ADVERTISEMENT

ಒಂಟಿ ಒಂಟಿಯಾಗಿರುವುದು...

ಪೂರ್ವಿ
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

ಅದೇ ತಾನೆ ಸ್ನಾನ ಮುಗಿಸಿ ಉದ್ದನ್ನೆ ಟವೆಲ್ ಸುತ್ತಿಕೊಂಡು ಬಂದಾಗ ನಟಿಗೆ ಆದದ್ದು ಸಣ್ಣ ಶಾಕ್. ಸಂದರ್ಶನಕ್ಕೆಂದು ತಾವು ಕರೆದಿದ್ದ ಸುದ್ದಿಮಿತ್ರರು ಫೋಟೋಗ್ರಾಫರ್ ಸಮೇತರಾಗಿ ಅಲ್ಲಿ ಪ್ರತಿಷ್ಠಾಪಿಸಿಬಿಟ್ಟಿದ್ದರು. ಮನೆಯ ಕೆಲಸದಾತನಿಗೆ ಈ ನಟಿ ಸ್ನಾನಕ್ಕೆ ಹೋಗಿರುವ ವಿಷಯ ಗೊತ್ತಿರಲಿಕ್ಕಿಲ್ಲ. ಥಟ್ಟನೆ ಪರಿಸ್ಥಿತಿಯನ್ನು ಅರಿತ ನಟಿ ಫೋಟೋಗ್ರಾಫರ್‌ಗೆ ಹೇಳಿದರು- `ಈಗ ನನ್ನ ಫೋಟೋ ತೆಗೆಯಬೇಡಿ, ಪ್ಲೀಸ್~.

ತಮ್ಮ ಸೌಂದರ್ಯದ ಬಗ್ಗೆ ತಾವೇ ಮಾತನಾಡಿಕೊಳ್ಳಲು ಅವರು ಸ್ನಾನಾನಂತರದ ಉಡುಗೆಯಲ್ಲೇ ಸೋಫಾ ಅಲಂಕರಿಸಿದರು. ಕೂದಲ ಮೇಲಿದ್ದ ನೀರಿನ ತೊಟ್ಟೊಂದು ನಿಧಾನ ಜಾರಿ ಕೆಳಗೆ ಬಿತ್ತು. `ಫೋಟೋಗೆ ಈ ಭಂಗಿ ಸೊಗಸಾಗಿದೆ ಮೇಡಂ, ಒಂದೇ ಒಂದು ಸ್ಯ್ನಾಪ್ ತೆಗೆದುಬಿಡಲೇ?~ ಫೋಟೋಗ್ರಾಫರ್ ಕುತೂಹಲ ಹತ್ತಿಕ್ಕಲಾಗದೆ ಕೇಳಿದರು. ನಟಿ ಮನಸ್ಸು ಮಾತ್ರ ತುಸುವೂ ಕರಗಲಿಲ್ಲ.

ಶ್ರೀಲಂಕಾದ ರ‌್ಯಾಂಪ್ ತುಳಿದು, ಮುಂಬೈ ಗಲ್ಲಿಗೆ ಜಿಗಿದು ಬಣ್ಣದಲೋಕದ ಬೆರಗಿನಲ್ಲಿ ತಾನೂ ಪಾಲಾಗಬೇಕೆಂದು ಬಯಸಿದ ಜಾಕ್ವೆಲೀನ್ ಫರ್ನಾಂಡಿಸ್ ಇರುವುದೇ ಹೀಗೆ.
ಮಾತೆಂದರೆ ಮಾತು. ಶಿಸ್ತಿನಲ್ಲಿ ಸ್ವಲ್ಪವೂ ರಾಜಿಯಿಲ್ಲ. `ಮೇಕಪ್ ಹಚ್ಚದಿರುವಾಗ ನನ್ನ ಮುಖ ಚೆನ್ನಾಗಿರುವುದಿಲ್ಲ. ಕನ್ನಡಿಯೇ ಅದನ್ನು ಹೇಳುತ್ತದೆ. ಅಂದಮೇಲೆ ಜನರಿಗೆ ನನ್ನ ಕೆಟ್ಟ ಮುಖವನ್ನು ಯಾಕೆ ತೋರಿಸಬೇಕು~ ಎಂದು ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುವ ಜಾಕ್ವೆಲಿನ್ ಪಕ್ಕಾ ಆಧುನಿಕ ಹೆಣ್ಣುಮಗಳು.

ಕೊಲಂಬೋದಲ್ಲಿ ಹುಟ್ಟಿ, ಬಹರೇನ್‌ನಲ್ಲಿ ಶಾಲೆ ಮುಗಿಸಿ, ಪದವಿ ಸರ್ಟಿಫಿಕೇಟ್ ಪಡೆಯುವ ಹೊತ್ತಿಗೆ ಮೆಲ್ಬರ್ನ್‌ನಲ್ಲಿ ನೆಲೆಸಿದ್ದ ಜಾಕ್ವೆಲಿನ್ ಇಡೀ ಬದುಕು ಜಂಗಮಸ್ವರೂಪಿ. ಅಪ್ಪ-ಅಮ್ಮನಿಗೆ ಅವರೆಂದೂ ಗೆರೆ ಹಾಕಲು ಬಿಟ್ಟವರೇ ಅಲ್ಲ.

ಅಂದುಕೊಂಡದ್ದನ್ನೇ ಮಾಡುವುದು ಜಾಯಮಾನ. ಶಾಲೆಯಲ್ಲಿ ಒಂದಿನ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸುವ ಆಸೆಯಾಯಿತು. ಕೆಲವೇ ದಿನಗಳಲ್ಲಿ ವೇಗದೋಟದಲ್ಲಿ ಒಂದು ಬಹುಮಾನ ಗಳಿಸಿದರು. ಬ್ಯಾಲೆ, ನೃತ್ಯ ಮೊದಲಾದ ಕಾರ್ಯಕ್ರಮಗಳಿಗೆ ಸದಾ ಮುಂದೋಡುತ್ತಿದ್ದ ಜಾಕ್ವೆಲಿನ್ ತಲೆ ಮೇಲೆ `ಮಿಸ್ ಶ್ರೀಲಂಕಾ~ ಗರಿ ಮೂಡಿದ್ದು 2006ರಲ್ಲಿ. ಆಮೇಲೆ ಮಾಡೆಲಿಂಗ್, ನಿಯತಕಾಲಿಕೆಗೆ ಅಂಕಣ ಎಂದುಕೊಂಡು ಕೆಲವು ವರ್ಷ ಸವೆಸಿದ ಅವರು ದಿಢೀರನೆ ಬಾಲಿವುಡ್ ನಟಿಯಾಗುವ ಸಂಕಲ್ಪ ಮಾಡಿದರು.

`ಅಲಾದೀನ್~ ಅವರ ನಟನೆಯ ಮೊದಲ ಚಿತ್ರ. ಅಮಿತಾಬ್ ಬಚ್ಚನ್, ಸಂಜಯ್ ದತ್ ಹಾಗೂ ರಿತೇಶ್ ದೇಶ್‌ಮುಖ್ ನಟಿಸಿದ ಈ ಚಿತ್ರದಲ್ಲಿ ಸಿಕ್ಕ ಅಪರೂಪದ ಕಾಲೇಜು ಹುಡುಗಿಯ ಪಾತ್ರ ಜಾಕ್ವೆಲಿನ್‌ಗೆ ಚಿಮ್ಮುಹಲಗೆಯಾಯಿತು. ಅದಾದ ನಂತರ `ನ ಜಾನೆ ಕಹಾ ಸೇ ಆಯೀ ಹೈ~ ಚಿತ್ರಕ್ಕೆ ಬಣ್ಣ ಹಚ್ಚುವ ಅವಕಾಶ ಸಿಕ್ಕಿತು. ಆದರೆ, ಜಾಕ್ವೆಲಿನ್ ಸೌಂದರ್ಯದ ಕುರಿತು ಆಗ ಹೆಚ್ಚು ಮಾತುಗಳು ವ್ಯಕ್ತವಾಗಲಿಲ್ಲ.

`ಮರ್ಡರ್- 2~ ಬಂದದ್ದೇ ರಸಿಕರ ಕಂಗಳು ಅಗಲಗೊಂಡವು. ಸಪಾಟಾದ ಜಾಕ್ವೆಲಿನ್ ಉದರ, ಬಾಳೆದಿಂಡಿನಂಥ ತೊಡೆಗಳು, ಕೊಲ್ಲುವಂಥ ನೋಟ... ಹೀಗೆ ಬಣ್ಣನೆಗಳು ಬಿಚ್ಚಿಕೊಳ್ಳತೊಡಗಿದವು. ಅಂತೂಇಂತೂ ವಯಸ್ಸು ಇಪ್ಪತ್ತೈದು ಆಗುವ ಹೊತ್ತಿಗೆ ನಟಿಯ ವೃತ್ತಿಬದುಕು ತಿಟ್ಹತ್ತಿತು.

ಇತ್ತೀಚೆಗೆ ತೆರೆಕಂಡ ಅಜಿತ್ ನಾಯಕರಾಗಿ ನಟಿಸಿರುವ ತಮಿಳಿನ `ಮಂಕಾತ~ ಚಿತ್ರದಲ್ಲಿ ಜಾಕ್ವೆಲಿನ್ ಮೈಮಾಟವಿದೆ. `ಕ್ರಿಶ್ 2~ ಚಿತ್ರಕ್ಕೆ ಆಯ್ಕೆಯಾಗಿದ್ದ ಚಿತ್ರಾಂಗದಾ ಸಿಂಗ್‌ಗೆ ಕೊಕ್ ನೀಡಿ, ಆ ಜಾಗದಲ್ಲಿ ಈ ನಟಿಯನ್ನು ಪ್ರತಿಷ್ಠಾಪಿಸುವ ಯತ್ನಕ್ಕೆ ಫಲವೂ ಸಂದಿದೆ. ಜಾಕ್ವೆಲಿನ್ ಆ ಪಾತ್ರಕ್ಕೆ ಸೈ ಎಂದು ಕೆಲವೇ ದಿನಗಳಾಗಿವೆ.

`ತುಂಬಾ ಸುಂದರಿಯಲ್ಲದ ನಾನು ಅಭಿನಯ ಕಲಿಯುತ್ತಲೇ ಮೇಲೇರಬೇಕು ಎಂದುಕೊಂಡೇ ಈ ಲೋಕಕ್ಕೆ ಇಳಿದವಳು. ಮರ್ಡರ್-2 ಚಿತ್ರದಲ್ಲಿ ನನ್ನದು ಸಣ್ಣ ಪಾತ್ರ. ಚಿತ್ರಕಥೆ ಕೇಳಿದ ಮೇಲೆ ಸುಲಗ್ನ ಪಾಣಿಗ್ರಾಹಿ ಮಾಡಿದ ಪಾತ್ರವೇ ಚೆನ್ನಾಗಿದೆ ಎನ್ನಿಸಿತ್ತು. ಆದರೆ, ಸಿಕ್ಕ ಅವಕಾಶ ತಪ್ಪಿಸಿಕೊಳ್ಳಬಾರದೆಂದು ಆ ಪಾತ್ರಕ್ಕೇ ಜೀವತುಂಬಲು ನಿರ್ಧರಿಸಿದೆ. ಅದು ಇಷ್ಟು ಬೇಗ ನನಗೆ ಹೆಸರು ತಂದುಕೊಡುತ್ತದೆ ಎಂದು ಎಣಿಸಿರಲಿಲ್ಲ~ ಎನ್ನುವ ಜಾಕ್ವೆಲಿನ್ ಕನಸುಗಳು ನಕ್ಷತ್ರಗಳಷ್ಟಿವೆ.

`ಅಮೀರ್ ಖಾನ್ ಜೊತೆ ನಟಿಸಬೇಕು. ಬ್ಲ್ಯಾಕ್ ತರಹದ ಚಿತ್ರದಲ್ಲಿ ಅಭಿನಯಿಸಬೇಕು. ನಟನೆಯಲ್ಲಿ ಎಲ್ಲರನ್ನೂ ಚಿತ್ ಮಾಡಬೇಕು...~ ಕನಸುಗಳ ಪಟ್ಟಿ ಹೀಗೆ ಉದ್ದ ಬೆಳೆಯುತ್ತದೆ.

ಈಗಾಗಲೇ ಜಾಕ್ವೆಲಿನ್ ಗಾಸಿಪ್ ರಾಣಿಯೂ ಆಗಿದ್ದಾರೆ. ಪಾರ್ಟಿಯೊಂದರಲ್ಲಿ ಅವರು ಅಭಯ್ ದೇವನ್ ಕೈ ಹಿಡಿದದ್ದೇ ಇಬ್ಬರಿಗೂ ಸಂಬಂಧ ಇದೆ ಎಂದು ಗುಲ್ಲೆದ್ದಿತು.

ರಿತೇಶ್ ದೇಶ್‌ಮುಖ್ ಜೊತೆ ಆಗೀಗ ನಗುನಗುತ್ತಾ ಮಾತಾಡುವುದನ್ನು ಕಂಡವರು ಇಬ್ಬರ ನಡುವೆ ಏನೋ ಇದೆ ಎಂದು ಪುಗ್ಗ ಹಾರಿಸಿದರು. ಅವೆಲ್ಲಾ ಸುಳ್ಳೇಸುಳ್ಳು ಎನ್ನುವ ಜಾಕ್ವೆಲಿನ್ ಬದುಕಿನ ತಾಕಲಾಟಗಳ ಬಗ್ಗೆ ಹೆಚ್ಚು ಹೊತ್ತು ಮಾತನಾಡುತ್ತಾರೆ.
`ಅಪ್ಪ-ಅಮ್ಮ ಬೇರೆ ಕಾಲದವರು. ಅವರಿಗೆ ನನ್ನ ಗುರಿಯನ್ನು ಹೇಳಿದರೆ ಪೂರ್ತಿ ಅರ್ಥ ಮಾಡಿಕೊಳ್ಳಲಾರರು. ನನಗೆ ಬುದ್ಧಿ ಬಂದಾಗಿನಿಂದ ಒಬ್ಬಳೇ ದೇಶದಿಂದ ದೇಶಕ್ಕೆ ಹಾರುತ್ತಿದ್ದೇನೆ. ನನ್ನ ಟಿಕೇಟನ್ನು ನಾನೇ ಕೊಳ್ಳುತ್ತೇನೆ, ನನ್ನ ತೆರಿಗೆಯನ್ನು ನಾನೇ ಕಟ್ಟುತ್ತೇನೆ. ಸಣ್ಣ ಕೆಲಸಗಳಿಗೆಲ್ಲಾ ಸಹಾಯಕರನ್ನು ಇಟ್ಟುಕೊಂಡಿಲ್ಲ.

ನನ್ನ ಕಾಲ ಮೇಲೆ ನಾನು ನಿಂತುಕೊಳ್ಳುವುದು ಎಂಬುದನ್ನು ನಿಜಾರ್ಥದಲ್ಲಿ ಸಾಕಾರ ಮಾಡಿಕೊಂಡು ವರ್ಷಗಳೇ ಆಗಿವೆ~ ಎನ್ನುವ ಈ ನಟಿಗೆ ಇಳಿಸಂಜೆಯಲ್ಲಿ ಗಾಢಮೌನ ಆವರಿಸಿದಾಗ ಅಮ್ಮನ ತೊಡೆ ನೆನಪಾಗುತ್ತದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.