ಕೆಲ ವರ್ಷಗಳ ಹಿಂದೆ ಜಪಾನಿ ಸ್ನೇಹಿತೆಯನ್ನು ಭೇಟಿಯಾದಾಗ, ಆಕೆ ತನ್ನ ಊರಿನ ವಿಶೇಷತೆಗಳನ್ನು ಹಂಚಿಕೊಂಡಳು. ‘ನಮ್ಮ ಊರಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಅದರಲ್ಲೂ ಬೇಸಿಗೆಯ ಸಮಯದಲ್ಲಿ ಗ್ಯೋದಾ ನಗರದಲ್ಲಿ ನಡೆಯುವ ‘ರೈಸ್ ಫೀಲ್ಡ್ ಆರ್ಟ್’ ನಿಜಕ್ಕೂ ವಿಶಿಷ್ಟ. ವಿವಿಧ ಬಣ್ಣದ ಭತ್ತದ ತಳಿಗಳಿಂದ ಗದ್ದೆಯಲ್ಲಿ ಮೂಡುವ ಅದ್ಭುತವಾದ ಕಲೆಯನ್ನು ಒಮ್ಮೆ ನೋಡಲೇಬೇಕು’ ಎಂದಳು. ಆಕೆಯ ಈ ಮಾತಿನ ಬಳಿಕ ಕಳೆದ ಮೂರು ವರ್ಷಗಳಿಂದ ತಪ್ಪದೇ ಈ ಭತ್ತದ ಕಲೆ ನೋಡಲು ಹೋಗುತ್ತಿದ್ದೇನೆ.
ಕಲೆಯ ಪ್ರಕ್ರಿಯೆಯನ್ನು ತಿಳಿದುಕೊಳ್ಳುವ ಆಸಕ್ತಿಯಿಂದ ಈ ಬಾರಿ ಸ್ವಯಂಸೇವಕಿಯಾಗಿ ಭಾಗವಹಿಸಿದ್ದೆ. ಬೆಳಿಗ್ಗೆ ಸ್ಥಳಕ್ಕೆ ತಲುಪಿದಾಗ, ಸಸಿ ನೆಡುವ ಜಾಗವನ್ನು ನಕ್ಷೆಯಲ್ಲಿ ಸಂಖ್ಯೆ ಮೂಲಕ ತೋರಿಸಿದ್ದರು. ಗದ್ದೆಯಲ್ಲಿ ಮರದ ಕಂಬ ಮತ್ತು ಹಗ್ಗದಿಂದ ಚೌಕಟ್ಟಿನಂತೆ ಜಾಲ ಹಾಕಲಾಗಿತ್ತು. ಅದು ದಿನಪತ್ರಿಕೆಗಳಲ್ಲಿ ಕಾಣುವ ಬಿಂದುಗಳನ್ನು ಜೋಡಿಸಿ ಎನ್ನುವ ಚಿತ್ರದ ರೂಪದಂತಿತ್ತು. ಆಯತಾಕಾರದ ಜಾಗವನ್ನು ಚಿಕ್ಕ ಚಿಕ್ಕ ಭಾಗಗಳಾಗಿ ವಿಭಜಿಸಿ, ಪ್ರತಿಯೊಬ್ಬರಿಗೂ ಒಂದು ಚಿಕ್ಕ ಚೌಕ ನೀಡಲಾಗಿತ್ತು. ನನ್ನ ಪಾಲಿನ ಚೌಕದಲ್ಲಿ ಕಪ್ಪುಬಣ್ಣದ ಸಸಿಗಳನ್ನು ನೆಡಬೇಕಾಗಿ ಹೇಳಿದ್ದರು. ಪಕ್ಕದಲ್ಲಿದ್ದವರು ಗಾಢ ಹಸಿರು ಬಣ್ಣದ ಸಸಿಗಳನ್ನು ನೆಡುತ್ತಿದ್ದರು. ನಾವು ನೋಡುತ್ತಿದ್ದದ್ದು ಕೇವಲ ಚೌಕಟ್ಟಿನೊಳಗಿನ ನಮ್ಮ ಕೆಲಸ. ಎಲ್ಲರ ಕೆಲಸ ಒಂದಾಗಿ ಸೇರಿದಾಗ ಎಷ್ಟು ದೊಡ್ಡ ಚಿತ್ರ ಮೂಡುವುದೋ ಎಂಬ ಕುತೂಹಲ ಮನಸ್ಸಿನಲ್ಲಿ ಮೂಡಿತ್ತು. ಬಿತ್ತನೆ ಮುಗಿದ ನಂತರ, ಎಲ್ಲರಿಗೂ ಕಳೆದ ವರ್ಷದ ಅಕ್ಕಿಯಿಂದ ತಯಾರಿಸಿದ ಉಂಡೆಯನ್ನು (ಒನಿಗಿರಿ) ತಿಂಡಿಯಾಗಿ ಕೊಟ್ಟರು. ಕೊಯ್ಲಿನ ನಂತರ ಸ್ವಯಂಸೇವಕರಿಗೆ ಸ್ವಲ್ಪ ಅಕ್ಕಿಯನ್ನು ಅಂಚೆ ಮೂಲಕ ಕಳುಹಿಸುತ್ತಾರೆ ಎಂದು ತಿಳಿಯಿತು.
ಬಿತ್ತನೆ ಮಾಡಿದ ಎರಡು ತಿಂಗಳ ನಂತರ ಮತ್ತೆ ಅಲ್ಲಿಗೆ ಹೊರಟೆ. ಟೋಕಿಯೊದಿಂದ ಗ್ಯೋದಾಕ್ಕೆ ತಕಾಸಕಿ ರೈಲಿನಲ್ಲಿ ಸುಮಾರು ಒಂದು ಗಂಟೆಯಷ್ಟೇ. ಚಿತ್ರ ಹೇಗೆ ಮೂಡಿರಬಹುದೆಂಬ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿತ್ತು. ಗ್ಯೋದಾದಿಂದ ಟ್ಯಾಕ್ಸಿ ಹಿಡಿದು ಹೊರಟೆ. ದೂರದಲ್ಲಿ ಟವರ್ ಕಾಣಿಸಿತು. ನೆಲಮಟ್ಟದಿಂದ ನೋಡಿದರೆ ಹೊಲದಲ್ಲಿ ಕೇವಲ ವಿವಿಧ ಬಣ್ಣಗಳ ಪೈರುಗಳಷ್ಟೇ ಕಾಣುತ್ತಿದ್ದವು. ಐವತ್ತು ಮೀಟರ್ ಎತ್ತರದ ಟವರ್ ಮೇಲಿಂದ ನೋಡಿದಾಗ ಮಾತ್ರ ಆ ಚಿತ್ರ ಅದ್ಭುತವಾಗಿ ಕಾಣಿಸುತ್ತದೆ.
20 ನಿಮಿಷಗಳಲ್ಲಿ ‘ಕೊದೈ ಹಸು ನೋ ಸತೋ’ ತಲುಪಿದೆವು. ಟ್ಯಾಕ್ಸಿ ಡ್ರೈವರ್, ‘ಈ ವರ್ಷ ಅನಿಮೆ ಥೀಮ್ ಇರುವುದರಿಂದ ಜನ ಹೆಚ್ಚು ಬರುತ್ತಿದ್ದಾರೆ. ಮೊದಲು ಟವರ್‌ಗೆ ಟಿಕೆಟ್ ತಗೊಳ್ಳಿ, ಇಲ್ಲದಿದ್ದರೆ ತುಂಬಾ ಹೊತ್ತು ಸಾಲಿನಲ್ಲಿ ಕಾಯಬೇಕಾಗುತ್ತದೆ’ ಎಂದು ಇಳಿಯುವಾಗ ಸಲಹೆ ನೀಡಿದರು. ಅವರ ಮಾತನ್ನು ಕೇಳಿ ನೇರವಾಗಿ ಮ್ಯೂಸಿಯಂಗೆ ಹೋಗಿ ಟಿಕೆಟ್ ತೆಗೆದುಕೊಂಡೆ. ‘ಇನ್ನೂ ಒಂದು ಗಂಟೆಯಾಗಬಹುದು, ನಿಮ್ಮ ಟಿಕೆಟ್ ಸಂಖ್ಯೆಯನ್ನು ಧ್ವನಿವರ್ಧಕದ ಮೂಲಕ ಕರೆಯುತ್ತೇವೆ’ ಎಂದರು.
ಕಮಲದ ಊರು!
ಇನ್ನೂ ಸಮಯವಿದ್ದ ಕಾರಣ ಹತ್ತಿರದ ಕಮಲದ ಕೊಳಕ್ಕೆ ಹೋದೆ. ಈ ಸ್ಥಳವು ಭತ್ತದ ಕಲೆಗಷ್ಟೇ ಅಲ್ಲ, ಕಮಲದ ಹೂಗಳಿಗೂ ಪ್ರಸಿದ್ಧ. ಭೂಮಿಯನ್ನು ಅಗೆಯುತ್ತಿದ್ದಾಗ ಸುಮಾರು 1,400 ರಿಂದ 3,000 ವರ್ಷಗಳ ಹಿಂದಿನ ಕಮಲದ ಬೀಜಗಳು ಪತ್ತೆಯಾಗಿ, ಅವನ್ನು ಇದೇ ಸ್ಥಳದಲ್ಲಿ ನೆಟ್ಟಿದ್ದಾರೆ. ಇಂದು 40ಕ್ಕೂ ಹೆಚ್ಚು ಬಗೆಯ ಕಮಲಗಳು ಅರಳಿ, ಪ್ರತಿ ಬೇಸಿಗೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಈ ಕಾರಣದಿಂದಲೇ ಗ್ಯೋದಾ ‘ಪ್ರಾಚೀನ ಕಮಲದ ಗ್ರಾಮ’ ಎಂದು ಖ್ಯಾತಿ ಪಡೆದಿದೆ.
ಆ ದಿನ 38 ಡಿಗ್ರಿ ಸೆಲ್ಸಿಯಸ್ ಬಿಸಿಲಿತ್ತು. ಹೆಚ್ಚು ಹೊತ್ತು ಹೊರಗೆ ನಿಲ್ಲಲು ಆಗದೆ ಮ್ಯೂಸಿಯಂಗೆ ಮರಳಿದೆ. ಸರದಿಗೆ ಇನ್ನೂ ಸಮಯ ಇತ್ತು. ಒಳಗಡೆ ಹಿಂದಿನ ವರ್ಷಗಳ ರೈಸ್ ಫೀಲ್ಡ್ ಆರ್ಟ್ ಫೋಟೊಗಳನ್ನು ತೂಗು ಹಾಕಿದ್ದನ್ನು ನೋಡುತ್ತಾ ನಿಂತೆ. ಒಂದು ಬದಿಯಲ್ಲಿ ಭಾರತದ ಕಮಲದ ಹೂವಿನ ಮಾಹಿತಿ, ಇನ್ನೊಂದು ಕಡೆ ತಂಜಿರೊ ಪೋಸ್ಟರ್‌ಗಳು. ಪ್ರತೀ ವರ್ಷ ವಿಭಿನ್ನ ಥೀಮ್ ಆರಿಸಿ ಭತ್ತದ ಕಲೆಯನ್ನು ಮಾಡುತ್ತಾರೆ. ಕೆಲವೊಮ್ಮೆ ಯೋಧರು (ಸಮುರಾಯಿ), ಐತಿಹಾಸಿಕ ದೃಶ್ಯ, ಒಲಿಂಪಿಕ್ಸ್ ಹೀಗೆ ಭಿನ್ನ ಭಿನ್ನ ವಿಷಯಾಧಾರಿತ ಭತ್ತದ ಕಲೆ ಮಾಡುತ್ತಾರೆ. ಈ ವರ್ಷ ‘ಡೀಮನ್ ಸ್ಲೇಯರ್’ ಸಿನಿಮಾ ಬಿಡುಗಡೆಯಾದ ಕಾರಣ, ಅದರ ಪ್ರಚಾರಕ್ಕಾಗಿ ‘ತಂಜಿರೊ’ನ ಭಾವಚಿತ್ರ. ಇದನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ವಿಶೇಷವಾಗಿ, ಸಂಪೂರ್ಣ ‘ತಂಜಿರೊ’ ವೇಷದಲ್ಲಿ ಬಂದಿದ್ದ ಒಬ್ಬ ಹುಡುಗ ಎಲ್ಲರ ಗಮನ ಸೆಳೆಯುತ್ತಿದ್ದ. ಕೊನೆಗೂ, ಗೋಪುರ ಏರಲು ನನ್ನ ಸರದಿ ಬಂತು.
ಲಿಫ್ಟ್ ಮೂಲಕ ಟವರ್ ಮೇಲೆ ಹೋದಾಗ ವಿಹಂಗಮ ನೋಟ ತೆರೆದಿತ್ತು. ಗದ್ದೆಯ ಮಧ್ಯೆ ತಂಜಿರೊನ ಚಿತ್ರ. ಈ ಬಾರಿ ಒಂಬತ್ತು ವಿಧದ ಭತ್ತದ ತಳಿಗಳನ್ನು ಬಳಸಿ, ಸಾವಿರಕ್ಕೂ ಹೆಚ್ಚು ಜನರ ಪರಿಶ್ರಮದಿಂದ ಏಳು ಎಕರೆ ಗದ್ದೆಯನ್ನು ಕಲೆಯಾಗಿ ರೂಪಿಸಿದ್ದರು. ರೈತರು ಇಲ್ಲಿ ಗದ್ದೆಯನ್ನೇ ಕ್ಯಾನ್ವಾಸ್ ಆಗಿ ಬಳಸಿದ್ದಾರೆ. ತಂಜಿರೊನ ಮುಖದ ಬಣ್ಣಕ್ಕೆ ತಿಳಿ ಹಸಿರು–ಹಳದಿ, ಗಾಳಿಯಲ್ಲಿ ಹಾರುವಂತ ಕೂದಲಿಗೆ ಕಪ್ಪು–ಹಸಿರು, ಜಾಕೆಟಿಗೆ ಕಪ್ಪು- ಹಸಿರು ಬಣ್ಣದ ಚದುರಂಗದ ವಿನ್ಯಾಸ, ಕೈಯಲ್ಲಿದ್ದ ಕತ್ತಿಯ ತುದಿಗೆ ಬಿಳಿ–ಹಳದಿ ಬಳಸಿ ಹೊಳೆಯುವಂತೆ ತೋರಿಸಿದ್ದರು. ಮೇಲಿನಿಂದ ಒಂದು ಬದಿಯಲ್ಲಿ ಡೀಮನ್ ಸ್ಲೇಯರ್ ಆರ್ಟ್ ಇದ್ದರೆ, ಇನ್ನೊಂದು ಕಡೆ ಕಮಲದ ಕೊಳ, ಸುತ್ತಮುತ್ತ ಹಸಿರು ಗದ್ದೆ ನಿಜಕ್ಕೂ ಆ ಗೋಪುರದ ಮೇಲಿನಿಂದ ಕಾಣುವ ದೃಶ್ಯ ಮನಮೋಹಕ. ಜಪಾನಿನ ಮಕ್ಕಳು ಸಂತೋಷದಿಂದ ‘ಸುಗೋಯ್’ (ಅದ್ಭುತ) ಎಂದು ಕೂಗುತ್ತಿರುವುದು ಕೇಳಿಸಿತು. ಮಕ್ಕಳ ಎತ್ತರಕ್ಕೆ ಸರಿಯಾಗಿ ಸ್ಟೂಲ್ ಇಟ್ಟಿದ್ದು, ಸ್ಪಷ್ಟವಾಗಿ ಚಿತ್ರ ನೋಡಲು ದುರ್ಬೀನು ಸೌಲಭ್ಯ ಒದಗಿಸಿರುವುದು, ಜಪಾನಿಯರ ಕಾಳಜಿಯನ್ನು ತೋರಿಸಿತು. ಅಷ್ಟರಲ್ಲೇ ಹಿರಿಯರ ಗುಂಪೊಂದು ಬಂದು, ‘ಈ ವರ್ಷ ಅಕ್ಷರಗಳೂ ತುಂಬಾ ಸ್ಪಷ್ಟವಾಗಿ ಮೂಡಿವೆ’ ಎಂದು ಮಾತನಾಡಿಕೊಳ್ಳುತ್ತಿದ್ದರು.
ಗಿನ್ನಿಸ್ ದಾಖಲೆ
ಈ ಕಲೆಯು ಹುಟ್ಟಿದ್ದು ಆಮೊರಿ ಪ್ರಿಫೆಕ್ಚರ್‌ನ ಇನಕಾದತೆ ಗ್ರಾಮದಲ್ಲಿ. 1993ರಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಆರಂಭವಾದ ಈ ಪ್ರಯತ್ನ, ಮೊದಲು ಕೇವಲ ಮೂರು ಬಣ್ಣಗಳಿಂದ ಅಕ್ಷರಗಳನ್ನು
ಬರೆಯುವ ಮಟ್ಟದಲ್ಲಿತ್ತು. ಕ್ರಮೇಣ ಹನ್ನೆರಡು ವಿಧದ ಭತ್ತದ ತಳಿಗಳನ್ನು ಬಳಸಿ ಗದ್ದೆಯಲ್ಲಿ ಚಿತ್ರಗಳನ್ನು ಮೂಡಿಸುವುದರ ಮೂಲಕ ರೈಸ್ ಆರ್ಟ್ ಹುಟ್ಟಿತು. 2015ರಲ್ಲಿ ಗ್ಯೋದಾ ವಿಶ್ವದ ಗಮನ ಸೆಳೆದದ್ದು 27,000 ಚದರ ಮೀಟರ್‌ಗಿಂತ ದೊಡ್ಡ ರೈಸ್ ಫೀಲ್ಡ್ ಆರ್ಟ್ ನಿರ್ಮಿಸಿ ಗಿನ್ನಿಸ್ ದಾಖಲೆ ಸೇರಿದಾಗ.
ನನ್ನ ಜಪಾನಿ ಸ್ನೇಹಿತೆಯ ಆಹ್ವಾನದಿಂದ ಪ್ರಾರಂಭವಾದ ಈ ಪಯಣ, ಇಂದಿಗೆ ನನ್ನ ಪ್ರತೀ ಬೇಸಿಗೆಯ ನಿರೀಕ್ಷೆಯ ಭಾಗವಾಗಿದೆ. ಗ್ಯೋದಾದ ರೈಸ್ ಫೀಲ್ಡ್ ಆರ್ಟ್ ಸ್ಥಳೀಯ ಸಮುದಾಯಕ್ಕೆ ಹೊಸ ಜೀವ ತುಂಬಿದೆ. ಪ್ರವಾಸಿಗರ ಆಗಮನದಿಂದ ಅಂಗಡಿಗಳು, ಹೋಟೆಲ್‌ಗಳು, ರೈತರಿಗೆ ಆರ್ಥಿಕ ಲಾಭವಾಗುವುದರ ಜೊತೆಗೆ, ಯುವಜನರಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡಿಸುತ್ತಿದೆ.
ಜೂನ್ - ಅಕ್ಟೋಬರ್‌ವರೆಗೆ. ವಿಶೇಷವಾಗಿ ಜುಲೈ–ಆಗಸ್ಟ್ ತಿಂಗಳು ಅತ್ಯುತ್ತಮ.
ಯಾವ ಸಂದರ್ಭದಲ್ಲಿ ಭೇಟಿ ಸೂಕ್ತ
*ಜೂನ್ - ಅಕ್ಟೋಬರ್‌ವರೆಗೆ. ವಿಶೇಷವಾಗಿ ಜುಲೈ–ಆಗಸ್ಟ್ ತಿಂಗಳು ಅತ್ಯುತ್ತಮ.
*ಸ್ಥಳ: ಕೊದೈ ಹಸು ನೋ ಸತೋ (ಪ್ರಾಚೀನ ಕಮಲದ ಗ್ರಾಮ) ಗ್ಯೋದಾ ನಗರ ಸೈತಾಮಾ
*ಮಾರ್ಗ: ಟೋಕಿಯೊದಿಂದ ತಕಾಸಕಿ ರೈಲಿನಲ್ಲಿ ಗ್ಯೋದಾ ನಿಲ್ದಾಣಕ್ಕೆ ಒಂದು ಗಂಟೆ ಪ್ರಯಾಣ. ನಂತರ ಬಸ್ ಅಥವಾ ಟ್ಯಾಕ್ಸಿ ಹಿಡಿದು ಸುಲಭವಾಗಿ ಈ ಸ್ಥಳಕ್ಕೆ ತಲುಪಬಹುದು.
*ವೀಕ್ಷಣಾ ಸ್ಥಳ: ಪಾರ್ಕ್‌ನ ವೀಕ್ಷಣಾ ಗೋಪುರದಿಂದ ಸಂಪೂರ್ಣ ಭತ್ತದ ಕಲೆ ನೋಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.