ADVERTISEMENT

ಚಿಂತನೆಗಳಿಗೊಂದು ಚೌಕಟ್ಟು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST

ಮನಸ್ಸು ಮರ್ಕಟವಿದ್ದಂತೆ. ಮನಸ್ಸಿನೊಳಗೆ ನಡೆವ ಸಂಘರ್ಷ, ಭಾವನೆಗಳ ತಾಕಲಾಟ ಇವ್ಯಾವುವೂ ಪದಗಳಿಗೆ ನಿಲುಕದ್ದು. ಈ ಸಂಗತಿಗಳೆಲ್ಲಾ ಕೇವಲ ಭಾವಗ್ರಾಹ್ಯ. ಅನುಭವಕ್ಕೆ ದಕ್ಕುವ ಕೆಲವೊಂದು ವಿಚಾರಗಳಿಗೆ ಕಲಾವಿದರು ಬಣ್ಣದ ಅಂಗಿ ತೊಡಿಸಿ ಅದನ್ನು ಕ್ಯಾನ್ವಾಸ್ ಮೇಲೆ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಮನಸ್ಸಿನ ಭಾವನೆಗಳನ್ನು ಪ್ರತಿಬಿಂಬಿಸುವಂಥ ಸರಣಿ ಕಲಾಕೃತಿಗಳ ಪ್ರದರ್ಶನ ಈಗ ನಗರದಲ್ಲಿ ನಡೆಯುತ್ತಿದೆ. ಪ್ರದರ್ಶನದ ಹೆಸರು `ರೂಮಿನೇಷನ್ಸ್~.ಮ್ಯಾಗ್ನಿಟ್ಯೂಡ್ ಗ್ಯಾಲರಿಯಲ್ಲಿ ಪ್ರದರ್ಶನ ನಡೆಯುತ್ತಿರುವ ಈ ಕಲಾಕೃತಿಗಳನ್ನು ವೀಕ್ಷಿಸಿದಾಗ ಮನಸ್ಸಿನಲ್ಲಿ ಮಂಥನ ಶುರುವಾಗುತ್ತದೆ.

ಮನಕ್ಕೆ ಹಿತ ನೀಡುವ ಬಣ್ಣಗಳು, ಕಲಾಕೃತಿಯೊಳಗೆ ಅವಿತು ಕೊಂಡಿರುವ ನೆರಳು ಬೆಳಕಿನ ಸಂಯೋಜನೆಯ ಚಿಣ್ಣಾಟ ಇವೆಲ್ಲವೂ ವೀಕ್ಷಕರನ್ನು ಬೇರೊಂದು ಲೋಕಕ್ಕೆ ಕತೆದೊಯ್ಯುತ್ತವೆ.

ಮ್ಯಾಗ್ನಿಟ್ಯೂಡ್ ಗ್ಯಾಲರಿಯ ಕಲಾವಿದರ ದಂಡು ರಚಿಸಿರುವ ಕಲಾಕೃತಿಗಳು ಇವು. ಒಬ್ಬ ಹೆಂಗಸು ಕುಳಿತು ಓದುತ್ತಿರುವ ಕಲಾಕೃತಿ, ಅಲ್ಲಿರುವ ನೆರಳು ಬೆಳಕಿನ ಸಂಯೋಜನೆ ಅದ್ಭುತವಾಗಿ ಮೂಡಿಬಂದಿದೆ. ಈ ಕಲಾಕೃತಿ ಕಲಾಕಾರನ ಸಂಯೋಜನೆಯ ನೈಪುಣ್ಯತೆಯನ್ನು ತೋರಿಸಿಕೊಡುತ್ತದೆ.

ಇನ್ನೊಂದು ಕಲಾಕೃತಿಯ ಸೊಬಗನ್ನು ನೋಡಿಯೇ ತಿಳಿಯಬೇಕು. ಈ ಕಲಾಕೃತಿ ಸೂರ್ಯಾಸ್ತದ ವೇಳೆ ಪ್ರಕೃತಿ ಬದಲಾಗುವುದನ್ನು ಕಟ್ಟಿಕೊಟ್ಟಿದೆ. ಸಮುದ್ರಕ್ಕೆ ನಿರ್ಮಿಸಿರುವ ಮರದ ಸೇತುವೆ ಅರ್ಧ ಮುಳುಗಿದೆ, ಮೇಲೆ ನೀಲಾಕಾಶ. ಅದರ ನಡುವೆ ಕೆಂಪು-ಹಳದಿ ಮಿಶ್ರಿತ ಹೊಂಬಣ್ಣ, ಅದುವರೆಗೂ ನೆತ್ತಿಯ ಮೇಲಿದ್ದ ಸೂರ್ಯ ನಿತ್ಯದ ದಿನಚರಿ ಮುಗಿಸಿ ಸಮುದ್ರರಾಜನ ತೆಕ್ಕೆಗೆ ಜಾರಲು ಸಜ್ಜಾಗಿದ್ದಾನೆ.

ದಿನಕರ ಕಡಲೊಳಗೆ ಅವಿತುಕೊಳ್ಳಲು ತಯಾರಿ ನಡೆಸುವ ವೇಳೆ ಚಿಮ್ಮುವ ಹೊಂಬಣ್ಣದ ಬೆಳಕು. ವ್ಹಾವ್! ಈ ಕಲಾಕೃತಿ ಕಂಡಾಗ ಇದು ನಮ್ಮ ಸಂಗ್ರಹದಲ್ಲಿದ್ದರೆ ಚೆಂದ ಅನಿಸುವುದುಂಟು.

ಇಲ್ಲಿರುವ ಮನಸೆಳೆವ ಕಲಾಕೃತಿಯನ್ನು ನಿಮ್ಮ ನೆಚ್ಚಿನವರಿಗೆ ಉಡುಗೊರೆಯಾಗಿ ಕೊಟ್ಟು ಬಾಂಧವ್ಯ ಗಟ್ಟಿ ಮಾಡಿಕೊಳ್ಳಬಹುದು. ಅಂದಹಾಗೆ, ಈ ಕಲಾಕೃತಿಗಳು ಅಕ್ಟೋಬರ್ 31ರವರೆಗೆ ಪ್ರದರ್ಶನಗೊಳ್ಳಲಿವೆ.

ಸ್ಥಳ: ಮ್ಯಾಗ್ನಿಟ್ಯೂಡ್ ಗ್ಯಾಲರಿ, 140/13, 27ನೇ ಕ್ರಾಸ್, 13ನೇ ಮುಖ್ಯರಸ್ತೆ, 3ನೇ ಹಂತ, ಜಯನಗರ. ಮಾಹಿತಿಗೆ: 99001 17201. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.