ADVERTISEMENT

ನಗರದ ದೃಶ್ಯ ಸಂಸ್ಕೃತಿಗೊಂದು ಬಣ್ಣ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 19:30 IST
Last Updated 11 ಡಿಸೆಂಬರ್ 2021, 19:30 IST
ರವಿ ಕಾಶಿ ಅವರ ಕಲಾಕೃತಿಗಳು
ರವಿ ಕಾಶಿ ಅವರ ಕಲಾಕೃತಿಗಳು   

ಆಧುನಿಕ ನಗರವು ತನ್ನದೇ ಆದ ಕಥೆ, ಕುರುಹು ಮತ್ತು ರಹಸ್ಯಗಳನ್ನು ಹೊಂದಿರುತ್ತದೆ. ಅಸ್ತವ್ಯಸ್ತ ಬೀದಿಗಳು, ಮಾರುಕಟ್ಟೆಗಳು, ಅರೆ-ಕತ್ತಲೆ ಮೂಲೆಗಳು ಮತ್ತು ಗೀಚುಬರಹ ತುಂಬಿದ ಗೋಡೆಗಳು ಆಧುನಿಕ ನಗರಗಳ ದೃಶ್ಯಸಂಸ್ಕೃತಿ ಹೇಗೆ ನಿರಂತರವಾಗಿ ಬದಲಾಗುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತವೆ.

ರವಿ ಕಾಶಿ

ಪ್ರಪಂಚದಾದ್ಯಂತ ಅನೇಕ ಸಮಕಾಲೀನ ಕಲಾವಿದರು ಆಧುನಿಕ ನಗರವನ್ನು ಪ್ರಮುಖ ಮತ್ತು ಆಸಕ್ತಿದಾಯಕ ವಿಷಯವೆಂದು ಪರಿಗಣಿಸುತ್ತಾರೆ.
ಬೆಂಗಳೂರು ಮೂಲದ ಕಲಾವಿದ ರವಿಕುಮಾರ್ ಕಾಶಿ ಅವರು ಹಲವಾರು ವರ್ಷಗಳಿಂದ ನಗರ ಮತ್ತು ದೃಶ್ಯ ಸಂಸ್ಕೃತಿಯ ವೀಕ್ಷಕರಾಗಿದ್ದಾರೆ. ಬೆಂಗಳೂರಿನ ಗೋಡೆಗಳು, ಬಿಲ್ ಬೋರ್ಡ್‌ಗಳು, ಹೋರ್ಡಿಂಗ್‌ಗಳನ್ನು ಶ್ರದ್ಧೆಯಿಂದ ದಾಖಲಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಗರ ಭೂದೃಶ್ಯದ ರೂಪಾಂತರವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಅದರ ಮೂಲಕ ನಗರದ ಸಾಮಾಜಿಕ ಇತಿಹಾಸ ಮತ್ತು ರಾಜಕೀಯ ಸನ್ನಿವೇಶದ ಕುರುಹುಗಳನ್ನು ಗುರುತಿಸಲು ಪ್ರಯತ್ನಿಸಿದ್ದಾರೆ. ನಗರದ ನಿರಂತರ ಬದಲಾವಣೆಗಳು ಮತ್ತು ಬದಲಾವಣೆಗಳನ್ನು ಪ್ರಚೋದಿಸುವ ಶಕ್ತಿಗಳ ಸ್ವರೂಪ ಹೇಗಿರಬಹುದು ಎನ್ನುವುವೂ ಅವರ ಪರೀಕ್ಷೆಯ ವಿಷಯವಾಗಿವೆ.

‘ನನ್ನ ಸುತ್ತಲಿನ ಜೀವನವನ್ನು ಕುತೂಹಲದಿಂದ ನೋಡುವ ಹಾಗೂ ಅರ್ಥಮಾಡಿಕೊಳ್ಳುವ ಆಸಕ್ತಿಯನ್ನು ದೀರ್ಘಕಾಲದಿಂದ ಉಳಿಸಿಕೊಂಡಿದ್ದೇನೆ’ ಎನ್ನುತ್ತಾರೆ ರವಿ ಕಾಶಿ. ‘ನನ್ನ ಅನುಭವಗಳು ಮತ್ತು ಅವಲೋಕನಗಳು ಒಂದಲ್ಲ ಒಂದು ರೀತಿಯಲ್ಲಿ ನನ್ನ ಕಲೆಯ ಮೂಲಕ ಹೊರಹೊಮ್ಮುತ್ತವೆ. ಮೊದಮೊದಲು ರೇಖಾಚಿತ್ರಗಳು ಮತ್ತು ಪಠ್ಯಗಳ ಮೂಲಕ ನನಗೆ ಕಂಡ ದೃಶ್ಯಗಳನ್ನು ಡೈರಿಯಲ್ಲಿ ದಾಖಲಿಸುತ್ತಿದ್ದೆ. ಇತ್ತೀಚಿನ ವರ್ಷಗಳಲ್ಲಿ ದೃಶ್ಯ ಚಿತ್ರಣ ಮತ್ತು ಅದಕ್ಕೆ ಸಂಬಂಧಪಟ್ಟ ಗುರುತು ಚಿಹ್ನೆಗಳನ್ನು ಸೆರೆಹಿಡಿಯಲು ಡಿಜಿಟಲ್ ಕ್ಯಾಮೆರಾ ಮತ್ತು ಮೊಬೈಲ್ಅನ್ನು ಬಳಸುತ್ತೇನೆ. ನೋಡುವ, ಗ್ರಹಿಸುವ ಹಾಗೂ ದಾಖಲಿಸುವ ನನ್ನ ಪ್ರಕ್ರಿಯೆ ಅನೇಕ ವರ್ಷಗಳಿಂದ ನಿರಂತರವಾಗಿ ನಡೆದುಬಂದಿದೆ. ನಗರದ ಮೂಲೆ ಮೂಲೆಗಳಲ್ಲಿ ಗೋಡೆ ಕಟ್ಟಡಗಳ ಮೇಲೆ ಕಾಣುವ ಸಾವಿರಾರು ಚಿತ್ರಗಳು ನನ್ನ ‘ಖಜಾನೆ’ಯಲ್ಲಿ ಇವೆ. ಸಾಮಾನ್ಯವಾಗಿ ಕಂಡರೂ ಸೂಕ್ಷ್ಮವಾಗಿ ಗಮನಿಸಿದಾಗ ಅವುಗಳ ಜೋಡಣೆಗಳಲ್ಲಿ ಒಂದು ರೀತಿಯ ಸಂಕೀರ್ಣತೆ ಗೋಚರವಾಗುತ್ತದೆ. ದೃಶ್ಯ ಸಂಸ್ಕೃತಿಯಲ್ಲಿನ ವೈವಿಧ್ಯಮಯ ರಚನೆಗಳು, ಚಿಹ್ನೆಗಳು, ಮಾದರಿಗಳು ಮತ್ತು ಅವುಗಳಲ್ಲಿ ಹುದುಗಿರುವ ಒಳ ಅರ್ಥಗಳು ನನ್ನ ಅನೇಕ ಕಲಾಕೃತಿಗಳಿಗೆ ಸ್ಪೂರ್ತಿಯಾಗಿವೆ’ ಎನ್ನುತ್ತಾರೆ ಅವರು.

ADVERTISEMENT

ರವಿಕಾಶಿಯವರ ಇತ್ತೀಚಿನ ಚಿತ್ರಕಲಾ ಪ್ರದರ್ಶನ, ‘ದಿ ಅನ್‌ರುಲಿ ಸಿಂಟ್ಯಾಕ್ಸ್’ (The Unruly Syntax) ನಮ್ಮ ನಡುವಿನ ದೃಶ್ಯಸಂಸ್ಕೃತಿಯಲ್ಲಿ ಸುಪ್ತವಾದ ಅರ್ಥವನ್ನು ಹುಡುಕುವ ಅವರ ಅನ್ವೇಷಣೆಯ ವಿಸ್ತರಣೆಯಾಗಿದೆ. ಈ ಪ್ರದರ್ಶನದಲ್ಲಿ ತಾವು ದಾಖಲಿಸಿದ ವಿವಿಧ ಚಿತ್ರಗಳನ್ನು ಕಾಶಿ ಅವರು ಕೊಲಾಜ್ (collage) ರೂಪದಲ್ಲಿ ಹರಡಿ, ವಿಶಿಷ್ಟ ರೀತಿಯಲ್ಲಿ ಸಂಯೋಜಿಸಿ, ಕ್ಯಾನ್ವಾಸಿನ ಮೇಲೆ ಮೂಡಿಸಿದ್ದಾರೆ. ಆ ಮೂಲಕ ತೋರಿಕೆಯಲ್ಲಿ ಸಂಪರ್ಕವಿಲ್ಲದ ಚಿತ್ರಗಳು, ರಾಜಕೀಯ ಘೋಷಣೆಗಳು, ಧಾರ್ಮಿಕ ಚಿಹ್ನೆಗಳು ಮತ್ತು ಜಾಹೀರಾತುಗಳ ತುಣುಕುಗಳು ಕಲಾತ್ಮಕವಾಗಿ ಹೇಗೆ ಒಟ್ಟುಗೂಡಬಹುದು ಎನ್ನುವುದನ್ನು ಕಲಾವಿದರು ತೋರಿಸಿಕೊಟ್ಟಿದ್ದಾರೆ.

ರವಿ ಕಾಶಿ ಅವರ ಕೃತಿ

ರವಿಕಾಶಿಯವರ ವರ್ಣಚಿತ್ರಗಳಲ್ಲಿ ವಿಚಿತ್ರವಾದ ಪಾತ್ರಗಳು ಹಾಗೂ ಸನ್ನಿವೇಶಗಳು ಹುಟ್ಟುಹಾಕಿಕೊಳ್ಳುತ್ತವೆ. ಸಣ್ಣ (ಪೆಟ್ಟಿಗೆ?) ಅಂಗಡಿ ಬಳಿ ಶಸ್ತ್ರಸಜ್ಜಿತ ಯೋಧರು ಕಾಣಸಿಗುತ್ತಾರೆ. ಕೆಂಪು ಕೊಂಬಿನ ಟಗರಿನ ಸಹವಾಸದಲ್ಲಿ ಕಾಮಪ್ರಚೋದಕಿಯ ಮಾದಕ ತುಟಿಗಳು ತೆರೆಯಲಾರಂಭಿಸುತ್ತವೆ. ಬೆರಗು ಕಣ್ಣಿನ ನವಿಲು ಮೊಟ್ಟೆಯೊಡೆಯುವ ಕೋಳಿಯ ನಡುವೆ ಚಲನಚಿತ್ರ ತಾರೆ ತಟಸ್ಥನಾಗಿ ನಿಲ್ಲುತ್ತಾನೆ. ಅಮೂರ್ತ ಗೋಡೆಗಳ ನಡುವೆ ಅನಾಮಧೇಯ ಯುವಕನೊಬ್ಬ ಜಾರಿ ಬೀಳುವ ಅವಸ್ಥೆಯಲ್ಲಿದ್ದಾನೆ.

ಒಂದು ಚಿತ್ರದಲ್ಲಿ ಹುಸಿನಗೆ ಬೀರುವ ಗಾಂಧೀಜಿಯ ಛಿದ್ರಗೊಂಡ ಚಿತ್ರವು ಬೀದಿ ಬದಿಯಲ್ಲಿ ಕಾಣುವ ಐಸ್‌ಕ್ರೀಮ್‌ನ ಜಾಹೀರಾತು ಚಿತ್ರ ಮತ್ತು ಕುಪಿತ ದೇವನ ಚಿಹ್ನೆಗಳ ಮಧ್ಯೆ ಸಿಲುಕಿ ಅಸ್ವಸ್ಥವಾಗಿರುವಂತಿದೆ. ಇವೆಲ್ಲದರ ನಡುವೆ ಹೇಳಹೆಸರಿಲ್ಲದ ಷೋರೂಮ್ ಒಂದರ ಸೂಚನೆಯೂ ಇದೆ. ಈ ದೃಶ್ಯಾಂಶಗಳು ಮೇಲುನೋಟಕ್ಕೆ ಸಂಬಂಧರಹಿತವಾಗಿ ಕಂಡುಬಂದರೂ ಒಂದು ಅಪರಿಚಿತ ಎಳೆಯಿಂದ ಅರ್ಥವತ್ತಾಗಿ ಹೆಣೆದ ಹಾಗನಿಸಿ ಅನಿರೀಕ್ಷಿತ ಅನುಭವ ಸೃಷ್ಟಿಯಾಗುತ್ತದೆ.

ರವಿಕುಮಾರ್ ಕಾಶಿಅವರ ಕಲಾಕೃತಿಗಳು

ಪ್ರದರ್ಶನದಲ್ಲಿನ ಅತ್ಯಂತ ಯಶಸ್ವಿ ಚಿತ್ರಗಳು ಸರಳವಾದ ಸಂಯೋಜನೆಗಳಾಗಿದ್ದರೂ ವೀಕ್ಷಕನ ಕುತೂಹಲವನ್ನು ಕೆರಳಿಸುವುದರಲ್ಲಿ ಸಫಲವಾಗುತ್ತವೆ. ಅಂತಹ ಚಿತ್ರಗಳಲ್ಲಿ ಕಲಾವಿದರು ಉದ್ವೇಗಳನ್ನು ಹತ್ತಿಕ್ಕಿ ಸೂಕ್ಷ್ಮತೆಗೆ ಒತ್ತುಕೊಟ್ಟಿರುವುದು ಗೋಚರವಾಗುತ್ತದೆ.

‘ದಿ ಅನ್‌ರುಲಿ ಸಿಂಟ್ಯಾಕ್ಸ್’ ಚಿತ್ರಕಲಾ ಪ್ರದರ್ಶನ ಗ್ಯಾಲರಿ ಸುಮುಖ, ವಿಲ್ಸನ್ ಗಾರ್ಡನ್‌ನಲ್ಲಿ ಜನವರಿ 22, 2022 ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.