ADVERTISEMENT

ಕತ್ತಲೆ–ಬೆಳಕಿನ ಅಪೂರ್ವ ಕಲಾಕೃತಿ ಕರವಾಜಿಯೊ ಅವರ ಮಾಸ್ಟರ್ ಪೀಸ್

ರೂಪಾ .ಕೆ.ಎಂ.
Published 12 ಜುಲೈ 2025, 22:05 IST
Last Updated 12 ಜುಲೈ 2025, 22:05 IST
<div class="paragraphs"><p>ಜಗತ್ಪ್ರಸಿದ್ಧ ಚಿತ್ರಕಲಾವಿದ ಕರವಾಜಿಯೊ ಅವರ ಮಾಸ್ಟರ್ ಪೀಸ್ ‘ಭಾವಪರವಶಳಾದ ಮೇರಿ ಮ್ಯಾಗ್ಡಲಿನ್’ ಕಲಾಕೃತಿ ಪ್ರದರ್ಶನ&nbsp; &nbsp;ಚಿತ್ರ: ಕೃಷ್ಣ ಕುಮಾರ್‌ ಪಿ.ಎಸ್.</p></div>

ಜಗತ್ಪ್ರಸಿದ್ಧ ಚಿತ್ರಕಲಾವಿದ ಕರವಾಜಿಯೊ ಅವರ ಮಾಸ್ಟರ್ ಪೀಸ್ ‘ಭಾವಪರವಶಳಾದ ಮೇರಿ ಮ್ಯಾಗ್ಡಲಿನ್’ ಕಲಾಕೃತಿ ಪ್ರದರ್ಶನ   ಚಿತ್ರ: ಕೃಷ್ಣ ಕುಮಾರ್‌ ಪಿ.ಎಸ್.

   

ಭಾವನೆಗಳು ಉತ್ತುಂಗ ಸ್ಥಿತಿಯನ್ನು ತಲುಪಿದಾಗ ಅದು ನೋಡುಗರ ಎದೆಯನ್ನು ತಾಕಿ, ಹೊಸ ಸಂವೇದನೆಯೊಂದು ಸೃಷ್ಟಿಯಾಗುತ್ತದೆ. ಭಾವ ಸಂಘರ್ಷದ ಎಲ್ಲೆಗಳನ್ನು ಮೀರಿ, ನಿರ್ದಿಗಂತತೆಯನ್ನು ಸಾರುವ ಮೇರಿ ಮ್ಯಾಗ್ಡಲೀನ್‌ ಎಂಬ ಸೇಂಟ್‌ ಭಾವಪರವಶಳಾದ ಬಗೆಯನ್ನು ಇಂಚಿಂಚೂ ‘ಜೀವಂತಿಕೆಯ’ ಕ್ಯಾನ್ವಾಸ್‌ನಲ್ಲಿ ಕಟ್ಟಿಕೊಟ್ಟಿದ್ದಾರೆ ಇಟಲಿಯ ಪ್ರಸಿದ್ಧ ಚಿತ್ರಕಲಾವಿದ ಕರಾವಜಿಯೊ.

ಬೈಬಲ್‌ನಲ್ಲಿ ಉಲ್ಲೇಖಗೊಂಡಿರುವ ಮೇರಿ ಮ್ಯಾಗ್ಡಲೀನ್‌ ಕುರಿತ ಅಪ್ರತಿಮ ಎನಿಸುವ ತೈಲವರ್ಣದ ಕಲಾಕೃತಿ ಇದು. ‘ಭಾವಪರವಶಳಾದ ಮೇರಿ ಮ್ಯಾಗ್ಡಲೀನ್‌’ ಶೀರ್ಷಿಕೆಯ ಈ ಕಲಾಕೃತಿಯು 
40.75 ಇಂಚು × 36 ಇಂಚು ಅಳತೆಯ ಕ್ಯಾನ್ವಾಸ್‌ನಲ್ಲಿ ಜೀವತಳೆದಿದೆ. 

ADVERTISEMENT

ಇದರಲ್ಲಿ ಮೇರಿ ಮ್ಯಾಗ್ಡಲೀನ್‌  ತಲೆ ತುಸುವೇ ಹಿಂದಕ್ಕೆ ಬಾಗಿದಂತೆ ಕಾಣುತ್ತದೆ. ಅರೆ ನಿಮೀಲಿತ ಕಣ್ಣುಗಳು, ಬಹಳ ಸೂಕ್ಷ್ಮವಾಗಿ ಬೆಸೆದುಕೊಂಡ ಕೈಗಳು, ಭಾವಪರವಶತೆಯಲ್ಲಿ ತಲ್ಲೀನಳಾದ  ಮ್ಯಾಗ್ಡಲೀನ್‌ ಮತ್ತು ಅವಳ ಎಡಗಣ್ಣಿನಿಂದ ಸಣ್ಣ ಮುತ್ತಿನಂತೆ ಇದ್ದು ಇಲ್ಲದಂತೆ ಕಾಣುವ ಕಣ್ಣೀರ ಹನಿ. ಬಣ್ಣಗಳಲ್ಲಿ ಮೇರಿ ಜೀವತಳೆದಂತೆ ಭಾಸವಾಗಿ ನೋಡುಗರನ್ನು ನಿಬ್ಬೆರಗಾಗಿಸುತ್ತದೆ. 

ಮೇರಿ ಮ್ಯಾಗ್ಡಲೀನ್‌ ಭಾವಕಡಲಿನಲ್ಲಿ ಎದ್ದ ಹಲವು ಸಂಘರ್ಷದ ತೆರೆಗಳನ್ನು ಹಾಗೂ ಅವುಗಳೆಲ್ಲ ಒಮ್ಮೆಲೆ ದಡವನ್ನು ತಲುಪಿ ಶಾಂತಗೊಂಡ ಭಾವವನ್ನು ಏಕಕಾಲಕ್ಕೆ ಕಲಾವಿದ ಇಲ್ಲಿ ಇಂಚಿಂಚು ಕುಂಚದಲ್ಲೇ ವ್ಯಕ್ತಪಡಿಸುವ ಮೂಲಕ ಬಣ್ಣಗಳ ಅನನ್ಯ ಸಾಧ್ಯತೆಯನ್ನು ತೋರಿಸಿದ್ದಾರೆ. ಇಲ್ಲಿ ಬಣ್ಣಗಳಷ್ಟೆ ಅಲ್ಲ, ಕತ್ತಲು ಮತ್ತು ಬೆಳಕು ತನ್ನದೇ ಆದ ಪರಿಧಿಯನ್ನು ಮೀರಿ, ಹಲವು ಮಾತುಗಳನ್ನು ಸರಾಗವಾಗಿ ಆಡುತ್ತವೆ.

ಇಟಾಲಿಯನ್‌ ಭಾಷೆಯಲ್ಲಿ ‘ಚಿಯಾರೊಸ್ಕೊರೊ’ ಎಂದು ಕರೆಯುವ ಬೆಳಕು–ಕತ್ತಲಿನ ಸಮಹಂಚಿಕೆಯ ತಂತ್ರಗಾರಿಕೆಯನ್ನು ಸಶಕ್ತವಾಗಿ ಬಳಸಿಕೊಳ್ಳಲಾಗಿದೆ.ಮೇರಿ ಮ್ಯಾಗ್ಡಲೀನ್‌ ದೇಹದ ಮೇಲೆ ಬಿದ್ದ ಬೆಳಕು ಸೂಚಿಸುವ ಭಾವನೆಗಳು ನಿಗೂಢ ಕತ್ತಲು ಹಿಡಿದಿಟ್ಟುಕೊಂಡ ಗುಟ್ಟುಗಳಿಗೆ ಪೈಪೋಟಿ ಕೊಡುವಂತೆ ಕಾಣುತ್ತವೆ. 

ಕತ್ತಲು ಮತ್ತು ಬೆಳಕು ಎರಡೂ ವಿಭಿನ್ನ ಧ್ರುವಗಳು. ಬದುಕು ಇರುವುದು ಹಾಗೆ. ವೈರುಧ್ಯಗಳ ನಡುವಿನ ಸಮತೂಕದ ನಡಿಗೆ. ಇದನ್ನೇ ಕರವಾಜಿಯೊ ಕತ್ತಲು ಮತ್ತು ಬೆಳಕಿನ ಈ ತಂತ್ರಗಾರಿಕೆಯ ಮೂಲಕ ಸ್ಪಷ್ಟಪಡಿಸಲು ಹೊರಟಿದ್ದಾರೇನೋ ಅನಿಸುತ್ತದೆ. ವಿಭಿನ್ನ ಧ್ರುವಗಳನ್ನು ಬಳಸಿಕೊಂಡು ಹೊಸ ಭ್ರಮೆಯೊಂದನ್ನು ಸೃಷ್ಟಿಸಿರುವುದರಿಂದ ಇದು ಶತಮಾನಗಳು ಕಳೆದರೂ ಕಲಾಲೋಕದ ಕೌತುಕವಾಗಿಯೇ ಉಳಿದುಕೊಂಡಿದೆ.

ಈ ತೈಲವರ್ಣದ ಕಲಾಕೃತಿಯನ್ನು ಟಿನಿಬ್ರಿಸಂ ಶೈಲಿಯಲ್ಲಿ ರೂಪಿಸಲಾಗಿದೆ. ಟೆನಿಬ್ರಿಸಂ ಎಂಬುದು ಗಾಢ ಕತ್ತಲೆಯನ್ನು ಕಲಾಕೃತಿಯಲ್ಲಿ ತುಸು ಹೆಚ್ಚೇ ತಂದು, ಪ್ರಮುಖ ಭಾಗಗಳಿಗೆ ಗಾಢ ಬಣ್ಣವನ್ನು ಹರಿಸಲಾಗಿದೆ. ಅತಿ ಕತ್ತಲೆಯಿಂದಾಗಿ ಮುಖ್ಯ ಭಾಗಗಳು ಬೆಳಕಿನಲ್ಲಿ ಮೀಯುತ್ತವೆ. ಹೀಗೊಂದು ಭ್ರಮೆ ಸೃಷ್ಟಿಯಾಗಲು ವರ್ಣಗಳು ಮುಖ್ಯವಾಗುವಷ್ಟೆ ಗಾಢ ಕತ್ತಲು ಪ್ರಮುಖ ಪಾತ್ರ ವಹಿಸುತ್ತದೆ. ಕತ್ತಲಿನಿಂದ ಬೆಳಕಿನ ಮೌಲ್ಯ ಹೆಚ್ಚುತ್ತದೆ ವಿನಃ ಕುಸಿಯುವುದಿಲ್ಲ ಎಂಬ ಸಿದ್ಧಾಂತದಲ್ಲಿ ಇದನ್ನು ರೂಪಿಸಲಾಗಿದೆ. ಕರವಾಜಿಯೊನನ್ನು ಟಿನಿಬ್ರಿಸಂ ಶೈಲಿಯ ರೂವಾರಿಯೆಂದೇ ಇತಿಹಾಸ ನೆನೆಯುತ್ತದೆ. ಈ ತಂತ್ರಗಾರಿಕೆಯಿಂದಾಗಿ ಇಟಲಿ ಮತ್ತು ಸ್ಪಾನಿಷ್‌ನಲ್ಲಿ ಪ್ರಸಿದ್ಧಗೊಂಡ ‘ಬರೋಕ್‌’ ಶೈಲಿಯು ಕ್ರಮೇಣ ರೂಪುಗೊಂಡಿತು ಎಂಬ ವಾದವೂ ಇದೆ. 

ಮಂದ ಬೆಳಕಿನಲ್ಲಿರುವ ಕೋಣೆಯಲ್ಲಿ ಮ್ಯಾಗ್ಡಲೀನ್ ಸುತ್ತ ಇರುವ ಕೆಂಪು ಮೇಲಂಗಿಯ ನೆರಳು ಎದ್ದು ಕಾಣುತ್ತದೆ. ಗಾಢ ಕೆಂಪು ಕರವಾಜಿಯೊ ನಿರಂತರವಾಗಿ ಬಳಸಿದ ಬಣ್ಣವಾಗಿದೆ. ಮೇಲಂಗಿಯ ಮಡಿಕೆಗಳಲ್ಲಿ ವಿಶಿಷ್ಟ ಸ್ವರೂಪದ ಸ್ಟ್ರೋಕ್‌ಗಳನ್ನು ಕಾಣಬಹುದು. ಮಾಗ್ಡಲೀನಳ ಮುಖ ಮೃದುಭಾವಗಳಿಂದ ಆಕರ್ಷಣೀಯವೆನಿಸಿದರೂ, ಅವಳ ತುಟಿ ಮತ್ತು ಬೆರಳ ತುದಿಗಳು ಕಪ್ಪಾಗಾಗಿವೆ; ಓರೆಯಾದ ಕಣ್ಣಿನ ರಪ್ಪೆಗಳು, ಊದಿಕೊಂಡ ಗುಲಾಬಿ ಬಣ್ಣದ ಕಣ್ಣುಗಳು ಹಲವು ಪ್ರಶ್ನೆಗಳನ್ನು ಹಾಗೇ ದಾಟಿಸಿ ಮೌನವಾಗುತ್ತವೆ.

ಚಿತ್ರದ ಎಡಭಾಗದಿಂದ ಬರುವ ಬೆಳಕು ಚಿತ್ರಕಲೆಯ ಮೇಲೆ ಯಾವುದೇ ಪ್ರತಿಬಿಂಬಗಳನ್ನು, ನೆರಳುಗಳನ್ನು ಮೂಡಿಸದೇ ಬೆಳಕೂ ಕಲಾಕೃತಿಗೆ ಕೊಟ್ಟ ಸಾಥ್‌ನ ಬಗ್ಗೆ ಮೆಚ್ಚಿಕೊಳ್ಳುವಂತೆ ಮಾಡುತ್ತದೆ. 

ಕರವಾಜಿಯೋ

ಕರವಾಜಿಯೊ ಕುರಿತು....

ಮೈಕೆಲೆಂಜಿಲೊ ಮೆರಿಸಿ ಡ ಕರವಾಜಿಯೊ 17ನೇ ಶತಮಾನದ ಇಟಲಿಯ ಪ್ರಸಿದ್ಧ ಕಲಾವಿದ. ಆತನ ವೈಯಕ್ತಿಕ ಬದುಕು ಹಲವು ವಿಚಿತ್ರಗಳಿಂದ ಕೂಡಿತ್ತು. ವಿಲಕ್ಷಣ ಸ್ವಭಾವದವನೆಂದೇ ಇತಿಹಾಸ ನೆನೆಯುತ್ತದೆ. ಕರವಾಜಿಯೊ 20ನೇ ವಯಸ್ಸಿಗೆ ಬಣ್ಣದ ವ್ಯಾಮೋಹ ಬೆಳೆಸಿಕೊಂಡ. ಆದರೆ ಬದುಕು ಹಲವು ಏರಿಳಿತಗಳಿಂದ ಕೂಡಿತ್ತು. ತಂಟೆಕೋರ ಜಗಳಗಂಟನಾಗಿದ್ದ. ತನ್ನ ಸ್ನೇಹಿತನನ್ನು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿ ಜೈಲಿಗೂ ಹೋಗಿ ಬಂದಿದ್ದ ಎನ್ನುತ್ತದೆ ಇತಿಹಾಸ. ಕೊಲೆಯ ಕಾರಣದಿಂದಾಗಿ ಮಿಲಾನ್‌ನಿಂದ ವೆನಿಸ್‌ ಹಾಗೂ ರೋಮ್‌ಗೆ ಪಲಾಯನ ಮಾಡುವಂತೆಯೂ ಆಯಿತು.

38 ವರ್ಷಗಳ ಜೀವಿತಾವಧಿಯಲ್ಲಿ ಕರವಾಜಿಯೊ ಸುಮಾರು 100 ವರ್ಣಚಿತ್ರಗಳನ್ನು ರಚಿಸಿದ್ದು ಅದರಲ್ಲಿ 60 ಆತನದ್ದೇ ಎಂದು ದೃಢೀಕರಿಸುವ ದಾಖಲೆಗಳನ್ನು ಹೊಂದಿವೆ.

1606ರಲ್ಲಿ ಈ ಕಲಾಕೃತಿಯನ್ನು ರಚಿಸಲಾಗಿದೆ. 2014ರಲ್ಲಿ ಯುರೋಪಿನ ಖಾಸಗಿ ಸಂಗ್ರಹಕಾರರೊಬ್ಬರಿಂದ ಪತ್ತೆ ಮಾಡಿ ಈ ಕಲಾಕೃತಿಯ ಪ್ರದರ್ಶನಕ್ಕೆ ಅವಕಾಶ ಸಿಕ್ಕಿತು. ಇದಕ್ಕೂ ಮುಂಚೆ ಕಲಾಕೃತಿಯ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.