'ಶಿವಾಪುರ' ಭೂಗೋಳದಲ್ಲಿ ಎಲ್ಲಿಯೂ ಇರದ ಆದರೆ ಭೂಗೋಳದ ಎಲ್ಲಾ ಕಡೆಗೂ ಇರಬಹುದಾದ ಊರು. ಮನುಷ್ಯ ನಿರ್ಮಿತ ಎಲ್ಲಾ ಸೀಳುಗಳನ್ನು ಮೀರಿ ಎಲ್ಲರಿಗೂ ಎಲ್ಲವೂ ಆಗಬಹುದಾದ ಸಾಧ್ಯತೆ ಮತ್ತು ಸಾಮರ್ಥ್ಯಗಳನ್ನು ಬಿಚ್ಚಿ ಚೆಲ್ಲಿದ ಊರು. ಯಾರೇನು ಆಡಿದರೂ ಗಾದೆ ನಾಣ್ಣುಡಿಯಾಗಿ ವಾಡಿಕೆಯಾಗುವ ಪ್ರಯೋಗಶೀಲ ಊರು. ಹಸಿರಿನ ತವರೂರು, ಹಾಡು ಬೆಳೆವ ಕಾಡು, ಕಣ್ಣುಗಳಿಗೆ ಕನಸು ಕೊಡುವ, ಯೌವನವನ್ನು ಕಾಪಾಡುವ, ಸುಕ್ಕು ಮೂಡದ ಜಾಣ ಮುದುಕರಿರುವ, ಆಳವಾದ ಒಲವು ತುಂಬಿದ ಊರು. ಇಂತಹ ಸ್ವಚ್ಛಂದ ಹಾಗೂ ಸಂವೇದನಾಶೀಲ ಶಿವಾಪುರ ಕಂಬಾರರ ಸ್ಮೃತಿ ಹಾಗೂ ಸೃಷ್ಟಿಯ ಬಯಲುಗುಸ್ತಿಯ ಕಣ.
ಕಬ್ಬಿಣವನ್ನು ಕಾಸಿ, ಬಡಿದು, ತಣಿಸಿ, ಕಬ್ಬಿಣದಲ್ಲಿ ಅಡಗಿರುವ ಹರಿತತೆಯನ್ನು ತೀಕ್ಷ್ಣತೆಯನ್ನು ಸಂಸ್ಕರಿಸಿ ಉಪಕರಣ ಮಾಡಿ ಲೋಕ ಬಳಕೆಗೆ ನೀಡುವ ಮೂಲಕ, ಸ್ವಯಂಪೂರ್ಣ ಹಾಗೂ ಸ್ವಾವಲಂಬಿ ಸಮಾಜಕ್ಕೆ ಆಧಾರವಾದ ಕಮ್ಮಾರಿಕೆ ಮನೆತನದಲ್ಲಿ ಹುಟ್ಟಿದವರು ಡಾ. ಚಂದ್ರಶೇಖರ ಕಂಬಾರರು. ಶಿವಾಪುರ ಶ್ರಮ-ಸ್ವಾಯತ್ತತೆ ಹಾಗೂ ಸುಸ್ಥಿರ ನಿಸರ್ಗವಿರುವ ಊರು. ಸುಸ್ಥಿರ ಪರಿಸರ ಹಾಗೂ ಸುಸ್ಥಿರ ಪ್ರಕೃತಿ ಒಂದು ಸಮಾಜ ಹಾಗೂ ವ್ಯಕ್ತಿಯ ಬೆಳವಣಿಗೆಯಲ್ಲಿ ಪ್ರಮುಖ ಪ್ರಭಾವಗಳಾಗಿರುತ್ತವೆ. ತಾಳಿಕೆಯ ಪರಿಸರ ವ್ಯಕ್ತಿಯ ಆಯ್ಕೆ ಹಾಗೂ ಧಾರಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮನುಷ್ಯನ ದುಡಿಯುವ ಸಾಮರ್ಥ್ಯ ಹೆಚ್ಚಿದಷ್ಟೂ, ತಿಳುವಳಿಕೆ ಸಾಮರ್ಥ್ಯ ಬೆಳೆದಷ್ಟೂ, ಆ ಸಮಾಜದಲ್ಲಿ ಸದೃಢತೆ ಹಾಗೂ ಸಹಬಾಳ್ವೆ ಸಾಧ್ಯವಾಗುತ್ತದೆ. ಅದನ್ನೇ ಅಮರ್ತ್ಯಸೇನ್‌ರಂತಹ ಆಧುನಿಕ ಆರ್ಥಿಕ ತಜ್ಞರು ’ಆರ್ಥಿಕ ಬಂಡವಾಳಕ್ಕಿಂತ ನೈಸರ್ಗಿಕ ಬಂಡವಾಳ ವೃದ್ಧಿಯಾಗಬೇಕು. ಮನುಷ್ಯ ಕೇಂದ್ರಿತ ಅಭಿವೃದ್ಧಿಯೇ ನಿಜವಾದ ಭಾರತದ ಅಭಿವೃದ್ಧಿ’ ಎನ್ನುತ್ತಾರೆ. ಮನುಷ್ಯ ಸಮಾಜದ ಪ್ರಗತಿ ಹಾಗೂ ಸ್ವಾತಂತ್ರ್ಯಕ್ಕೆ ನಿಸರ್ಗದ ಕೊಡುಗೆ ಅಪಾರವಾದದ್ದು. ಸಮರ್ಥಶೀಲ ಮಾನವ ಬಂಡವಾಳವು ಸಮರ್ಥಶೀಲ ನಾಡನ್ನು ಕಟ್ಟಬಲ್ಲದು ಎನ್ನುವುದೂ ಕಂಬಾರರ ಗಟ್ಟಿ ನಂಬಿಕೆ.
ಸೂರ್ಯಾ ಕರಗಿ ನೀರಾಗಿ ನಾಡಿಯೊಳಗೆ ಹರದಾನ
ಎಳೆಹರೆ ಬಂದಾಂಗ ಹುಡುಗೋರಿಗಿ
ಜೋಡೆಮ್ಮಿ ಹಾಲು ಕುಡದು ಸೆಡ್ಡು ಹೊಡೆದು ಕುಸ್ತಿ ಹಿಡಿದ
ಗರಡಿ ಮನಿ ಕಾಣಸ್ತೈತಿ ಓಣಿ ತುದಿಗಿ
ತುಂಬೀದ ಹೊಳಿಯಾಗ ತೆರಿ ಹೊಡದ ಈಸಾಂವಾ
ಗುಡಿಯ ಮುಂದಿನ ಗುಂಡ ಹೊತ್ತ ಒಗದಾಂವಾ
ಮನ್ನಿ ಶಿವರಾತ್ತ್ಯ್ರಾಗ ಹತ್ತು ಮಂದಿಯ ಕೂಡ
ಕುಸ್ತಿ ಹಿಡಿದು ಎರಿಮಣ್ಣು ಮುಕ್ಕಿಸಿದಾಂವಾ
ಸುಸ್ಥಿರ ಸಮಾಜಕ್ಕೆ ಸುಸ್ಥಿರ ಮಾನವ ಸಂಪನ್ಮೂಲ ಅಗತ್ಯ. ಮನುಷ್ಯನ ಜೀವನಮಟ್ಟ ಸುಧಾರಿಸಿದಷ್ಟೂ ಅವನ ದುಡಿಯುವ ಸ್ವಾತಂತ್ರ್ಯ, ಬದುಕುವ ಸ್ವಾತಂತ್ರ್ಯ ಅಧಿಕವಾಗುತ್ತದೆ. ಬಡಿದು ತಿನ್ನಬೇಕೆನ್ನುವ ಭಾವನೆಗಳಿಗಿಂತ, ಕೊಡದೆ ತಿನ್ನಬಾರದು ಎನ್ನುವ ಉಪಕಾರದ ಮನೋಭಾವನೆಯನ್ನು ಬಲಿಸುತ್ತದೆ ಎನ್ನುವುದು ಕಂಬಾರರ ನಂಬಿಕೆ.
ಸಾಹಿತ್ಯ, ಶಿಕ್ಷಣ, ಕಲೆಗಳು ಜನತೆಯ ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸುವಂತಿರಬೇಕು. ಮನುಷ್ಯನನ್ನು ತಿಳಿವಳಿಕೆಯುಳ್ಳವನನ್ನಾಗಿ ಮಾಡಬೇಕು. ಅವನಲ್ಲಿ ಸ್ವಾತಂತ್ರ್ಯ, ಸಹಬಾಳ್ವೆ ಹಾಗೂ ಸ್ವಾವಲಂಬನೆ ಬೀಜ ಬಿತ್ತಬೇಕು. ವಸಾಹತು ತಿಳಿವಳಿಕೆಯಲ್ಲಿ ಅನುವಾದ ಮಾಡಿಕೊಂಡ ನಮ್ಮ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಇತಿಹಾಸ, ಬದುಕು ಇವೆಲ್ಲವೂ ನಮ್ಮ ಸ್ವಂತಿಕೆ ಹಾಗೂ ಜೀವಂತಿಕೆಯನ್ನು ನಾಶಮಾಡುತ್ತಿವೆ. ಮನುಷ್ಯನಲ್ಲಿ ಪರಕೀಯತೆ ಹಾಗೂ ಅಸ್ತಿತ್ವಹೀನತೆಯನ್ನು ಹುಟ್ಟಿಸುತ್ತವೆ. ನೆಲಕ್ಕೆ ಹೊಂದದ ಹೊಸತನಗಳು ಮನುಷ್ಯರಲ್ಲಿ ಆತ್ಮಾಭಿಮಾನವಿಲ್ಲದ, ಆತ್ಮತಿರಸ್ಕಾರದ ಸ್ವಾಭಿಮಾನರಹಿತ ಗುಣ ಬೆಳೆಸುತ್ತಿವೆ. ಬ್ರಿಟಿಷರು ತಮ್ಮ ಶಂಕು, ಸರಪಣಿ, ಗೂಟಗಳಿಂದ ಭೂಮಿ ಅಳೆದು ಕೊಟ್ಟರು. ಇದರಿಂದ ಭೂಮಿಯ ಫಲವತ್ತತೆಯೇನೂ ಹೆಚ್ಚಲಿಲ್ಲ. ಭಗವದ್ಗೀತೆ, ಕುರಾನ್‌ಗಳನ್ನು ಭಾಷಾಂತರಿಸಿದರು. ಇದರಿಂದ ಯಾರೂ ಹೊಸ ತಿಳಿವಳಿಕೆ ಪಡೆಯಲಿಲ್ಲ. ಸೃಷ್ಟಿಕರ್ತನಂತೆ ಗ್ರಂಥಕರ್ತನೂ ಒಬ್ಬನೇ. ಗ್ರಂಥವೆಂದರೆ ಗ್ರಂಥಕರ್ತನ ಆಸ್ತಿ ಅಂದರು. ಇದರಿಂದ ಜನರ ತಿಳಿವಳಿಕೆಯೇನೂ ಹಿಗ್ಗಲಿಲ್ಲ, ಬದಲಾಗಿ ಬಹುಜನರ ಅಭಿವ್ಯಕ್ತಿಗಳು ಪ್ರಕ್ಷಿಪ್ತಗಳಾಗಿ ಅಕ್ಷರಸ್ಥರ ಅನುಮಾನಕ್ಕೆ ಬಲಿಯಾದವು. ಇವೆಲ್ಲವೂ ಪ್ರಕೃತಿ ಮತ್ತು ಪುರುಷನನ್ನು ಒಂದು ರೀತಿಯಲ್ಲಿ ನಿರ್ವೀರ್ಯಗೊಳಿಸಿದವು. ಕನ್ನಡ ನಾಡಿನ ನೆಲ, ಜಲ, ಜನ, ಬೆಳೆವ ಬಯಕೆಯನ್ನು ಎಂತಹ ದುಸ್ಥಿತಿಯಲ್ಲಿಯೂ ಮರೆತವರಲ್ಲ, ಹಾಡುವ ಸಾಮರ್ಥ್ಯವನ್ನು ಕಳೆದುಕೊಂಡವರಲ್ಲ.
ಬರಗಾಲ ಬಂತೆಂದರೆ ಬರವೇನೋ ಹಾಡಿಗಿ
ಮನಸಿಗೆ ನಿನ್ನ ಕನಸಿಗೆ
ನಾದಮಯ ಶಬ್ದದಲಿ ಹೂಬಿಡುವ ಕನಸುಗಳ
ಹಾಡಬೇಕೋ ತಮ್ಮ ಹಾಡಬೇಕೋ
ಆದರೆ ವಸಾಹತು ಅನುಭವಗಳು ಶಿವಾಪುರದಂತಹ ಗ್ರಾಮ ಭಾರತದ ಮನುಷ್ಯರ ಎಲ್ಲ ಸೃಜನಶೀಲ ಸಾಮರ್ಥ್ಯವನ್ನು ನುಂಗಿ ನೀರು ಕುಡಿಯುತ್ತಿವೆ. ಹಾಗಂತ ಕೈಚೆಲ್ಲಿ ಕೂರುವುದಲ್ಲ. ಚಿಗುರು ಒಣಗಿದರೂ ಬೇರು ಹಸಿ ಇರ್‍ತೈತಿ ಅನ್ನುವ ನಂಬಿಕೆಯನ್ನು ಕಳಕೊಳ್ಳದೆ, ನಮ್ಮ ಭಾಷೆ, ಸಂಸ್ಕೃತಿ ಹಾಗೂ ಶಿಕ್ಷಣವನ್ನು ಸದೃಢಗೊಳಿಸಬೇಕು. ಭಾಷಿಕರ ಸರ್ವತೋಮುಖ ಏಳಿಗೆಯನ್ನು ಸಾಧಿಸುವ ಗುರಿ ಹೊಂದಿರಬೇಕು ಎನ್ನುವುದು ಕಂಬಾರರ ಗಟ್ಟಿ ನಿಲುವು.
೧
ಕನ್ನಡ ಭಾಷೆ ಅಂದರೆ ಕಂಬಾರರಿಗೆ ಕೇವಲ ಮಾಧ್ಯಮ ಅಲ್ಲ, ವಾಹಕವೂ ಅಲ್ಲ, ಶಬ್ದದ ಸಪ್ಪಳವೂ ಅಲ್ಲ, ಪದಗಳ ಎಣಿಕೆಯೂ ಅಲ್ಲ. ಅದೊಂದು ಸ್ಮೃತಿ, ಸಂಭ್ರಮ, ಅಗಾಧ ನೆನಪು ಕನಸುಗಳ ಪರಂಪರೆ. ಕನ್ನಡ ಜನತೆಯ ನೈತಿಕ ಮೌಲ್ಯಗಳು, ಆಧ್ಯಾತ್ಮಿಕ ಆಕಾಂಕ್ಷೆಗಳು, ಧಾರ್ಮಿಕ ಅಪೇಕ್ಷೆಗಳು, ಕೃಷಿ, ಕುಸುಬು, ಕೌಶಲ್ಯಗಳು ಬದುಕಿನ ತಲ್ಲಣಗಳೆಲ್ಲವೂ ಭಾಷೆಯಲ್ಲಿ ಅಡಗಿವೆ. ’ಹಿಂದುಳಿದ ಕುಶಲಕರ್ಮಿ ವರ್ಗಕ್ಕೆ ಸೇರಿದ ನನಗೆ ಭಾಷೆ ಒಂದು ಸಂಭ್ರಮ, ಸಮೃದ್ಧಿ. ನಾದಗಳನ್ನು ನುಡಿಯಾಗಿಸಲು ಭಾಷೆಯನ್ನು ಬರವಣಿಗೆಗೆ ಬಗ್ಗಿಸಿಕೊಂಡವ. ನನ್ನ ವಾರಿಗೆಯವರು ಮತ್ತು ನನ್ನ ಕಾಲದ ಬರವಣಿಗೆಯ ಜಗತ್ತು ನಿರ್ಲಕ್ಷಿಸಿದ ಅನುಭವ ಜಗತ್ತನ್ನು ಅದರೆಲ್ಲ ಪುರಾಣ, ಆಚರಣೆ, ನಂಬಿಕೆ, ಸಂಪ್ರದಾಯಗಳೊಂದಿಗೆ ಹಿಡಿದಿಡುವ ಸಾಮರ್ಥ್ಯ ಬಂದದ್ದು ನನ್ನ ಕನ್ನಡ ಭಾಷೆ ಹಾಗೂ ಪರಿಸರದಿಂದಲೇ’ ಎನ್ನುತ್ತಾರೆ.
ಒಂದು ಭಾಷೆ ಹಾಗೂ ಸಂಸ್ಕೃತಿಯ ಅತ್ಯಂತ ಸಂವೇದನಾಶೀಲ ಅಂಗವೆಂದರೆ ಅದರ ಪುರಾಣ ಕಲ್ಪನೆ ಹಾಗೂ ರೂಪಕ ಶಕ್ತಿ. ಜನಪದ ಹಾಡು ಕಥೆಗಳು ಜನರ ಬದುಕಿನಿಂದ ಜನಿಸಿದಂತವು. ಅಲ್ಲಿ ಸಾಮುದಾಯಿಕ ಪ್ರಜ್ಞೆ ಇರುತ್ತದೆ. ಅಲ್ಲಿ ಭಾಷೆ ಕೇವಲ ಬಾಯಿಮಾತು ಆಗಿರುವುದಿಲ್ಲ. ಅಭಿವ್ಯಕ್ತಿಯ ವಿವಿಧ ರೂಪಕವಾಗಿರುತ್ತದೆ. ಬ್ರಿಟಿಷರಿಗೆ ಪುಸ್ತಕ ಮುಖ್ಯವಾಗಿದ್ದರೆ, ಭಾರತೀಯರಿಗೆ ಮಸ್ತಕ ಮುಖ್ಯವಾಗಿತ್ತು. ಭಾಷೆ ಜನಪದರ ಸಂಸ್ಕೃತಿಯಾದರೆ, ಬರವಣಿಗೆ ಒಂದು ಜನಾಂಗದ ನಾಗರಿಕತೆಯ ಫಲ. ಅದು ಉದ್ದೇಶಿತ ಸೃಷ್ಟಿ. ಒಂದು ಜನಾಂಗದ ಸಾಂಸ್ಕೃತಿಕ, ರಾಜಕೀಯ ಮತ್ತು ಬೌದ್ಧಿಕ ರಾಜಕೀಯಕ್ಕೆ ತಳಹದಿ ಬರವಣಿಗೆಯೇ. ಅಧಿಕಾರ ಮತ್ತು ರಾಜಕೀಯದಲ್ಲಿ ಮಾತಿಗಿಂತ ಬರವಣಿಗೆ ಮುಖ್ಯವಾಗುತ್ತದೆ. ಅಲ್ಲಿ ಪ್ರತಿಯೊಂದು ಅಕ್ಷರದಲ್ಲಿ ದಾಖಲಾಗುತ್ತದೆ ಮತ್ತು ಸಾಕ್ಷಿಯಾಗುತ್ತದೆ. ಜನಪದರಲ್ಲಿ ಭಾಷೆ ಬದುಕಾಗಿರುತ್ತದೆ.
ಭಾಷೆಯ ಕೆಲಸ ಇದಷ್ಟೇ ಅಲ್ಲ. ಅದು ಜನಜೀವನ ವಿಧಾನದ ಪ್ರತಿಬಿಂಬ. ಮೌಲ್ಯ ವ್ಯವಸ್ಥೆಗೆ ಒಂದು ಪ್ರಮಾಣ. ನಾವು ಕಂಡ ಸತ್ಯಗಳನ್ನು ಕಣ್ಣಿಗೆ ಕಾಣಿಸುವ ಉಪಾದಾನ. ಸಾವಿರಾರು ವರ್ಷಗಳಿಂದ ಗಾಳಿ ಮಳೆ ತಡೆದುಕೊಂಡು ಬೆಳೆದು ಬಂದ ಕನ್ನಡ ಭಾಷೆಗೆ ತನ್ನ ಅಸ್ಮಿತೆಯ ಅರಿವಿದೆ, ವೈವಿಧ್ಯದ ತಿಳಿವಿದೆ. ಕನ್ನಡದ ಈ ವೈವಿಧ್ಯ ಹಾಗೂ ತಿಳಿವುಗಳು ನಮ್ಮದಾಗಬೇಕೆಂದರೆ ನಮ್ಮ ಶಿಕ್ಷಣ, ಅಧ್ಯಯನ, ಚಿಂತನೆಗಳು ಕನ್ನಡ ಭಾಷೆಯಲ್ಲಿಯೇ ನಡೆಯಬೇಕು. ಇದರಿಂದ ಕನ್ನಡದ ಅಂತಃಸತ್ವವನ್ನು ಅರಿಯಬಹುದು. ಇಂಗ್ಲೀಷೇ ವಿದ್ಯೆ ಜ್ಞಾನ ಹಾಗೂ ಅಂತಸ್ತಿನ ಭಾಷೆ ಎಂದು ಬಿಂಬಿತವಾಗುತ್ತಿರುವ ಹೊತ್ತಿನಲ್ಲಿ, ಕನ್ನಡದ ಬಳಕೆಯನ್ನು ಒಂದು ಧಾರ್ಮಿಕ ವ್ರತದಂತೆ ದೃಢನಿಷ್ಕರ್ಷೆಯಿಂದ ಕೈಗೊಂಡರೆ ಖಂಡಿತ ಫಲ ಸಿಗುತ್ತದೆ. ನಮ್ಮ ಭಾಷೆ ದುರ್ಬಲವಾದರೆ ನಾವು ಮತ್ತು ನಮ್ಮ ಮನಸ್ಸು ಕನಸುಗಳು ದುರ್ಬಲವಾಗುತ್ತವೆ, ಸಾಂಸ್ಕೃತಿಕ ದೌರ್ಬಲ್ಯ ಮನುಷ್ಯನನ್ನು ದಾಸ್ಯಕ್ಕೆ ದೂಡುತ್ತದೆ. ಹಾಗಾಗಿ ನಮ್ಮ ಭಾಷೆ ಸಂಸ್ಕೃತಿಗಳು ಬಹುಮುಖಿ ಪರಂಪರೆಗಳು ಪುನರುಜ್ಜೀವನಗೊಳ್ಳಬೇಕೆನ್ನುವುದು ಕಂಬಾರರ ತೀವ್ರ ಕಳಕಳಿಯಾಗಿದೆ.
೨
ಕಂಬಾರರಿಗೆ ಶಿಕ್ಷಣವೆಂದರೆ ಕೇವಲ ಕಲಿಕೆಯಲ್ಲ. ಅದೊಂದು ಸಾಂಸ್ಕೃತಿಕ ಚಿಂತನೆ. ಮನುಷ್ಯ ತನ್ನ ಅರಿವನ್ನು ಮತ್ತು ಇರವನ್ನು ಕಂಡುಕೊಳ್ಳುವ ಕ್ರಮ. ಸಂಸ್ಕೃತಿಯ ನರನಾಡಿಗಳನ್ನು ಅರಿಯುವ ಮತ್ತು ವಿಸ್ತರಿಸುವ ಪ್ರಕ್ರಿಯೆ. ಆಧುನಿಕ ತಿಳಿವಳಿಕೆಗೆ ಕುರುಡಾಗದಂತೆ ಕನ್ನಡ ಬದುಕನ್ನೇ ಮೂಲವಾಗಿಟ್ಟುಕೊಂಡು ಹೊಸ ಬಗೆಯ ಜ್ಞಾನವನ್ನು ನಿರ್ಮಿಸಬೇಕು ಎನ್ನುವ ನಿರಂತರ ಅಪೇಕ್ಷೆ ಕಂಬಾರರದ್ದು. ಈ ಅರ್ಥದಲ್ಲಿ ಕನ್ನಡ ವಿಶ್ವವಿದ್ಯಾಲಯವು ಅವರ ಅನನ್ಯ ಸೃಜನಶೀಲ ಸಾಂಸ್ಕೃತಿಕ ಪ್ರಯೋಗವಾಗಿದೆ. ಇಂಗ್ಲಿಷ್ ಮತ್ತು ಸಂಸ್ಕೃತಗಳೇ ಜ್ಞಾನದ ಭಾಷೆಗಳೆಂದು ನಂಬಿದ ಹೊತ್ತಿನಲ್ಲಿ ಕನ್ನಡ ಭಾಷೆಯನ್ನು ಎಲ್ಲಾ ಸಾಧ್ಯತೆ ಹಾಗೂ ಅಂತಃಸತ್ವದೊಂದಿಗೆ ಸಂಶೋಧನೆಗೆ ಸಾಮೂಹಿಕವಾಗಿ ಸಜ್ಜುಗೊಳಿಸಿದರು.
ಮೆಕಾಲೆ ಮೆದುಳಿನಿಂದ ಹುಟ್ಟಿದ ಶೈಕ್ಷಣಿಕ ಚಿಂತನೆಗಳು ’ವ್ಯಕ್ತಿಯ ಶುದ್ಧಚಾರಿತ್ರ್ಯವನ್ನು ನಿರ್ಮಿಸುವುದೇ ಶಿಕ್ಷಣ’ ಎಂದು ಬಲವಾಗಿ ಹೇಳಿ ಬಿಟ್ಟಿದ್ದವು. ಹಿಡಿಯಷ್ಟಿರುವ ಉಚ್ಚವರ್ಗದ ಹಿತಾಸಕ್ತಿಯನ್ನು ಎತ್ತಿ ಹಿಡಿದಿದ್ದವು. ಕೆಳವರ್ಗಗಳಿಗೆ ಇಂಗ್ಲಿಷ್ ಶಿಕ್ಷಣ ಹೊಸ ಬದುಕೇನೊ ತೋರಿತು. ಆದರೆ ಅದು ನಮ್ಮೊಳಗಿನ ಅಂತಃಶಕ್ತಿಯನ್ನು ಕಳೆಯಿತು. ನಾವು ನಮ್ಮ ಮೂಲಕ ಲೋಕವನ್ನು ನೋಡುವ, ಅರಿಯುವ, ತಿಳಿಯುವ, ಪ್ರಶ್ನಿಸುವ ಸಾಮರ್ಥ್ಯವನ್ನು ಮಂಕಾಗಿಸಿತು ಎನ್ನುತ್ತಾರೆ. ಭಾರತೀಯರ ದೊಡ್ಡ ಸಾಮರ್ಥ್ಯವೇ ನೆನಪು ಮತ್ತು ಕಥೆಗಳು. ’ಏಕ’ ’ಶುದ್ಧ’ ’ಪ್ರಮಾಣಿತ’ ’ಮೂಲ’ ಎನ್ನುವ ವಸಾಹತುಶಾಹಿ ಹೊಸ ವ್ಯಸನಗಳು, ಸಾವಿರಾರು ವರ್ಷಗಳ ಕಾಲ ಸಾಮೂಹಿಕವಾಗಿ ಮಹಾಕಾವ್ಯಗಳನ್ನು ಸೃಷ್ಟಿಸಿದ ಭಾರತೀಯರ ಸಾಮೂಹಿಕ ಜ್ಞಾನದ ವಿಸ್ಮಯಗಳನ್ನು ಕುಲಗೆಡಿಸಿದವು. ಸಮುದಾಯಗಳಿಗೆ ವರ್ತಮಾನವಾಗಿದ್ದ ಕಥೆ ಬ್ರಿಟಿಷರಲ್ಲಿ ಗತವಾಗಿ ಪಠ್ಯವಾಗಿ ಪರಿವರ್ತನೆಯಾಯಿತು ಎಂದು ಬ್ರಿಟಿಷ್ ಶಿಕ್ಷಣ ಪದ್ಧತಿ ಭಾರತೀಯ ಜ್ಞಾನಶಾಖೆಗಳ ಮೇಲೆ ಬೀರಿದ ದುಷ್ಪರಿಣಾಮವನ್ನು ತೆರೆದಿಡುತ್ತಾರೆ.
ಬ್ರಿಟಿಷರ ಕಾಲ ಹಾಗೂ ಚರಿತ್ರೆಯ ಗ್ರಹಿಕೆಗೆ ತೀರಾ ಇತ್ತೀಚಿನದು. ಅದು ಭೂತ, ವರ್ತಮಾನ ಹಾಗೂ ಭವಿಷ್ಯ ಎಂದು ವಿಭಜಿಸಿಕೊಂಡಿದೆ. ನಮಗೆ ಚರಿತ್ರೆ ಎಂದರೆ ಇತಿಹಾಸವು ಆದಂತೆ ವರ್ತಮಾನದ ವ್ಯಕ್ತಿತ್ವವೂ ಹೌದು. ಚರಿತ್ರೆಯ ಪಾಶ್ಚಾತ್ಯ ಕಲ್ಪನೆ ಭೂತ ವರ್ತಮಾನಗಳು ಭಾರತೀಯರಲ್ಲಿ ಸೌಹಾರ್ದಯುತವಾಗಿ ಒಟ್ಟಿಗೆ ಇರಬಲ್ಲವು ಎನ್ನುವುದನ್ನು ಬುದ್ಧಿಪೂರ್ವಕವಾಗಿ ಕಡೆಗಣಿಸಿತು. ಒಳಗೊಳ್ಳಬೇಕಾದ ಸಂವೇದನೆಗಳಿಗಿಂತ ಒಡೆದು ನೋಡುವ ಪ್ರವೃತ್ತಿಯನ್ನು ಮೆಕಾಲೆ ಶಿಕ್ಷಣ ಕ್ರಮ ಬೆಳಸಿದೆ. ಗತ ಎನ್ನುವುದು ನಾಚಿಕೆಯಾಗಿ, ವರ್ತಮಾನದ ಆಂಗ್ಲ ಶಿಕ್ಷಣ ಭವಿಷ್ಯಕ್ಕೆ ಶಕ್ತಿ ನೀಡಬಲ್ಲದು ಎನ್ನುವ ಭ್ರಮೆಗಳನ್ನು ಬಿತ್ತಲಾಗಿದೆ. ಇಂದಿನ ಶಿಕ್ಷಣವು ವ್ಯಕ್ತಿಯನ್ನು ಅಳುಬುರುಕನನ್ನಾಗಿಸಿ ಕೀಳರಿಮೆಯನ್ನು ಬೆಳೆಸುತ್ತಿದೆ ಎನ್ನುತ್ತಾರೆ. ವ್ಯಕ್ತಿಯನ್ನು ಸೃಜನಶೀಲ ಶಕ್ತಿಯಾಗಿಸುವುದಕ್ಕಿಂತ ಅನುಕರಣಶೀಲನನ್ನಾಗಿಸಿದೆ.
ಬ್ರಿಟಿಷರ ಶಾಲೆಯ ಕಲ್ಪನೆ ಬರುವ ಮೊದಲು ವ್ಯಕ್ತಿ ಸಮಾಜದ ಅವಿಭಾಜ್ಯ ಅಂಗವಾಗಿದ್ದ. ಆಧುನಿಕ ಶಿಕ್ಷಣದಿಂದಾಗಿ ವ್ಯಕ್ತಿ ಮತ್ತು ಸಮಾಜದೊಂದಿಗೆ ಸಂಬಂಧ ಕಡಿದು ಹೋಗಿದೆ. ಅನ್ನದಷ್ಟೇ ಅವಶ್ಯಕವಾದ ಮತ್ತೊಂದು ಜೀವಸತ್ವವೆಂದರೆ ಸಂಸ್ಕೃತಿ ಮತ್ತು ಸಮಾಜ. ಕಡು ಬಡತನದಲ್ಲೂ ಅನಕ್ಷರತೆಯಲ್ಲೂ ಗೌರವದಿಂದ ವಿವೇಕದಿಂದ ಬದುಕಿದ ಸಂಸ್ಕೃತಿ ನಮ್ಮದು. ಅವರವರ ಸಾಂಸ್ಕೃತಿಕ ಪರಂಪರೆ ಅವರಿಗೊಂದು ಗೌರವ ನೀಡಿದೆ. ಭೌತಿಕ ಪ್ರಗತಿಗೆ ಭಾವನಾತ್ಮಕ ವಿಕಾಸವು ಮುಖ್ಯ. ಸಾಹಿತ್ಯ, ವಿಜ್ಞಾನ, ಮಾನವಿಕಗಳು ಯಾವುದನ್ನು ಬೋಧಿಸಿದರೂ ಅದು ಬದುಕಿನ ನಿಖರ ಸತ್ಯಗಳನ್ನು ದರ್ಶನ ಮಾಡಿಸಬೇಕು. ಸಮೃದ್ಧ ಹಾಗೂ ಸಾತ್ವಿಕ ಭಾವನೆಗಳನ್ನು ಬೆಳೆಸಬೇಕು. ಕೀಳರಿಮೆಯನ್ನು ಕಳೆದು ಸಮಾನತೆಯನ್ನು ಬೋಧಿಸಬೇಕು. ಇಂದಿನ ಶಿಕ್ಷಣ ಕ್ರಮವು ಸಾಹಿತ್ಯ, ಸಮಾಜ, ಮಾನವಿಕ ಹಾಗೂ ವಿಜ್ಞಾನ ವಿದ್ಯಾರ್ಥಿಗಳ ನಡುವೆ ಹುಟ್ಟು ಹಾಕಿದ ತರತಮದ ಬಗ್ಗೆ ಕಂಬಾರರು ಗಂಭೀರವಾಗಿ ಚಿಂತಿಸಿದವರು.
ಕಲಿಕೆ ಎನ್ನುವುದು ಪರಸ್ಪರರಲ್ಲಿ ನಂಬಿಕೆಯನ್ನು ಬೆಳೆಸಿ ಮಕ್ಕಳನ್ನು ಹೆಚ್ಚು ಹೆಚ್ಚು ಸೃಜನಶೀಲವಾಗಿಸಬೇಕು. ಇಂದು ಸಾಹಿತ್ಯದ ವಿದ್ಯಾರ್ಥಿ ಸಂಕೋಚದಿಂದ ಶಿಕ್ಷಣ ಪಡೆಯುತ್ತಿದ್ದಾನೆ. ಒಂದು ಬಗೆಯ ಸಾಮಾಜಿಕ ಕೀಳರಿಮೆಯಿಂದ ಅವನು ಸುಶಿಕ್ಷಿತನಾಗುತ್ತಾನೆ. ಸಾಹಿತ್ಯ ಒಂದೇ ನಮಗೆ ಜಗತ್ತನ್ನು ಹಾಗೂ ಜಗತ್ತಿನಾಚೆಯೂ ನೋಡುವುದನ್ನು ಕಲಿಸುವ ಸಾಧನವಾಗಿದೆ. ಮನುಷ್ಯತ್ವವನ್ನು ನಮ್ಮಲ್ಲಿ ಹುಟ್ಟಿಸುವುದು ಸಾಹಿತ್ಯ. ಶ್ರೀಮಂತರು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೋಗಿ ಸೊಕ್ಕು ಬೆಳಸಿಕೊಳ್ಳುತ್ತಿದ್ದಾರೆ. ಬಡವರ ಮಕ್ಕಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಾ ಕೀಳರಿಮೆ ಬೆಳೆಸಿಕೊಳ್ಳುತ್ತಿದ್ದಾರೆ. ನಮ್ಮ ಮಕ್ಕಳಿಗೆ ಪ್ರಪಂಚದ ಜ್ಞಾನವೆಲ್ಲವೂ ಕನ್ನಡದ ಮೂಲಕ ಬರಬೇಕು. ಕನ್ನಡದಲ್ಲಿಯೇ ಸಶಕ್ತ ಹಾಗೂ ಸೃಜನಶೀಲ ಶಿಕ್ಷಣ ಸಂಸ್ಕೃತಿ ಬೇರುಗಳು ಅಡಗಿವೆ. ಆಂಗ್ಲಶಿಕ್ಷಣ ಕೇವಲ ಅಕ್ಷರ ಕಲಿಸುತ್ತಾ ಕೌಶಲ್ಯರಹಿತ ಭಾವನೆಗಳ ಬರ ಸೃಷ್ಟಿಸಿದೆ. ಶಿಕ್ಷಣ ಸ್ವತಂತ್ರ ಹಾಗೂ ಸ್ವಾಭಿಮಾನ ಸಮಾಜದ ಉತ್ಪನ್ನವಾಗಬೇಕು. ನೆಲದೊಡಲ ಸತ್ವವನ್ನು ನಮ್ಮ ಮಕ್ಕಳು ಹೀರಿ ಬೆಳೆಯಬೇಕು. ಇಂತಹ ವ್ಯಕ್ತಿತ್ವವುಳ್ಳ ಮಕ್ಕಳಿಗೆ ಸಾಂಸ್ಕೃತಿಕ ಜವಾಬ್ದಾರಿ ಇರುತ್ತದೆ. ಶಿಕ್ಷಣ ಸ್ವಂತಿಕೆ ಮತ್ತು ಜೀವಂತಿಕೆಯನ್ನು ಬೆಳೆಸಬೇಕು. ಮನುಷ್ಯನಲ್ಲಿ ಸ್ವತಂತ್ರ ಹಾಗೂ ಪರಿಪೂರ್ಣತ್ವ ಭಾವವನ್ನು ಬಿತ್ತಬೇಕು. ಇಂದು ಅದು ಆಗುತ್ತಿಲ್ಲ.
ಇಂದಿನ ವರ್ಗಕೋಣೆ ಶಿಕ್ಷಣವು ’ಹೋರಿಗಳು ಎತ್ತಾಗಿ ನೊಗ ಎತ್ತಲಾರದೆ ಗದ್ದೆಯಲ್ಲಿ ಬಿದ್ದಾವೋ ಬಾಲ ಮುದುರಿ’ ಎನ್ನುವಂತ ಅಪಕ್ವ, ಅತಂತ್ರ ಹಾಗೂ ನಿರ್ಬಲ ವ್ಯಕ್ತಿತ್ವವನ್ನು ನಿರ್ಮಿಸುತ್ತಿದೆ. ಶಿಕ್ಷಣ ಮತ್ತು ಶಿಕ್ಷಕ ವಿದ್ಯಾರ್ಥಿಯನ್ನು ತಿಳಿವಳಿಕೆಗೆ ಯೋಗ್ಯನನ್ನಾಗಿ ಮಾಡಬೇಕು. ತಿಳಿವಳಿಕೆ ಹುಟ್ಟುವುದು ವಿದ್ಯಾರ್ಥಿಯಲ್ಲಿಯೇ ಹೊರತು ಪಠ್ಯ ಅಥವಾ ಶಿಕ್ಷಣದಲ್ಲಿ ಅಲ್ಲ. ನಾವಿಂದು ಎಷ್ಟೇ ಕೃಷಿಯಲ್ಲಿ ಮುಂದುವರೆದಿದ್ದರೂ ಬೀಜ ಮೊಳೆತು ಅನ್ನ ಆಹಾರವಾಗುವುದು ಮಣ್ಣಿನಲ್ಲಿಯೇ. ಶಿಕ್ಷಣ ಕೂಡ ಭಾಷೆ ಹಾಗೂ ಶಿಕ್ಷಕನ ಮೂಲಕ ಹದಗೊಂಡು ಮಗುವಿನಲ್ಲಿ ಚಿಗುರಿ ಅರಳಬೇಕು. ಅಂತಹ ಶಿಕ್ಷಣಕ್ಕೆ ಸಾಮಾಜಿಕ ಜವಾಬ್ದಾರಿ ಬರುತ್ತದೆ. ಅದು ಕನ್ನಡದಲ್ಲಿಯೇ ನಡೆಯಬೇಕು ಎನ್ನುವ ಮಹತ್ವದ ಮಾತು ಕಂಬಾರರದು.
ಕನ್ನಡ ಕೇವಲ ಭಾಷೆಯಲ್ಲ, ಮಾಧ್ಯಮವೂ ಅಲ್ಲ. ಅದು ನಮ್ಮ ಮೌಲ್ಯವ್ಯವಸ್ಥೆಯ ಒಂದು ಪ್ರಮಾಣ. ನಮ್ಮ ಭಾವನಾತ್ಮಕ ಬೌದ್ಧಿಕ ವ್ಯಕ್ತಿತ್ವ. ಅದು ನಮ್ಮ ಸಾಂಸ್ಕೃತಿಕ ಅಗತ್ಯ. ಅದು ನಮ್ಮ ಸರ್ವ ಚೈತನ್ಯದ ಮೂಲ. ನಮ್ಮ ಕನಸು ಹಾಗೂ ಸದಭಿರುಚಿಗಳ ಆಗರ. ಹಾಗಾಗಿ ಕನ್ನಡದಲ್ಲಿಯೇ ಶಿಕ್ಷಣವಿರಬೇಕು. ಪ್ರಪಂಚದ ಎಲ್ಲಾ ತಿಳಿವಳಿಕೆಗಳು ಕನ್ನಡದ ಮೂಲಕವೇ ನಮ್ಮ ಮಕ್ಕಳಿಗೆ ದೊರಕಬೇಕು ಎನ್ನುವುದು ಭಾಷೆ ಹಾಗೂ ಶಿಕ್ಷಣ ಕುರಿತು ಕಂಬಾರರ ಪ್ರಮುಖ ಕಾಳಜಿಯಾಗಿದೆ.
----
ಲೇಖಕರು: ವೀರೇಶ ಬಡಿಗೇರ
ಪ್ರಾಧ್ಯಾಪಕರು
ಹಸ್ತಪ್ರತಿಶಾಸ್ತ್ರ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.