳ ಪ್ರದರ್ಶನ ಇಲ್ಲಿನ ಇನ್ನೊಂದು ವಿಶೇಷ. ಇದು ಹೊಯ್ಸಳ ಕಾಲದ ಸಾಂಸ್ಕೃತಿಕ ವೈಭವವನ್ನು ನೆನಪಿಸುತ್ತದೆ.

ಸ್ಥಳ: `ಗ್ರಾಮೀಣ ಅಂಗಡಿ, ಶಾಲಿನಿ ಮೈದಾನ ಎದುರು, ಜಯನಗರ ಟಿ ಬ್ಲಾಕ್. ಬೆಳಿಗ್ಗೆ10ರಿಂದ ರಾತ್ರಿ 9. ಮೇಳ ಭಾನುವಾರ ಮುಕ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.