ADVERTISEMENT

ತಂತ್ರಜ್ಞಾನ ಮುಂದುವರಿದರೂ ಭಾಷೆ, ಸಾಹಿತ್ಯ ಬದುಕಿನ ಸಾರ: ಪ್ರಕಾಶ್ ದಂಪತಿ ‘ಅಂಕಿತ’

ಪವಿತ್ರಾ ಭಟ್
Published 21 ಡಿಸೆಂಬರ್ 2025, 5:24 IST
Last Updated 21 ಡಿಸೆಂಬರ್ 2025, 5:24 IST
<div class="paragraphs"><p>ಅಂಕಿತಾದ ಪ್ರಕಾಶ್ ಹಾಗೂ ಪ್ರಭಾ</p></div>

ಅಂಕಿತಾದ ಪ್ರಕಾಶ್ ಹಾಗೂ ಪ್ರಭಾ

   

ಅ.ನ.ಕೃ ಅವರಿಂದ ಹಿಡಿದು ಇತ್ತೀಚಿನ ಹೊಸ ಬರಹಗಾರರ ಪುಸ್ತಕಗಳನ್ನೂ ಪ್ರಕಟಿಸುವ ಮೂಲಕ ಕನ್ನಡ ಪುಸ್ತಕ ಪ್ರಪಂಚವನ್ನು ಶ್ರೀಮಂತಗೊಳಿಸುವಲ್ಲಿ ಅಂಕಿತ ಪ್ರಕಾಶನದ ಪಾತ್ರ ಹಿರಿದು.

1995 ರಲ್ಲಿ ಆರಂಭವಾದ ಪ್ರಕಾಶನ 30 ವರ್ಷಗಳಲ್ಲಿ ಈವರೆಗೆ ಸಾವಿರ ಪುಸ್ತಕಗಳನ್ನು ಪ್ರಕಟಿಸಿದೆ. ಸದಭಿರುಚಿಯ ಪುಸ್ತಕಗಳನ್ನು ಓದುಗ ಪ್ರಿಯರಿಗೆ ನೀಡುತ್ತಿದೆ. ಈ ಹೊತ್ತಿನಲ್ಲಿ ಅಂಕಿತ ಪ್ರಕಾಶನದ ಸ್ಥಾಪಕರಾದ ಪ್ರಕಾಶ್ ಕಂಬತ್ತಳ್ಳಿ ಮತ್ತು ಅವರ ಪತ್ನಿ ಪ್ರಭಾ ಪ್ರಜಾವಾಣಿ ಡಿಜಿಟಲ್‌ನೊಂದಿಗೆ ಒಂದಷ್ಟು ಮಾತುಕತೆ ನಡೆಸಿದ್ದಾರೆ.

ADVERTISEMENT

ಅಂಕಿತ ಪುಸ್ತಕ ಮಳಿಗೆ

ಅಂಕಿತ ಪ್ರಕಾಶನದ ಹುಟ್ಟಿನ ಬಗ್ಗೆ ಹೇಳುವುದಾದರೆ…

ಪುಸ್ತಕಗಳ ಓದಿನ ಬಗ್ಗೆ ಮೊದಲಿನಿಂದಲೂ ಆಸಕ್ತಿಯಿತ್ತು. ಪಿ.ಎಚ್‌ಡಿ ಮಾಡುವಾಗ ಅದನ್ನು ಅರ್ಧಕ್ಕೆ ನಿಲ್ಲಿಸುವ ಪ್ರಸಂಗ ಎದುರಾಯಿತು. ಆಗ ನನ್ನದೇ ಒಂದಷ್ಟು ಲೇಖನಗಳನ್ನು ಪ್ರಕಟಗೊಳಿಸಬೇಕಿತ್ತು. ಪುಸ್ತಕ ಪ್ರಕಟಿಸುವಂತೆ ಸ್ನೇಹಿತರು ಸೂಚಿಸಿದಾಗ, ಹೌದಲ್ಲ ಎನ್ನಿಸಿತ್ತು. ಆಗ ಪ್ರಕಾಶಕರೊಬ್ಬರ ಬಳಿ ತೆರಳಿದಾಗ ಪ್ರಕಾಶನ ಸಾಧ್ಯವಾಗಲಿಲ್ಲ. ನಂತರ ಡಾ. ವಿಜಯಾ ಎನ್ನುವರ ಬಳಿ ಪುಸ್ತಕಗಳನ್ನು ಪ್ರಕಟಿಸಿದ್ದೆ. ಬಳಿಕ ಮಾರಾಟ ಸಮಸ್ಯೆ ಎದುರಾಗಿತ್ತು. ಇವೆಲ್ಲ ತಾಪತ್ರಯಗಳನ್ನು ದೂರ ಮಾಡಲು 1995ರಲ್ಲಿ ಹುಟ್ಟಿಕೊಂಡಿದ್ದೇ 'ಅಂಕಿತ ಪ್ರಕಾಶನ ಮತ್ತು ಮಳಿಗೆ'.

ಪ್ರಕಾಶನಕ್ಕೆ ‘ಅಂಕಿತ’ ಎಂದು ನಾಮಕರಣ ಮಾಡಿದ್ದೇಕೆ?

ನಮ್ಮ ಪ್ರಕಾಶನ, ನಮ್ಮ ಪುಸ್ತಕಗಳು ಜನಮಾನಸದಲ್ಲಿ ಹೆಗ್ಗುರುತಾಗಿ ಇರಬೇಕು ಎನ್ನುವ ಕಾರಣಕ್ಕೆ ಅಂಕಿತ ಎಂದು ಹೆಸರಿಟ್ಟಿದ್ದೆವು.

ಯಾವೆಲ್ಲಾ ಪ್ರಕಾರದ ಪುಸ್ತಕಗಳು ಪ್ರಕಟಗೊಂಡಿವೆ?

ಕಥೆ, ಕಾದಂಬರಿ, ವಿಮರ್ಶೆ, ಕವನ, ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕಗಳು ಸೇರಿ ಕನ್ನಡದಲ್ಲಿ ಯಾವೆಲ್ಲಾ ಪ್ರಕಾರದ ಪುಸ್ತಕಗಳಿವೆಯೋ ಎಲ್ಲವನ್ನೂ ಪ್ರಕಟಿಸಿದ್ದೇವೆ. 350ಕ್ಕೂ ಹೆಚ್ಚು ಲೇಖಕರ ಪುಸ್ತಕಗಳು ನಮ್ಮಲ್ಲಿ ಪ್ರಕಟಗೊಂಡಿವೆ.

ಅ.ನ.ಕೃ ಅವರಿಂದ ಹಿಡಿದು ಇತ್ತೀಚಿನ ಗುರುರಾಜ ಕೊಡ್ಕಣಿ ಅವರವರೆಗೂ ಪ್ರಕಟಿಸಿದ ಪುಸ್ತಕಗಳ ಸಂಖ್ಯೆ ಸಾವಿರ ತಲುಪಿದೆ.

ಅಂಕಿತ ಪ್ರಕಾಶನ ಯಾವೆಲ್ಲಾ ಅಪರೂಪದ ಪುಸ್ತಕಗಳನ್ನು ಪ್ರಕಟಿಸಿದೆ?

ನಾವು ಪ್ರಕಾಶನ ಆರಂಭಿಸಿದಾಗ ಅ.ನ.ಕೃ ಅವರ ಅನೇಕ ಪುಸ್ತಕಗಳು ದೊರೆಯುತ್ತಿರಲಿಲ್ಲ. ಉದಾಹರಣೆಗೆ ಅವರ ಪ್ರಸಿದ್ಧ ಪುಸ್ತಕಗಳಾದ 'ನಟಸಾರ್ವಭೌಮ', 'ಮುಯ್ಯಿಗೆ ಮುಯ್ಯಿ', 'ಸಂಧ್ಯಾರಾಗ', 'ಉದಯರಾಗ' ಕೃತಿಗಳನ್ನು ಮರುಮುದ್ರಣ ಮಾಡಿದ್ದೇವೆ. ಇದಲ್ಲದೆ ರಾವ್‌ ಬಹದ್ದೂರ್‌ ಅವರ 'ಗ್ರಾಮಾಯಣ' ಕಾದಂಬರಿ, ವಿ.ಎಂ ಇನಾಮ್‌ದಾರ್‌ ಅವರ ಜ್ಞಾನಪೀಠ ಪ್ರಶಸ್ತಿ ಪಡೆದ ‘ಯಯಾತಿ’. ಇಂತಹ ಅನೇಕ ಅಲಕ್ಷಕ್ಕೆ ಒಳಗಾದ ಪುಸ್ತಕಗಳನ್ನು ಮರುಮುದ್ರಣ ಮಾಡಲಾಗಿದೆ. ಇಂತಹ ಅನೇಕ ಅಪರೂಪದ ಪುಸ್ತಕಗಳು ಇಂದಿಗೂ ಓದುಗರಿಗೆ ಸಿಗುತ್ತಿವೆ.

ನಂತರದ ದಿನಗಳಲ್ಲಿ ಜಯಂತ ಕಾಯ್ಕಿಣಿ, ಬರಗೂರು ರಾಮಚಂದ್ರಪ್ಪ, ನರಹಳ್ಳಿ ಸುಬ್ರಮಣ್ಯ, ಜೋಗಿ ಸೇರಿ ಕನ್ನಡ ಪ್ರಸಿದ್ಧ ಲೇಖಕರ ಎಲ್ಲರ ಪುಸ್ತಕಗಳನ್ನು ಅಂಕಿತ ಪ್ರಕಾಶನ ಪ್ರಕಟಿಸಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ಎಲ್ಲಾ ಪುಸ್ತಕಗಳ ಮುದ್ರಣ ಮತ್ತು ಮರುಮುದ್ರಣವನ್ನು ಅಂಕಿತ ಪ್ರಕಾಶನವೇ ಮಾಡಿದೆ.

ಪ್ರಶಸ್ತಿ ಪುರಸ್ಕೃತ ಅಂಕಿತ ಪ್ರಕಾಶನದ ಪುಸ್ತಕಗಳನ್ನು ಹೆಸರಿಸುವುದಾದರೆ..

ನಮ್ಮ ಪ್ರಕಾಶನದ ಅನೇಕ ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ‘ಕರಿನೀರು’ ಪುಸ್ತಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಗಜಾನನ ಶರ್ಮಾ ಅವರ ‘ಚೆನ್ನಭೈರಾದೇವಿ’ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಶಿ ಎನ್ನುವ ಲೇಖಕರ 'ಮನಮಂಥನ' ಎನ್ನುವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಅಂಕಿತದಲ್ಲಿ ಹೊಸ ಬರಹಗಾರರಿಗೆ ಅವಕಾಶ...

ನಾವು ಹೊಸ ಬರಹಗಾರರನ್ನು ಪ್ರೋತ್ಸಾಹಿಸಲು ‘ಅಂಕಿತ ಪ್ರತಿಭೆ’ ಎನ್ನುವ ಮಾಲಿಕೆಯನ್ನು ಆರಂಭಿಸಿದ್ದೇವೆ. 'ಇದೇ ಮೊದಲಬಾರಿಗೆ ಪುಸ್ತಕ ಪ್ರಕಟಿಸುತ್ತಿದ್ದೇವೆ' ಎನ್ನುವವರಿಗೆ ಇದರಲ್ಲಿ ಅವಕಾಶವಿದೆ. ವಿಕಾಸ್ ನೇಗಿಲೋಣಿ, ಶರತ್‌ ಭಟ್ ಸೆರಾಜೆ ಸೇರಿ ಅನೇಕರು ಅಂಕಿತ ಪ್ರಕಾಶನದಲ್ಲೇ ಮೊದಲ ಬಾರಿಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಟಿವಿ ಮಾಧ್ಯಮಗಳ ಪ್ರಭಾವ...

ಪುಸ್ತಕೋದ್ಯಮ ಮೊದಲಿನ ರೀತಿಯಲ್ಲಿ ಇಲ್ಲ. ಬದಲಾದ ಕಾಲಘಟ್ಟದಲ್ಲಿ ಓದುಗರು ಪುಸ್ತಕಗಳನ್ನೇ ಓದಬೇಕು ಎನ್ನುವ ನಿರೀಕ್ಷೆ ಸರಿಯಲ್ಲ. ಈ ಹಿಂದೆಲ್ಲಾ ರಾಜ್ಯದಲ್ಲಿ ಗ್ರಂಥಾಲಯಗಳ ಸಂಖ್ಯೆ ಹೆಚ್ಚಿತ್ತು. ಮಧ್ಯಮ ವರ್ಗದ ಮಹಿಳೆಯರೇ ನಮ್ಮ ಓದುಗ ಬಳಗವಾಗಿದ್ದರು. ಆದರೆ ಈಗ ಟಿವಿ ಮಾಧ್ಯಮ ಬಂದಮೇಲೆ ಜನರು ಓದುವುದನ್ನು ಕಡಿಮೆ ಮಾಡಿದ್ದಾರೆ. ಆನ್‌ಲೈನ್‌ನಲ್ಲೇ ಪುಸ್ತಕಗಳ ಪ್ರತಿ ಸಿಗುವಾಗ ಪುಸ್ತಕ ಕೊಂಡು ಓದುವವರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಹೊಟ್ಟೆಪಾಡಿಗೆ ಹುಟ್ಟಿಕೊಂಡ ಪ್ರಕಾಶನ...

ನಮ್ಮಲ್ಲಿರುವ ಪುಸ್ತಕಗಳನ್ನು ಪ್ರಕಟ ಮಾಡಬೇಕಿತ್ತು. ಅನೇಕರು ಪ್ರಕಾಶನ ಆರಂಭಿಸುವ ಬಗ್ಗೆ ಸಲಹೆಗಳನ್ನು ನೀಡಿದ್ದರು. ಇಬ್ಬರಿಗೂ ನಿಶ್ಚಿತವಾಗಿ ಉದ್ಯೋಗವೂ ಇಲ್ಲದ ಕಾರಣಕ್ಕೆ ಹೊಟ್ಟೆ ಪಾಡಿಗೆ ಪ್ರಕಾಶನ ಆರಂಭಿಸಿದ್ದೆವು. ಇಂದು ಇಷ್ಟರಮಟ್ಟಿಗೆ ಬೆಳೆದು ನಿಂತಿದೆ.

ಸಾವಿರ ಪುಸ್ತಕಗಳನ್ನೂ ಓದಿದ್ದೀರಾ?

ಹೌದು, ಶೇ 99ರಷ್ಟು ಪುಸ್ತಕಗಳನ್ನು ಓದಿದ್ದೇನೆ. ನಾವಿಬ್ಬರೂ ಸಾಹಿತ್ಯದ ವಿದ್ಯಾರ್ಥಿಗಳು. ಓದುವ ಆಸಕ್ತಿಯಿತ್ತು, ಅದೂ ಅಲ್ಲದೆ, ಪ್ರಕಾಶನಕ್ಕೆ ಎಂತಹ ಪುಸ್ತಕಗಳು ಬರುತ್ತಿವೆ. ಎಂತಹ ಪುಸ್ತಕಗಳನ್ನು ಪ್ರಕಟಿಸಬೇಕು ಎನ್ನುವುದಕ್ಕೂ ಓದುವಿಕೆ ಮುಖ್ಯವಾಗಿತ್ತು.

ಮಳಿಗೆ ಆರಂಭಿಸಿದ ಬಳಿಕವೇ ಕಲಿಕೆ...

ಮಳಿಗೆ ನಡೆಸಿದ್ದರಿಂದ ಲೇಖಕರ ವರ್ಗದ ಜತೆಗೆ ಸಾಮಾನ್ಯ ಜನರ ನಡುವೆ ಸಂಬಂಧ ಬೆಳೆಯಿತು. ಇದರಿಂದ ಜನಸಾಮಾನ್ಯರು ಎಂತಹ ಪುಸ್ತಕಗಳನ್ನು ನೆಚ್ಚಿಕೊಳ್ಳುತ್ತಾರೆ ಎನ್ನುವುದು ಅನುಭವಕ್ಕೆ ಬಂದಿತು.. ಅಂಗಡಿಯ ಆರಂಭದಲ್ಲಿ ಮಾರಾಟದ ಬಗ್ಗೆ ತಿಳಿದಿರಲಿಲ್ಲ. ವಿಮರ್ಶೆಯಂತಹ ಪುಸ್ತಕಗಳನ್ನೇ ಹೆಚ್ಚು ಇಡುತ್ತಿದ್ದೆವು. ಅನುಭವವೇ ಮಾರಾಟವನ್ನು ಕಲಿಸಿತು. ವ್ಯಾಕರಣ, ವರ್ಣಮಾಲೆ, ನಿಘಂಟು ಹೀಗೆ ಜನ ಬಯಸುವ ಪುಸ್ತಕಗಳನ್ನು ಇಡಬೇಕು ಎನ್ನುವುದನ್ನು ಕಲಿತುಕೊಂಡೆವು. ಪ್ರಕಾಶನವನ್ನೂ ಗಂಭೀರವಾಗಿ ತೆಗೆದುಕೊಂಡೆವು. ಅನೇಕರು ಸಾಮಾನ್ಯ ಓದುಗರಾಗಿ ಬಂದು ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡವರನ್ನು ಕಂಡಿದ್ದೇವೆ. ಅದೇ ರೀತಿ ನಿರ್ದಿಷ್ಟ ವಿಚಾರಗಳಿಗೆ ಅಂಟಿಕೊಂಡಿರುವವರೂ, ತಮ್ಮದೇ ಧೋರಣೆ ಇಟ್ಟುಕೊಂಡವರು ಬರುತ್ತಿದ್ದರು. ಹೀಗಾಗಿ ಲೋಕೋಭಿನ್ನರುಚಿ ಇರುವಾಗ ಎಲ್ಲರ ಆಸಕ್ತಿಯನ್ನು ಗೌರವಿಸಬೇಕು. ಗುಣಮಟ್ಟದ ಪುಸ್ತಕಗಳನ್ನು ತರಬೇಕು ಎನ್ನುವುದೇ ನಮ್ಮ ಗುರಿಯಾಗಿದೆ.

ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಜೀವನದಲ್ಲಿ ಮೌಲ್ಯಗಳನ್ನು, ವಿಚಾರಗಳನ್ನು ಬೆಳೆಸುವಂತದ್ದು ನಮ್ಮ ಭಾಷಾಸಾಹಿತ್ಯಗಳೇ, ಅದನ್ನು ನಾವು ಗಟ್ಟಿಯಾಗಿ ಉಳಿಸಿಕೊಳ್ಳಬೇಕು. ಯಾವುದೇ ತಾಂತ್ರಿಕ ಸವಾಲು ಬಂದರೂ ಅದನ್ನು ಮೀರಿದ್ದು ಸೃಜನಶೀಲತೆ. ಹೀಗಾಗಿ ಭಾಷೆ, ಸಾಹಿತ್ಯವನ್ನು ಉಳಿಸಿಕೊಳ್ಳಬೇಕು. ಅದಕ್ಕೆ ಪುಸ್ತಕಗಳ ಓದು ಸಹಕಾರಿ.
-ಪ್ರಭಾ ಪ್ರಕಾಶ್ ಕಂಬತ್ತಳ್ಳಿ
ಪುಸ್ತಕಗಳು ಸಂಸ್ಕೃತಿಯಂತೆ. ನಾವು ಅವಕಾಶ ನೀಡಿದರೆ ಬರಹಗಾರರು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾರೆ. ಹೀಗಾಗಿ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತೇವೆ.
-ಪ್ರಕಾಶ್ ಕಂಬತ್ತಳ್ಳಿ