ADVERTISEMENT

ಗೋ.ನಾ. ಸ್ವಾಮಿ: ತಾಯಿ ಕೊಟ್ಟ ಬಳುವಳಿ ಜನಪದ ಜೋಳಿಗೆ..

ಜನಪದ ಹಾಡುಗಳ ಮೂಲಕ ನಾಡಿನಲ್ಲಿ ಚಿರಪರಿಚಿತರಾಗಿರುವ ಗೋ.ನಾ.ಸ್ವಾಮಿ ಶಿಕ್ಷಕ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ರಾಜ್ಯ, ದೇಶ, ವಿದೇಶಗಳಲ್ಲಿ ಜನಪದ ಸೊಗಡು ಹರಡುತ್ತಿದ್ದಾರೆ.

ಕೆ.ಓಂಕಾರ ಮೂರ್ತಿ
Published 5 ಜುಲೈ 2025, 23:28 IST
Last Updated 5 ಜುಲೈ 2025, 23:28 IST
<div class="paragraphs"><p>ಗೋ.ನಾ.ಸ್ವಾಮಿ</p></div>

ಗೋ.ನಾ.ಸ್ವಾಮಿ

   

ಜನಪದ ಹಾಡುಗಳ ಮೂಲಕ ನಾಡಿನಲ್ಲಿ ಚಿರಪರಿಚಿತರಾಗಿರುವ ಗೋ.ನಾ.ಸ್ವಾಮಿ ಶಿಕ್ಷಕ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ರಾಜ್ಯ, ದೇಶ, ವಿದೇಶಗಳಲ್ಲಿ ಜನಪದ ಸೊಗಡು ಹರಡುತ್ತಿದ್ದಾರೆ. 500ಕ್ಕೂ ಅಧಿಕ ಜನಪದ ಹಾಡು ಹಾಡಿದ್ದು, 64 ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.

***

ADVERTISEMENT

ತಾಯಿ ಜಯಮ್ಮ ಹಳ್ಳಿಗಳಲ್ಲಿ ಮದುವೆಗಳಿಗೆ ಹೋಗಿ ಸೋಬಾನೆ ಪದ ಹಾಡುತ್ತಿದ್ದರು. ಅವ್ವನ ಮಡಿಲಲ್ಲಿ ಮಲಗಿರುತ್ತಿದ್ದ ಐದು ವರ್ಷದ ಹುಡುಗ ಹಾಡುಗಳನ್ನು ಗುನುಗುತ್ತಾ ನಿದ್ರೆಗೆ ಜಾರುತ್ತಿದ್ದ. 32ನೇ ವಯಸ್ಸಿಗೆ ಅವ್ವ ತೀರಿಕೊಂಡರು. ಆಗ ಆ ಹುಡುಗನಿಗೆ ಹತ್ತು ವರ್ಷ. ಅಷ್ಟರಲ್ಲಿ ಅವ್ವ ಹಾಡುತ್ತಿದ್ದ ಸೋಬಾನೆ ಪದಗಳು ಈ ಹುಡುಗನ ಎದೆಯೊಳಗೆ ಇಳಿದುಬಿಟ್ಟಿದ್ದವು. ಮುಂದೆ ಇದೇ ಸಂಗೀತದ ಆಸಕ್ತಿಗೆ ದಾರಿ ತೋರಿಸಿತು.

ಈಗ ದೇಶ–ವಿದೇಶಗಳಲ್ಲಿ ಜನಪದ ಹಾಡುಗಳ ಮೂಲಕ ಜನಪದ ಸೊಗಡನ್ನು ಹರಡುತ್ತಿರುವ ಗೋ.ನಾ.ಸ್ವಾಮಿ ಅವರೇ ಅವತ್ತಿನ ಬಾಲಕ.

‌ಜನಪದ ಹಾಡಿನ ಮೋಹ ಹೆಚ್ಚಾಗುತ್ತಿದ್ದಂತೆ ಶಿಕ್ಷಕ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದ ಅವರು ತಮ್ಮನ್ನು ಸಂಪೂರ್ಣವಾಗಿ ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡರು. ಜನಪದ ಗೀತೆಗಳ ಮೂಲಕ ಜನರ ಮನಸ್ಸು ಆವರಿಸಿಕೊಂಡಿದ್ದಾರೆ. ಗಾಯಕ, ಗೀತ ರಚನೆಕಾರ, ನಿರೂಪಕ, ಸಂಗೀತ ಸಂಯೋಜಕ–ಹೀಗೆ ಬಹುಮುಖ ಪ್ರತಿಭೆಯಿಂದ ಗುರುತಿಸಿಕೊಂಡಿದ್ದಾರೆ. ಇವರದು ಕೋಲಾರ ತಾಲ್ಲೂಕಿನ ಸುಗಟೂರು.

ನಾಲ್ಕು ದಶಕಗಳಿಂದ ಜನಪದ ಗೀತೆಗಳ ಹಾಡುಗಾರಿಕೆಯಲ್ಲಿ ತೊಡಗಿರುವ ಇವರು ಸುಮಾರು 64 ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಅಮೆರಿಕದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಹಾಡಿದ್ದಾರೆ. ಆಗಸ್ಟ್‌ ಅಂತ್ಯಕ್ಕೆ ಫ್ಲೋರಿಡಾದ ಲೇಕ್‌ಲ್ಯಾಂಡ್‌ನಲ್ಲಿ ನಡೆಯಲಿರುವ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಆಹ್ವಾನ ಬಂದಿದ್ದು, ಸಿದ್ಧತೆ ನಡೆಸುತ್ತಿದ್ದಾರೆ.

‘ತುಮಕೂರು ಜಿಲ್ಲೆಯ ಶಿರಾದಲ್ಲಿ ಶಿಕ್ಷಕನಾಗಿದ್ದೆ. 2005ರಲ್ಲಿ ಮುಖ್ಯ ಶಿಕ್ಷಕನಾಗಿ ಬಡ್ತಿ ಲಭಿಸಿತು. ಅಲ್ಲಿದ್ದಾಗ ನನ್ನ ಸಂಗೀತದ ಬದುಕಿಗೆ ಮಹತ್ವದ ತಿರುವು ಲಭಿಸಿತಾದರೂ ಹಾಡುಗಾರಿಕೆಗೆ ಏನೋ ಅಡ್ಡಿಯಾಗುತ್ತಿದೆ ಎನಿಸತೊಡಗಿತು. ಶಿಕ್ಷಕ ವೃತ್ತಿಯಲ್ಲಿದ್ದುಕೊಂಡು ಗಾಯನಕ್ಕೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಈ ಕ್ಷೇತ್ರದಲ್ಲಿ ಹೆಸರು ಮಾಡಿ ತಾಯಿ ಹೆಸರು ಉಳಿಸಬೇಕೆಂದು 2007ರಲ್ಲೇ ಶಿಕ್ಷಕ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದೆ. ಬೆಂಗಳೂರಿಗೆ ಬಂದು ಜನಪದ ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡೆ’ ಎಂದು ಗೋ.ನಾ.ಸ್ವಾಮಿ ನುಡಿಯುತ್ತಾರೆ.

ಇವರ ತಂದೆ, ತಾಯಿ, ಅಕ್ಕಂದಿರು, ಅಣ್ಣ ಮಾಲೂರು ತಾಲ್ಲೂಕಿನ ಯಲುವಗುಳಿ ಗ್ರಾಮದಲ್ಲಿ ಕೂಲಿ ಮಾಡಿ ಬದುಕುತ್ತಿದ್ದರು. ತಾಯಿ ತೀರಿ ಹೋದ ಮೇಲೆ ಸೋದರ ಮಾವನ ಮನೆ ಇದ್ದ ಸುಗಟೂರಿಗೆ ಇವರನ್ನು ಓದಲು ಕಳಿಸಿದರು. ತಾಯಿಯ ಗಾಯನದಿಂದ ಪ್ರಭಾವಿತರಾದ ಇವರು 5ನೇ ತರಗತಿಯಲ್ಲಿ ಓದುವಾಗಲೇ ಹಾಡುತ್ತಿದ್ದರು. ಸುಗಟೂರಿನಲ್ಲಿ ಎಸ್‌ಎಸ್‌ಎಲ್‌ಸಿ ಪೂರೈಸಿ ನಂತರ ಟಿಸಿಎಚ್‌ ಮುಗಿಸುತ್ತಿದ್ದಂತೆ ಶಿಕ್ಷಕ ಕೆಲಸವೂ ಲಭಿಸಿತು. ಆಗ ಇವರಿಗೆ ಕೇವಲ 19 ವರ್ಷ.

‘ಶಿರಾದಲ್ಲಿ ಶಿಕ್ಷಕ ವೃತ್ತಿ ಆರಂಭವಾಯಿತು. ಅಲ್ಲೇ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಾನೇ ರಚಿಸಿದ ಜನಪದ ಶೈಲಿಯ ಗೀತೆಗಳನ್ನು ಹಾಡುತ್ತಿದ್ದೆ. ಇದೇ ರೀತಿ 450ಕ್ಕೂ ಅಧಿಕ ಗೀತೆಗಳನ್ನು ಬರೆದಿದ್ದೇನೆ. ‘ಮಧುರ ಅಲೆಗಳು’ ನನ್ನ ಮೊದಲ ಧ್ವನಿಸುರುಳಿ (ಆಲ್ಬಂ). ‘ಅಮ್ಮನ ಮನೆ’ ಯೂಟ್ಯೂನ್‌ನಿಂದ 22 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಕೋವಿಡ್‌ಗೆ ಮೊದಲು ಕೋಲಾರಕ್ಕೆ ಎಸ್‌.ಬಿ.ಬಾಲಸುಬ್ರಹ್ಮಣ್ಯಂ ಅವರನ್ನೂ ಆಹ್ವಾನಿಸಿ ಸಂಗೀತ ಕಾರ್ಯಕ್ರಮ ನೀಡಿದ್ದೆವು’ ಎಂದು 55 ವರ್ಷ ವಯಸ್ಸಿನ ಗೋ.ನಾ.ಸ್ವಾಮಿ ನೆನಪಿಸಿಕೊಳ್ಳುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಕಾರ್ಯಕ್ರಮಗಳಲ್ಲಿ ಸಿನಿಮಾ ಹಾಡುಗಳೇ ಆವರಿಸಿಕೊಂಡಿವೆ. ಜನಪದ ಹಾಡುಗಳಿಗೆ ಬೇಡಿಕೆ ತೀರಾ ಕಡಿಮೆ. ಆದರೆ, ವಿದೇಶಗಳಲ್ಲಿ ಕೆಲ ಪ್ರದೇಶಗಳಲ್ಲಿ ಜನಪದ ಹಾಡು ಹಾಡಿದ ಮೇಲೆ ಅಲ್ಲಿನ ಜನರಿಗೆ ಜನಪದದ ಮೇಲಿನ ಪ್ರೀತಿ ಬಂದಿದೆ. ಜನಪದ ಹಾಡುಗಳನ್ನು ಹಾಡಿ ಎಂದು ಹುರಿದುಂಬಿಸುವುದನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ ಎನ್ನುತ್ತಾರೆ. ⇒v

ಜಗ್ಗಣಕ್ಕ ಮೂಲಕ ಜನಪದ ಸುಧೆ…

ಗೋ.ನಾ.ಸ್ವಾಮಿ ‘ಜಗ್ಗಣಕ್ಕ ಸಂಗೀತ ಸುಗ್ಗಿ’ ಎಂಬ ಕಾರ್ಯಕ್ರಮದ ಮೂಲಕ ಜನಪದ ಗಾಯಕರಿಗೆ ವೇದಿಕೆ ಒದಗಿಸುತ್ತಿದ್ದಾರೆ. ರಾಜ್ಯದಾದ್ಯಂತ ಸುಮಾರು 152 ತಾಲ್ಲೂಕುಗಳಲ್ಲಿ ಈ ಕಾರ್ಯಕ್ರಮ ಮಾಡಿ ಹೊಸ ಪ್ರತಿಭೆಗಳನ್ನು ಶೋಧಿಸುವ ಗುರಿ ಹೊಂದಿದ್ದಾರೆ. ‘ಸಿನಿಮಾದ ಮಾಯಾಲೋಕಕ್ಕೆ ಸಿಲುಕಿ ದೇಸಿ ಜನಪದ ಕಲೆಗಳು ದೂರವಾಗುತ್ತಿವೆ. ಗ್ರಾಮೀಣ ಭಾಗದ ಗಾಯಕರನ್ನು ಗುರುತಿಸಿ ಬೆಳೆಸುವ ಉದ್ದೇಶ ಈ ಕಾರ್ಯಕ್ರಮದ ಹಿಂದಿದೆ’ ಎಂದು ಅವರು ಹೇಳುತ್ತಾರೆ.

ಪ್ರಯಾಣಿಕರ ಹೈಟೆಕ್‌ ತಂಗುದಾಣ ಕೊಡುಗೆ

ಗೋ.ನಾ.ಸ್ವಾಮಿ ಹಾಡು ಹಾಡುತ್ತಾ ರಾಜ್ಯ ದೇಶ ವಿದೇಶ ಸುತ್ತುತ್ತಿದ್ದರೂ ತಮ್ಮ ಊರು ಮರೆತಿಲ್ಲ. ಸುಗಟೂರು ಗ್ರಾಮದಲ್ಲಿ ಪ್ರಯಾಣಿಕರ ಹೈಟೆಕ್‌ ಪ್ರಯಾಣಿಕರ ತಂಗುದಾಣ ನಿರ್ಮಿಸಿ ಬೆಳೆದೂರಿನ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕಲ್ಲಿನ ಬೆಂಚ್‌ಗಳು ದಿನಪತ್ರಿಕೆಗಳು ಶುದ್ಧ ನೀರಿನ ವ್ಯವಸ್ಥೆ ಫ್ಯಾನ್‌ ಎಫ್‌.ಎಂ ರೇಡಿಯೊ ಬಣ್ಣದ ಲೈಟ್‌ಗಳು ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌ ಸೌಲಭ್ಯ ಈ ನಿಲ್ದಾಣದಲ್ಲಿವೆ. ಸಿ.ಸಿ.ಟಿ.ವಿ ಕ್ಯಾಮೆರಾ ಉಚಿತ ವೈಫೈ ಟಿ.ವಿ ಬಸ್ಸುಗಳ ವೇಳಾಪಟ್ಟಿ ಫಲಕ ಅಳವಡಿಸಲೂ ಮುಂದಾಗಿದ್ದಾರೆ. ಸುಮಾರು ₹ 7 ಲಕ್ಷ ಸ್ವಂತ ಹಣ ಖರ್ಚು ಮಾಡಿ ಈ ನಿಲ್ದಾಣಕ್ಕೆ ಕಾಯಕಲ್ಪ ಕಲ್ಪಿಸಿದ್ದಾರೆ.

‘ನನ್ನ ಬೆಳೆಸಿದ ಊರಿನ ಜನರಿಗೆ ನನ್ನ ಕಡೆಯಿಂದ ಸಣ್ಣ ಸಹಾಯ ಮಾಡಬೇಕು ಅಂದುಕೊಂಡು ಈ ಕೆಲಸ ಮಾಡಿದ್ದೇನೆ. ಗಾಯನದಿಂದ ಬಂದ ಹಣವನ್ನೇ ಇದಕ್ಕೆ ಬಳಸಿದ್ದೇನೆ’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.