ADVERTISEMENT

ಮಾರುಕಟ್ಟೆಯಲ್ಲಿ ಚುಕುಬುಕು

ವಿದ್ಯಾ ವಿ.ಹಾಲಭಾವಿ
Published 4 ಜನವರಿ 2020, 19:30 IST
Last Updated 4 ಜನವರಿ 2020, 19:30 IST
ಮೆಕ್ಲಾಂಗ್ ಮಾರುಕಟ್ಟೆ
ಮೆಕ್ಲಾಂಗ್ ಮಾರುಕಟ್ಟೆ   

ಎಲ್ಲಾ ವ್ಯಾಪಾರಸ್ಥರು ರೈಲು ಹಾದುಹೋಗಲು ದಾರಿ ಮಾಡಿಕೊಡಲು, ತಮ್ಮ ಗುಡಾರಗಳಿಗೆ ಆಧಾರವಾಗಿರುವ ಕೋಲುಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ಮಾರುಕಟ್ಟೆಯು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ.

ಈರುಳ್ಳಿ, ಬೆಳ್ಳುಳ್ಳಿಯ ಪುಟ್ಟ ಪುಟ್ಟ ಗುಡ್ಡೆಗಳು. ತರಹೇವಾರಿ ಸೊಪ್ಪು, ತರಕಾರಿಗಳು. ಉಷ್ಣವಲಯದಲ್ಲಿ ಬೆಳೆಯುವ ಲಿಚಿ, ದುರಿಯನ್, ಮಾವು ಮುಂತಾದ ಬಣ್ಣ ಬಣ್ಣದ ಹಣ್ಣುಗಳ ರಾಶಿ. ಒಣಗಿದ ಮಸಾಲೆ ವಸ್ತುಗಳು. ಪೇಸ್ಟ್‌ಗಳು ಮತ್ತು ಗಿಡಮೂಲಿಕೆಗಳು. ಹೊಸದಾಗಿ ಹಿಡಿದು ತಂದಿಟ್ಟ ಮೀನು, ಸೀಗಡಿ ಮತ್ತಿತರ ಸಮುದ್ರಾಹಾರಗಳ ಜೊತೆಗೆ ಸ್ಥಳೀಯ ಆಹಾರ ಮಾರಾಟ ಮಾಡುವ ಮಾರುಕಟ್ಟೆಯೊಂದು ಥ್ಲಾಲೆಂಡ್‌ನಲ್ಲಿದೆ.

ಬ್ಯಾಂಕಾಕ್‌ನಿಂದ ಪಶ್ಚಿಮಕ್ಕೆ 37 ಮೈಲಿ ದೂರದಲ್ಲಿರುವ ಸಮುತ್ ಸಾಂಗ್‍ಖ್ರಾಮ್‍ನಲ್ಲಿರುವ ಮೆಕ್ಲಾಂಗ್ ರೈಲ್ವೆ ಮಾರುಕಟ್ಟೆಯು ಏಷ್ಯಾದ ಇತರೆ ಮಾರುಕಟ್ಟೆಯಂತೆಯೇ ಕಂಡುಬರುತ್ತದೆ. ಸ್ಥಳೀಯರು ಇಲ್ಲಿಗೆ ಬಂದು ತಮಗೆ ಬೇಕೆನಿಸಿದ ಸಾಮಾನುಗಳನ್ನು ಖರೀದಿಸುತ್ತಾರೆ. ಕರಿದಿಟ್ಟ ಕಪ್ಪೆಯನ್ನು ಕಡ್ಡಿಗೆ ಸಿಕ್ಕಿಸಿ ಮಾರುತ್ತಿರುವ ಇಲ್ಲಿನ ವಿಶೇಷ ತಿನಿಸನ್ನು ನೋಡಿ ಪ್ರವಾಸಿಗರು ಅಚ್ಚರಿಪಡುತ್ತಾರೆ. ಈ ಮಾರುಕಟ್ಟೆಯು ಸ್ವಲ್ಪವೇ ಎತ್ತರದಲ್ಲಿರುವ ನೇತಾಡುವ ಕೊಡೆಗಳ ಆಶ್ರಯದಲ್ಲಿದೆ. ನೀವು ಸೂಕ್ಷ್ಮವಾಗಿ ಅವಲೋಕಿಸಿದರೆ ನಿಜವಾಗಿ ರೈಲ್ವೆ ಹಳಿಗಳ ಮೇಲೆ ನಡೆಯುತ್ತಿರುವುದನ್ನು ಗಮನಿಸಬಹುದು.

ADVERTISEMENT

ನಂತರ ಕಿವಿಗಡಚಿಕ್ಕುವ ಸೈರನ್ ಕೇಳಿಸುತ್ತದೆ. ಒಂದು ಕ್ಷಣದಲ್ಲಿ ಇಡೀ ಮಾರುಕಟ್ಟೆಯು ರೂಪಾಂತರಗೊಳ್ಳುತ್ತದೆ. ಅಂಗಡಿಯವರು ಕಣ್ಮರೆಯಾಗುತ್ತಾರೆ.

ಮಳಿಗೆದಾರರು ತಮ್ಮ ಉತ್ಪನ್ನಗಳನ್ನು ದೂರವಿಡುತ್ತಾರೆ. ಒಂದು ಕ್ಷಣದಲ್ಲಿ ನೀವು, ಸ್ಥಳೀಯರು ತರಕಾರಿಗಳನ್ನು ಖರೀದಿಸುವುದನ್ನು ನೋಡುತ್ತಿರುತ್ತೀರಿ. ಮರುಕ್ಷಣದಲ್ಲಿ ವ್ಯಾಪಾರಿಗಳು ತಮ್ಮ ಬುಟ್ಟಿಗಳನ್ನು, ಪೆಟ್ಟಿಗೆಗಳನ್ನು ಮತ್ತು ಹಳಿಯ ಬದಿಯಲ್ಲಿರುವ ವಸ್ತುಗಳನ್ನೆಲ್ಲಾ ತೆಗೆಯುತ್ತಿರುವುದನ್ನು ನೋಡುತ್ತೀರಿ. ಎಲ್ಲಾ ವ್ಯಾಪಾರಸ್ಥರು ರೈಲು ಹಾದುಹೋಗಲು ದಾರಿ ಮಾಡಿಕೊಡಲು, ತಮ್ಮ ಗುಡಾರಗಳಿಗೆ ಆಧಾರವಾಗಿರುವ ಕೋಲುಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ಮಾರುಕಟ್ಟೆಯು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ರೈಲು ಹಾದು ಹೋಗುವಾಗ ಮಾರುಕಟ್ಟೆಯಲ್ಲಿರುವ ಹಣ್ಣುಗಳು, ತರಕಾರಿಗಳು ಎಲ್ಲವನ್ನೂ ಮುಟ್ಟುತ್ತದೆ.

ರೈಲು ಹೋದ ನಂತರ ಮಾರಾಟಗಾರರು ತಮ್ಮ ಮಳಿಗೆಗಳನ್ನು, ಗುಡಾರಗಳನ್ನು ಹಿಂದಕ್ಕೆ ತಳ್ಳುತ್ತಾರೆ. ಏನೂ ನಡೆದೇ ಇಲ್ಲವೇನೋ ಅನ್ನುವ ರೀತಿಯಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತದೆ. 1905ರಲ್ಲಿ ರೈಲ್ವೆ ಮಾರ್ಗ ಸ್ಥಾಪನೆಯಾಗುವ ಮೊದಲೇ ಹಲವಾರು ತಲೆಮಾರುಗಳಿಂದ ಈ ಸ್ಥಳವು ಮಾರುಕಟ್ಟೆಗೆ ನೆಲೆಯಾಗಿತ್ತು. ಥಾಯ್‌ ಜನರು ಈ ಸ್ಠಳವನ್ನು ‘ತಲಾಡ್ ರೊಮ್ ಹೂಪ್ ಮಾರ್ಕೆಟ್’ ಎಂದು ಕರೆಯುತ್ತಾರೆ. ಇದನ್ನು ಅಕ್ಷರಶಃ ಅನುವಾದ ಮಾಡಿದರೆ ‘ಕೊಡೆಯನ್ನು ಕೆಡವಿದ ಮಾರುಕಟ್ಟೆ’ ಎಂದಾಗುತ್ತದೆ.

ಮೆಕ್ಲಾಂಗ್ ರೈಲ್ವೆ ಮಾರುಕಟ್ಟೆ ಮೂಲಕ ರೈಲುಗಳು ದಿನಕ್ಕೆ 7 ಬಾರಿ, ವಾರದ ಏಳೂ ದಿನಗಳೂ ಚಲಿಸುತ್ತವೆ. ರೈಲು ಬೆಳಿಗ್ಗೆ 4 ಬಾರಿ ಹಾದುಹೋಗುತ್ತದೆ. ರೈಲು ಬಾನ್‍ಲೇಮ್ ನಿಲ್ದಾಣದಿಂದ 8:40ಕ್ಕೆ ಆಗಮಿಸುತ್ತದೆ ಮತ್ತು ಮೆಕ್ಲಾಂಗ್ (ಸಮುತ್ ಸಾಂಗ್‍ಖ್ರಾಮ್) ರೈಲ್ವೆ ನಿಲ್ದಾಣದಿಂದ 9 ಗಂಟೆಗೆ ಹೊರಡುತ್ತದೆ ಮತ್ತು ಮುಂದಿನ ರೈಲು ಬಾನ್‍ಲೇಮ್‌ನಿಂದ 11:20 ಗಂಟೆಗೆ ಆಗಮಿಸುತ್ತದೆ ಮತ್ತು 11:30 ಗಂಟೆಗೆ ಮೆಕ್ಲಾಂಗ್ (ಸಮುತ್ ಸಾಂಗ್‍ಖ್ರಾಮ್) ರೈಲ್ವೆ ನಿಲ್ದಾಣದಿಂದ ಹೊರಡುತ್ತದೆ.ಮಧ್ಯಾಹ್ನ ರೈಲು ಮಾರುಕಟ್ಟೆಯಿಂದ 3 ಅಥವಾ 4 ಬಾರಿ ಹಾದುಹೋಗುತ್ತದೆ. ಈ ರೈಲಿನಲ್ಲಿ ಪ್ರಯಾಣಿಸಲು ಜಗತ್ತಿನ ಹಲವು ಭಾಗಗಳ ಪ್ರಯಾಣಿಕರು ಹಾತೊರೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.