ADVERTISEMENT

ಗಣಿನಾಡಿನಲ್ಲಿ ಮೈಸೂರು ಶೈಲಿ ಚಿತ್ರಕಲೆ!

ಕೆ.ನರಸಿಂಹ ಮೂರ್ತಿ
Published 27 ಜುಲೈ 2019, 19:45 IST
Last Updated 27 ಜುಲೈ 2019, 19:45 IST
ಗೋಪಾಲಕ ಕೃಷ್ಣನ ಕಲಾಕೃತಿಯೊಂದಿಗೆ ಶಮೀನಾ ಮುಗುಳ್ನಗೆ
ಗೋಪಾಲಕ ಕೃಷ್ಣನ ಕಲಾಕೃತಿಯೊಂದಿಗೆ ಶಮೀನಾ ಮುಗುಳ್ನಗೆ   

ಬಳ್ಳಾರಿಯಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯು ಏರ್ಪಡಿಸಿದ್ದ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲಾ ಕಾರ್ಯಾಗಾರ ರಾಜ್ಯದ ವಿವಿಧ ಜಿಲ್ಲೆಗಳ ಯುವಕಲಾವಿದರಲ್ಲಿ ಹೊಸ ಸ್ಫೂರ್ತಿಯನ್ನು ತುಂಬಿತ್ತು

ಬಳ್ಳಾರಿಯ ಶೃಂಗೇರಿ ಮಠದ ಪ್ರಶಾಂತ ವಾತಾವರಣ. ನೆಲದ ಮೇಲೆ ಕುಳಿತಿದ್ದ ನಾಡಿನ ವಿವಿಧ ಜಿಲ್ಲೆಗಳ ಚಿತ್ರಕಲಾವಿದರ ಗಮನವೆಲ್ಲವೂ ತಮ್ಮ ತೊಡೆಯ ಮೇಲಿದ್ದ ಕಲಾಕೃತಿಯ ಮೇಲಿತ್ತು.

ಉಸಿರಾಟದಲ್ಲಿ ಕೊಂಚ ಏರುಪೇರಾದರೂ, ಕಲಾಕೃತಿಗೆ ಲೇಪನ ಮಾಡಲು ಬಳಸಬೇಕಾದ ಚಿನ್ನದ ತೆಳು ಪದರ (ಗೋಲ್ಡ್‌ ಲೀಫ್‌) ಹಾರಿಹೋಗಬಹುದು ಎಂಬ ಎಚ್ಚರಿಕೆಯೇ ಕಲಾಕೃತಿಯೊಂದಿಗೆ ಅವರು ತನ್ಮಯರಾಗುವಂತೆ ಮಾಡಿತ್ತು. ಊಟದ ಸಮಯ ಮೀರುತ್ತಿದ್ದರೂ, ಕಲಾಕೃತಿ ಪೂರ್ಣಗೊಳಿಸದೇ ಏಳಲಾರೆವು ಎಂಬ ಹಟ, ಶ್ರದ್ಧೆ.

ADVERTISEMENT

ಯಾವುದೇ ಕಲಾವಿದರಿಗೆ ಈ ಏಕಾಗ್ರತೆ, ಕಲಾಕೃತಿ ಕೆಡಬಾರದು ಎಂಬ ಎಚ್ಚರ ಸಹಜ. ಅಲ್ಲಿದ್ದವರೆಲ್ಲರೂ ರಚಿಸುತ್ತಿದ್ದುದು ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲಾಕೃತಿಗಳನ್ನು. ಅದುವರೆಗೂ ಅವರು ಮೈಸೂರು ಶೈಲಿ ಎಂಬುದನ್ನು ಕೇಳಿದ್ದರಷ್ಟೇ. ಕಲಾಕೃತಿಗಳನ್ನು ನೋಡಿದ್ದರಷ್ಟೆ. ಬಹುತೇಕರಿಗೆ ಆಧುನಿಕ ಶೈಲಿಯ ಚಿತ್ರಕಲೆ ಹೆಚ್ಚು ಪರಿಚಿತ. ಮೈಸೂರು ಅಪ್ಯಾಯಮಾನವಾದರೂ, ಅದರ ಚಿತ್ರಕಲೆ ಎಂಬುದು ಮಾತ್ರ ಅಪರಿಚಿತವಾಗಿತ್ತು.

ಮೈಸೂರು ದಸರಾಗೆ ಮೂಲ ಪ್ರೇರಣೆಯಾಗಿದ್ದು ಹಂಪಿಯ ವಿಜಯನಗರ ಸಾಮ್ರಾಜ್ಯ. ಇದೇ ಸಾಮ್ರಾಜ್ಯದ ಆಶ್ರಯದಲ್ಲೇ ಮೈಸೂರು ಚಿತ್ರಕಲೆಯೂ ಮೂಡಿಬಂದಿದ್ದು ಇನ್ನೊಂದು ವಿಶೇಷ. ಇದೇ ನೆಲದಲ್ಲೇ, ಕರ್ನಾಟಕ ಲಲಿತ ಕಲಾ ಅಕಾಡೆಮಿಯು ನಾಲ್ಕು ದಿನ ಕಾಲ ಮೈಸೂರು ಶೈಲಿಯ ಚಿತ್ರಕಲೆ ಕಾರ್ಯಾಗಾರ ಏರ್ಪಡಿಸಿದರೆ ಅದನ್ನು ವಿಶೇಷ ಎನ್ನದೆ ಇರಲಾದೀತೇ?

ಕಲಾಕೃತಿ ಕುರಿತು ಶ್ರೀವಾಣಿ ವಿಶ್ಲೇಷಣೆ

ಕರ್ನಾಟಕ ಲಲಿತ ಕಲಾ ಅಕಾಡೆಮಿಯು ಏರ್ಪಡಿಸಿದ್ದ ನಾಲ್ಕು ದಿನ ಕಾಲದ, ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲಾ ಕಾರ್ಯಾಗಾರಕ್ಕೆ ಬಂದಿದ್ದ ಬಳ್ಳಾರಿ, ಬೀದರ್, ಮಂಗಳೂರು, ಉಡುಪಿ, ತುಮಕೂರು, ವಿಜಯಪುರ, ಸಿಂಧನೂರು, ಮಂಡ್ಯ, ಧಾರವಾಡ, ಚಾಮರಾಜನಗರ, ಗದಗ, ಯಾದಗಿರಿ, ಚಿತ್ರದುರ್ಗದ ಕಲಾವಿದರ ಪೈಕಿ ಒಬ್ಬರು ಮಧ್ಯವಯಸ್ಕರು. ಉಳಿದವರೆಲ್ಲರೂ ಹೊಸ ಚಿಗುರಿನ ಸೊಗಸಿನವರು.

ಎಲ್ಲ ತತ್ವದೆಲ್ಲೆ ಮೀರುವ ಕಲೆಯ ಬಲೆಯಲ್ಲಿ ಸಿಲುಕಿದ ವಿವಿಧ ಧರ್ಮಗಳ ಯುವಕ–ಯುವತಿಯರು ಈ ಕಾರ್ಯಾಗಾರದ ಅಂದ–ಚೆಂದವನ್ನು ಹೆಚ್ಚಿಸಿದ್ದರು. ಅಕಾಡೆಮಿಯ ಸದಸ್ಯ ನಿಹಾಲ್‌ ವಿಕ್ರಂ ರಾಜು ಅವರು ಪಟ್ಟು ಹಿಡಿಯದೇ ಹೋಗಿದ್ದರೆ ಇಂಥದ್ದೊಂದು ಅಪರೂಪದ ಸಂದರ್ಭ–ಸನ್ನಿವೇಶ ಗಣಿನಗರದಲ್ಲಿ ಮೂಡಿಬರುತ್ತಿರಲಿಲ್ಲ. ಅವರೊಂದಿಗೆ ಸಂಪನ್ಮೂಲ ವ್ಯಕ್ತಿಯಾಗಿ ಜೊತೆಯಾದವರು, ಶೃಂಗೇರಿಯ ಕಲಾವಿದೆ ಶ್ರೀವಾಣಿ.

***

ಸಂಪ್ರದಾಯವೆಂದರೆ ಅಲ್ಲಿ ಪುರಾಣ ಕತೆಗಳು, ದೇವಾನುದೇವತೆಗಳು, ಅವರ ಅವತಾರಗಳು ಇರಲೇಬೇಕು. ಹೀಗಾಗಿಯೇ ಇಡೀ ಕಾರ್ಯಾಗಾರದಲ್ಲಿ ದಶಾವತಾರದ ಚಿತ್ರಕಲಾಕೃತಿಗಳನ್ನು ರಚಿಸಲೂ ಹಲವರಿಗೆ ಪ್ರೇರಣೆ ದೊರಕಿತು. ಕೆಲವರಿಗೆ ದಶಾವತಾರಗಳು ಯಾವುವು ಎಂಬುದೂ ಸ್ಪಷ್ಟವಾಗಿ ಗೊತ್ತಿರಲಿಲ್ಲ. ರಟ್ಟಿನ ಹಾಳೆ, ಬ್ರಷ್‌, ಬಣ್ಣದ ನಡುವೆ ಕುಳಿತಾಗ ಎಲ್ಲವೂ ಅನಾವರಣಗೊಳ್ಳುತ್ತಾ ಹೋದವು. ಸಾಂಪ್ರದಾಯಿಕ ಕಲೆಯ ವೈವಿಧ್ಯಮಯ ಜಗತ್ತೂ.

ಕ್ರೀಯೇಟಿವ್‌ ಪೇಂಟಿಂಗ್‌ ಬಗ್ಗೆಯೇ ಹೆಚ್ಚು ಆಸಕ್ತಿಯುಳ್ಳ ಬೀದರಿನ ದಿವ್ಯ ಸಿ. ಮಠದ ಲಲಿತಕಲೆಯಲ್ಲಿ ಮಾಸ್ಟರ್ಸ್‌ ಪದವಿ ಪಡೆದವರು. ಆದರೆ, ಚಿತ್ರಕಲೆಯಲ್ಲಿ ಎಂಬೋಜ್‌ ಮಾಡುವುದು ಹೇಗೆಂದು ಅವರಿಗೆ ಕಾಲೇಜು ಕಲಿಸಿರಲಿಲ್ಲ; ಕಾರ್ಯಾಗಾರ ಕಲಿಸಿತ್ತು. ಹೀಗಾಗಿ ಅವರು ವೀಣೆ ನುಡಿಸುವ ಮಹಿಳೆಯ ಕಲಾಕೃತಿಯನ್ನು ರಚಿಸುತ್ತಿದ್ದರು.

‘ನೀವು ಅಂಗಡಿಯಲ್ಲಿ ಖರೀದಿಸುವ ಸಿಹಿತಿಂಡಿಗೆ ಬೆಳ್ಳಿ ಪದರವನ್ನು ಮೆತ್ತಿರುವುದನ್ನು ನೋಡಿರುತ್ತೀರಿ. ಅದನ್ನು ತಿಂಡಿಯಿಂದ ಬೇರ್ಪಡಿಸಲು ಆಗುವುದಿಲ್ಲ. ಮೈಸೂರು ಶೈಲಿಯ ಚಿತ್ರಕಲೆಯ ವಿಶೇಷವೆಂದರೆ, ಕಲಾಕೃತಿಗೂ ಚಿನ್ನವನ್ನು ಲೇಪಿಸಬೇಕು. ಅದಕ್ಕೆಂದೇ 24 ಕ್ಯಾರೆಟ್‌ ಚಿನ್ನದ ಅತಿ ತೆಳುವಾದ ಎಲೆಯೂ ಸಿಗುತ್ತದೆ. ಅದಕ್ಕೆ ದುಬಾರಿ ಬೆಲೆ. ಅದನ್ನು ಅಂಟಿಸುವುದು ಅತ್ಯಂತ ಸೂಕ್ಷ್ಮ ಕಲೆ. ಹೆಚ್ಚು ತಾಳ್ಮೆ ಬೇಕು. ತಂಜಾವೂರು ಶೈಲಿಯ ಚಿತ್ರಕಲೆಯಲ್ಲೂ ಚಿನ್ನದ ಲೇಪನವಿರುತ್ತದೆ. ಆದರೆ ಅದು ಮೈಸೂರು ಶೈಲಿಗಿಂತಲೂ ದಪ್ಪವಿರುತ್ತದೆ. ಆಧುನಿಕ ಚಿತ್ರಕಲೆಯಲ್ಲಿ ಬಣ್ಣ ಹಾಕಿದರೆ ಸಾಕು. ಕಲಾಕೃತಿಯಾಗಿಬಿಡುತ್ತದೆ’ ಎಂದು ನಕ್ಕರು ಶ್ರೀವಾಣಿ.

‘ಆಧುನಿಕ ಚಿತ್ರಕಲೆಯಲ್ಲಿ ದೇಹವನ್ನು ಹೇಗೆ ಚಿತ್ರಿಸಿದರೂ ನಡೆಯುತ್ತದೆ. ಆದರೆ ಸಾಂಪ್ರದಾಯಿಕ ಶೈಲಿಯಲ್ಲಿ ರಚಿಸುವವರಿಗೆ ಮನುಷ್ಯ, ಪ್ರಾಣಿ, ಪಕ್ಷಿಗಳ ದೇಹರಚನೆ ಶಾಸ್ತ್ರದ ತಿಳಿವಳಿಕೆ ಅತ್ಯಗತ್ಯ. ದೇಹರಚನೆ ಸಹಜವಾಗಿ ಹೇಗಿರುತ್ತದೋ ಕಲಾಕೃತಿಯಲ್ಲೂ ದೇಹದ ರಚನೆ ಹಾಗೇ ಇರಬೇಕು. ಇದೇನೂ ಸಾಮಾನ್ಯ ಕಲೆಯಲ್ಲ’ ಎಂದು ಮಾತು ಸೇರಿಸಿದರು ವಿಕ್ರಂ ರಾಜು.

‘ಹಿಂದೂ ದೇವರ ಚಿತ್ರಗಳನ್ನಷ್ಟೇ ನಾವು ಏಕೆ ಬರೆಯಬೇಕು?’ ಎಂಬ ಪ್ರಶ್ನೆಯೂ ಶಿಬಿರದಲ್ಲಿ ಬಂತು. ಅಂಥವರ ನಡುವೆಯೇ, ಬಳ್ಳಾರಿಯ ಚಿತ್ರಕಲಾ ಶಿಕ್ಷಕಿ ಶಮೀನಾ ಶ್ರದ್ಧೆಯಿಂದ ಕೊಳಲು ಹಿಡಿದು ನಿಂತ ಗೋಪಾಲಕ ಕೃಷ್ಣನ ವರ್ಣಮಯ ಚಿತ್ರವನ್ನು ಬಿಡಿಸಿದ್ದರು! ‘ಕೃಷ್ಣನನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ?’ ಎಂದರೆ, ‘ಕೃಷ್ಣ ಬಹು ಚಂದದ ವ್ಯಕ್ತಿತ್ವದವನು. ಆತನ ಚಿತ್ರಕ್ಕೆ ಹತ್ತಾರು ಬಣ್ಣಗಳನ್ನು ಬಳಸಬಹುದು. ಬೇರೆಯವಕ್ಕೆ ಹಾಗೆ ಬಳಸುವ ಅವಕಾಶ ಕಡಿಮೆ’ ಎಂದರವರು.

‘ಚಾಕ್‌ ಪೌಡರ್‌ ಮತ್ತು ಅರೇಬಿಕ್‌ ಗಮ್‌ ಬಳಸಿ ಸಲೀಸಾಗಿ ರಚಿಸುವ ಕಲಾಕೃತಿಗಿಂತಲೂ ಜೆಸ್ಸೋ ಶೈಲಿಯಲ್ಲಿ ಲೆಡ್‌ ಪುಡಿ, ಅರೇಬಿಕ್‌ ಗಮ್‌ ಮತ್ತು ಗ್ಯಾಂಬೋಜ್‌ ಮಿಕ್ಸ್‌ ಮಾಡಿ ಕಲಾಕೃತಿ ರಚಿಸುವುದು ಬಹಳ ಕಷ್ಟ’ ಎಂದರು ಬಂಟ್ವಾಳದ ಅಶ್ವಿನಿ. ಅವರು ‘ಸರಸ್ವತಿ’ಯನ್ನು ಆಯ್ಕೆ ಮಾಡಿಕೊಂಡಿದ್ದರು.

ಇವು ಕೆಲವರ ಅನುಭವಗಳಷ್ಟೇ. ರಾಜ್ಯದ ವಿವಿಧ ಮೂಲೆಗಳ ಇಪ್ಪತ್ತು ಮಂದಿ ಒಟ್ಟಿಗೇ ಸೇರಿ ಮೈಸೂರಿನ ಸಾಂಪ್ರದಾಯಿಕ ಚಿತ್ರಕಲಾ ಶೈಲಿಯ ಲೋಕದಲ್ಲಿ ಗಂಭೀರವಾಗಿ ತೇಲಾಡಿದ್ದಂತೂ ಸತ್ಯ. ಈ ಸಾಂಪ್ರದಾಯಿಕ ಚಿತ್ರಕಲಾ ಶೈಲಿಯ ಶಿಬಿರದಲ್ಲಿ, ಗಣಿ ನಾಡಿನ ಸಾಂಪ್ರದಾಯಿಕ ಜೋಳದ ರೊಟ್ಟಿ ಊಟ, ಮಿರ್ಚಿ– ವಗ್ಗರಣಿ, ಮಂಡಕ್ಕಿ, ಮಂಡ್ಯದ ರಾಗಿ ಮುದ್ದೆ, ಸೊಪ್ಪಿನ ಸಾರು, ಹೋಳಿಗೆ ಊಟದ ಸವಿಯೂ ಇತ್ತು.

ಕಲೆಯೂ ಒಂದು ಬಗೆಯ ಊಟವೇ. ಕಲಾವಿದನ ಕೈಕುಂಚದಲ್ಲಿ ಮೂಡುವ ಕಲಾಕೃತಿಯೆಂಬ ಪದಾರ್ಥ ರಸಿಕರ ಹಸಿವನ್ನು ತಣಿಸಿ ಭಾವೋತ್ಕರ್ಷವನ್ನು ಉಂಟು ಮಾಡಲೇಬೇಕು. ಅದು ಸಾಂಪ್ರದಾಯಿಕ ಶೈಲಿಯಾಗಿರಲಿ. ಆಧುನಿಕ ಲೋಕದ್ದಾಗಿರಲಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.