ADVERTISEMENT

ಐನ್‌ಸ್ಟೀನ್ ಹಿಂದಿಕ್ಕಿದ ಪೋರಿ!

ಗಿರೀಶ ಕೆ.ಎಸ್
Published 13 ಅಕ್ಟೋಬರ್ 2012, 19:30 IST
Last Updated 13 ಅಕ್ಟೋಬರ್ 2012, 19:30 IST

ವಿಶ್ವದ ಅತಿ ಬುದ್ಧಿವಂತರು ಯಾರು? ಇಲ್ಲಿಯವರೆಗೂ ಈ  ಪ್ರಶ್ನೆಗೆ ಇದ್ದ ಉತ್ತರ ವಿಜ್ಞಾನಿಗಳಾದ ಆಲ್ಬರ್ಟ್ ಐನ್‌ಸ್ಟೀನ್ ಹಾಗೂ ಸ್ಟೀಫನ್ ಹಾಕಿಂಗ್ಸ್. ಆದರೆ ಇವರನ್ನೂ ಮೀರಿಸಿದ ಬುದ್ದಿವಂತರೊಬ್ಬರು ಜಗತ್ತಿನಲ್ಲಿದ್ದಾರೆ ಎನ್ನುತ್ತಿದೆ ಇತ್ತೀಚೆಗೆ ನಡೆದ ಪ್ರತಿಷ್ಠಿತ ಮೆನ್ಸಾ ಬುದ್ಧಿಮತ್ತೆ ಪರೀಕ್ಷೆ. ಆ ಬುದ್ಧಿವಂತೆಯ ವಯಸ್ಸು ಕೇವಲ ಹನ್ನೆರಡು ವರ್ಷ. ಹೆಸರು ಒಲಿವಿಯಾ, ಬ್ರಿಟನ್ ವಿದ್ಯಾರ್ಥಿನಿ.

ಮೆನ್ಸಾ ನಡೆಸಿದ ಪರೀಕ್ಷೆಯಲ್ಲಿ ಈಕೆ ಗಳಿಸಿದ ಗುಣಾಂಕ 162. ಅಂದರೆ ಐನ್‌ಸ್ಟೀನ್ ಅವರಿಗಿಂತ ಎರಡು ಅಂಕ ಹೆಚ್ಚು! ಈ ಮೂಲಕ ಜಗತ್ತಿನ ಶೇಕಡಾ ಒಂದರಷ್ಟು ಬುದ್ಧಿವಂತರಲ್ಲಿ ಮೊದಲ ಸ್ಥಾನ ಈಕೆಯ ಪಾಲಾಗಿದೆ.

ಕೇವಲ ಮಾತಿನಲ್ಲಿ ಕೇಳಿಯೇ ಮ್ಯಾಕ್‌ಬೆತ್ ಸಾಲುಗಳನ್ನು ಪುನರುಚ್ಛರಿಸುವ ಶಕ್ತಿ ಈಕೆಗಿದೆ. ಹೋಂವರ್ಕ್ ಮಾಡಿಕೊಡಲು ಸಹಪಾಠಿಗಳು ಈಕೆಯ ದುಂಬಾಲು ಬೀಳುತ್ತಾರಂತೆ. ಕಾರಣ ಇವಳ ಹೋಂವರ್ಕ್ ಅಷ್ಟು ಅಚ್ಚುಕಟ್ಟು.

ಮೆನ್ಸಾದಿಂದ ಪರೀಕ್ಷಾ ಫಲಿತಾಂಶ ಹೊರಬೀಳುತ್ತಿದ್ದಂತೆ ಶಾಲೆಯ ಗಣ್ಯವ್ಯಕ್ತಿಯಾಗಿ ಬಿಟ್ಟಿದ್ದಾಳೆ ಒಲಿವಿಯಾ ಎಂದು ಡೈಲಿ ಮೇಲ್ ವರದಿ ಮಾಡಿದೆ. ಫಲಿತಾಂಶ ನೋಡಿ ಮೂಕಳಾದೆ ಎಂದು ಪ್ರತಿಕ್ರಿಯಿದ್ದಾಳೆ ವಿಶ್ವದ ನಂಬರ್ ಒನ್ ಬುದ್ಧಿವಂತ ಹುಡುಗಿ.
ಏನಿದು ಮೆನ್ಸಾ?

ತೀಕ್ಷಣ ಬುದ್ಧಿಮತ್ತೆ ಪರೀಕ್ಷಿಸಲೆಂದೇ ಹುಟ್ಟಿಕೊಂಡಿರುವ ಅತಿ ಹಳೆಯ ಹಾಗೂ ಪ್ರಭಾವಿ ಐಕ್ಯೂ ಸಂಶೋಧನಾ ಸಂಸ್ಥೆ ಮೆನ್ಸಾ (MENSA). ಇದರ ಮೂಲ ಬ್ರಿಟನ್. ಮಾನವನ ಬುದ್ಧಿಮತ್ತೆಯನ್ನು ಮನುಕುಲದ ಒಳಿತಿಗಾಗಿ ಬಳಕೆ ಮಾಡುವುದೇ ಇದರ ಪ್ರಮುಖ ಗುರಿಯಂತೆ.

ಆಸ್ಟ್ರೇಲಿಯಾದ ಬ್ಯಾರಿಸ್ಟರ್ ರೊನಾಲ್ಡ್ ಬೆರಿಲ್ ಹಾಗೂ ಬ್ರಿಟನ್ ಮೂಲದ ವಿಜ್ಞಾನಿ ಡಾ. ಲ್ಯಾನ್‌ಕ್ಲಾಟ್ ವೇರ್ 1946ಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು. ಜನ್ಮಸ್ಥಳ ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ. ನಂತರ ಭಾರತ, ಅಮೆರಿಕ, ಕೆನಡಾ ಸೇರಿದಂತೆ ವಿಶ್ವದ ವಿವಿಧೆಡೆ ಶಾಖಾ ಕಚೇರಿಗಳು ಆರಂಭವಾಗಿವೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಸಂಸ್ಥೆಯ ಸದಸ್ಯರು. 

 ನೀವೂ ಸದಸ್ಯತ್ವ ಪಡೆಯಬೇಕೆ ಹಾಗಿದ್ದರೆ ಅದು ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಹೆಚ್ಚು ಬುದ್ದಿಮತ್ತೆ ಇರುವ ಸದಸ್ಯರು ಇದರ ಸದಸ್ಯರಾಗಲು ಅರ್ಹರು. ಈ ಸದಸ್ಯರಿಗೆ ಬೌದ್ಧಿಕ ಹಾಗೂ ಸಾಮಾಜಿಕ ಅವಕಾಶ ಸಿಗುವಂತೆ ಮಾಡುವುದು ಆ ಮೂಲಕ ಮನುಕುಲದ ಏಳಿಗೆಗೆ ಅವರನ್ನು ದುಡಿಸುವುದು ಅದರ ಕರ್ತವ್ಯ.

ಒಮ್ಮೆ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸಿಗುವ ಅವಕಾಶಗಳು ಅಸಂಖ್ಯ. ಜತೆಗೆ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಕೊಳ್ಳಬಹುದು. 

ಎಂಜಿನಿಯರ್, ವೈದ್ಯರು, ಪ್ರಾಧ್ಯಾಪಕರು ಮಾತ್ರವಲ್ಲದೆ ಟ್ರಕ್ ಚಾಲಕರು, ಕಲಾವಿದರು, ಪೊಲೀಸ್ ಅಧಿಕಾರಿಗಳು, ಸೈನಿಕರು, ರೈತರು ಕೂಡ ಇದರ ಸದಸ್ಯರು.
ಅಂದಹಾಗೆ ಬೆಂಗಳೂರಿನಲ್ಲಿ ಕೂಡ ಮೆನ್ಸಾ ಅಸ್ತಿತ್ವದಲ್ಲಿದೆ. ನಾಡಿನ ಬುದ್ಧಿವಂತರು ಕೂಡ ಮೆನ್ಸಾ ಸದಸ್ಯರಾಗಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾದ ವೆಬ್‌ಸೈಟ್: www.mensabangalore.org/ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.