ADVERTISEMENT

ಮದುವೆ ಬೇಡ, ಮಕ್ಕಳು ಬೇಡ

ಸುಮಂಗಲಾ
Published 28 ಮಾರ್ಚ್ 2020, 19:30 IST
Last Updated 28 ಮಾರ್ಚ್ 2020, 19:30 IST
   

ಎಂಜಿನಿಯರಿಂಗ್ ಮುಗೀತು, ಕೆಲಸವೂ ಸಿಕ್ಕಿತು. ಇನ್ನೇನು... ಮದುವೆಯೊಂದೇ ಬಾಕಿ. ಹುಡುಗನನ್ನು ನಾವೇ ಹುಡುಕುವುದಾ ಅಥವಾ ಗೆಳೆಯ ಎಂದು ಆಗೀಗ ಸುತ್ತಾಡುತ್ತಿದ್ದ ಹುಡುಗನನ್ನೇ ಮದುವೆಯಾಗ್ತಾಳಾ? ಇದು ಮನೆಯವರ ಆಲೋಚನೆ. ಆ ಬಗ್ಗೆ ಚರ್ಚೆಗೆ ಆಸ್ಪದವೇ ಇಲ್ಲದಂತೆ ‘ಇಷ್ಟು ಬೇಗ ಮದುವೇನಾ... ಏನ್ ಅದೊಂದೇನಾ ಲೈಫಲ್ಲಿ’ ಎಂಬ ಪ್ರಶ್ನೆಯನ್ನು ಮನೆಯ ಹಾಲ್‍ನಲ್ಲಿ ಉದುರಿಸಿ, ಹರಿಣ ತನ್ನ ಕೋಣೆಗೆ ಹೋಗಿಯಾಗುತ್ತಿತ್ತು. ‘ಸರಿ, ಒಂದು ವರ್ಷ ಬಿಟ್ಟರೆ ಸರಿ ಹೋಗುತ್ತಾಳೆ’ ಎಂದು ಮನೆಯವರು ಅಂದುಕೊಂಡರು.

ಮತ್ತೊಂದು ವರ್ಷ ಕಳೆಯುವಷ್ಟರಲ್ಲಿ ಆಕೆ ಮನೆಯಿಂದಲೇ ಗಂಟುಮೂಟೆ ಕಟ್ಟಲು ತಯಾರಾಗಿದ್ದಳು! ಹಾಗೆಂದು ಅವಳಿಗೆ ಬೇರೆ ಊರಿಗೆ ವರ್ಗಾವಣೆ ಆಗಿರಲಿಲ್ಲ. ಮನೆಯಿಂದ ಕಲ್ಲೆಸೆದರೆ ತಾಕುವಷ್ಟು ದೂರದಲ್ಲಿಯೇ ಆಕೆಯ ಆಫೀಸ್‌ ಇರುವಾಗ, ಮಗಳು ‘ಬೇರೆ ಮನೆ ಮಾಡುತ್ತೇನೆ, ನನಗೆ ಒಬ್ಬಳೇ ಇರಬೇಕಾಗಿದೆ’ ಎಂದದ್ದು ಕೇಳಿ ಹರಿಣಳ ಅಮ್ಮ–ಅಪ್ಪನಿಗೆ ಆದ ಆಘಾತ ಅಷ್ಟಿಷ್ಟಲ್ಲ.

ಮೂರು ದಶಕಗಳ ಹಿಂದೆ ಇದೇ ಅಮ್ಮ–ಅಪ್ಪ ಮದುವೆಯಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ತಮ್ಮದೇ ಸ್ವಂತ ಗೂಡಿನಲ್ಲಿರುವ ಕನಸಿನೊಂದಿಗೆ ಬೇರೆ ಮನೆ ಮಾಡಿದ್ದರು. ಆದರೀಗ ಮಗಳು ಇದ್ದ ಊರಿನಲ್ಲೇ ಮದುವೆಯನ್ನು ಮುಂದೂಡುತ್ತ, ತನ್ನದೇ ಬೇರೆ ಮನೆ ಮಾಡಲು ಹೊರಟಿರುವುದನ್ನು ಅರಗಿಸಿಕೊಳ್ಳುವುದು ಅವರಿಗೆ ಸುಲಭವಿರಲಿಲ್ಲ.

ADVERTISEMENT

ದೊಡ್ಡ, ಅವಿಭಕ್ತ ಕುಟುಂಬಗಳು ಹಿಸೆಯಾಗಿ, ಅತ್ತೆ, ಮಾವ, ಗಂಡ–ಹೆಂಡತಿ, ಅವರ ಮಕ್ಕಳು ಜೊತೆಗಿರುವ ಟ್ರೆಂಡ್ ಶುರುವಾಗಿದ್ದು ಬಹುಶಃ ಎಪ್ಪತ್ತು ಎಂಬತ್ತರ ದಶಕದಲ್ಲಿ. ಆಮೇಲೆ ಬರೀ ಗಂಡ, ಹೆಂಡತಿ, ಮಕ್ಕಳು ಮಾತ್ರವೇ ಇರುವ ನಾವಿಬ್ಬರು, ನಮಗಿಬ್ಬರು ಎಂಬ ಚಿಕ್ಕ, ಚೊಕ್ಕ ಕುಟುಂಬದ ಕನಸು ನಮ್ಮನ್ನು ಆಳತೊಡಗಿತು. ಈಗ ಯುವಕಣ್ಣುಗಳಲ್ಲಿ ತೂಗುವ ಕನಸು ಬರಿಯ ಸುಖ ಸಂಸಾರದ್ದು ಅಲ್ಲ. ಓದು ಮುಗಿಸಿ, ಕೆಲಸ ಹಿಡಿದು, ಕಾಲೂರುತ್ತಲೇ, ಬದುಕಿನ ಬಣ್ಣವನ್ನು ಅರಸುತ್ತ ಏಕಾಂಗಿಯಾಗಿ ರೆಕ್ಕೆಯಗಲಿಸಿ ಹಾರುವ ಕನಸು!

ವೃತ್ತಿಬದುಕಿನ ಏಣಿಯಲ್ಲಿ ಇನ್ನಷ್ಟು ಮೇಲೇರಿ, ಕಿಸೆ ಗಟ್ಟಿ ಮಾಡಿಕೊಂಡು, ಹೊಸತು ಏನಾದರೂ ಕಲಿಯುವುದಿದ್ದರೆ ಕಲಿತು ಮುಗಿಸಿ, ಸಂಬಂಧಗಳನ್ನು ತೂಗಿಸಿಕೊಂಡು ಹೋಗಬಲ್ಲೆ ಎಂದು ದೃಢವಾಗಿ ಅನ್ನಿಸಿದಾಗ, ಎಲ್ಲ ರೀತಿಯಲ್ಲೂ ಸರಿಯಾದ ಸಂಗಾತಿ ಸಿಕ್ಕಾಗ ಮಾತ್ರವೇ ಮದುವೆಯ ಬಗ್ಗೆ ಯೋಚಿಸುವ ಯುವಜನತೆ ಹೆಚ್ಚಾಗುತ್ತಿದ್ದಾರೆ. ಯುವಕರು ಮಾತ್ರವಲ್ಲ, ಯುವತಿಯರೂ ಮದುವೆ ಎಂಬ ಸಂಸ್ಥೆಯತ್ತ ಮುಖ ಮಾಡಲು ಇತ್ತೀಚೆಗೆ ಹಿಂಜರಿಯುತ್ತಿದ್ದಾರೆ.

‘ಗೆಳತಿಯರೆಲ್ಲ ಮದುವೆಯಾದರೂ ನೀನೇಕೆ ಮದುವೆ ಮುಂದಕ್ಕೆ ಹಾಕುತ್ತಿದ್ದೀಯಾ’ ಎನ್ನುವ ಪ್ರಶ್ನೆಗೆ ಆಕೆಯ ಖಚಿತ ಉತ್ತರ ಸಿದ್ಧವಿದೆ.‘ನಮ್ಮ ಭಾರತೀಯ ಸಮಾಜದಲ್ಲಿ ಮದುವೆ ಅನ್ನೋ ಸಂಸ್ಥೆ ಸಮಾನತೆಯ ತಳಪಾಯದ ಮೇಲೆ ನಿಂತಿಲ್ಲ. ಅದರಲ್ಲಿ ಲಿಂಗ ತಾರತಮ್ಯ ಇದ್ದೇ ಇದೆ. ಮನೆ ಹೊರಗೆ ಎಷ್ಟೇ, ಏನೇ ಮಾತಾಡಿದರೂ ಮದುವೆಯ ನಂತರ ಮನೆಗೆಲಸ ಹೆಂಡತಿ ಮಾಡಬೇಕು ಅನ್ನೋದನ್ನು ಹುಡುಗರು ನಿರೀಕ್ಷೆ ಮಾಡುವಂತೆ, ಹುಡುಗಿಯರು ಅದನ್ನು ಒಪ್ಪಿಕೊಂಡು ಹೋಗುವಂತೆ ನಾವು ಬೆಳೆದು ಬಂದಿರ್ತೀವಿ. ಹೊಂದಿಕೊಂಡು ಹೋಗಬೇಕು ಎನ್ನೋದನ್ನು ಹುಡುಗಿಯರಿಂದ ನಿರೀಕ್ಷೆ ಮಾಡಿದ ಹಾಗೆ ಹುಡುಗರಿಂದ ಮಾಡೋಕಾಗಲ್ಲ. ಮದುವೆ ಎನ್ನೋದು ಅದರ ವಿನ್ಯಾಸದಲ್ಲೇ ಅಸಮಾನತೆಯನ್ನು ಇಟ್ಟುಕೊಂಡಿದೆ. ಹಿಂಗಾಗಿ ಒಬ್ಬ ವ್ಯಕ್ತಿ ನನ್ನನ್ನು ಘನತೆ, ಗೌರವದಿಂದ ಸಮಾನವಾಗಿ ಕಾಣಬಲ್ಲ ಅನ್ನೋ ವಿಶ್ವಾಸ ಹುಟ್ಟಿದಾಗಷ್ಟೇ ನಾನು ಮದುವೆ ಬಗ್ಗೆ ಆಲೋಚನೆ ಮಾಡಬಲ್ಲೆ’ ಎನ್ನುವುದು ಹರಿಣಳ ಸ್ಪಷ್ಟಮಾತು.

ಇವಳು ಒಬ್ಬಳೇ ಇದ್ದುಕೊಂಡು, ಹ್ಯಾಗೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗ್ತಾಳೆ ಎಂಬ ಆತಂಕ ಹರಿಣಳ ಅಪ್ಪ, ಅಮ್ಮನಲ್ಲಿತ್ತು. ಅದರೊಂದಿಗೆ ಮಗಳಿಗೊಬ್ಬ ಗೆಳೆಯನಿದ್ದಾನೆ ಎನ್ನುವುದೂ ಗೊತ್ತಿತ್ತು. ಮತ್ತೆ ಅವನೊಂದಿಗೆ ‘ಲಿವ್ ಇನ್ ರಿಲೇಶನ್‍’ನಲ್ಲಿ ಜೊತೆಗಿರ್ತಾಳಾ ಎಂಬ ಅನುಮಾನ ಕೂಡ. ಅವರ ಆತಂಕ, ಅನುಮಾನಗಳಿಗೆ ಎಡೆಯೇ ಇಲ್ಲದಂತೆ ಒಬ್ಬಳೇ ಒಂದು ಫ್ಲಾಟಿನಲ್ಲಿದ್ದುಕೊಂಡು, ಒಂದು ಹೊತ್ತಿನ ಅಡುಗೆಗೆಂದು ಒಬ್ಬರನ್ನು ಬರಹೇಳಿ, ಜೊತೆಗೊಂದು ಬೆಕ್ಕಿನ ಮರಿಯನ್ನೂ ಸಾಕುತ್ತ, ಮಗಳ ಏಕಾಂಗಿ ಪಯಣ ಶುರುವಾಗಿಯೇ ಬಿಟ್ಟಿತು. ಬೆಕ್ಕಿನ ಮರಿ ಕಾಯ್ತಿರುತ್ತೆ ಎಂದು ಆಫೀಸು ಬಿಟ್ಟೊಡನೆ ಮನೆಗೋಡುವ ಮಗಳನ್ನು ನೋಡಿದಾಗ, ಒಬ್ಬಳೇ ಇದ್ದರೆ ತಡರಾತ್ರಿಯವರೆಗೆ ಪಾರ್ಟಿ ಗೀರ್ಟಿ ಎಂದು ಸುತ್ತಾಡಬಹುದೆಂದು ಬೇರೆಮನೆಯಲ್ಲಿರುವ ಯೋಜನೆ ಮಾಡಿದ್ದಾಳೆಯೇ ಎಂಬ ಅನುಮಾನಕ್ಕೂ ಆಸ್ಪದವಿರಲಿಲ್ಲ.

ಇಂದಿನ ಕೆಲ ಯುವಜನರಿಗೆ ನೌಕರಿ ಎಂದರೆ ಸುಮ್ಮನೆ ಬೆಳಿಗ್ಗೆ ಒಂಬತ್ತರಿಂದ ಸಂಜೆ ಐದರವರೆಗೆ ಮಾಡುವ ಹೊಟ್ಟೆಪಾಡಿನ ಕೆಲಸವಾಗಿ ಉಳಿದಿಲ್ಲ. ಮಾಡುವ ಕೆಲಸದಿಂದ ತೃಪ್ತಿ ಸಿಗಬೇಕು, ಅದರಲ್ಲಿ ಏನೋ ಒಂದು ಕಲಿಕೆಯಾಗಬೇಕು, ನಿಂತ ನೀರಾಗಬಾರದು. ಹಾಗೆ ಅನ್ನಿಸಿದ ಕ್ಷಣದಿಂದ ಮತ್ತೇನೋ ಹೊಸ ಕಲಿಕೆ, ಹೊಸ ನೌಕರಿಯ ಅವಕಾಶ ಹುಡುಕಲು ಶುರು. ಬದುಕಿನಲ್ಲಿ ನಾನೇನು ಮಾಡಬೇಕು, ನನಗೆ ಯಾವುದರಿಂದ ಖುಷಿ ಸಿಗುತ್ತದೆ, ನಾನು ಯಾವುದಕ್ಕೆ ಆದ್ಯತೆ ಕೊಡಬೇಕು... ಹೀಗೆ ಎಲ್ಲದರಲ್ಲಿಯೂ ‘ನಾನು, ನನಗೆ’ ಮುಖ್ಯವಾಗುತ್ತ ಹೋಗುತ್ತದೆ. ಸಂಬಂಧಗಳ ವಿಚಾರದಲ್ಲಿಯೂ. ಇದರಲ್ಲಿ ನಾನು ಅರಸುವ ಸಂತಸ ದಕ್ಕುವುದೇ, ನನಗೆ ಈ ಸಂಬಂಧ ಬೇಕೆ ಎನ್ನುವ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ದೊರಕಿದ ನಂತರವೇ ಮುಂದಿನ ನಡೆ.

‘ಮದುವೆ ಎಂಬ ಸಂಬಂಧದಲ್ಲಿಯೇ ಬದುಕಿನ ಸಕಲೆಂಟು ಖುಷಿಯೂ ಅಡಗಿದೆ ಎಂದೇನಿಲ್ಲ’ ಎನ್ನುವ ಗೀತಿಕಾ, ‘ಹಾಗಂತ ನಾನು ಮದುವೆ ವಿರೋಧಿಯೂ ಅಲ್ಲ. ಆದರೆ, ಯಾವಾಗ ಈ ಸಂಬಂಧ ನಿಭಾಯಿಸೋದಕ್ಕೆ ನನ್ನ ಮೈಮನಸ್ಸು ಸಿದ್ಧ ಅನ್ನಿಸುತ್ತೋ ಆಗ ಖಂಡಿತಾ ಆಗುತ್ತೇನೆ’ ಎನ್ನುತ್ತಾಳೆ. ‘ಅದಕ್ಕಿಂತ ಮೊದಲು ನನ್ನ ವೃತ್ತಿಯೂ ಸೇರಿದಂತೆ ಬದುಕಿನಲ್ಲಿ ನಾನಂದುಕೊಂಡ ಒಂದಿಷ್ಟು ಕೆಲಸಗಳನ್ನು ಮಾಡುವುದು ನನಗೆ ಮುಖ್ಯ. ಬರೀ ಮದುವೆ, ಸಂಸಾರ ಇದರಲ್ಲೇ ಸಂತೋಷವನ್ನು ಪಡೆದುಕೋಬೇಕು ಎನ್ನೋ ಕಾಲ ಇದಲ್ಲ. ಓದು, ಪ್ರವಾಸ, ಒಳ್ಳೆ ಸಿನಿಮಾ, ಹಿಂಗೆ ಒಂದೊಂದಕ್ಕೆ ಒಂದು ಗೆಳೆಯರ ಗುಂಪು ಇದೆ ನಂಗೆ. ಎಲ್ಲವನ್ನೂ ಒಬ್ಬರ ಹತ್ರವೇ ಹಂಚಿಕೊಳ್ಳಬೇಕು ಅಥವಾ ಎಲ್ಲದಕ್ಕೂ ಒಬ್ಬರನ್ನೇ ನೆಚ್ಚಿಕೊಳ್ಳಬೇಕು ಅಂತ ನಂಗೆ ಅನ್ನಿಸೋದಿಲ್ಲ. ಇಡೀ ಬದುಕನ್ನು ಜೊತೆಯಾಗಿ ಕಳೆಯೋದಕ್ಕೆ, ಸಂಗಾತಿಯಾಗಿ ಒಬ್ಬ ವ್ಯಕ್ತಿ ಸೂಕ್ತ ಅಂತ ತೀವ್ರವಾಗಿ ಅನ್ನಿಸಿದಾಗ ನಾನು ಖಂಡಿತಾ ಮದುವೆಯಾಗ್ತೀನಿ. ಆದರೆ ಯಾರೂ ಅಂಥೋರು ಸದ್ಯಕ್ಕಂತೂ ಕಾಣಲ್ವೇ...’ ಎಂದು ತುಂಟ ನಗು ಬೀರುತ್ತಾಳೆ.

ಅತಿಯಾದ ಸ್ವಾತಂತ್ರ್ಯಪ್ರಿಯತೆ, ರಾಜಿಯಾಗದ ಸ್ವಭಾವ, ಅಷ್ಟೇ ಮುಖ್ಯವಾಗಿ ವ್ಯಕ್ತಿವಾದ, ಪ್ರತೀ ಸಂಬಂಧದಲ್ಲಿಯೂ ಎಷ್ಟು ದಾಟಬೇಕು, ಎಷ್ಟು ದಾಟಬಾರದು ಎಂದು ಗೆರೆಕೊರೆದಂತೆ ಆಲೋಚಿಸುವುದು, ಜೊತೆಗೆ ತುಸು ಪ್ರಯತ್ನಿಸಿದರೆ ಕೈಗೆ ನಿಲುಕುವಂತಿರುವ ಹಲವು ಬಗೆಯ ಆಯ್ಕೆಗಳು– ಇವು ಇಂದಿನ ಯುವಜನರು ಯಾವುದೇ ಜವಾಬ್ದಾರಿ ಹೊತ್ತುಕೊಳ್ಳಲು ಸಿದ್ಧರಾಗದೇ, ಒಬ್ಬೊಬ್ಬರೇ ಇರುವುದನ್ನು ಇಷ್ಟಪಡಲು ಕಾರಣವಾಗುತ್ತಿರಬಹುದು. ಒಮ್ಮೆ ಮದುವೆಯಾಗಿ ಸಂಸಾರದ ನೊಗಕ್ಕೆ ಕೊರಳೊಡ್ಡಿದರೆ, ಕುಟುಂಬಕ್ಕೆ ಹೆಚ್ಚಿನ ಸಮಯ ಮೀಸಲಾಗಿ, ತಮ್ಮ ವೃತ್ತಿ ಮತ್ತು ಹವ್ಯಾಸಗಳಿಗೆ ಗುಣಮಟ್ಟದ ಸಮಯ ಕೊಡಲು ಆಗುವುದಿಲ್ಲ ಎನ್ನುವುದಂತೂ ನಿಜ. ಸ್ವತಂತ್ರ ಮನೋಭಾವವಿದ್ದವರಿಗೆ ಮದುವೆಯ ನಂತರ ಪ್ರತಿಯೊಂದಕ್ಕೂ ಸಂಗಾತಿಯ ಒಪ್ಪಿಗೆ ಕೇಳುವುದು ಅಥವಾ ಪ್ರತಿಯೊಂದನ್ನೂ ಹೇಳಿ, ಮಾಡಬೇಕೆಂದು ನಿರೀಕ್ಷಿಸುವುದು, ವೈಯಕ್ತಿಕ ಅಭಿಪ್ರಾಯಗಳನ್ನು ಹೇರುವುದು ಸುತಾರಾಂ ಇಷ್ಟವಾಗುವುದಿಲ್ಲ.

‘ಬದುಕಿನಲ್ಲಿ ವ್ಯಕ್ತಿವಾದ ಮುನ್ನೆಲೆಗೆ ಬರುತ್ತಿರೋದು ಕಾರಣ ಇರಬಹುದು. ಜೊತೆಗೆ ಈ ಸಂಬಂಧದಿಂದ ನಾನು ಏನು ಪಡೆದುಕೊಳ್ತೀನಿ... ಬದುಕಿನ ಅರ್ಥ ಕಂಡುಕೊಳ್ಳೋದಕ್ಕೆ ನಂಗೆ ಈ ಸಂಬಂಧ ಆಸರೆಯಾಗುತ್ತಾ ಅಥವಾ ಅಡ್ಡಿಯಾಗುತ್ತ ಎಂಬ ಚಿಂತನೆಗೆ ಸೂಕ್ತ ಉತ್ತರ ಕಂಡುಕೊಂಡು, ಮುಂದಡಿಯೋಣ ಎಂಬ ಕಾರಣವೂ ಇರಬಹುದು. ಏನಾದರೂ ಜವಾಬ್ದಾರಿ ತೆಗದುಕೊಳ್ಳೋದಕ್ಕಿಂತ ಮೊದಲು ವೃತ್ತಿಯಲ್ಲಿ ಸ್ವಲ್ಪ ಗಟ್ಟಿ ಹೆಜ್ಜೆಯೂರಿ, ಆರ್ಥಿಕವಾಗಿಯೂ ಪರವಾಗಿಲ್ಲ ಎನ್ನಿಸುವಷ್ಟು ಸ್ಥಿರತೆ ಬಂದ ನಂತರ ಮದುವೆ ಬಗ್ಗೆ ಯೋಚನೆ ಮಾಡೋದು ಒಳ್ಳೆದು ಅಲ್ಲವಾ...’ ಎಂದು ಪ್ರಶ್ನಿಸುವ ಅಸ್ಸಾಂನ ಅರ್ಕ ಮೇನಿಗೆ ಇನ್ನೊಂದು ಗೊಂದಲವೂ ಇದೆ. ನಾಲ್ಕಾರು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಅವನಿಗೆ ಊರಿನ ಸೆಳೆತ ತುಂಬ ಇದೆ. ಆದರೆ ಯಾಕೋ ಅಲ್ಲಿಯ ಯಾವ ಹುಡುಗಿಯೊಂದಿಗೂ ಆಪ್ತ ಸ್ನೇಹ ಸಾಧ್ಯವಾಗಿಲ್ಲ.

ಬೆಂಗಳೂರಿನಲ್ಲಿ ಒಬ್ಬಳು ಆಪ್ತ ಗೆಳತಿಯಿದ್ದಾಳೆ. ಬೇರೆ ಭಾಷೆ, ಸಂಸ್ಕೃತಿಯವರೊಂದಿಗೆ ಒಡನಾಡುವುದು ಖುಷಿಯೆನ್ನಿಸಿದರೂ, ಮುಂದಿನ ಬದುಕಿಗೆ ಸಂಗಾತಿಯಾಗುವ ದೃಷ್ಟಿಯಿಂದ ನೋಡಿದಾಗ ಅಳುಕೆನ್ನಿಸಿ, ಹೆಜ್ಜೆ ಹಿಂದೆ ಸರಿಸುತ್ತಾನೆ. ಪರಸ್ಪರ ಹೆಚ್ಚು ಅರಿಯಲು, ನಿರ್ಧಾರ ಗಟ್ಟಿಗೊಳ್ಳಲು ಇನ್ನೂ ತುಸು ಸಮಯ ಕೊಡೋಣ ಎನ್ನಿಸಿ, ಸಂಬಂಧಕ್ಕೊಂದು ಹೆಸರಿನ ಗಂಟುಹಾಕದೇ, ನಂಟು ಉಳಿಸಿಕೊಂಡು ನಡೆದಿದ್ದಾನೆ.

‘ಹೆಣ್ಣುಮಕ್ಕಳ ದಾರಿ ಹೀಗೇ ಸಾಗಬೇಕು ಅನ್ನೋ ಥರಾ ನಾವು ಬೆಳೆಯುತ್ತಿದ್ದಂತೆ ನಮ್ಮ ಬದುಕಿನ ದಾರಿಯನ್ನು ಕುಟುಂಬ, ಸಮಾಜ ಸೇರಿ ನಿಗದಿ ಮಾಡಿಬಿಟ್ಟಿರುತ್ತದೆ. ನಿರ್ಬಂಧಗಳೂ ಹೆಚ್ಚು. ಕೊನೇಪಕ್ಷ ಗಂಡುಮಕ್ಕಳಿಗೆ ಅಷ್ಟಾಗಿ ಇರೋದಿಲ್ಲ. ಮದುವೆ ಎನ್ನೋದು ನನ್ನ ಎಲ್ಲ ಅಗತ್ಯಗಳನ್ನು ತೃಪ್ತಿಗೊಳಿಸುತ್ತಾ? ಅಗತ್ಯಗಳು ಅಂದ್ರೆ ಸುಮ್ಮನೇ ಜೊತೆಗೆ ಬದುಕೋದು ಮಾತ್ರವಲ್ಲ; ಭಾವನಾತ್ಮಕ, ಆರ್ಥಿಕ, ರೋಮ್ಯಾಂಟಿಕ್, ಸಾಂಗತ್ಯ ಹೀಗೆ ಎಲ್ಲ ಥರದಲ್ಲಿ ನಂಗೆ ಅದು ತುಂಬಿದ ಭಾವನೆಯನ್ನು ಹುಟ್ಟಿಸಬೇಕು. ನನ್ನ ಇನ್ನೊಂದು ಸಮಸ್ಯೆ ಎಂದರೆ ಕೆಲಸದ ಮೇಲೆ ನಾನು ತುಂಬ ಸುತ್ತಾಡ್ತ ಇರ್ತೀನಿ. ಎಲ್ಲ ಕೆಲಸಗಳನ್ನು ಒಬ್ಬಳೇ ನಿಭಾಯಿಸ್ತೀನಿ. ಬಹಳಷ್ಟು ಗಂಡುಮಕ್ಕಳಿಗೆ ಇಷ್ಟು ಸ್ವತಂತ್ರ ಮನೋಭಾವದ ಹೆಣ್ಣುಮಕ್ಕಳು ಇಷ್ಟವಾಗೋದಿಲ್ಲ. ಅಲ್ವಾ? ಆದರೆ ನಾನು ಆಶಾವಾದಿ. ನನ್ನ ಹಾಗೆಯೇ ಯೋಚಿಸೋ ಬೇರೆ ಗಂಡುಮಕ್ಕಳೂ ಇರ್ತಾರಲ್ವಾ? ಹೀಗಾಗಿ ವಯಸ್ಸಾಗಿ ಹೋಯ್ತು, ಮದುವೆಯಾಗು ಅನ್ನೋದಕ್ಕೆ ಅರ್ಥ ಇಲ್ಲ’ ಎಂದು ಖಾಸಗಿ ಸಂಸ್ಥೆಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ರೀನಾ ನುಡಿಯುತ್ತಾಳೆ. ವಯಸ್ಸು ಮೂವತ್ತೈದಾದರೂ ಮದುವೆಯಾಗದೇ ಒಬ್ಬಳೇ ಇರುವುದರ ಹಿನ್ನೆಲೆಯನ್ನು ತೆರೆದಿಡುತ್ತಾಳೆ.

‘ಮೂವತ್ತರ ಆಸುಪಾಸಿನಲ್ಲಿ ಮದುವೆಯಾಗಿ, ಮೂವತ್ತೈದರ ಒಳಗೆ ಮಗುವಾದರೆ ಒಳ್ಳೆಯದು’ ಎನ್ನುವ ಸಲಹೆಗೂ ಇವರ ಉತ್ತರ ಸಿದ್ಧವಾಗಿರುತ್ತದೆ. ಅಷ್ಟರೊಳಗೆ ಎಲ್ಲ ರೀತಿಯಲ್ಲೂ ಸೂಕ್ತವೆನ್ನಿಸಿ, ಮದುವೆಯಾಗಿ, ಮಕ್ಕಳು ಬೇಕೆನ್ನಿಸಿದರೆ ಮಾಡಿಕೊಳ್ಳಬಹುದು. ಆದರೆ ಆರೋಗ್ಯವಂತ ಮಕ್ಕಳು ಬೇಕು ಎಂಬ ಕಾರಣಕ್ಕೆ ಬೇಗ ಮದುವೆಯಾಗಬೇಕೆ? ಎಷ್ಟೆಲ್ಲ ಅನಾಥ ಮಕ್ಕಳು ಇದ್ದಾರಲ್ಲ, ದತ್ತು ತೆಗೆದುಕೊಳ್ಳುವುದು ಒಳ್ಳೆಯದಲ್ಲವಾ? ಜನಸಂಖ್ಯಾ ಸ್ಫೋಟಕ್ಕೆ ನನ್ನದೂ ಕೊಡುಗೆ ಸಲ್ಲಿಸೋದು ನಂಗಿಷ್ಟವಿಲ್ಲಪ್ಪ..! ಇಷ್ಟಾಗಿ ನಮ್ಮದೇ ಮಗು ಬೇಕು ಎಂದಿದ್ದರೆ ಮೂವತ್ತೈದರ ಒಳಗೇ ಉತ್ತಮ ಗುಣಮಟ್ಟದ ಅಂಡಾಣುವನ್ನು ತೆಗೆದು, ಸಂರಕ್ಷಿಸಿ ಇಡುವ ‘ಎಗ್ ಫ್ರೀಜಿಂಗ್’ ವಿಧಾನ ಅಥವಾ ನಲ್ವತ್ತು ದಾಟುವ ಮೊದಲು ಉತ್ತಮ ವಿರ್ಯಾಣುಗಳನ್ನು ತೆಗೆದು ಸಂರಕ್ಷಿಸಿ ಇಟ್ಟುಕೊಳ್ಳುವ ‘ಸ್ಪರ್ಮ್‍ ಫ್ರೀಜಿಂಗ್‍’ನಂತಹ ವೈದ್ಯಕೀಯ ವರದಾನಗಳನ್ನು ಬಳಸಿಕೊಳ್ಳಬಹುದು, ಇದ್ಯಾವುದೂ ತೀರಾ ದುಬಾರಿಯೇನಲ್ಲ– ಎನ್ನುವುದು ಮತ್ತೆ ಕೆಲವರ ತರ್ಕ.

ಇತ್ತೀಚಿನ ಯುವಪೀಳಿಗೆಯ ಈ ‘ಮದುವೆ ಬೇಡ, ಮಕ್ಕಳು ಬೇಡ’ ಟ್ರೆಂಡ್‌ ಸಮಾಜ ವಿಜ್ಞಾನಿಗಳನ್ನೂ ಯೋಚನೆಗೆ ಹಚ್ಚಿದೆ. ‘ಈ ಸಂಬಂಧ ನನಗೇನು ಕೊಡುತ್ತೆ’ ಎಂಬ ಆಲೋಚನೆಯು, ‘ಸಂಬಂಧವನ್ನು ಗಟ್ಟಿಗೊಳಿಸಲು ನಾನೇನು ಮಾಡಬೇಕು’ ಎಂಬ ಹೊಣೆಗಾರಿಕೆಯ ಭಾವವನ್ನು ಹಿಮ್ಮೆಟ್ಟಿಸುತ್ತಿದೆಯೇ? ಲಿವ್-ಇನ್ ಸಂಬಂಧಗಳು ಸಾಮಾನ್ಯವಾಗುತ್ತಿರುವುದು, ಬೆರಳ ತುದಿಯ ಕ್ಲಿಕ್‍ನಲ್ಲಿ ಡೇಟಿಂಗ್ ಆ್ಯಪ್‌ಗಳು ಲಭ್ಯವಾಗುತ್ತಿರುವುದು, ಓದು ಮುಗಿಯುತ್ತಿದ್ದಂತೆಯೇ ಕೆಲಸವೂ ಸಿಕ್ಕು ಆರ್ಥಿಕ ಸ್ವಾವಲಂಬನೆ ಸಾಧಿಸುವುದು. ಇವೆಲ್ಲ ಸೇರಿ ಜವಾಬ್ದಾರಿ, ಕರ್ತವ್ಯ ಇತ್ಯಾದಿಗಳೆಲ್ಲ ಹಳೆಯ ಪದಕೋಶದ ಸವಕಲು ಪದಗಳಾಗುತ್ತಿವೆಯೇ?

ಆದರೆ ಯುವಮನಸ್ಸುಗಳ ಒಳಹೊಕ್ಕು ನೋಡಿದರೆ, ಇಂತಹ ಪ್ರಶ್ನೆಗಳು– ಸಾಂಪ್ರದಾಯಿಕ, ರೂಢಿಗತ ಮನೋಭಾವದ ಅನಗತ್ಯ ಆತಂಕಗಳು– ಎನ್ನಿಸುತ್ತವೆ.

‘ನನ್ನ ಬದುಕು ಬೇರೆ ರೀತಿಯಾಗಿರಲು ಸಾಧ್ಯ, ನನ್ನಮ್ಮ, ಅಪ್ಪನಂತೆ ನಾನಿರಬೇಕಿಲ್ಲ. ನನ್ನ ಆಯ್ಕೆಗಳನ್ನು ನಾನೇ ಮಾಡಿಕೊಳ್ಳಬೇಕು. ಮದುವೆ, ಸಂಸಾರವೇ ಬದುಕಿನ ಅಂತಿಮ ಗುರಿಯಲ್ಲ. ನನ್ನ ಬದುಕಿನ ಖುಷಿ, ನೆಮ್ಮದಿ ಯಾವುದರಲ್ಲಿದೆ ಅಂತ ನಾನೇ ಹುಡುಕಿಕೊಳ್ಳಬೇಕು. ನನ್ನ ಆಯ್ಕೆಗಳಿಗೆ ನಾನೇ ಜವಾಬ್ದಾರಿ. ಕೊನೆಗೂ ಇದು ನನ್ನ ಬದುಕು. ಮತ್ತೆ ನನಗೆ ಪುನರ್ಜನ್ಮದಲ್ಲೆಲ್ಲ ನಂಬಿಕೆ ಇಲ್ಲಪ್ಪ! ಹಿಂಗಾಗಿ ಇರೋ ಒಂದು ಬದುಕನ್ನು ಇಡಿಯಾಗಿ ಬದುಕಬೇಕು ಅಲ್ಲವಾ’ ಎಂದು ಗೀತಿಕಾ ಹೇಳುವುದರಲ್ಲಿಯೂ ಅರ್ಥವಿದೆ ಎನ್ನಿಸುತ್ತದೆ.

ಹಿರಿಯರು ಆಯ್ಕೆ ಮಾಡಿದರೆಂದೋ ಅಥವಾ ತಮಗೇ ಇಷ್ಟವಾದರು ಎಂದೋ ಅವಸರದ ತೀರ್ಮಾನ ತೆಗೆದುಕೊಂಡು, ಮದುವೆಯಾದ ನಂತರ ಹೊಂದಾಣಿಕೆಯೇ ಆಗಲಾರದಷ್ಟು ಭಿನ್ನಾಭಿಪ್ರಾಯಗಳು ಮೂಡಿದರೆ, ವಿಚ್ಛೇದನದ ದಾರಿ ಹಿಡಿಯುವುದೋ ಅಥವಾ ಬದುಕಿನ ಖುಷಿಯನ್ನು ಬಲಿಗೊಟ್ಟು ಬದುಕುವುದೋ ಎಂಬ ಇನ್ನೊಂದು ಕಟುವಾಸ್ತವಕ್ಕೆ ಎದುರಾಗಬೇಕಲ್ಲ? ಅದಕ್ಕಿಂತ ಹೀಗೆ ಮದುವೆಯನ್ನು ಮುಂದೂಡಿ, ಕೆಲಕಾಲ ಜೊತೆಯಲ್ಲಿದ್ದು, ಪರಸ್ಪರ ಅರ್ಥ ಮಾಡಿಕೊಂಡು, ಸಾವಧಾನದಿಂದ ಮದುವೆಯಾಗುವುದು ವಿಹಿತವಲ್ಲವೇ.. ಎಂದು ಯುವಮನಸ್ಸುಗಳು ಮುಂದಿಡುವ ಪ್ರಶ್ನೆಗೆ ಉತ್ತರ ಅಷ್ಟು ಸಲೀಸಿಲ್ಲ. ಇಂದಿನ ಯುವಜನತೆಯ ಮುಂದೆ ಹಲವು ದಾರಿಗಳು ಇವೆ. ಮನದ ಬಾಗಿಲುಗಳು ತೆರೆದಿವೆ. ಕಿಟಕಿಗಳು ಹೊಸ ಗಾಳಿಗೆ ಮುಖವೊಡ್ಡಿವೆ. ಇರುವುದೊಂದೇ ಬದುಕು, ಇರುವಷ್ಟು ಕಾಲ ಸಂತಸದಿಂದ ಇರಬೇಕೆಂಬ ಆಶಯ, ತಮ್ಮ ನೆಮ್ಮದಿ ತಾವು ಕಂಡುಕೊಳ್ಳಬೇಕೆಂಬ ತುಡಿತವನ್ನು ತಪ್ಪು ಎನ್ನುವುದಾದರೂ ಹೇಗೆ?

ಭಾರತೀಯ ಸಮಾಜ ಬದಲಾಗುತ್ತಿದೆ. ಯುವಜನರು ಸ್ವಯಂನಿರ್ಧಾರಕ್ಕೆ ಆದ್ಯತೆ ಕೊಡುತ್ತಿದ್ದಾರೆ. ಅವಿಭಕ್ತ, ವಿಭಕ್ತ ಕುಟುಂಬಗಳೆಲ್ಲ ಕಣ್ಮರೆಯಾಗಿ ಏಕಾಂಗಿ ಕುಟುಂಬದ ಜಮಾನಾಕ್ಕೆ ನಾವು ಕಾಲಿಡುತ್ತಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.