ADVERTISEMENT

ಅಕ್ಷಯರಕ್ಷೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST

ಚಟಪಟ ದಾಳದೊಂದೇ ಉರುಳಲ್ಲಿ ಬಟ್ಟಂ
ಬಯಲಾಗಿತ್ತು ವರ್ಷ ಸರತಿಯ ಪಡುಮನೆ. ರೆಕ್ಕೆ
ಝಾಡಿಸಿ ಹಾರಿಯೇ ಹೋಗಿತ್ತು ಬೆಂಗಟೆಕೊಕ್ಕ
ಸೂರ ಸರಹದ್ದು ನೆರಳ ಹೊಚ್ಚಿದ್ದ ರೆಕ್ಕೆ-
ಯಾಡಿಸುತ ನಿಶ್ಚಿಂತ. ಒಂದೇ ಉರುಳಲ್ಲಿ
ಬಳ ಬಳ ಉದುರಿದವು ಉಟ್ಟಿದ್ದುಡುಪು.
ಹಾಕುತ್ತ ನೆರೆದವರೆದುರು ಬೊಬ್ಬೆ, ಹಿಡಿದರೂ
ಉಟ್ಟಿದ್ದೆಕ್ಕಟಿ ಬಟ್ಟೆ ಗಟ್ಟಿ, ಸೆಳೆದೇ ಸೆಳೆದಿತ್ತು-
 
ಕೆಂಗಿಡಿಯ ಕಿಡಿಮೀಸೆ ಜಗ್ಗಿ ಮೊಲೆಯೊತ್ತಿದ್ದ
ಸೆರಗ ಬೇಡಬೇಡೆಂದೆಷ್ಟೆ ಬಡಕೊಂಡರೂ ಬಿಡ
ದ ಬರ್ಬರತೆ. ಬಡಿಸಿಟ್ಟಿದ್ದ ತಾಟ ಸರಕ್ಕ
ನೆಳೆದುಕೊಂಡರು ಎದುರುಪಂಕ್ತಿಯ ಮಂದಿ-
ಅಂದಾದುಂದಿ. ಐದು ಅತ್ತ್ಯಗ್ರೋನ್ನತ ಸ್ಥಾಣು
ಲಿಂಗದ ನಡುವೆ ತುಂಬದರಕೆಯ ನಿಸ್ಸಂಗ
ಕಣಿವೆ. ಹುಡುಕಿಕೊಂಡಲೆಯುತ್ತಿದ್ದಾರೆ ಪಂಚ
ವಲ್ಲಭರು ಅಕ್ಷಯ ವಸ್ತ್ರವನ್ನ, ಅಕ್ಷಯ
 
ಪಾತ್ರೆಯನ್ನ, ಅಕ್ಷಯ ಸೂರನ್ನ-ಹಿಡಿಬಿತ್ತನೆಗೆ
ಖಂಡುಗ ಕೊಡುವ ಬನಶಂಕರಿಯ ಸಮೃದ್ಧ
ಮಡಿಲಲ್ಲಿ. ರಾತ್ರಿಯಿಡೀ ನಕ್ಷತ್ರ ಮೋಂಬತ್ತಿ
ಮಿನುಗಿಸುವ ಆಕಾಶಚತ್ರದಡಿ. ನಟ್ಟಿರುಳಲ್ಲಿ
ಬೆಳ್ದಿಂಗಳ ನವುರಬಟ್ಟೆ ಮೈತುಂಬ ಹೊದಿಸುವ
ನೀಲಕಾಯನ ಸನ್ನಿಧಾನದಲ್ಲಿ. ಡಾರ್ಜಲಿಂಗಲ್ಲಿ
ಕಾಯುತ್ತಿದ್ದೇವೆ ನಾನೂ ಮತ್ತು ನನ್ನಾಕೆ- ಆಗಿ
ವಿಸ್ಫುರಿತ ಲಿಂಗ, ಪಸೆಯುಕ್ಕುವಾರ್ದ್ರ ಯೋನಿ.
 
ಕಾಂಚನಜುಂಗ ನಿಧನಿಧಾನಕ್ಕಾಗುತ್ತಿದೆ
ಉಟ್ಟಿದ್ದ ಸ್ವರ್ಣಪೀತಾಂಬರ ಮೈಜಾರಿ ನಗ್ನ
ನೀಲಿಮಲಿಂಗ. ಮೇಲಕ್ಕಾಕಾಶ- ಅಕ್ಷಯ
ಸೂರು. ಕೆಳಕ್ಕೆ ನೆಲ- ಅಕ್ಷಯ ಪಾತ್ರೆ. ಯಾವತ್ತೂ
ಸೆಳೆಯಲಾಗದ ವಸ್ತ್ರ ಮೈಮಿದ್ದಿ ಹೊದ್ದಿಸಿದ
ದಿಗ್ಭ್ರಾಂತ ದಿಗ್ಬಟ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.