ADVERTISEMENT

ರಾಮಮೂರ್ತಿ ಗೆರೆಗಳು...

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 19:30 IST
Last Updated 1 ಜುಲೈ 2012, 19:30 IST
ರಾಮಮೂರ್ತಿ ಗೆರೆಗಳು...
ರಾಮಮೂರ್ತಿ ಗೆರೆಗಳು...   

ಆಗಸ್ಟ್ 15ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ಕೆಂಪುಕೋಟೆಯಲ್ಲಿ ನಿಂತು ಭಾಷಣ ಮಾಡುತ್ತಿದ್ದಾರೆ. ಆದರೆ, ಅಲ್ಲಿಯೇ ಕಾಳಸಂತೆ ಖದೀಮ, ದಾಸ್ತಾನುಗಾರ ಮತ್ತು ಲಾಭಕೋರರು ಸೇರಿ ಜಯ ಜಯಕಾರ ಹಾಕುತ್ತಿದ್ದಾರೆ. 

ಬಾಂಗ್ಲಾದೇಶ ಹುಲಿಯಂತೆ ಆರ್ಭಟಿಸಿ ತನ್ನ ಅಸ್ತಿತ್ವಕ್ಕೆ ಹೋರಾಡಿ ಕೊನೆಗೆ ಜಯಗಳಿಸಿತು. ಊಸರವಳ್ಳಿಯ ಪಾಕಿಸ್ತಾನದ ಮೇಲೆ ಜಯದ ನಗೆಯನ್ನು ಬೀರುತ್ತದೆ...
ಪುದುಚೆರಿ ಟೆಸ್ಟ್ ಪಂದ್ಯಾವಳಿಯಲ್ಲಿ ಅಣ್ಣಾ ಡಿಎಂಕೆ ಮತ್ತು ಕಾಂಗ್ರೆಸ್‌ನ ನಡುವೆ ಪಂದ್ಯ. ಅದರಲ್ಲಿ ರನೌಟ್ ಆಗಿ ಹೊರಹೋಗುವ ನೋಟ..
.
ಬೆಳಗಾವಿಯ ಯಥಾಸ್ಥಿತಿ, ಹುಲಿಯಂತೆ ಆರ್ಭಟಿಸುವ ಧಾನ್ಯ ಸಗಟು ವ್ಯಾಪಾರಿ ಅವನ ಮುಂದೆ ಶೋಷಣೆಗೆ ಒಳಗಾಗುತ್ತಿರುವ ಹಸುವಿನ ರೂಪದಲ್ಲಿರುವ ಬಳಕೆದಾರ...
ಹೀಗೆ ನೂರಾರು ರೂಪದಲ್ಲಿ ಸಮಾಜದ ಮತ್ತು ದೇಶದ ಸ್ಥಿತಿ-ಗತಿಯ ಬಗ್ಗೆ ಬೆಳಕು ಚೆಲ್ಲುವ ವ್ಯಂಗ್ಯಚಿತ್ರಗಳು.

ಒಂದು ಕ್ಷಣ ಅಲ್ಲಿ ಬಂದವರ ಮನವನ್ನು ಕಲಕಿದ್ದಂತೂ ನಿಜ. ಇಂತಹ ಅಪರೂಪದ ಕಲಾತ್ಮಕವಾದ ವ್ಯಂಗ್ಯಚಿತ್ರಗಳು ಮೂಡಿಬಂದಿದ್ದು ದಿವಂಗತ ಬಿ.ವಿ.ರಾಮಮೂರ್ತಿ ಅವರ ಕಲಾಕುಂಚದಿಂದ.

ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು  `ದಿ ವರ್ಲ್ಡ್ ಆಫ್ ರಾಮಮೂರ್ತಿ~ ವ್ಯಂಗ್ಯಚಿತ್ರ ಹಾಗೂ ವರ್ಣಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದೆ.
ಮೂರ್ತಿ ಎಂದೇ ಪ್ರಸಿದ್ಧರಾದ ಬೆಂಗಳೂರು ವೆಂಕಟರಾಮ್ ರಾಮಮೂರ್ತಿ ಅವರು ಕರ್ನಾಟಕದ ಪ್ರತಿಭಾಶಾಲಿ ವ್ಯಂಗ್ಯಚಿತ್ರಕಾರರಾಗಿದ್ದರು.
 
`ಕಿಡಿ~ ಪತ್ರಿಕೆಯಿಂದ ಆರಂಭವಾದ ಅವರ ವ್ಯಂಗ್ಯಚಿತ್ರಕಲಾ ಯಾತ್ರೆಯು ಸಂಪಾದಕ ಪೋಥೆನ್ ಜೋಸೆಫ್‌ರಿಂದ ಗುರುತಿಸಲ್ಪಟ್ಟು `ಡೆಕ್ಕನ್ ಹೆರಾಲ್ಡ್~ ಮತ್ತು `ಪ್ರಜಾವಾಣಿ~ಗಳಲ್ಲಿ ಮುಂದುವರಿಯಿತು.

ತೀಕ್ಷ್ಣವಾದ ವ್ಯಂಗ್ಯದಿಂದ ಕೂಡಿದ ಅವರ ಚಿತ್ರಗಳು ಬಹು ಜನಪ್ರಿಯತೆಯನ್ನು ಗಳಿಸಿದ್ದವು. ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದರು. ಇವರು 2004ರ ಮಾರ್ಚ್ 24 ರಂದು ನಿಧನರಾದರು. ಮೂರ್ತಿ ಅವರ ಕಲಾಕುಂಚದಿಂದ ಬರಿಯ ವ್ಯಂಗ್ಯಚಿತ್ರಗಳು ಮೂಡಲಿಲ್ಲ.

ಬದಲಿಗೆ ಸುಂದರವಾದ ಮನಮೋಹಕಗೊಳಿಸುವ ವರ್ಣಚಿತ್ರಗಳು ಒಡಮೂಡಿ ಬಂದವು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆದರೆ ಸಾಮಾಜಿಕ ಕಳಕಳಿ ಇವರ ಚಿತ್ರಗಳಲ್ಲಿನ ಸಾಮಾನ್ಯ ಅಂಶ.  ವರ್ಣಚಿತ್ರಗಳಲ್ಲಿಯೂ ಅನೇಕ ಕೃತಿಗಳಲ್ಲಿ ಸಾಮಾಜಿಕ ವಿಡಂಬನೆಯನ್ನೇ ಕಾಣಬಹುದಾಗಿದೆ.

ಇದಲ್ಲದೆಯೂ  ಜಲವರ್ಣದಲ್ಲಿ ಸಮಾಜದ ಎಲ್ಲ ವಿಷಯಗಳಲ್ಲೂ ಕೈಯಾಡಿಸಿದ್ದಾರೆ ಎಂಬುದು ಈ ಪ್ರದರ್ಶನದಿಂದಲೇ ಗೊತ್ತಾಗುತ್ತದೆ.

ಅವರ ಪತ್ನಿ ರತ್ನ ರಾಮಮೂರ್ತಿ ಅವರು, `ಅವರಿಗೆ ಗೆರೆಗಳೆಂದರೆ ಏನೋ ಅಭಿಮಾನ. ಅದರಿಂದಾನೇ ಏನಾದರೂ ಸಾಧಿಸುತ್ತೇನೆ ಅಂತ ಹೇಳೋರು. ದಿನವಿಡೀ ಏನಾದರೂ ಗೀಚುತ್ತ ಅಯ್ಯೋ ಇದು ಸರಿ ಹೋಗಿಲ್ಲ, ಅದು ಸರಿ ಹೋಗಿಲ್ಲ ಎಂದು ಪೇಚಾಡೋರು.

ನಂತರ, ಅವರು ಅಂದುಕೊಂಡಂತೆ ಅವರ ವ್ಯಂಗ್ಯಚಿತ್ರ ಬಂದರೆ, ತೃಪ್ತಿ ಪಡೋರು~
`ಯಾವುದೇ ವ್ಯಂಗ್ಯಚಿತ್ರವನ್ನು ಬಿಡಿಸುವ ಮೊದಲು ಅಧ್ಯಯನ ನಡೆಸುತ್ತಿದ್ದರು. ಅದು ಸಾಮಾಜಿಕ ವಿಷಯವಾಗಿರಲಿ ಅಥವಾ ಸಚಿವರಾಗಿರಲೀ ಅಥವಾ ಉನ್ನತ ವ್ಯಕ್ತಿಗಳ ಬಗ್ಗೆಯಾಗಿರಲೀ ದಿನವಿಡೀ ಅಧ್ಯಯನ ನಡೆಸಿದ ನಂತರವೇ ಅದಕ್ಕೆ ಒಂದು ರೂಪು ನೀಡುತ್ತಿದ್ದರು~.

`ಅವರು ವ್ಯಂಗ್ಯಚಿತ್ರಗಳಂತೆ ವರ್ಣಚಿತ್ರಗಳನ್ನು ಬರೆಯುತ್ತಿದ್ದರು. ಆದರೆ, ವ್ಯಂಗ್ಯಚಿತ್ರದ ಜನಪ್ರಿಯತೆ ಮುಂದೆ ವರ್ಣಚಿತ್ರಗಳ ಅಲಂಕಾರ ಎಲೆ ಮರೆ ಕಾಯಿಯಂತೆ ಯಾರಿಗೂ ಕಾಣದೆ ಹೋಯಿತು~.

`ಅವರು ತಮ್ಮ ಗೆರೆಗಳ ಮಧ್ಯೆ ಮುಳುಗಿದರೆ ಹೆಂಡತಿ ಮತ್ತು ಮಕ್ಕಳು ಇದ್ದಾರೆ ಎಂಬ ಅರಿವೇ ಇರುತ್ತಿರಲಿಲ್ಲ. ಅವರು ಕೊನೆಯ 12 ವರ್ಷಗಳ ಕಾಲ ತುಂಬ ಅನಾರೋಗ್ಯದಿಂದ ಬಳಲಿದರು. ಕೊನೆಗೆ ಹೃದಯಾಘಾತವಾಗಿ ವಿಧಿ ಅವರನ್ನು ನಮ್ಮಿಂದ ಬಹುದೂರ ಕರೆದುಕೊಂಡು ಹೋಯಿತು~ ಎಂದು ಹನಿಗಣ್ಣಾದರು.

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಜುಲೈ 14 ರವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ವಿವರಗಳಿಗೆ-99800 91428. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.