ADVERTISEMENT

ಅವನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ

ರೇಣುಕಾ ರಮಾನಂದ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 19:30 IST
Last Updated 24 ಫೆಬ್ರುವರಿ 2018, 19:30 IST
ಅವನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ
ಅವನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ   

ಯಾವಾಗಲಾದರೊಮ್ಮೆ ಅವನು
ತನ್ನ ಕಡುಗೆಂಪು ಕಮಲದಳಗಳಂಥ
ಮುದ್ದು ಧಿಮಾಕು ತುಟಿ ಚಾಚಿ
ಈಗಲಾದರೂ
ಆಗಬಾರದ್ದು ಆಗಿಹೋಗಲೆಂಬಂತೆ
ಘನಗಂಭೀರವಾಗಿ ಹುಬ್ಬು ಮೇಲೆತ್ತಿ ನೋಡಲಾಗಿ
ತಕ್ಷಣ ಅವನ ಕೊರಳು ಬಳಸಿ
ಶತಮಾನಗಳ ಕಾಲ ಜೋತುಬೀಳುವಂಥ
ನಿತ್ರಾಣದ
ಪ್ರೀತಿಯಾಗಿಬಿಡುತ್ತದೆ
ನನಗೆ

ಛೆ..!!
ಅಷ್ಟೂ ಗೊತ್ತಾಗುವುದಿಲ್ಲವೇ ನಿನಗೆ..?
ಅವನು ಸಿಟ್ಟಿನಲ್ಲಿದ್ದಾನೆ
ಇನ್ಯಾರದ್ದೋ ಪ್ರೀತಿಯ ನಿರಾಕರಿಸುತ್ತಿದ್ದಾನೆ
ಪುರುಸೊತ್ತೇ ಇಲ್ಲವೆಂದು
ಮತ್ಯಾರನ್ನೋ ದೂರವಿಡುತ್ತಿದ್ದಾನೆ
ಮೂರು ಹೊತ್ತೂ ಸುಡುವ ಪ್ರೇಮದ ಬೆನ್ನುಬಿದ್ದ ನಿನಗೆ
ಗೊತ್ತೇ ಆಗುವುದಿಲ್ಲ
ಈಗ ಅವನು ದುಃಖದಲ್ಲಿದ್ದಾನೆ ಅಥವಾ
ಗಹನ ಚಿಂತನೆಯಲ್ಲಿ

ಪೂರ್ತಿ ಹಾಳಾದ ಈ ಲೋಕದಲ್ಲಿ
ಇದ್ದವರು ಎರಡೇ ರೀತಿಯ ಜನ
ಕುಳಿತುಬಿಟ್ಟಿದ್ದಾರೆ ಪಟ್ಟು ಹಿಡಿದು
ಇರುವುದನ್ನು ಇಲ್ಲ ಎಂದೂ
ಇಲ್ಲದಿರುವುದನ್ನು ಇದೆ ಎಂದೂ
ಸಾಧಿಸುತ್ತ

ADVERTISEMENT

ಆಗಷ್ಟೆ ರುಬ್ಬಿದ
ತಾಜಾ ಕೆಂಪು ಖಾರದಂತಹ
ಚೆರ್‍ರೀರಸ ತೊಟ್ಟಿಕ್ಕಿದಂತಹ
ಕಳಿತ ಕಲ್ಲಂಗಡಿಯ ತಿರುಳಿನಂತಹ
ಅಧರಗಳು ಅವನವು-
ನಾಲ್ಕು ರಸ್ತೆ ಕೂಡಿದಲ್ಲಿ ಮತ್ತೆ ನಾನು
ಹುಬೇಹೂಬು ಬಣ್ಣಿಸುತ್ತಿದ್ದರೆ
ಹೆದರಿಕೊಳ್ಳುತ್ತಿದ್ದಾರೆ ಸೇರಿದವರು
ಬಾಯಿ ಮುಚ್ಚಿಸಲು ದಾರಿ ಹುಡುಕುತ್ತಾರೆ
ಸಾಕು ಸುಮ್ಮನಿರಿಸಿ ಇವಳನ್ನು
ಇದ್ಯಾಕೋ ಅತಿಯಾಯಿತು ಎಂದು
ಕರೆಕೊಟ್ಟು ದಿಕ್ಕಾಪಾಲಾಗಿದ್ದಾರೆ

ಕೇಡುಗಾಲ ಬಂದಂತೆ ಬಿಳಿಚಿ
ಮಟಮಟ ಮಧ್ಯಾಹ್ನವೇ ಓಡಿಹೋದ ಈ
ಇವರು ಬಾಡಿ ಬಸವಳಿದ
ತೊಂಡೆಹಣ್ಣಿನಂತಹ ಹೆಣ್ಣಿನ ಅಧರದ
ಕುರಿತಾಗಿ ಮಾತ್ರ ಬಲ್ಲಿದರು
ಕತ್ತಿಯೋ ಕುಡುಗೋಲೋ ಕೇಳುತ್ತಿದ್ದಾರೆ
ಕಟ್ಬಾಕಿ ಉಳಿದವರು
ಹಲ್ಕಾ ಹಾದರಗಿತ್ತಿ ಹೆಣ್ಣಿವಳು
ಮೂರನ್ನೂ ಬಿಟ್ಟು ಈ ನಡುರಸ್ತೆಯಲ್ಲಿ
ಓರ್ವ ಪುರುಷನ ಕುರಿತಾಗಿ ಹೀಗೆಲ್ಲ
ಕವಿತೆ ಓದುತ್ತಿರುವವಳು
ಬಿಟ್ಟರೆ ಒಂದಲ್ಲ ಒಂದು ದಿನ
ಯಾವುದಕ್ಕೂ ಹೇಸದ
ಸಾಧ್ಯತೆ ಇರುವವಳು

ದಯವಿಟ್ಟು ಕೇಳಿ
ಕೆಂಪಗಿನ ಅಧರಗಳ ಜೊತೆ
ಸಂತೈಸುವ ಎದೆಯನ್ನೂ ಹೊಂದಿರುವ
ಆತ ಓರ್ವ ಅಪ್ಪನೂ ಅಹುದು
ಅದೇ ತುಟಿಯಿಂದ ಆಗಾಗ ಮುದ್ದಿಸಿರುತ್ತಾನೆ
ಮಗಳ ಮುಂಗುರುಗಳನ್ನು
ಕೂಟ ಮುಗಿದ ಮೇಲೆ ಬೆವರಿದ ಪತ್ನಿಯ ನೊಸಲನ್ನು
ವಿದಾಯದ ಗಳಿಗೆಯಲ್ಲಿ ಸಹೋದರಿಯ ಬೈತಲೆಯನ್ನು
ಅವ್ವ ಸತ್ತಾಗ ತುತ್ತಿಟ್ಟ ಅಂಗೈಯನು
ಅಪರೂಪಕ್ಕೊಮ್ಮೆ ನಡುಗುತ್ತ ನನ್ನಂತಹ
ಪ್ರೇಯಸಿಯ ಗುಲಾಬಿ ಕೆನ್ನೆಯನ್ನು
ಇಷ್ಟಕ್ಕೇ...
ರಾತ್ರಿ ಯಾರು ಯಾರೆಲ್ಲ
ಬಂದುಹೋಗುತ್ತಾರೆಂದು ಗಟ್ಟಿಸಿ

ಕೇಳಿಬಿಟ್ಟಿರಿ ನೀವು
ಮೂಗು ಕೊಯ್ದು ಊರೆಲ್ಲ ರಕ್ತದ ಹನಿ
ಬಿತ್ತುವ ದಿನಾಂಕವನ್ನೂ ಘೋಷಿಸಿಬಿಟ್ಟಿರಿ
ನೀವು

ದಯವಿಟ್ಟು ನಿಮ್ಮ ಕೆಲಸದ ಕಡೆ
ಲಕ್ಷ್ಯ ಕೊಡಿ
ಅವನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ

ಕಾಲಾಂತರದಲ್ಲಿ
ನನಗೂ ಇವರಿಗೂ ಮುಗಿಯದ
ಈ ಇದು ಹೀಗೇ ಸಾಗಲಾಗಿ
ಕೊನೆಗೊಮ್ಮೆ
ನನ್ನ ಧ್ವನಿ ಉಡುಗಿ
ಅವರ ಕೈಯೇ ಮೇಲಾಗಿ
ದೀಪವಾರಿದ ಮೇಲಿನ ಒಂಟಿಕೋಣೆಯ
ಸಂದಿಯಲ್ಲಿ ನಾನೊಬ್ಬಳೇ ಓದಲೆಂದು
ಕಟ್ಟಿಕೊಟ್ಟರು ಪೊಟ್ಟಣದಲ್ಲಿ
ಒಂದಿಷ್ಟು ಖಡಕ್ಕಾದ ಹುರಿದ ಮಾತು-
ಕಾಲ ಮಿಂಚಿಲ್ಲ
ಈಗಲೂ
ನಿನಗಿರುವುದು ಎರಡೇ ಆಯ್ಕೆ

ಎಲ್ಲ ಮರೆತು
ಮೊನ್ನೆ ಸತ್ತವಳ ಎರಡು ಬೊಗಸೆ ಬೂದಿಯ
ಕುರಿತಾಗಿ ಉಘೇ ಉಘೇ ಎಂಬಂತಹ ಒಂದು ಕವಿತೆ
ಇಲ್ಲಾ ಸಾಮೂಹಿಕ ಆತ್ಮಾರ್ಪಣೆಯ
ಕುರಿತಾಗಿ ಒಂದು ನಿಗಿ ನಿಗಿ ಕಥೆ
ಬರೆಯಬಲ್ಲೆಯಾದರೆ

ಈಗಲೂ ನಿನಗೆ ಮಾಫಿಯಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.