ADVERTISEMENT

ಆಧುನಿಕ ಚಿತ್ರಕಲೆಯ ಸಮಕಾಲೀನ ನಡೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 19:30 IST
Last Updated 8 ಜೂನ್ 2019, 19:30 IST
ಕಲಾವಿದೆ ಗೌರಿ ವೆಮುಲಾ ಅವರ ‘ವಿಸಲ್‌ ಬ್ಲೋವರ್‌’ ಕಲಾಕೃತಿ. ಈ ಚಿತ್ರಕ್ಕೆ ಪ್ರಸಕ್ತ ಸಾಲಿನ ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ
ಕಲಾವಿದೆ ಗೌರಿ ವೆಮುಲಾ ಅವರ ‘ವಿಸಲ್‌ ಬ್ಲೋವರ್‌’ ಕಲಾಕೃತಿ. ಈ ಚಿತ್ರಕ್ಕೆ ಪ್ರಸಕ್ತ ಸಾಲಿನ ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ   

1940 ಹಾಗೂ 50ರ ದಶಕದಲ್ಲಿ ಚಿತ್ರಕಲೆಯ ಪರಿಕಲ್ಪನೆಯನ್ನು ಮೂಲಭೂತವಾಗಿ ಬದಲಿಸಿದ್ದ ಪಶ್ಚಿಮದ ಕಲಾ ಚಟುವಟಿಕೆಗಳು ನಮ್ಮ ಕಲಾವಿದರಲ್ಲಿ ದಿಗ್ಭ್ರಮೆ ಮೂಡಿಸಿದ್ದುಂಟು. ಆ ಅವಧಿಯಲ್ಲಿ ಪಾರಂಪರಿಕ ಮೌಲ್ಯಗಳು ಸಂಪೂರ್ಣವಾಗಿ ಅಳಿದು ಹೋಗಿದ್ದವು. ರೂಪಾತ್ಮಕ ಅಂಶಗಳಿಗೆ ಒತ್ತು ನೀಡುವ ವ್ಯಕ್ತಿನಿಷ್ಠ ಅಭಿವ್ಯಕ್ತಿಯ ವಿಧಾನವು ಆಗ ಕಲೆಯಲ್ಲಿ ರೂಪುಗೊಂಡಿತು. ನಮ್ಮ ಭಾರತೀಯ ಕಲಾವಿದರೂ ಅಂತರರಾಷ್ಟ್ರೀಯ ಕಲಾರಂಗದ ಸರಿಜೋಡಿಯಾಗಲು ಉತ್ಸಾಹದಿಂದ ರೂಪಾತ್ಮಕ ಅಂಶಗಳನ್ನು ಅಣಕ ಎನ್ನುವಷ್ಟು ಅನುಕರಿಸಿದರು.

ನಮ್ಮ ಚಿತ್ರಕಲೆ ಅತ್ಯಂತ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾಗಿದ್ದು, ಆಯಾ ಕಾಲದಲ್ಲಿ ತನ್ನ ಪರಾಕಾಷ್ಠೆಯನ್ನು ತಲುಪಿದೆ. ರೂಪಾತ್ಮಕ ಅಂಶಗಳ ಮೇಲೆ ನೈಪುಣ್ಯ ಸಾಧಿಸುವ ಜತೆಗೆ ನಮ್ಮ ಕ್ರಿಯಾಶೀಲ ಪ್ರಯತ್ನಗಳಿಗೆ ಹೊಂದಾಣಿಕೆ ಗುಣಗಳನ್ನು ತುಂಬುವ ಸಲುವಾಗಿ ಸಂಪರ್ಕಾತ್ಮಕ ಅಂಶಗಳನ್ನೂ ಶಕ್ತಗೊಳಿಸಬೇಕಿದೆ. ಇದನ್ನು ನಾವು ನಿಧಾನವಾಗಿ ಮನವರಿಕೆ ಮಾಡಿಕೊಳ್ಳಲು ಆರಂಭಿಸಿದ್ದೇವೆ.

ನಿರಂತರವಾಗಿ ಬದಲಾಗುತ್ತಿರುವ ಈ ಡಿಜಿಟಲ್‌ ಜಗತ್ತಿನಲ್ಲಿ ನಮ್ಮ ಕಲಾವಿದರು ಚಿಂತನೆಯಿಂದ ಶಾಶ್ವತ ಮೌಲ್ಯಗಳನ್ನು ಗ್ರಹಿಸುವುದು, ತಂತ್ರಗಾರಿಕೆಯಲ್ಲಿ ಪರಿಣತಿಯನ್ನು ಸಾಧಿಸುವಷ್ಟೇ ಮುಖ್ಯವಾದುದು ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದಾರೆ.

ADVERTISEMENT
ಯಕ್ಷಗಾನದ ವೈಭವವೇ ವೈಭವ... ಕಲಾವಿದ ಕರಿಯಪ್ಪ ಹಂಚಿನಮನಿ ಅವರ ಕುಂಚದಿಂದ ಕ್ಯಾನ್ವಾಸ್‌ ಮೇಲೆ ಅಕ್ರಾಲಿಕ್‌ನಿಂದ ಅರಳಿದ ಕಲೆಯು ಯಕ್ಷಗಾನದ ಶ್ರೀಮಂತಿಕೆಯನ್ನು ಸಮರ್ಥವಾಗಿ ಕಟ್ಟಿಕೊಟ್ಟಿದೆ

ಆಧುನಿಕ ಕಲಾವಿದನ ಅನುಭವ ವ್ಯಾಪ್ತಿಯು ಹೊರಜಗತ್ತಿಗಷ್ಟೇ ಸೀಮಿತವಾಗಿಲ್ಲ. ನಮ್ಮ ಸುಶಿಕ್ಷಿತ ಪ್ರೇಕ್ಷಕರು ಈಗಲೂ ಕಲೆಯನ್ನು ವಿಲಾಸ ಎಂದೂ ಮನುಷ್ಯ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಿಲ್ಲ ಎಂದೂ ಭಾವಿಸಿರುವಾಗ ಕಲಾವಿದನ ಅಂತರ್‌ದೃಷ್ಟಿಗೆ ಪ್ರಾಮಾಣಿಕ ಹಾಗೂ ತಕ್ಕ ತಿಳಿವಳಿಕೆಯುಳ್ಳ ಪ್ರೇಕ್ಷಕನಿಂದಾಗಿ ಅನುಭವ ಸಿಗುವಂತೆ ಮಾಡುವುದು, ಇಂದು ಕಲಾವಿದ ಎದುರಿಸುತ್ತಿರುವ ಸವಾಲು. ಸ್ವಲ್ಪಮಟ್ಟಿಗೆ ಕಲಾವಿದ ಕೂಡ ಪ್ರೇಕ್ಷಕರ ಬಗೆಗೆ ಯಾವುದೇ ಸಹಾನುಭೂತಿ ಇಲ್ಲದಿರುವುದಕ್ಕೆ ಆತನೂ ಅಷ್ಟೇ ಹೊಣೆಗಾರನಾಗಿದ್ದಾನೆ. ಕಲೆಯನ್ನು ಪ್ರೇಕ್ಷಕರು ಸ್ವಂತ ಅನುಭವಿಸಬೇಕೇ ಹೊರತು ಅದರ ವಿವರಣೆ ಕಲಾವಿದನಿಂದ ಕೇಳಿ ತಿಳಿಯಬಾರದು ಎಂಬುದು ಅಷ್ಟೇ ಸತ್ಯ.

ಒಂದು ಕಲಾಕೃತಿ ಚಿಂತನೆ ಮಾಡುವಷ್ಟು ಯೋಗ್ಯವಾಗಿದ್ದರೆ ಅದು ಮನುಷ್ಯಕುಲವನ್ನು ಉನ್ನತಗೊಳಿಸಲು ಶಕ್ತವಾಗಿರುತ್ತದೆ. ನಮ್ಮ ಇಂದಿನ ಕಲಾವಿದರು ಮುಂಬರುವ ವರ್ಷಗಳಲ್ಲಿ ತಮ್ಮ ಹಿರಿಯರಿಗಿಂತ ಪ್ರತಿಭಾವಂತ ಮತ್ತು ಅಭಿವ್ಯಕ್ತಿಗಳಲ್ಲಿ ಹೆಚ್ಚು ಶ್ರೀಮಂತವಾದ ಹಾಗೂ ತಮ್ಮದೇ ಆದ ಪರಂಪರೆಯನ್ನು ನಿರ್ಮಿಸುವ ಸೃಜನ ಭರವಸೆಗಾರರು.

ಒಂದು ಪುಟ್ಟ ವಿಶ್ರಾಂತಿ... ದೇವಿಯ ಪ್ರತಿಮೆ ಹೊತ್ತ ದುರಗ– ಮುರಗಿಯರ ಜೋಡಿ ನಿತ್ಯದ ಯಾತ್ರೆಯ ಮಧ್ಯೆ ವಿಶ್ರಾಂತಿ ಪಡೆಯುತ್ತಿರುವಆಪ್ತ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ ಕಲಾವಿದ ಶಂಕರ ಕಡಕುಂಟ್ಲ

ಸಮಕಾಲೀನ ಕಲೆ ಮನುಷ್ಯ ಪ್ರವೃತ್ತಿ ಮತ್ತು ಸುತ್ತಮುತ್ತಲಿನ ಜನಜೀವನದಿಂದ ಬದಲಾಗುತ್ತಾ ಹೋಗುತ್ತದೆ. ಕಲಾವಿದ ತನ್ನ ಪರಿಸರಕ್ಕೆ ಸ್ಪಂದಿಸುತ್ತಾನೆ. ಹಿಂದಿನ ಕಾಲದ ಕಲಾವಿದರು ಹೆಚ್ಚಾಗಿ ನಿಸರ್ಗ ಅಥವಾ ಜನಜೀವನದ ಬಾಹ್ಯರೂಪವನ್ನು ಹೆಚ್ಚು ಚಿತ್ರಿಸಿದರು. ಆದರೆ, ಇಂದಿನ ಕಲೆಯಲ್ಲಿ ಬಾಹ್ಯರೂಪಕ್ಕೆ ಹೆಚ್ಚು ಮಹತ್ವ ನೀಡುವುದಿಲ್ಲ. ಇದಕ್ಕೆ ಕ್ಯಾಮೆರಾ ಇದೆ. ಹಾಗಾಗಿ ಅದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ತೋರಿಸಬೇಕು ಎಂದು ಪ್ರಯತ್ನಿಸುತ್ತಾನೆ ಇಂದಿನ ಕಲಾವಿದ. ಹಾಗೆಂದೇ ಇಂದು ವಿಶಾಲವಾದ ಸಮಕಾಲೀನ ಕಲೆಯಲ್ಲಿ ತಮ್ಮ ನೈಪುಣ್ಯದಿಂದ ಸ್ವಂತಿಕೆಯನ್ನು ಸ್ಥಾಪಿಸಲು ಸಂಪೂರ್ಣವಾಗಿ ಅವಕಾಶ ದೊರೆತಿದೆ.

ಅಂತೆಯೇ ಇಂದು ನಮ್ಮ ರಾಜ್ಯದ ನಾಲ್ಕೂ ದಿಕ್ಕುಗಳಿಗೂ ಇರುವ ಕಲಾವಿದರು ಅರಿವಿನಿಂದಲೇ ಶೋಧ ನಡೆಸಿ ತಮಗರಿಯದ ಯಾವುದೋ ಒಂದು ಮಹಾನ್‌ ಶಕ್ತಿಯ ಸಾಕ್ಷಾತ್ಕಾರದ ಕಡೆಗೆ ತಮ್ಮ ಕುಂಚವನ್ನು ಬೀಸುತ್ತಾರೆ ಹಾಗೂ ಕಾಣದ್ದನ್ನು ಕಾಣಿಸುವ ಯತ್ನ ಮಾಡುತ್ತಾರೆ. ಅದು ಕರ್ತವ್ಯ ಎಂದು ಭಾವಿಸುವಷ್ಟು ಪ್ರಬುದ್ಧರಾದ ಕಲಾವಿದರು ನಮ್ಮಲ್ಲಿದ್ದಾರೆ. ಅಂತಹ ಕಲಾವಿದರ ಕೆಲವು ಕಲಾಕೃತಿಗಳು ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.