ADVERTISEMENT

ಕಥೆ ಹೇಳುವೆ ನನ್ನ ಕಥೆ ಹೇಳುವೆ...

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಚಂಡೀಗಢದ ಮಧ್ಯಮವರ್ಗದ ಕುಟುಂಬದ ಹೆಣ್ಣುಮಗಳು. ಹರೆಯಕ್ಕೆ ಕಾಲಿಟ್ಟಾಗ ಕೆನ್ನೆಮೇಲೆ ಕೆಂಪು ಬಣ್ಣ ಹಚ್ಚಿಕೊಳ್ಳುವ ಕನಸು. ಗೆಳತಿಯರು ನೋಡೋಕೆ ಥೇಟ್ ತಬು ತರಹವೇ ಇದ್ದೀಯಾ ಎಂದಾಗ ಏನೋ ಹುಮ್ಮಸ್ಸು.

ಒಬ್ಬ ಗೆಳತಿ ಮಾಡೆಲ್ ಆಗುವಂತೆ ಸಲಹೆ ಕೊಟ್ಟರೆ, ಮತ್ತೊಬ್ಬಳು ನಟಿಯಾಗು ಎಂದಳು. ಅದನ್ನು ಗಂಭೀರವಾಗಿ ಪರಿಗಣಿಸಿದ ಹುಡುಗಿ ಮುಖದ ಕಾಂತಿ ಹೆಚ್ಚಿಸುವ ಕ್ರೀಮ್ ತಂದದ್ದು ಇನ್ನೊಬ್ಬ ಗೆಳತಿಯನ್ನು ಕಾಡಿಬೇಡಿ. ಯಾಕೆಂದರೆ, ಅದನ್ನು ಕೊಳ್ಳುವಷ್ಟು ಪಾಕೆಟ್‌ಮನಿ ಸಿಗುತ್ತಿರಲಿಲ್ಲ. ಸ್ವಲ್ಪ ಒರಟೊರಟಾದ ಕೂದಲನ್ನು ಉದ್ದ ಮಾಡಿಸುವ ಬಯಕೆ ಚಿಗುರೊಡೆಯಿತು. ಪಾರ್ಲರ್ ಮೆಟ್ಟಿಲು ಹತ್ತಿದರೆ ತುಟ್ಟಿ. ಅದಕ್ಕೇ ಪಕ್ಕದ ಮನೆಯ ಕಿಟಕಿಯಲ್ಲಿ ಸಿಗುವಂತಿದ್ದ ಕೂದಲನ್ನು ಉದ್ದ ಮಾಡುವ ಬ್ಯಾಟರಿ ಚಾಲಿತ ಬಾಚಣಿಗೆಯನ್ನು ಕದ್ದುತಂದದ್ದೂ ಆಯಿತು.

ವರ್ಷಗಳೆರಡು ಉರುಳಿದ್ದೇ ಅದೇ ಹುಡುಗಿ ಮುಂಬೈನಲ್ಲಿ ಕಣ್ಣತುಂಬಾ ಮಾಡೆಲ್ ಆಗುವ ಕನಸು ತುಂಬಿಕೊಂಡು ನಿಂತಿದ್ದಳು. ಮದುವೆ ಮುರಿದುಬಿದ್ದ ಕಹಿ ನೆನಪು ಬೇರೆ ಜೊತೆಗಿತ್ತು. ಅದನ್ನು ಒಳಗೇ ನುಂಗಿಕೊಂಡ ಆಕೆಗೆ ನಟಿಯಾಗುವ ಬಯಕೆಯೂ ಇತ್ತೆನ್ನಿ. ಪ್ರತಿಷ್ಠಿತ ಪಾರ್ಟಿಗಳಿಗೆ ದೊಡ್ಡ ದೊಡ್ಡ ನಿರ್ದೇಶಕರು ಬರುತ್ತಾರೆ.

ತಮ್ಮ ಸಿನಿಮಾಗಳಿಗೆ ಹೊಸಮುಖಗಳ ಶೋಧ ನಡೆಸುವುದು ಅಲ್ಲಿಯೇ ಎಂದು ಗೆಳತಿ ಹೇಳಿದಳು. ಆ ಮಾತನ್ನು ಗಂಭೀರವಾಗಿ ಪರಿಗಣಿಸಿ ಅಂಥ ಒಂದು ಪಾರ್ಟಿಗೆ ಹೊರಟುನಿಂತಳು. ಪರ್ಸ್‌ನಲ್ಲಿದ್ದ ನೋಟುಗಳನ್ನು ಎಣಿಸತೊಡಗಿದಳು. ಪದೇಪದೇ ಎಣಿಸಿದರೂ ನೂರರ ಎಂಟು ನೋಟುಗಳು ಹೆಚ್ಚಾಗುವಂತೆ ಕಾಣಲಿಲ್ಲ. ಪಾರ್ಲರ್‌ಗೆ ಗೆಳತಿ ಕರೆದುಕೊಂಡು ಹೊರಟಾಗಲೂ ಎಷ್ಟು ಹಣ ಖರ್ಚಾಗುವುದೋ ಎಂಬ ಅಳುಕು.

ಎರಡು ತಾಸು ಸರತಿಯಲ್ಲಿ ಕಾದುನಿಂತದ್ದಕ್ಕೂ ಕೂದಲನ್ನು ನೇರ ಮಾಡುವ ಅವಕಾಶ ಸಿಕ್ಕಿತು. ಅರ್ಧ ತಾಸಿನಲ್ಲೇ ಕೂದಲು ಮೃದುವಾಗಿ, ಕನ್ನಡಿ `ನೀನು ಸುಂದರಿ~ ಎಂದಿತು. ಅದಕ್ಕೆ ತೆತ್ತ ಹಣ 600 ರೂಪಾಯಿ. ಹಣ ಕೊಟ್ಟು ಹೊರಬಂದ ಮರುಕ್ಷಣವೇ ಕಣ್ಣಲ್ಲಿ ಗಳಗಳನೆ ನೀರು. ಇರುವ ಇನ್ನೂರು ರೂಪಾಯಿಯಲ್ಲಿ ನಾಲ್ಕು ದಿನ ಕಳೆಯುವುದೂ ಕಷ್ಟವಲ್ಲ ಎಂಬ ಕೊರಗು. ಪಾರ್ಟಿಗೆ ಹೋದರೂ ಪ್ರಯೋಜನವಾಗಲಿಲ್ಲ.

ಆಮೇಲೊಂದು ದಿನ ನಾಗೇಶ್ ಕುಕನೂರ್ ಸ್ಕ್ರೀನ್‌ಟೆಸ್ಟ್ ನಡೆಸುತ್ತಿದ್ದಾರೆಂಬ ಮಾಹಿತಿ ಬಂತು. ತಾನೂ ಒಂದು ಕೈ ನೋಡಲೆಂದು ಹುಡುಗಿ ಅಲ್ಲಿಗೂ ಹೋದಳು. ಕುಕನೂರ್ ಸಹಾಯಕ ನಿರ್ದೇಶಕರು ಸ್ಕ್ರೀನ್ ಟೆಸ್ಟ್ ಮಾಡುವ ನೆಪದಲ್ಲಿ ಎಲ್ಲರನ್ನೂ ಗೇಲಿ ಮಾಡುತ್ತಿದ್ದರು. ತನ್ನನ್ನೂ ಅವರು ಗೇಲಿ ಮಾಡಿದಾಗ ಹುಡುಗಿ ಇನ್ನಷ್ಟು ಕುಗ್ಗಿಹೋದಳು.

ಇಷ್ಟೆಲ್ಲಾ ಕಷ್ಟ, ಅವಮಾನಗಳನ್ನು ಸಹಿಸಿಕೊಂಡ ನಂತರ ಅನುರಾಗ್ ಕಶ್ಯಪ್ ಯಾವುದೋ ಮಗುವಿನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕುಣಿಯುತ್ತಿದ್ದ ಇದೇ ಹುಡುಗಿಗೆ `ನೋ ಸ್ಮೋಕಿಂಗ್~ ಚಿತ್ರದಲ್ಲಿ ಅವಕಾಶ ಕೊಟ್ಟರು. ಭಾಗ್ಯದ ಬಾಗಿಲು ತೆರೆದದ್ದು ಅಷ್ಟು ತಡವಾಗಿ.

`ಇಟ್ಸ್ ನಾಟ್ ಎ ಲವ್ ಸ್ಟೋರಿ~, `ಸಾಹಿಬ್ ಬೀವಿ ಔರ್ ಗ್ಯಾಂಗ್‌ಸ್ಟರ್~ ಚಿತ್ರಗಳನ್ನು ತನ್ನ ಕುಟುಂಬದವರ ಜೊತೆ ನೋಡಿದಾಗ ಮೊದಲಿಗೆ ಆದದ್ದು ತಲ್ಲಣ. ಹಸಿಬಿಸಿ ದೃಶ್ಯಗಳಿದ್ದಿದ್ದರಿಂದ ಅಮ್ಮ, `ನಟನೆಯ ಸಹವಾಸ ಸಾಕು, ಇಷ್ಟದ ವಿಷಯದಲ್ಲಿ ಪಿಎಚ್.ಡಿ ಮಾಡು~ ಎಂದರು. ಆದರೆ, ಹುಡುಗಿ ಅಷ್ಟು ಹೊತ್ತಿಗೆ ಚಿತ್ರರಂಗದಲ್ಲಿ ಒಂದಷ್ಟು ದೂರ ನಡೆದಾಗಿತ್ತು. `ಡೇವ್ ಡಿ~ ಚಿತ್ರದ ಅಭಿನಯಕ್ಕೆ ಫಿಲ್ಮ್‌ಫೇರ್ ಪ್ರಶಸ್ತಿಯೂ ಸಂದಿತ್ತು. ಬದುಕಿನ ಇಷ್ಟೆಲ್ಲಾ ಘಟನೆಗಳನ್ನು ಒಂದೇ ಬೀಸಿನಲ್ಲಿ ತುಸುವೂ ಸಂಕೋಚವಿಲ್ಲದೆ ಪ್ರಾಮಾಣಿಕವಾಗಿ ಹೇಳಿಕೊಳ್ಳುವ ನಟಿಯ ಹೆಸರು ಮಾಹಿ ಗಿಲ್.

`ನಾನು ಮುಂಬೈಗೆ ಒಂಟಿಯಾಗಿ ಬಂದವಳು. ಈಗಲೂ ಒಂಟಿಯಾಗಿಯೇ ನಿರ್ಧಾರ ತೆಗೆದುಕೊಳ್ಳುತ್ತೇನೆ. ಬಾಯ್‌ಫ್ರೆಂಡ್ ಜೊತೆ ಇದ್ದಾಗಲೂ ನಾನು ಅವನಿಂದ ಮಾನಸಿಕ ಅಂತರದಲ್ಲೇ ಇರುತ್ತೇನೆಂಬುದು ಅವನಿಗೂ ಗೊತ್ತು. ನಾನೇ ಬೇರೆ~ ಎನ್ನುವ ಮಾಹಿಗೆ ಯಾರಾದರೂ `ನೀನು~ (ತುಮ್) ಎಂದು ಏಕವಚನದಲ್ಲಿ ಕರೆದರೆ ಸಿಟ್ಟು ಬರುತ್ತದಂತೆ. `ಆಪ್~ (ನೀವು) ಎಂದವರಿಗಷ್ಟೇ ಮರ್ಯಾದೆ. ಹಾಗಾಗಿ ಈ ಲೇಖನದಲ್ಲಿರುವ ಏಕವಚನದ ಪದಗಳನ್ನೆಲ್ಲಾ ಬಹುವಚನಕ್ಕೆ ಪರಿವರ್ತಿಸಿಕೊಂಡು ಮತ್ತೆ ಓದಬಹುದು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.