ಹೀಗೆ ಒಂದು ಹುಣ್ಣಿಮೆಯ ದಿನ
 ಎಳೆಯರು ಬುದ್ಧನ ಬಳಿಗೆ ಬಂದು
 ತಿಳಿಗೊಳದಲ್ಲಿ, ಮರ ಬಳ್ಳಿಯಲ್ಲಿ ಬಿಡಿಸಿ ತಂದ ಹೂಗಳನ್ನು
 ಮುಂದೆ ಚೆಲ್ಲಿ ಕುಳಿತರು ಸುತ್ತ
ತೆರೆದ ಕಣ್ಣು ತೆರೆದ ಹಾಗೆ
 ಬಿಟ್ಟ ಬಾಯಿ ಬಿಟ್ಟು, ಮೈಯ ರೋಮ ನಿಮಿರಿನಲ್ಲಿ
 ಕದಲಲಿಲ್ಲ, ಕನಲಲಿಲ್ಲ
 ಕಾದು ಕುಳಿತರು ಸುತ್ತ ಒಂದು ಸುತ್ತಕ್ಕಾಗಿ
ಬುದ್ಧ ಬಿಚ್ಚಲಿಲ್ಲ ತುಟಿಯನು
 ಹೊರಡಲಿಲ್ಲ ಒಂದು ಶಬ್ದ
 ಹೂವಿನೆಡೆಗೆ ಕೈಯ ಚಾಚಿ ಕಮಲವೊಂದನೆತ್ತಿಕೊಂಡು
 ಬೆರಳ ನಡುವೆ ಹಿಡಿದು ನೋಡುತ್ತಿದ್ದನು
ನೋಡುನೋಡುತಿದ್ದ ಹಾಗೆ
 ಚಿಮ್ಮಿತೊಂದು ಮುಗುಳುನಗೆ, ಆ ಮಹಾನಗೆ
 ತುಂಬಿ ತುಳುಕಿದಂತೆ ಆ ಚಂದ್ರನೆಂಬ ಬಿಂದಿಗೆ
 ಮಂತ್ರಮುಗ್ಧ ಮೌನದಲ್ಲಿ ಮಕ್ಕಳು
 ಬೆಚ್ಚಿಬಿದ್ದರು ಏನೂ ತೋಚದಾಯಿತು
 
 ಹೂವನ್ನೆ ದಿಟ್ಟಿಸುತ್ತಿದ್ದ ಮಹಾಕಸ್ಸಪ
 ಮರಳಿ ನಕ್ಕನು; ಅರ್ಥವಾಯಿತೆನ್ನುವಂತೆ
 ಬುದ್ಧನ ನಳಿಬೆರಳುಗಳಿಂದ ಆಗಷ್ಟೆ ಅರಳಿದಂತಿದ್ದ
 ಬಿಳಿದಾವರೆಯ ಬೆರಗಿಗೆ
ಹೊಳೆಯಿತು, ತಿಳಿಯಿತು ಎಳೆಯರಿಗೆ
 ಗಂಧದ ಕಾಡನ್ನು ಹೊಕ್ಕು
 ಒಂದು ಮರವನ್ನು ನೋಡದೆ ಹೊರಬರಬಹುದು
 ಪುಸ್ತಕವನ್ನು ಓದಿ ಮುಗಿಸಿದರೂ
 ಒಂದು ವಾಕ್ಯವೂ ತಿಳಿಯದಿರಬಹುದು
ನೋಡುವುದೆಂದರೆ ಬರಿ ನೋಟವಲ್ಲ
 ಅದು ಅಂತರಂಗ ಪಡೆವ ಅನುಭಾವ, ದಿವ್ಯಬೋಧಿ
 ಸಚಿತ್ತರಾಗುವುದು ಎಂದರೆ ಸತ್ಯವನ್ನು ಅರಿಯುವುದು
 ಮನಸ್ಸು ಈಗ, ಇಲ್ಲಿಯೆ ಇರದಿದ್ದರೆ
 ಅಚ್ಚ ಬಿಳಿಯ ಹೂವೂ ಕಾಣಿಸುವುದಿಲ್ಲ
ಇದೇ ಶಾಕ್ಯಮುನಿಯ
 ಶಬ್ದದೊಳಗಿನ ನಿಃಶ್ಶಬ್ದ ಉಪದೇಶ
 ವಚನವಿಲ್ಲದ ಮಹಾಪ್ರವಚನ
 ಬದುಕ ಬಟ್ಟೆಗೆ ಹಿಡಿದ
 ಬೆಳಕಿನ ಪಂಜು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.