ADVERTISEMENT

ಓದುವ ಆಸೆ ಹೆಚ್ಚಿಸುವ ವಿಶೇಷಾಂಕ

ಸಹೃದಯರ ಸ್ಪಂದನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 19:30 IST
Last Updated 14 ಅಕ್ಟೋಬರ್ 2017, 19:30 IST
ಓದುವ ಆಸೆ ಹೆಚ್ಚಿಸುವ ವಿಶೇಷಾಂಕ
ಓದುವ ಆಸೆ ಹೆಚ್ಚಿಸುವ ವಿಶೇಷಾಂಕ   

ದೀಪಾವಳಿ ವಿಶೇಷಾಂಕವೆಂದರೆ ನನ್ನಂತಹ ಓದುಗರಿಗೆ ಒಂದು ರೀತಿಯ ಸಂಭ್ರಮವೇ ಸರಿ. ಪ್ರತೀ ವಿಶೇಷಾಂಕವೂ ಓದುವ ಆಸೆಯನ್ನು ಹೆಚ್ಚಿಸುತ್ತಲೇ ಇದೆ. ಇಡೀ ವಿಶೇಷಾಂಕದಲ್ಲಿ ಹೊಸ ತಲೆಮಾರಿನ ತವಕ ತಲ್ಲಣಗಳು, ಹಿರಿಯರ ವಿವೇಕದ ಲೇಖನಗಳು, ವಾರ್ಷಿಕ ಸ್ಪರ್ಧೆಯ ಕಥೆ ಕವನಗಳು ಮನಸ್ಸಿಗೆ ಹಿತ ಅನ್ನಿಸುತ್ತಲೇ ಚಿಂತನೆಗೆ ಹಚ್ಚುತ್ತವೆ.

ವಿಶೇಷಾಂಕದ ಸಂಪಾದಕೀಯದ ಮಾತು ಬುದ್ಧನ ಈ ಪ್ರಸಂಗ ಲೋಕಪ್ರಸಿದ್ಧವಾದದ್ದು ಹಸಿವು ನೀಗಿದಮೇಲೆಯೇ ವಿಚಾರ. ಇದು ನಮ್ಮ ವಚನಕಾರರ ದಾಸೋಹ ಕೂಡಾ ಹೌದು. ಬುದ್ಧನ ಈ ಅರಿವು ನಮಗೆಲ್ಲಾ ಬೆಳಕಿನ ದಾರಿ ದೀಪವೂ ಹೌದು ಹಾಗೂ ಸಾಮಾನ್ಯ ತಿಳಿವಳಿಕೆ ಕೂಡಾ ಆಗಬೇಕು. ಆದರೆ ನಾವೆಲ್ಲಾ ಈ ಹೊತ್ತಿಗೂ ಗೆರೆ ದಾಟಲಾಗದ ಜಾತಿ ಧರ್ಮದೊಳಗಿನ ಸಂಕುಚಿತತೆಯಲ್ಲಿಯೇ ಬೇಯುತ್ತಿದ್ದೇವೆ. ನಮ್ಮ ಮೂಗಿನ ನೇರಕ್ಕೆ ಆಡುವ ನಡೆ ನುಡಿಗಳು ನಮ್ಮನೇ ಹೊಸತನಕ್ಕೆ ತೆರೆದುಕೊಳ್ಳಲಾರದಂತೆ ಕಟ್ಟಿಹಾಕಿವೆ. ಆದರೆ ಅಕ್ಷರದ ಓದು ಮತ್ತು ಅರಿವು ಪ್ರಜ್ಞಾಪೂರ್ವಕವಾಗಿ ನಮ್ಮನ್ನೆಲ್ಲಾ ದಾಟಿಸುತ್ತಲೇ ಇದೆ. ಇಂತಹ ಬಹುಜನರ ಹಿತ ಇದನ್ನೇ ದ್ವನಿಸುತ್ತದೆ.

ಬಹುಮಾನಿತ ಕಥೆ– ಕವಿತೆಗಳು ಕನ್ನಡವನ್ನು ಇನ್ನಷ್ಟು ವಿಸ್ತರಿಸಿದಂತೆ ಭಾಷೆ ಮತ್ತು ಸಾಹಿತ್ಯ ಬಹುತ್ವದ ಕನಸಾಗಿ ಚಲನಶೀಲತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಇಂತಹುದನ್ನು ನಾವು ಮತ್ತೆ ಮತ್ತೆ ನೋಡುತ್ತಲೇ ಇದ್ದೇವೆ.

ADVERTISEMENT

ಕೆ.ವೈ.ನಾರಾಯಣಸ್ವಾಮಿಯ ‘ಹುಲಿಯ ಹಾಡು’ ನಾನು ಇಷ್ಟಪಟ್ಟು ಓದಿಸಿ ಕೇಳಿಸಿಕೊಂಡಿದ್ದೆ. ಇದರ ಶೀರ್ಷಿಕೆ ‘ಹುಲಿಯ ಸೀರೆ’ ಅಂತ ಕೇಳಿದ್ದ ನೆನಪು. ಮಹದೇವ ಶಂಕನಪುರ ಅವರ ‘ಲಜ್ಜೆಗೌರಿಯ ಶಿಲಾಶಾಸನ’ ಕಾವ್ಯ ಸೌಂದರ್ಯವನ್ನೇ ಧರಿಸಿನಿಂತ ಚಲುವೆ ಎನ್ನುವಷ್ಟು ಇಷ್ಟವಾಯಿತು ಎಸ್.ಜಿ.ಎಸ್. ಅವರ ‘ಚರಿತ್ರೆ’. ಬಿ.ಆರ್.ಎಲ್. ಅವರ ‘ಸಣ್ಣ ಸಂಗತಿ’ ಕವಿಯ ಒಳ ಸೂಕ್ಷ್ಮಗಳನ್ನು ಬಿಂಬಿಸುವ ವಾಸ್ತವದ ಶ್ರಮಕ್ಕಿರುವ ಬೆಲೆ ದೊಡ್ಡದು ಎನ್ನುವ ಸಾರ್ಥಕತೆ ಕವಿ ಸೋಲುತ್ತಲೇ ಗೆಲ್ಲುವ ಈ ಕವಿತೆ ಅತ್ಯಂತ ಸರಳವಾಗಿ ಮನಸ್ಸಿನೊಳಗೆ ಮಳೆಸುರಿದ ಹಾಗಾಯ್ತು. ಹಾಗೇ ಮತ್ತೆ ಮತ್ತೆ ಕಾಡುವ ಕಣವಿಯವರ ಈ ಸಾಲುಗಳು ‘ಬಾಯಿ ಮುಚ್ಚಿಕೊಂಡಿರಲಿ ಧರ್ಮ ಆಗದೀ ಕಡಿಮೆ ಮೂರ್ಖತನಕ್ಕೆ ಮನುಕುಲದ ಘನತೆ ಹೆಚ್ಚುವುದು’

ವಿಶೇಷಾಂಕದ ಆಶಯ ಕೂಡಾ ಇದೇ ಆಗಿದೆ. ಭಾನುವಾರವೇ ವಿಶೇಷಾಂಕ ಸಿಕ್ಕಿದ್ದರಿಂದ ಒಂದಿಷ್ಟು ಓದಿ ಮುಗಿಸಿದೆ. ಮುಖಪುಟದ ಬುದ್ಧ ಹಿಡಿದ ಬೆಳಕು ಜೀವ ಸಂಕುಲಕ್ಕೆ ಬೆಳಕಾಗಲಿ ಎನ್ನುವುದು ಎಲ್ಲರ ಆಶಯವೇ? ವಿಶೇಷಾಂಕ ರೂಪಿಸಿದ ಎಲ್ಲರಿಗೂ ಅಭಿನಂದಿಸುತ್ತಾ, ಇದರಲ್ಲಿ ದಿನಾ ಬೆಳಗ್ಗೆ ಪೇಪರ್ ಹಾಕುವ ಪ್ರೀತಿಯ ಗೆಳೆಯರಿಗೂ ಕೂಡಾ ನನ್ನ ವಂದನೆಗಳು.

-ಸುಬ್ಬು ಹೊಲೆಯಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.